varthabharthi

ವಿಶೇಷ-ವರದಿಗಳು

ಯಹೂದಿಗಳು ಜರ್ಮನಿ ತೊರೆದು ಹೋಗುತ್ತಿರುವಾಗ ಅವರಿಗೆ ಯಾರು ಹೆಚ್ಚು ನೆರವು ನೀಡಿದರು?

ವಾರ್ತಾ ಭಾರತಿ : 2 Jul, 2019
ಸ್ಟೀಫನ್ ಫೀಯ್ನ್ ಮತ್ತು ಕೃಷ್ಣನ್ ಶ್ರೀನಿವಾಸನ್

1933ರಿಂದ ದ್ವಿತೀಯ ಮಹಾಯುದ್ಧ ಆರಂಭವಾಗುವ ವರೆಗಿನ ಅವಧಿಯಲ್ಲಿ ನಾಝಿಗಳ ಕಿರುಕುಳ, ಕ್ರೌರ್ಯದಿಂದ ಬಚಾವಾಗಲು ಜರ್ಮನಿ ತೊರೆದು ಹೋಗುತ್ತಿದ್ದ ಯಹೂದಿಗಳಿಗೆ ತನ್ನಿಂದಾದ ನೆರವು ನೀಡಿದ ಏಕೈಕ ಮಹತ್ವಪೂರ್ಣ ಪ್ರಜಾಪ್ರಭುತ್ವವೆಂದರೆ ಫ್ರಾನ್ಸ್ ಮಾತ್ರ. 1924ರಲ್ಲಿ ಅಮೆರಿಕ ನಿರಾಶ್ರಿತರಿಗೆ ಒಂದು ಕೋಟಾ ವ್ಯವಸ್ಥೆಯನ್ನು ಜಾರಿಗೊಳಿಸಿತು. ಇದು ನಿರಾಶ್ರಿತರು ಅಮೆರಿಕದೊಳಗೆ ಪ್ರವೇಶಿಸದಂತೆ ತಡೆಯಿತು ಮತ್ತು ಯು.ಕೆ. (ಬ್ರಿಟನ್) ತನ್ನ ದೇಶಕ್ಕೆ ಒಂದು ಹೊರೆಯಾಗುವುದಿಲ್ಲವೆಂದು ಖಾತರಿಯಾದ ಕೆಲವೇ ಮಂದಿ ಶ್ರೀಮಂತ ಯಹೂದಿಗಳಿಗೆ ಮಾತ್ರ ಆಶ್ರಯ ನೀಡುವುದಕ್ಕೆ ತನ್ನ ವಿದೇಶ ನೀತಿಯನ್ನು ಸೀಮಿತಗೊಳಿಸಿತು. ಜೆಕೊಸ್ಲವಾಕಿಯಾ, ನೆದರ್‌ಲ್ಯಾಂಡ್, ನಾರ್ವೆ, ಡೆನ್ಮಾರ್ಕ್ ಮತ್ತು ಫಿನ್ಲಾಂಡ್‌ನಂತಹ ದೇಶಗಳು ನಿರಾಶ್ರಿತ ಯಹೂದಿಗಳಿಗೆ ಪ್ರವೇಶ ನೀಡಿದವಾದರೂ ಅವು ಚಿಕ್ಕ ದೇಶಗಳು, ಆದ್ದರಿಂದ ಅವು ನಿರಾಶ್ರಿತ ಆದ್ಯತೆಯ ದೇಶಗಳಾಗಿರಲಿಲ್ಲ. ಸ್ವೀಡನ್ ಮತ್ತು ಸ್ವಿಟ್ಸರ್‌ಲ್ಯಾಂಡ್ ಸೀಮಿತ ಪ್ರವೇಶ ನೀತಿಗಳನ್ನು ಅನುಸರಿಸಿದವು.

