varthabharthiಸಂಪಾದಕೀಯ

‘ಮನ್ ಕಿ ಬಾತ್’ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕಾದ ‘ಭಕ್ತ’ರು

ವಾರ್ತಾ ಭಾರತಿ : 2 Jul, 2019

ಪ್ರಧಾನಿ ಮೋದಿಯವರು ಎಂದಿನಂತೆ ‘ಮನ್ ಕಿ ಬಾತ್’ ಶುರು ಹಚ್ಚಿದ್ದಾರೆ. ಅಧಿಕಾರಕ್ಕೆ ಮರಳಿದ ಬಳಿಕ ತನ್ನ ಮೊತ್ತ ಮೊದಲ ಮನ್ ಕಿ ಬಾತ್‌ನ್ನು ರವಿವಾರ ದೇಶಕ್ಕೆ ಹಂಚಿದರು. ಎರಡನೆಯ ಬಾರಿ ಪ್ರಧಾನಿಯಾಗಿ ಮೋದಿಯವರು ಆಡಿರುವ ಈ ‘ಮನ್ ಕಿ ಬಾತ್’ನಲ್ಲಿ ಪ್ರಜಾಪ್ರಭುತ್ವದ ಮಹತ್ವದ ಕುರಿತಂತೆ ಮಾತನಾಡಿದ್ದಾರೆ. ಜನರು ಪ್ರಜಾಪ್ರಭುತ್ವದ ಸಕಲ ಫಲಗಳನ್ನು ಅನುಭವಿಸುತ್ತಲೇ, ಅದರ ಮಹತ್ವವನ್ನು ಮರೆತು ಬಿಟ್ಟಿರುವ ಕುರಿತಂತೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ದೇಶ ಪ್ರಜಾಸತ್ತೆಯ ಹಿರಿಮೆಯನ್ನು ಮರೆತ ಪರಿಣಾಮವಾಗಿಯೇ 70ರ ದಶಕದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಯಿತು. ದೈನಂದಿನ ಜೀವನದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು ಕಿತ್ತುಕೊಳ್ಳಲ್ಪಟ್ಟಾಗಲೇ ಅವುಗಳ ಮಹತ್ವದ ಅರಿವು ನಮಗಾಗುತ್ತದೆ ಎಂದು ಮೋದಿ ಕಿವಿಮಾತು ಹೇಳಿದ್ದಾರೆ. ಪ್ರಧಾನಿಯವರು ಆಡಿರುವ ಮಾತುಗಳು ಕುತೂಹಲಕರವಾಗಿವೆ.

‘‘ಯಾವುದೇ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಆಹಾರ ದೊರೆಯುತ್ತಿದ್ದರೆ ಆತನಿಗೆ ಹಸಿವಿನ ಸಂಕಟ ಗೊತ್ತಾಗುವುದಿಲ್ಲ. ಅದೇ ರೀತಿ ದೈನಂದಿನ ಬದುಕಿನಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳು ಕಿತ್ತುಕೊಳ್ಳಲ್ಪಡುವವರೆಗೂ ಅವುಗಳ ಮಹತ್ವ ಗೊತ್ತಾಗುವುದಿಲ್ಲ’’ ಎಂದು ಅವರು ಹೇಳಿದ್ದಾರೆ. ಇಂದು ದೇಶಾದ್ಯಂತ ಬೇರೆ ಬೇರೆ ವಲಯಗಳಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳು ಮೊಟಕು ಗೊಳ್ಳುತ್ತಿರುವುದು ಜನರಿಗೆ ‘ಪ್ರಜಾಸತ್ತೆಯ ಮಹತ್ವ’ದ ಕುರಿತಂತೆ ಅರಿವು ಮೂಡಿಸುವುದಕ್ಕಾಗಿ ಇರಬಹುದೇ? ಎಂದು ಜನರು ಅನುಮಾನಿಸುವಂತಿದೆ ನರೇಂದ್ರ ಮೋದಿಯವರ ಮಾತುಗಳು. ಒಂದಂತೂ ನಿಜ. ಪ್ರಜಾಸತ್ತೆಯನ್ನು ಲಘುವಾಗಿ ಪರಿಗಣಿಸುವ ಮನಸ್ಥಿತಿ ದೇಶದಲ್ಲಿ ಹೆಚ್ಚುತ್ತಿದೆ. ಪ್ರಜಾಸತ್ತೆ ನಮಗೇನು ನೀಡಿದೆ ಎನ್ನುವುದನ್ನು ಮರೆತು ಈ ದೇಶದ ದೊಡ್ಡ ಸಂಖ್ಯೆಯ ಯುವ ಸಮೂಹವೊಂದು ಸಂವಿಧಾನ ವಿರೋಧಿ ಶಕ್ತಿಗಳ ಜೊತೆಗೆ ಕೈ ಜೋಡಿಸುತ್ತಿದೆೆ. ಈ ಸಂವಿಧಾನ ವಿರೋಧಿ ಶಕ್ತಿಗಳು ಯಾರೆನ್ನುವುದು ಕೂಡ ಬಹಿರಂಗ ವಾಗಿಯೇ ಇದೆ.

