varthabharthi


ವಿಶೇಷ-ವರದಿಗಳು

ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಉನ್ನತ ಶಿಕ್ಷಣ ಸಚಿವರ ನಡೆ

ಜೆಡಿಎಸ್ ತೊರೆಯಲು ಮುಂದಾಗಿದ್ದಾರೆಯೇ ಜಿ.ಟಿ.ದೇವೇಗೌಡ ?

ವಾರ್ತಾ ಭಾರತಿ : 3 Jul, 2019
ನೇರಳೆ ಸತೀಶ್‍ ಕುಮಾರ್

ಮೈಸೂರು,ಜು.3: ರಾಜ್ಯ ಮೈತ್ರಿ ಸರ್ಕಾರದ ಉಭಯ ಪಕ್ಷಗಳ 10ಕ್ಕೂ ಹೆಚ್ಚು ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಸಂಚು ನಡೆಸಿದೆ ಎಂಬ ದೋಸ್ತಿ ನಾಯಕರ ಮಾತಿಗೆ, ಆಪರೇಷನ್ ಕಮಲ ನಡೆಸುತ್ತಿಲ್ಲ ಎನ್ನುವ ಮೂಲಕ ಬಿಜೆಪಿ ಪರ ಬ್ಯಾಟ್ ಬೀಸಿರುವ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಇತ್ತೀಚಿನ ನಡೆ, ನುಡಿ ಎರಡೂ ಸ್ಥಳೀಯ ರಾಜಕೀಯ ವಲಯದಲ್ಲಿ ಹಲವು ಊಹೆ, ಅನುಮಾನಗಳಿಗೆ ಕಾರಣವಾಗಿವೆ. 

ಮಹತ್ತರ ಬೆಳವಣಿಗೆಯಲ್ಲಿ ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಪಟ್ಟಿಯಲ್ಲಿ ಮೈಸೂರಿನ ಹಲವು ಶಾಸಕರ ಹೆಸರು ತಳುಕುಹಾಕಿಕೊಂಡಿದೆ. ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಕಾಂಗ್ರೆಸ್ ಪಕ್ಷದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿಲ್ಲ ಮತ್ತು ಈ ಬೆಳವಣಿಗೆಗೆ ಬಿಜೆಪಿ ಮೇಲೆ ಕೆಸರೆರಚಬಾರದು ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲವನ್ನುಂಟು ಮಾಡಿದೆ. ಲೋಕಸಭಾ ಚುನಾವಣೆ ನಂತರ ಸಚಿವ ಜಿ.ಟಿ.ದೇವೇಗೌಡರ ನಡೆಯನ್ನು ಗಮನಿಸಿದರೆ ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆಯೇ ಎಂಬ ಅನುಮಾನ ದಟ್ಟವಾಗತೊಡಗಿದೆ.

ಕರ್ನಾಟಕದ ಪ್ರಭಾವಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ ಜಿ.ಟಿ.ದೇವೇಗೌಡರಿಗೆ ಪಕ್ಷದಲ್ಲಿ ದೊಡ್ಡ ಸ್ಥಾನವೇ ಸಿಗಬೇಕಿತ್ತು. ಆದರೆ, ಉನ್ನತ ಶಿಕ್ಷಣ ಖಾತೆ ನೀಡಲಾಯಿತು. ಅದನ್ನೂ ಜಿ.ಟಿ.ದೇವೇಗೌಡ ಅವರು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚೆನ ಮಾಡಿರುವುದು ಇತಿಹಾಸ. ಇಲ್ಲಿ ಒಂದನ್ನು ಗಮನಿಸಬೇಕು, ಸಿದ್ದರಾಮಯ್ಯ ಅವರಂತಹ ಘಟಾನುಘಟಿ ರಾಜಕಾರಣಿಯನ್ನು ಮಣಿಸಿದ ಜಿ.ಟಿ.ದೇವೇಗೌಡರಿಗೆ ಅವರು ಕೇಳಿದ ಖಾತೆಯನ್ನು ನೀಡಬೇಕಿತ್ತು. ಆದರೆ ಅವರಿಗೆ ಇಷ್ಟವಿಲ್ಲದ ಉನ್ನತ ಶಿಕ್ಷಣ ಖಾತೆ ನೀಡಿ ಜಿ.ಟಿ.ದೇವೇಗೌಡರಿಗೆ ದಳ ನಾಯಕರ ಮೇಲೆ ಅಸಮಧಾನ ಉಂಟಾಗುವಂತೆ ಮಾಡಲಾಯಿತು.

ಸಚಿವ ಸ್ಥಾನ ಸ್ವೀಕರಿಸಲು ಹಿಂದೇಟು ಹಾಕಿದ ಜಿ.ಟಿ.ಡಿ, ನಂತರ ಒಪ್ಪಿಕೊಂಡು ಒಂದು ವರ್ಷದಿಂದ ಅಧಿಕಾರ ನಡೆಸುತ್ತಿದ್ದಾರೆ. ಈ ಅವಧಿಯಲ್ಲೇ ಬಿಜೆಪಿ ಬಗ್ಗೆ ಮೃದು ಧೋರಣೆಯ ಮಾತುಗಳನ್ನು ಜಿ.ಟಿ.ದೇವೇಗೌಡ ಪದೇ ಪದೇ ಹಾಡುತ್ತಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಮುಂದಾದಾಗ ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಸಚಿವ ಜಿ.ಟಿ.ದೇವೇಗೌಡ ಪಟ್ಟು ಹಿಡಿದಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಮೈಸೂರನ್ನು ಬಿಟ್ಟುಕೊಡುವುದಿಲ್ಲ. ಬೇಕಿದ್ದರೆ ತುಮಕೂರನ್ನು ಬಿಟ್ಟುಕೊಡುವುದಾಗಿ ಹೇಳಿ ಚುನಾವಣೆ ಎದುರಿಸಿದರು. ಆದರೆ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸೋಲನ್ನು ಕಂಡರು.

ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿ.ಎಚ್.ವಿಜಯಶಂಕರ್ ಹಾಗೂ ಬಿಜೆಪಿಯಿಂದ ಸಂಸದ ಪ್ರತಾಪ್ ಸಿಂಹ ಅಖಾಡಕ್ಕಿಳಿದಿದ್ದರು. ಬಹಳ ಜಿದ್ದಾಜಿದ್ದಿನ ಕಣವಾಗಿದ್ದ ಈ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಬಹುತೇಕ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡದೆ ಬಿಜೆಪಿಯನ್ನು ಬೆಂಬಲಿಸಿದ್ದರು. ಮತದಾನ ಮುಗಿದ ನಂತರ ಸಚಿವ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದರು. ಫಲಿತಾಂಶ ಪ್ರಕಟವಾದ ನಂತರ ಬಿಜೆಪಿಯ ಪ್ರತಾಪ್ ಸಿಂಹ ಎರಡನೇ ಬಾರಿ ಗೆದ್ದು ಬಂದಿದ್ದರು.

ಈ ಹಿಂದೆ ಸಚಿವ ಜಿ.ಟಿ.ದೇವೇಗೌಡರನ್ನು ಹೆಸರಿಡಿದು ಕರೆಯುತ್ತಿದ್ದ ಸಂಸದ ಪ್ರತಾಪ್ ಸಿಂಹ, ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾದ ನಂತರ ಸಭೆ ಸಮಾರಂಭಗಳಲ್ಲಿ ಜಿ.ಟಿ.ದೇವೇಗೌಡ ಸಾಹೇಬರು ಎಂದು ಸಂಬೋಧಿಸಲು ಪ್ರಾರಂಭ ಮಾಡಿದರು. ನಂತರ ಚಾಮುಂಡೇಶ್ವರಿ ಕ್ಷೇತ್ರದಾದ್ಯಂತ ಸಂಸದ ಪ್ರತಾಪ್ ಸಿಂಹರೊಡಗೂಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಇಬ್ಬರೂ ಜೊತೆಯಾಗಿ ತಾ.ಪಂ ಸದಸ್ಯರೊಬ್ಬರ ಮನೆಯಲ್ಲಿ ಒಟ್ಟಿಗೆ ಕೂತು ಬಾಡೂಟ ಸವಿದಿದ್ದಾರೆ.

ಜೊತೆಗೆ ಜು.2 ಮಂಗಳವಾರ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್, ಜು.3 ರ ಬುಧವಾರ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಅವರ ಕ್ಷೇತ್ರದಾದ್ಯಂತ ನಗರ ಪ್ರದಕ್ಷಿಣೆ ಹಾಕಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಿರುವ ಸಚಿವ ಜಿ.ಟಿ.ದೇವೇಗೌಡ, ಎಲ್ಲೋ ಬಿಜೆಪಿ ಶಾಸಕರುಗಳನ್ನು ಒಟ್ಟಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದರ ಬೆನ್ನಲ್ಲೇ ಮಂಗಳವಾರ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯ ಬಗ್ಗೆ ಪ್ರಸ್ತಾಪಿಸಿರುವ ಸಚಿವ ಜಿ.ಟಿ.ದೇವೇಗೌಡ, ಇದರಲ್ಲಿ ಮೋದಿ, ಅಮಿತ್ ಶಾ ಕೈವಾಡವಿಲ್ಲ, ಅವರು ಬಜೆಟ್ ಬಗ್ಗೆ, ಕಾಶ್ಮೀರ ಮತ್ತು ಚೈನಾ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಸುಮ್ಮನೆ ಬಿಜೆಪಿ ಮೇಲೆ ಕೆಸರೆರಚಬಾರದು ಎಂಬ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ರಾಜಕೀಯ ವಲಯ ಮತ್ತು ಜೆಡಿಎಸ್ ಪಾಳಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಮತ್ತೊಂದೆಡೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಜಿ.ಟಿ.ದೇವೇಗೌಡ ರಾಷ್ಟ್ರಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಹಾಗೆ ಬಿಜೆಪಿ ಅಪರೇಷನ್ ಕಮಲ ಮಾಡಿಲ್ಲ ಎಂಬ ಹೇಳಿಕೆಗೆ ಈಗಲೂ ಬದ್ಧ, ಮುಂದೆಯೂ ಬದ್ಧ ಎಂದಿರುವುದು ಬಿಜೆಪಿ ಕಡೆ ಮುಖಮಾಡಿದ್ದಾರೆ ಎಂಬದನ್ನು ಧೃಡಪಡಿಸುತ್ತಿದೆ ಎನ್ನಲಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)