ನಿರಾಶ್ರಿತರು ಫ್ರಾನ್ಸ್ ಪ್ರವೇಶಿಸದಂತೆ ತಡೆಯಲಾಗಿತ್ತು ಎಂದು ಫ್ರಾನ್ಸ್‌ನ ವಿದೇಶ ವ್ಯವಹಾರ ಸಚಿವಾಲಯವನ್ನು ಖಂಡಿಸಲಾಗಿದೆ. ಆದರೆ ಫ್ರೆಂಚ್ ಪತ್ರಾಗಾರದಲ್ಲಿರುವ ದಾಖಲೆಗಳು ಈ ಆಪಾದನೆ ಆಧಾರ ರಹಿತವೆಂದು ತೋರಿಸಿಕೊಡುತ್ತವೆ ಮತ್ತು ಆ ಅವಧಿಯಲ್ಲಿ ಯುಕೆ ಮತ್ತು ಅಮೆರಿಕ ನಡೆದುಕೊಂಡದ್ದಕ್ಕಿಂತ ಹೆಚ್ಚು ಗೌರವಯುತವಾಗಿ ಫ್ರಾನ್ಸ್‌ನ ಅಧಿಕಾರಿಗಳು ನಡೆದುಕೊಂಡಿದ್ದರೆಂಬುದನ್ನು ಹೇಳುತ್ತದೆ.

1933ರ ವಸಂತ ಋತುವಿನಲ್ಲಿ ನಾಝಿ ಕಿರುಕುಳ ತಾಳಲಾರದೆ ಫ್ರಾನ್ಸ್‌ಗೆ ಬಂದ ಮೊದಲ ನಿರಾಶ್ರಿತರಿಗೆ ಆಶ್ರಯ ನೀಡಲು ಫ್ರಾನ್ಸ್ ಒಂದು ನೀತಿಯನ್ನು ರೂಪಿಸಿತು. 1933ರ ಜನವರಿಯಿಂದ 1940ರಲ್ಲಿ ಜರ್ಮನಿಯಿಂದ ಯುದ್ಧದಲ್ಲಿ ಫ್ರಾನ್ಸ್ ಸೋಲುವವರೆಗೆ, ಫ್ರಾನ್ಸ್‌ಗೆ ವಲಸೆ ಬಂದ ಅಂದಾಜು ಸುಮಾರು 80,000 ನಿರಾಶ್ರಿತರಲ್ಲಿ ಸುಮಾರು ಶೇ. 80 ಮಂದಿ ಯಹೂದಿಗಳಾಗಿದ್ದರು. ಸುಮಾರು ಅರ್ಧ ಭಾಗದಷ್ಟು ಮಂದಿಗೆ ತೃತೀಯ ದೇಶಗಳಲ್ಲಿ ಆಶ್ರಯ ವ್ಯವಸ್ಥೆ ಮಾಡಲಾಯಿತು ಮತ್ತು ಫ್ರಾನ್ಸ್‌ನಲ್ಲೇ ಉಳಿದ ಅಂದಾಜು 40,000 ಮಂದಿಯಲ್ಲಿ 30,000 ಮಂದಿ ಯಹೂದಿಗಳಾಗಿದ್ದರು.

1933ರಿಂದ 1938ರ ನಡುವೆ ನಿರಾಶ್ರಿತರ ಸಮಸ್ಯೆಯನ್ನು ಸಂಭಾಳಿಸಲು ಫ್ರಾನ್ಸ್ ಸರಕಾರ ತನ್ನ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಯಿತು. 1938ರಲ್ಲಿ ಎಡ್ವರ್ಡ್ ಡಲಾಡಿಯರ್ ಫ್ರಾನ್ಸ್ ಪ್ರಧಾನಿಯಾದಾಗ, ಹಿಂದಿನ ಪ್ರಧಾನಿಗಳು ತೋರಿದ್ದ ಸ್ವಲ್ಪಮಟ್ಟಿನ ಉಪೇಕ್ಷೆಯನ್ನು ಗಮನಿಸಿ, ಅವರು ನಿರಾಶ್ರಿತರಿಗೆ ಸಂಬಂಧಿಸಿದ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ತಾನೇ ವೈಯಕ್ತಿಕವಾಗಿ ವಹಿಸಿಕೊಂಡು, ಅದನ್ನು ವಿದೇಶ ವ್ಯವಹಾರ ಖಾತೆಯಿಂದ ತೆಗೆದು ಹಾಕಿದರು.