ಸ್ವಾತಂತ್ರ ಪೂರ್ವದಲ್ಲಿ ತನ್ನದೇ ಜನರಿಗೆ ಕೆರೆಯ ನೀರನ್ನು ಮುಟ್ಟಲು, ಶಿಕ್ಷಣ ಕಲಿಯಲು, ಸಮಾನತೆಯಿಂದ ಆತ್ಮಾಭಿಮಾನದಿಂದ ಬದುಕಲು ನಿರಾಕರಿಸಿದ ಜನರೇ ಇಂದು ಸಂವಿಧಾನದ ವಿರುದ್ಧ, ಪ್ರಜಾಸತ್ತೆಯ ವಿರುದ್ಧ ಜನರಲ್ಲಿ ತಪ್ಪು ಕಲ್ಪನೆಗಳನ್ನು ತುಂಬುತ್ತಿದ್ದಾರೆ. ಪ್ರಜಾಸತ್ತೆ ಈ ದೇಶದ ಸರ್ವ ಜನರನ್ನು ಸಮಾನರೆಂದು ಘೋಷಿಸಿರುವುದೇ ಅವರ ಪಾಲಿಗೆ ಅತಿ ದೊಡ್ಡ ಸಮಸ್ಯೆಯಾಗಿದೆ. ಒಂದು ಕಾಲದಲ್ಲಿ ಮಲ ಹೊರುವುದಕ್ಕಷ್ಟೇ ಸೀಮಿತವಾಗಿದ್ದ ಜನರು ಇಂದು, ಸಂವಿಧಾನದ ಬಲದಿಂದ ಶಿಕ್ಷಣ ಕಲಿತು ಮುಖ್ಯವಾಹಿನಿಗೆ ಕಾಲಿರಿಸುತ್ತಿದ್ದಾರೆ. ಆದರೆ ಆ ಶಕ್ತಿಗಳಿಗೆ ಅವು ಸಹನೀಯವಾಗುತ್ತಿಲ್ಲ. ಆದುದರಿಂದ, ಪ್ರಜಾಪ್ರಭುತ್ವವೇ ದೇಶದ ಸರ್ವ ಸಮಸ್ಯೆಗಳಿಗೆ ಕಾರಣ ಎಂದು ಜನರನ್ನು ನಂಬಿಸುತ್ತಿದ್ದಾರೆ. ಭಾಗಶಃ ಅದರಲ್ಲಿ ಯಶಸ್ವಿಯಾಗಿದ್ದಾರೆ.

