varthabharthi

ನಿಮ್ಮ ಅಂಕಣ

ನವ ಭಾರತದಲ್ಲಿ ಗುಂಪು ಥಳಿತವೆಂಬ ಒಂದು ಹೊಸ ಬೆಳವಣಿಗೆ

ವಾರ್ತಾ ಭಾರತಿ : 2 Jul, 2019
ಮುಸ್ತಫಾ ಖಾನ್

ತಬ್ರೇಝ್ ಅನ್ಸಾರಿಯ ಮೇಲೆ ನಡೆದ ಗುಂಪುಥಳಿತ ಮತ್ತು ಹಿಂಸೆ ಗಂಟೆಗಳ ಕಾಲವಷ್ಟೇ ಅಲ್ಲ, ಹಲವು ದಿನಗಳ ಕಾಲ ಯಾವುದೇ ಶಿಕ್ಷೆಯ ಭಯವಿಲ್ಲದೆ ಅವ್ಯಾಹತವಾಗಿ ನಡೆಯಿತು. ನರೇಂದ್ರ ಮೋದಿಯವರ ಮೊದಲ ಅಧಿಕಾರವಧಿಯಲ್ಲಿ ಅವರು ಪ್ರಧಾನಿಯಾಗಿ ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ಮೌನವಹಿಸುತ್ತಿದ್ದರು. ಆ ಮೌನಕ್ಕೆ ಹೋಲಿಸಿದರೆ ಅವರ ಅಧಿಕಾರದ ದ್ವಿತೀಯ ಅವಧಿ ಭಿನ್ನವಾಗಿದೆ. ಗುಂಪುಥಳಿತದ ಈ ಸಮಯವು ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳವಾದ ಸಮಯ. ಇದು ಅಲ್ಪಸಂಖ್ಯಾತರಿಗೆ ಮುಂದೆ ಬರಲಿರುವ ಅತ್ಯಂತ ಕೆಟ್ಟ ದಿನಗಳ ಮುನ್ಸೂಚನೆ. ಪವಾಡವೆಂದರೆ ತಬ್ರೇಝ್ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಹೇಳಲು ನಾಲ್ಕು ದಿನ ಬದುಕಿ ಉಳಿದಿದ್ದು, ಆ ಬಳಿಕ ಮೃತಪಟ್ಟ. ಇಂದಿನ ಭಾರತದ ವಾಸ್ತವಗಳು ಮತ್ತು ಇಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ನಿಸ್ಸಂಶಯವಾಗಿಯೂ ಒಂದು ರೀತಿಯ ಭಯೋತ್ಪಾದನೆ ಎನ್ನಬೇಕಾಗಿದೆ.

