varthabharthi

ನಿಮ್ಮ ಅಂಕಣ

ಆರ್‌ಟಿಸಿ ಹೆಸರು ಬದಲಾವಣೆ ಸಂಕಷ್ಟ

ವಾರ್ತಾ ಭಾರತಿ : 1 Jul, 2019
-ಬೆನಡಿಕ್ಟ್ ನೊರೊನ್ಹ, ಉಡುಪಿ

ಮಾನ್ಯರೇ,

ಭೂಮಿಯ ಪಹಣಿಯಲ್ಲಿ ಬದಲಾವಣೆ ಮಾಡಲು ದಿನಗಳು ಕಳೆದಂತೆ ಕಂಟಕಗಳು ಹೆಚ್ಚಾಗುತ್ತಿವೆ. ನಮ್ಮ ರಾಜ್ಯ ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು ದಿ.20.03.2014ರಲ್ಲಿ ತಮ್ಮ ಸುತ್ತೋಲೆ ನಂ. ಕಂ ಇ: ಟಿ ಆರ್ ಎಂ 2013ರಲ್ಲಿ ತಿಳಿಸಿರುವಂತೆ ಪಹಣಿಯಲ್ಲಿ ಬದಲಾವಣೆ ಮಾಡಲು ಕುಟುಂಬದ ಸದಸ್ಯರ ಅಂದರೆ ಅಜ್ಜಿ/ಅಜ್ಜಿಯವರ ಜನನ ಮರಣ ದಿನಾಂಕ; ತಂದೆ ತಾಯಿಯವರ ಜೀವಂತ/ ಮರಣದ ಮಾಹಿತಿ; ಅಕ್ಕ, ತಂಗಿ, ಅಣ್ಣ, ತಮ್ಮ ಅವರ ಜೀವಂತ/ ಮರಣದ ಮಾಹಿತಿ; ಮದುವೆಯಾಗಿದ್ದರೆ ಗಂಡ/ಹೆಂಡತಿಯ ಜೀವಂತ/ಮರಣದ ಮಾಹಿತಿ, ದಾಖಲೆಗಳು; ಮರಣ ಹೊಂದಿದ್ದರೆ ಅವರ ಮರಣ ದಾಖಲೆ; ಜೀವಂತ ಇರುವವರ ವಯಸ್ಸು ಅವರ ಮಕ್ಕಳ ವಿವರಗಳು ಮತ್ತು ಎಲ್ಲರ ಆಧಾರ್ ಕಾರ್ಡ್ ನಂಬರ್, ಮತದಾರರ ಎಪಿಕ್ ನಂಬರ್, ಪಾನ್ ನಂಬರ್ ಇತ್ಯಾದಿಗಳನ್ನು ತಪ್ಪದೇ ಅರ್ಜಿಯ ಜೊತೆಯಲ್ಲಿ ಸಲ್ಲಿಸಬೇಕು. ಈ ಅರ್ಜಿಯ ಜೊತೆ ಸಲ್ಲಿಸಿದ ಎಲ್ಲ ದಾಖಲೆಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ತಮ್ಮಲ್ಲಿರುವ ದಾಖಲೆಗಳಿಗೆ ತಾಳೆ ಮಾಡಿದ ನಂತರ ಸಂಬಂಧಪಟ್ಟ ನಾಡ ಕಚೇರಿಯ ಉಪತಹಸೀಲ್ದಾರರಿಗೆ ವಂಶವೃಕ್ಷವನ್ನು ದೃಢೀಕರಣ ಮಾಡುವ ಅಧಿಕಾರವನ್ನು ನೀಡಲಾಗಿದೆ. ಈ ವಂಶವೃಕ್ಷ ವಿವರ ನೀಡುವಾಗ ಈ ಸಂಬಂಧ ನಿಗದಿಪಡಿಸಲಾದ ನಮೂನೆಗಳನ್ನು ಮಾತ್ರ ಅಪೇಕ್ಷಿತರಿಂದ ಪಡೆಯಬೇಕೆೆಂಬ ನಿಯಮಗಳನ್ನು ಈಗ ಜಾರಿಗೆ ತರಲಾಗಿದೆ. 2014ರಲ್ಲಿ ಕಳುಹಿಸಿದ ಸುತ್ತೋಲೆಯನ್ನು ಈಗ ಜಾರಿಗೆ ತರುವಾಗ ಅದರಲ್ಲಿ ತಿಳಿಸಿದಂತೆ ಅಪೇಕ್ಷಿತರು ಇಷ್ಟು ಜನರ ಮಾಹಿತಿಯನ್ನು ಕಲೆ ಹಾಕಲು ಎದುರಿಸುವ ಸಂಕಟಗಳು ಸಾಕಷ್ಟು. ಆಸ್ತಿಯ ಪಹಣಿ ಬದಲಾವಣೆಗಾಗಿ ಹೀಗೆ ಮಾಡಲೇ ಬೇಕಾದ್ದರಿಂದ ಒಂದೊಮ್ಮೆ ಕುಟುಂಬದ ಕೆಲವರಿಂದ ಆಕ್ಷೇಪಗಳು ಬಂದರೆ ಈ ಕೆಲಸ ಮುಂದುವರಿಯದು. ಹಾಗಾಗಿ ಸಂತತಿ ನಕ್ಷೆಯನ್ನು ಇಷ್ಟು ವಿವರವಾಗಿ ತಯಾರಿಸುವ ಅವಶ್ಯಕತೆ ಇದೆಯೇ ಎಂಬುದನ್ನು ಪುನರ್ ಪರಿಶೀಲಿಸಬೇಕಾಗಿದೆ. ಎರಡನೆಯದಾಗಿ ಸರಕಾರದ ಪ್ರಕಟನೆಗಳು ಟಿವಿ ಮಾಧ್ಯಮಗಳಲ್ಲಿ ಕೇಳಿ ಬರುವಂತೆ ಯಾರಿಗೂ ಪಾನ್ ನಂಬರ್, ಆಧಾರ್ ಕಾರ್ಡ್ ನಂಬರ್, ಗುಪ್ತ ಸಂಖ್ಯೆ (ಒಟಿಪಿ ಸಂಖ್ಯೆ) ಪಿನ್ ಇತ್ಯಾದಿಗಳನ್ನು ಕೊಡಬಾರದೆಂದು ಹೇಳುತ್ತವೆ. ಅದರಿಂದ ಬಹಳಷ್ಟು ಅಕ್ರಮಗಳಾಗಿ ಆರ್ಥಿಕ ಅಪರಾಧಗಳಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತವೆ.