ದುರಂತವೆಂದರೆ, ಸಂವಿಧಾನದ ಬಲದಿಂದ ತಲೆಯೆತ್ತಿ ನಿಂತ ತಳಸ್ತರದ ಶೂದ್ರ ವರ್ಗವೇ ಇದಕ್ಕೆ ನೇರವಾಗಿ ಬಲಿಯಾಗುತ್ತಿದೆ. ಪ್ರಜಾಸತ್ತೆ ಕೊಟ್ಟ ಸ್ವಾತಂತ್ರ, ಹೊಣೆಗಾರಿಕೆಯ ಕುರಿತಂತೆ ಈ ವರ್ಗವೇ ಹಗುರ ಹೇಳಿಕೆಗಳನ್ನು ನೀಡತೊಡಗಿವೆ. ಪರೋಕ್ಷವಾಗಿ ಈ ರ್ವಗದ ಜನರು ಒಬ್ಬ ‘ಸರ್ವಾಧಿಕಾರಿ’ಗಾಗಿ ಹಂಬಲಿಸತೊಡಗಿದ್ದಾರೆ. ಪರಿಣಾಮವಾಗಿ, ಒಂದು ಕಾಲದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರು ಅವರ ಪಾಲಿಗೆ ಖಳನಾಯಕರಾಗಿದ್ದಾರೆ. ಸ್ವಾತಂತ್ರೋತ್ತರ ಭಾರತವನ್ನು ಕಟ್ಟಿದ ಜಾತ್ಯತೀತ ನಾಯಕರನ್ನು ವ್ಯಂಗ್ಯ ಮಾಡುವುದಕ್ಕೆ ಶುರು ಹಚ್ಚಿದ್ದಾರೆ. ಸಂವಿಧಾನವನ್ನು ಬರೆದ ಅಂಬೇಡ್ಕರ್‌ರ ವಿರುದ್ಧ ಘೋಷಣೆ ಕೂಗುವ ಮಟ್ಟಕ್ಕೆ ತಲುಪಿದ್ದಾರೆ. ನೆಹರೂ ಈ ದೇಶದ ಎಲ್ಲ ಸಮಸ್ಯೆಗಳಿಗೆ ಕಾರಣ ಎನ್ನುವುದನ್ನು ಇವರು ನಂಬಿದ್ದಾರೆ ಎನ್ನುವುದಕ್ಕಿಂತ ಆರೆಸ್ಸೆಸ್‌ನಂತಹ ಶಕ್ತಿಗಳು ನಂಬಿಸುವಲ್ಲಿ ಯಶಸ್ವಿಯಾಗಿವೆ. ಪರಿಣಾಮವಾಗಿ ಗಾಂಧಿಯ ಸ್ಥಾನದಲ್ಲಿ ಗೋಡ್ಸೆಯನ್ನು ಇಟ್ಟು ಆರಾಧಿಸ ತೊಡಗಿದ್ದಾರೆ.

ಸ್ವಾತಂತ್ರಕ್ಕಾಗಿ ಯಾರೆಲ್ಲ ಹೋರಾಟ ನಡೆಸಿದ್ದರೋ ಅವರನ್ನೆಲ್ಲ ಪಕ್ಕಕ್ಕಿಟ್ಟು, ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಜೊತೆಗೆ ಕೈ ಜೋಡಿಸಿ ದೇಶಕ್ಕೆ ವಂಚಿಸಿದವರನ್ನು ತಮ್ಮ ನಾಯಕರನ್ನಾಗಿ ಮಾಡಿಕೊಳ್ಳುವವರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. ಬ್ರಿಟಿಷರ ಬಳಿ ಎರಡೆರಡು ಬಾರಿ ಕ್ಷಮೆಯಾಚಿಸಿದ ಸಾವರ್ಕರ್ ‘ವೀರ’ರಾಗಿ ಕಾಣಿಸುತ್ತಿದ್ದಾರೆ. ಪ್ರಜಾಸತ್ತಾತ್ಮಕವಾದ ದೇಶದ ಬದಲಿಗೆ, ಮನು ಸಿದ್ಧಾಂತದ ತಳಹದಿಯಲ್ಲಿ ನಿಂತ ‘ಹಿಂದೂ ರಾಷ್ಟ್ರ’ದ ಕನಸು ಕಂಡವರೇ ಹಿತವಾಗುತ್ತಿದ್ದಾರೆ. ಮನುಸಿದ್ಧಾಂತದ ತಳಹದಿಯ ಮೇಲೆ ರೂಪುಗೊಳ್ಳುವ ಹಿಂದೂರಾಷ್ಟ್ರದಲ್ಲಿ ದಲಿತರು ಮತ್ತು ಶೂದ್ರರ ಸ್ಥಾನವನ್ನು ವಿವರಿಸಬೇಕಾಗಿಲ್ಲ. ಆದರೂ, ‘ಹಿಂದಿನ ಭಾರತ’ವೇ ಚೆನ್ನಾಗಿತ್ತು ಎಂದು ಕನಸುಕಾಣುತ್ತಿದ್ದಾರೆ. ರಾಜಪ್ರಭುತ್ವವನ್ನು ಒಳಗೊಳಗೆ ಆರಾಧಿಸುತ್ತಿದ್ದಾರೆ. ತಮ್ಮನ್ನು ತಾವೇ ಆಳಿಕೊಳ್ಳಲು ಅಸಮರ್ಥರು ಎಂದು ಸ್ವಯಂ ಘೋಷಿಸಿಕೊಂಡಿರುವ ಇವರು, ಸರ್ವಾಧಿಕಾರಿಯ ಗುಲಾಮರಾಗಿ ಬದುಕುವುದೇ ನಮ್ಮ ಅರ್ಹತೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ‘ಸರ್ವಾಧಿಕಾರ’ ಎಂದರೆ ಏನು ಎನ್ನುವುದರ ಅರಿವಿಲ್ಲದ, ತಮ್ಮ ಹಿರಿಯರು ಅನುಭವಿಸಿದ ಜಾತೀಯತೆ, ಅಸಮಾನತೆಯ ಕ್ರೌರ್ಯದ ತಿಳಿವಿಲ್ಲದ ಜನರು ಈ ಮೂಲಕ ದೇಶವನ್ನು ದುರಂತದೆಡೆಗೆ ಕೊಂಡೊಯ್ಯಲು ಅತ್ಯಾತುರರಾಗಿ ನಿಂತಿದ್ದಾರೆ. ಇಂದು ಪ್ರಧಾನಿ ನರೇಂದ್ರಮೋದಿಯವರ ‘ಭಕ್ತ’ರಂತೆ ವರ್ತಿಸುತ್ತಿರುವ ಜನರ ಮನಸ್ಥಿತಿಯನ್ನು ಗಮನಿಸೋಣ.