ನಮ್ಮ ಪ್ರಧಾನಿ ಎಂತಹವರೆಂದರೆ ಗುಜರಾತಿನ ಮುಖ್ಯ ಮಂತ್ರಿಯಾಗಿ ಅವರು 2002ರಲ್ಲಿ ಆರೆಸ್ಸೆಸ್, ವಿಎಚ್‌ಪಿ, ಎಬಿವಿಪಿಗಳ ಹಾದಿಗೆ ಅಡ್ಡ ಬರದಂತೆ ಪೊಲೀಸರಿಗೆ ಹೇಳಬಲ್ಲವರಾಗಿದ್ದರು; ಹಿಂದೂಗಳಿಗೆ ಅವರ ಸಿಟ್ಟನ್ನು ಹೊರಗೆ ಹಾಕಲು ಅವಕಾಶ ನೀಡುವಂತೆ ಪೊಲೀಸರಿಗೆ ಆ ಮೂಲಕ ಸೂಚಿಸಬಲ್ಲವರಾಗಿದ್ದರು. ಆಗ ನಡೆದಿದ್ದರ ಕುರಿತಾದ ಸತ್ಯವನ್ನು ಬಯಲು ಮಾಡಿದ ಹರೇನ್ ಪಾಂಡ್ಯ ಮತ್ತು ಸಂಜೀವ್ ಭಟ್ ಸ್ಥಿತಿ ಏನಾಗಿದೆಯೆಂದು ಎಲ್ಲರಿಗೂ ಗೊತ್ತು. ನಮ್ಮ ಪ್ರಜಾಪ್ರಭುತ್ವದ ಕತ್ತು ಹಿಸುಕದೆ ಅದನ್ನು ನಾವು ಉಳಿಸಿಕೊಳ್ಳಬೇಕಾದ ಭಿನ್ನಮತ ಇಂದಿನ ತುರ್ತು ಅವಶ್ಯಕತೆ. 2002ರಲ್ಲಿ ಜನಮತ ಅವರ ಬೆಂಬಲಕ್ಕೆ ಇತ್ತು ಮತ್ತು ಈಗ ಜಪಾನ್‌ನಲ್ಲಿ ಅವರು ಯಶಸ್ವಿಯಾಗಬೇಕು ಎಂಬುದೇ ಮೋದಿಯವರಿಗೆ ಮುಖ್ಯವಾಗಿದೆ.
‘ಜೈ ಶ್ರೀ ರಾಮ್’, ‘ವಂದೇ ಮಾತರಂ’. ಮೊದಲ ಘೋಷಣೆಯನ್ನು ಈಗಿನಷ್ಟು ಹಿಂಸಾತ್ಮಕವಾಗಿ ಎಂದೂ ಕೂಗಿದ್ದಿಲ್ಲ. ಎರಡನೆಯ ಸ್ಲೋಗನ್ ಭಾರತ ಮಾತೆಯ ಸ್ತುತಿ. ಮೂರ್ತಿ ಪೂಜೆಯ ಕಾರಣಕ್ಕಾಗಿ ಮುಸ್ಲಿಮರು ಈ ಎರಡನೆಯ ಘೋಷಣೆಯನ್ನು ಹೇಳಲು ನಿರಾಕರಿಸುತ್ತಾರೆ. ಆಗ ಅವರ ಮೇಲೆ ಹಲ್ಲೆ, ಗುಂಪುಥಳಿತದ ದೌರ್ಜನ್ಯ ನಡೆಯುತ್ತದೆ. ಹೀಗೆ ಭಾರತವನ್ನು ವಿಭಜಿಸುವ ಅಭಿಯಾನ ಮುಂದುವರಿಯುತ್ತದೆ.
ತಬ್ರೇಝ್‌ನ ಮೇಲೆ ಗುಂಪುಥಳಿತದ ದೌರ್ಜನ್ಯವನ್ನು ನಡೆಸಿದವರು ಇಂತಹ ಘೋಷಣೆಗಳನ್ನು ಕೂಗುವಂತೆ ಆತನನ್ನು ಹತ್ತಾರು ಬಾರಿ ಬಲಾತ್ಕರಿಸಿದರೆಂಬುದು ತುಂಬ ನೋವಿನ ಸಂಗತಿ. ಗುಂಪು ಥಳಿತಕ್ಕೊಳಗಾಗಿ ಅವನನ್ನು ಜೈಲಿಗೆ ತಳ್ಳಿದ ಎರಡು ದಿನಗಳ ಬಳಿಕ, ಅವನನ್ನು ಥಳಿಸಿದ ಮುಖ್ಯ ಆಪಾದಿತ ಪಪ್ಪು ಮಂಡಲ್ ಜೈಲಿಗೆ ಹೋಗಿ ಆಶ್ಚರ್ಯದಿಂದ ಕೇಳಿದ ಪ್ರಶ್ನೆ: ‘‘ಇನ್ನೂ ಇವ ಯಾಕಾದರೂ ಸಾಯಲಿಲ್ಲ?’’ (ಅಬ್‌ತಕ್ ಏ ಮರಾ ಕ್ಯೂಂ ನಹೀ?). ತಬ್ರೇಝ್‌ನ ಪತ್ನಿ ಮತ್ತು ತಾಯಿ ಕೂಡ ಅಲ್ಲಿದ್ದರು. ಅವರು ಅಲ್ಲಿಂದ ಹೊರಗೆ ಹೋಗದಿದ್ದರೆ ಅವರ ಮೊಣಕಾಲು ಮುರಿಯುವುದಾಗಿ ಅಲ್ಲಿದ್ದ ಪೊಲೀಸರು ಅವರಿಗೆ ಬೆದರಿಕೆ ಹಾಕಿದರು.