ಮೂರನೆಯದಾಗಿ ಆಧಾರ್ ಕಾರ್ಡ್‌ನ ಉಪಯೋಗ ಇತ್ತೀಚಿನ ವ್ಯವಸ್ಥೆಯಾಗಿದೆ. ಎಪಿಕ್ ನಂಬರ್‌ಗಳು ಎಲ್ಲರಲ್ಲೂ ಇರಲಿಕ್ಕಿಲ್ಲ. ವೋಟಿನ ದಾಖಲೆಗಳಿರುವ ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವರಲ್ಲಿ ಮಾತ್ರ ಇರಲು ಸಾಧ್ಯ. ಹಾಗಿರುವಾಗ ಮೇಲೆ ಪ್ರಸ್ತಾವಿಸಿದ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆ ಇದೆಯೇ? ಅರ್ಜಿದಾರರಿಂದ ಛಾಪಾ ಕಾಗದದಲ್ಲಿ ಹೆಸರು, ವಯಸ್ಸು, ಸಂಬಂಧಗಳನ್ನು ಬರೆದು ಮರಣದ ದಾಖಲೆಗಳನ್ನು ಪ್ರಮಾಣಪತ್ರದೊಂದಿಗೆ ಸಲ್ಲಿಸಿದರೆ ಗ್ರಾಮ ಲೆಕ್ಕಾಧಿಕಾರಿಗಳು ಅವರನ್ನು ವಿಚಾರಿಸಿ ಸತ್ಯಾಸತ್ಯತೆಯನ್ನು ದೃಢೀಕರಿಸಿದರೆ ಕುಟುಂಬದ ವಂಶವೃಕ್ಷವನ್ನು ನಿಗದಿತ ನಮೂನೆಯಲ್ಲಿ ಒದಗಿಸಬಹುದು/ಒದಗಿಸಬೇಕು. ಅದರ ಆಧಾರದಲ್ಲಿ ಪಹಣಿಯ ಬದಲಾವಣೆಯನ್ನು ಮಾಡಬಹುದು. ಗ್ರಾಮ ಲೆಕ್ಕಾಧಿಕಾರಿಗಳು ಯಾವುದೇ ಆಮಿಷಗಳಿಗೆ ಒಳಪಡದೆ ಸತ್ಯವನ್ನು ದೃಢೀಕರಿಸಬೇಕು ಪಹಣಿಯ ಬದಲಾವಣೆ ಆದಷ್ಟು ಸುಲಭದಲ್ಲಿ ಆಗಬೇಕು. ಅದಕ್ಕಾಗಿ ಅರ್ಜಿದಾರರು ಬಳಲುವಂತಾಗಬಾರದು. ಪಹಣಿಯು ಆಸ್ತಿಯ ಮೂಲ ದಾಖಲೆಯಲ್ಲ. ಅದು ಕೇವಲ ಪ್ರಕೃತ ಸಮಯದಲ್ಲಿ ಯಾರೂ ಅನುಭವಿಸುತ್ತಾರೆ, ಸಾಗುವಳಿ ಮಾಡುತ್ತಾರೆಯೇ, ಬೆಳೆಗಳು ಇತ್ಯಾದಿಗಳ ಸಂಕ್ಷಿಪ್ತ ವಿವರಗಳನ್ನು ಒದಗಿಸುವ ಒಂದು ಪ್ರಮಾಣ ಪತ್ರವಿದ್ದಂತೆ. ಅದಕ್ಕಿಂತ ಬೇರೆ ಬೆಲೆ ಇಲ್ಲ. ಸುಮ್ಮನೆ ರೈತರು ಪಹಣಿಗಾಗಿ ಅಲೆದಾಡುವಂತೆ ಮಾಡುವ ವ್ಯವಸ್ಥೆ ಸರಿಯೇ? 1969ರ ಮೊದಲು ಪಹಣಿ ಎಂಬುದೇ ಇರಲಿಲ್ಲ. ಭ್ರಷ್ಟಾಚಾರವೂ ಕಡಿಮೆ ಇತ್ತು. ಈಗ ಆರ್‌ಟಿಸಿ ಅಂದರೆ ರೂಟ್ ಟು ಕರಪ್ಷನ್ ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)