ಅವರೆಲ್ಲರೂ ಮೋದಿಯವರೊಳಗಿರುವ ‘ಸರ್ವಾಧಿಕಾರಿ’ಯನ್ನು ಆರಾಧಿಸತೊಡಗಿದ್ದಾರೆ. ಎನ್‌ಡಿಎ ಸರಕಾರದ ಜನವಿರೋಧಿ ನೀತಿಯಿಂದಾಗಿ ಜನರು ಹೆಜ್ಜೆ ಹೆಜ್ಜೆಗೂ ಕಹಿಯುಂಡರು. ನೋಟು ನಿಷೇಧವಂತೂ ಅಘೋಷಿತ ತುರ್ತುಪರಿಸ್ಥಿತಿ ಎಂದು ಗುರುತಿಸಲ್ಪಟ್ಟಿತು. ಇದರಿಂದಾಗಿ ಜನರು ನಾಶ ನಷ್ಟಗಳನ್ನು ಅನುಭವಿಸಿದರೇ ಹೊರತು, ದೇಶದ ಆರ್ಥಿಕತೆಗೆ ಯಾವ ರೀತಿಯಲ್ಲೂ ಒಳಿತನ್ನುಂಟು ಮಾಡಲಿಲ್ಲ. ಸಣ್ಣ ಉದ್ದಿಮೆಗಳು ನಾಶವಾದವು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದವು. ಜಿಎಸ್‌ಟಿ ಮೂಲಕ, ದೇಶದ ಜನರ ಮೇಲೆ ಭಾರೀ ತೆರಿಗೆಯನ್ನು ವಿಧಿಸಲಾಯಿತು. ಜಾನುವಾರು ಮಾರಾಟ ತಡೆ ಕಾಯ್ದೆ, ಗೋಸಾಕಣೆಯಿಂದ ಬದುಕು ಸಾಗಿಸುತ್ತಿದ್ದ ರೈತರನ್ನು ಬೀದಿಗೆ ತಳ್ಳಿತು. ಗುಂಪು ಥಳಿತ ಮಿತಿ ಮೀರಿತು. ಪೊಲೀಸರಿಗೆ ಪರ್ಯಾಯವಾಗಿ ಗೋರಕ್ಷಕರು ಬೀದಿಗಿಳಿದು ಕ್ರೌರ್ಯಗಳನ್ನು ವೆುರೆಯತೊಡಗಿದರು. ಇಷ್ಟೆಲ್ಲ ಆದರೂ ಜನರು ಮತ್ತೆ ಮೋದಿಯನ್ನೇ ಆರಿಸಿದರು. ಯಾಕೆ ಎನ್ನುವುದಕ್ಕೆ ಅವರ ಬಳಿಕ ಕಾರಣವಿದ್ದಿರಲಿಲ್ಲ.