ನೈತಿಕ ಕರ್ತವ್ಯ

ಜರ್ಮನಿಯಿಂದ ಬರುತ್ತಿದ್ದ ನಿರಾಶ್ರಿತರ ಸಮಸ್ಯೆಯ ಪರಿಹಾರಕ್ಕೆ ಲೀಗ್ ಆಫ್ ನೇಷನ್ಸ್ ಪ್ರಯತ್ನಿಸುತ್ತಿದ್ದಾಗ, ಅಮೆರಿಕ ಮತ್ತು ಬ್ರಿಟಿಷ್ ಸರಕಾರಗಳು ವಲಸಿಗರು ತಮ್ಮ ದೇಶದೊಳಗೆ ಬರದಂತೆ ತಮ್ಮ ಬಾಗಿಲುಗಳನ್ನು ನಿರ್ದಾಕ್ಷಿಣ್ಯವಾಗಿ, ಭದ್ರವಾಗಿ ಮುಚ್ಚಿದವು.

ಇದಕ್ಕೆ ವ್ಯತಿರಿಕ್ತವಾಗಿ, ನಿರಾಶ್ರಿತರಿಗೆ ಆಶ್ರಯ ನೀಡುವ ಒಂದು ನೈತಿಕ ಕರ್ತವ್ಯ ತನಗಿದೆಯೆಂದು ಫ್ರೆಂಚ್ ಸರಕಾರಕ್ಕೆ ಮನವರಿಕೆಯಾಗಿತ್ತು. ಆಗ ಇದ್ದ ಆರ್ಥಿಕ ಹಿಂಜರಿತದಿಂದಾಗಿ ಉದ್ಭವಿಸಿದ ಹಲವಾರು ಸಮಸ್ಯೆಗಳ ಹೊರತಾಗಿಯೂ ಅದು ನಿರಾಶ್ರಿತರ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಿತು. 1933 ಮತ್ತು 1990ರ ನಡುವೆ ಅದು ಇತರ ಯಾವುದೇ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರಿಗೆ ಆಶ್ರಯ ನೀಡಿತು. ಇತರ ಎಲ್ಲ ದೇಶಗಳಿಗೆ ನಿರಾಶ್ರಿತರ ಸಮಸ್ಯೆ ಕೇವಲ ಅನುಕಂಪ ತೋರಬೇಕಾದ ಮತ್ತು ಪರಿಹಾರವಾಗಬೇಕಾದ ಒಂದು ವಿಷಯವಾಗಿತ್ತು. ಸಮಸ್ಯೆ ಪರಿಹಾರವಾಗಬೇಕು, ಆದರೆ ತಮ್ಮ ದೇಶದೊಳಗೆ ಅಲ್ಲ ಎಂಬುದು ಅವುಗಳ ನಿಲುವಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಫ್ರೆಂಚ್ ಜನತೆ ಫ್ರೆಂಚ್ ಕ್ರಾಂತಿಯ ವೌಲ್ಯಗಳನ್ನು ನೆನಪಿಸಿಕೊಂಡು ನಿರಾಶ್ರಿತರಿಗೆ ಆಶ್ರಯ ನೀಡಿದರು. ಇತರ ದೇಶಗಳಂತೆ ಅದು ಕೇವಲ ಬಾಯಿಮಾತಿನ ಸೇವೆಯಾಗಿರಲಿಲ್ಲ.