ತಬ್ರೇಝ್‌ನ ವಿರುದ್ಧ ಕಳ್ಳತನದ ಅಪರಾಧ ಮಾತ್ರ ದಾಖಲಾಗಿದೆ; ಅವನ ಮೇಲೆ ನಡೆದಿರುವ ದಾಳಿ ಮತ್ತು ಅವನ ಸಾವು ದಾಖಲಾಗಿರುವುದು ವಿಚಿತ್ರವೇ ಸರಿ. ಅವರು ತಬ್ರೇಝ್‌ನ ಇಚ್ಛೆಗೆ ವಿರುದ್ಧವಾಗಿ ಜೈ ಶ್ರೀ ರಾಮ್, ವಂದೇ ಮಾತರಂ ಘೋಷಣೆಗಳನ್ನು ಕೂಗುವಂತೆ ಬಲಾತ್ಕರಿಸಿದರು. ಇದು ಭಯದ ವ್ಯಾಖ್ಯಾನದ ಒಂದು ಭಾಗ. ಆ ಬಳಿಕ ಅವರು ಅವನನ್ನು ಒಂದು ಜೀವಂತ ಮಮ್ಮಿಯಾಗಿ ಮಾಡಿದರು. ಇದು ಗುಂಪುಥಳಿತ ಮತ್ತು ಖಂಡಿತವಾಗಿಯೂ ಭಯೋತ್ಪಾದನೆಯಲ್ಲದೆ ಬೇರೇನೂ ಅಲ್ಲ. ಆತ ಅವರು ನೀಡಿದ ಚಿತ್ರ ಹಿಂಸೆಯಿಂದಾಗಿಯೇ ಮೃತಪಟ್ಟ. ಅವನು ಇದ್ದ ಗಂಭೀರ ಪರಿಸ್ಥಿತಿಗೆ ಗಮನ ನೀಡದೆ ಪೊಲೀಸರು ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಿದರು.
 ಮದುವೆಯಾಗಿ ಒಂದು ತಿಂಗಳೊಳಗಾಗಿ ಒಬ್ಬ ಮನುಷ್ಯ ಕಳ್ಳತನ ಮಾಡುತ್ತಾನೆಂದರೆ ಅದನ್ನು ನಂಬುವುದು ಕಷ್ಟ. ತಬ್ರೇಝ್ ಪೂನಾದಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ. ಈದ್ ಆಚರಿಸಲು ಆತ ಊರಿಗೆ ಬಂದಿದ್ದ. ಕೆಲವೇ ದಿನಗಳಲ್ಲಿ ಆತ ಪುಣೆಗೆ ತನ್ನ ಕೆಲಸಕ್ಕೆ ಮರಳುವವನಿದ್ದ. ಜಾರ್ಖಂಡ್‌ನ ಸಚಿವರೊಬ್ಬರು ಇದೊಂದು ಭಯೋತ್ಪಾದನೆಯ ‘ಕಟ್ ಆ್ಯಂಡ್ ಪೇಸ್ಟ್’ ಆಪಾದನೆಯೆಂದು ನಮ್ಮನ್ನು ನಂಬಿಸಲು ಹೊರಟಿದ್ದಾರೆ. ಆದರೆ ಇದು ಭಯೋತ್ಪಾದನೆ ಕೃತ್ಯವಲ್ಲದೆ ಬೇರೇನೂ ಅಲ್ಲ. ಈ ಘಟನೆ ಅಲ್ಲಸಂಖ್ಯಾತರಿಗೆ ಅವರು ಬಹುಸಂಖ್ಯಾತ ಹಿಂದೂಗಳ ಕೃಪೆಯಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ಆ ವಾರ ಗುಂಪುಥಳಿತದ ಗಂಭೀರತೆಯ ಹೊರತಾಗಿಯೂ ಮೋದಿಯವರು ಜಪಾನ್‌ನಲ್ಲಿ ನಡೆದ ಜಿ20 ಶೃಂಗ ಸಭೆಗೆ ಹೋದರು. ಜೂನ್ 28ರಂದು ಅವರು ಭಯೋತ್ಪಾದನೆಯ ಜಾಗತಿಕ ಬೆದರಿಕೆಯ ಬಗ್ಗೆ ಕೆಲವೇ ಶಬ್ದಗಳಲ್ಲಿ ಮಾತಾಡಿದರು: ‘‘ಭಯೋತ್ಪಾದನೆ ಮನುಕುಲಕ್ಕೆ ಅತ್ಯಂತ ದೊಡ್ಡ ಬೆದರಿಕೆ ಅದು ಅಮಾಯಕರನ್ನು ಕೊಲ್ಲುವುದಷ್ಟೇ ಅಲ್ಲ; ಆರ್ಥಿಕ ಅವಕಾಶಗಳ ಮೇಲೆ ಅತ್ಯಂತ ಅನಾಹುತಕಾರಿಯಾದ ಪರಿಣಾಮ ಬೀರುತ್ತದೆ ಮತ್ತು ಸಾಮಾಜಿಕ ಭದ್ರತೆಗೆ ಬೆದರಿಕೆಯೊಡ್ಡುತ್ತದೆ. ಅದನ್ನು ನಿರ್ಮೂಲನಗೊಳಿಸಲು ಕೋಮುವಾದ ಮತ್ತು ಆತಂಕವಾದಕ್ಕೆ ಬೆಂಬಲ ನೀಡುವ ಎಲ್ಲ ದಾರಿಗಳನ್ನು ನಾವು ಮುಚ್ಚಬೇಕು.’’ ಇದು ಪ್ರಾಮಾಣಿಕವಲ್ಲದ, ತೋರಿಕೆಯ ಹೇಳಿಕೆ. ಯಾಕೆಂದರೆ ಅವರು ಮತ್ತು ಅವರ ಬಲಪಂಥೀಯ ಗುಂಪುಗಳು ಹಾಗೂ ಪಕ್ಷಕ್ಕೆ ಅವರು ಅಲ್ಲಿ ಹೇಳಿದ್ದರಲ್ಲಿ ನಂಬಿಕೆ ಇಲ್ಲ. ಭಾರತದಲ್ಲಿ ಈಗ ಕೋಮುವಾದ ಮತ್ತು ಆತಂಕವಾದ ಅವರಿಂದಾಗಿಯೇ ವೇಗವಾಗಿ ವರ್ಧಿಸುತ್ತಿದೆ. ತಬ್ರೇಝ್‌ನ ಹತ್ಯೆ ಇದಕ್ಕೆ ಜೀವಂತ ಸಾಕ್ಷಿ. ಈ ಸ್ಥಿತಿ ಬದಲಾಗದಿದ್ದಲ್ಲಿ ಅದು ಬೇಟೆ ನಾಯಿಗಳನ್ನು ಬಳಸಿ ಆಡುವ ಮೊಲಗಳ ಬೇಟೆಯಾಗುತ್ತದೆ.


ಕೃಪೆ: countercurrents

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)