ಈ ದೇಶಕ್ಕೆ ಮೋದಿ ಮಾಡಿರುವ ಒಳಿತುಗಳು ಯಾವುವು ಎಂದು ಕೇಳಿದರೆ ಭಕ್ತರ ಬಳಿ ಇರುವ ಒಂದೇ ಉತ್ತರ ‘ಪಾಕಿಸ್ತಾನಕ್ಕೆ ಪಾಠ ಕಲಿಸಲು ಮೋದಿಯೇ ಬೇಕು’. ಸದ್ಯಕ್ಕೆ ಜನರು ಆರಾಧಿಸುತ್ತಿರುವುದು ಗುಜರಾತ್ ಹತ್ಯಾಕಾಂಡದ ಮೂಲಕ ರೂಪುಗೊಂಡ ಮೋದಿಯ ವ್ಯಕ್ತಿತ್ವವನ್ನು. ಹಿಟ್ಲರ್‌ನಲ್ಲೂ ಜರ್ಮನಿ ಕಂಡದ್ದು ಇದೇ ವ್ಯಕ್ತಿತ್ವವನ್ನು. ಪರಿಣಾಮವಾಗಿ ಜರ್ಮನಿ ಸರ್ವನಾಶವಾಯಿತು. ಇಂದು ದೇಶಕ್ಕಾಗಿ ಮೋದಿ ಬೇಕು ಎನ್ನುವವರಿಗಿಂತ, ಮೋದಿಗಾಗಿ ದೇಶವನ್ನು ಬಲಿಕೊಡುವವರ ಸಂಖ್ಯೆ ಅಪಾಯಕಾರಿ ರೂಪದಲ್ಲಿ ಬೆಳೆಯುತ್ತಿದೆ. ಈ ಕಾರಣದಿಂದಲೇ, ಈ ರವಿವಾರದ ‘ಮನ್ ಕಿ ಬಾತ್’ನಲ್ಲಿ ಮೋದಿಯವರು ಸ್ವತಃ ತನ್ನ ಕುರಿತಂತೆಯೇ ಜನರನ್ನು ಎಚ್ಚರಿಸಿದ್ದಾರೆ. ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುವ ಈ ಸಂದರ್ಭದಲ್ಲೇ ದೇಶ ನೂರಾರು ಅನಾಹುತಗಳಿಗೆ ಸಾಕ್ಷಿಯಾಗುತ್ತಿದೆ. ಕಾನೂನು ಸುವ್ಯವಸ್ಥೆಗಳನ್ನು ಸಂಘಪರಿವಾರದ ಗೂಂಡಾಗಳು, ಕಾರ್ಪೊರೇಟ್ ಸಂಸ್ಥೆಗಳ ಕಾಲಾಳುಗಳು ಕೈಗೆತ್ತಿಕೊಳ್ಳುತ್ತಿದ್ದಾರೆ. ಒಂದು ವೇಳೆ, ಈ ಪ್ರಜಾಸತ್ತೆ ಅಳಿದು ಈ ದೇಶದ ಚುಕ್ಕಾಣಿ ಮನುವಾದಿಗಳ ಕೈಗೆ ಸಿಲುಕಿದರೆ ತಳಸ್ತರದ ಜನರ ಸ್ಥಿತಿಯೇನಾಗಬಹುದು? ತಳಸ್ತರದ ಶೂದ್ರ ಸಮುದಾಯಕ್ಕೆ ಸೇರಿದ ‘ಭಕ್ತ’ರು ಕನಿಷ್ಠ ಮೋದಿಯ ಮಾತನ್ನಾದರೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ? ಕಾದು ನೋಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)