ಇಷ್ಟೇ ಅಲ್ಲದೆ, 1938ರ ಆಗಸ್ಟ್ ನಲ್ಲಿ ಫ್ರೆಂಚರು ನಾಝಿ ಜರ್ಮನಿಯನ್ನು ಸಂತುಷ್ಟಿಗೊಳಿಸಲೇಬೇಕಾದ ಸ್ಥಿತಿಯಲ್ಲಿದ್ದಾಗಲೂ, ಫ್ರಾನ್ಸ್‌ನಲ್ಲಿದ್ದ ಯಹೂದಿ ನಿರಾಶ್ರಿತರ ಬಗ್ಗೆ ಮಾಹಿತಿ ನೀಡುವಂತೆ ಜರ್ಮನ್ ಸರಕಾರ ವಿನಂತಿಸಿಕೊಂಡಾಗಲೂ, ಫ್ರೆಂಚ್ ಅಧಿಕಾರಿಗಳು ಆ ವಿನಂತಿಗಳಿಗೆ ಸೊಪ್ಪು ಹಾಕಲಿಲ್ಲ.

ಫ್ರಾನ್ಸ್ ತೋರಿದ ಈ ಅನುಕಂಪದ ಮುಂದೆ, ತಾವು ಸ್ವಾತಂತ್ರ ಮತ್ತು ನ್ಯಾಯದ ಮಹಾ ಪ್ರಭುತ್ವಗಳು ಎಂದು ಕೊಚ್ಚಿಕೊಳ್ಳುವ ಅಮೆರಿಕ ಮತ್ತು ಬ್ರಿಟನ್ ನಿರಾಶ್ರಿತರ ಬಗ್ಗೆ ತೋರಿದ ವಿರೋಧ, ವೈಷಮ್ಯ ಎದ್ದು ಕಾಣುತ್ತದೆ. ಅಮೆರಿಕ ಮತ್ತು ಬ್ರಿಟನ್ ಆ ಐದು ವರ್ಷಗಳ ಅವಧಿಯಲ್ಲಿ ಯಹೂದಿ ನಿರಾಶ್ರಿತರಿಗೆ ಯಾವುದೇ ಸುರಕ್ಷಿತ ನೆಲೆ ಒದಗಿಸಲು ನಿರಾಕರಿಸಿಬಿಟ್ಟವು. ಅಮೆರಿಕ ಮತ್ತು ಬ್ರಿಟನ್ ತಮ್ಮ ಇತಿಹಾಸಗಳಿಂದ ಮರೆಮಾಚಿರುವ, ಚಾಪೆಯಡಿಗೆ ತಳ್ಳಿರುವ ಒಂದು ಸತ್ಯ ಇದು. ಈ ಸತ್ಯವನ್ನು ಮತ್ತೊಮ್ಮೆ ಜ್ಞಾಪಿಸಿಕೊಳ್ಳಬೇಕಾಗಿದೆ.

ಇನ್ನು, ಯಹೂದಿಗಳ ವಿರುದ್ಧ ಯಾವುದೇ ರೀತಿಯ ತಾರತಮ್ಯ ಧೋರಣೆ ತಾಳದೆ ಇದ್ದ ಒಂದು ದೇಶ ಯಾವುದು? ಈ ಪ್ರಶ್ನೆಗೆ ಉತ್ತರ: ಭಾರತ.

ಕೃಪೆ: ಡೆಕ್ಕನ್ ಹೆರಾಲ್ಡ್

(ಡಾ. ಸ್ಟೀವನ್ ಫೀಯ್ನ ಓರ್ವ ಬ್ರಿಟಿಷ್ ಇತಿಹಾಸಕಾರ ಮತ್ತು ಕೃಷ್ಣನ್ ಶ್ರೀನಿವಾಸ್ ಓರ್ವ ಮಾಜಿ ವಿದೇಶಾಂಗ ಕಾರ್ಯದರ್ಶಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)