varthabharthi


ವಿಶೇಷ-ವರದಿಗಳು

ದೇಶದ ವಿವಿಧತೆಗೆ ‘ಜಂಟಿ’ ಅಪಾಯ

ವಾರ್ತಾ ಭಾರತಿ : 3 Jul, 2019
ವಿದ್ಯಾಭೂಷಣ್ ರಾವತ್, ಕನ್ನಡಕ್ಕೆ: ಕಸ್ತೂರಿ

‘ಒಂದು ದೇಶ, ಒಂದೇ ಚುನಾವಣೆ’ ಎಂದು ಮೋದಿ ಮಾಡಿದ ಪ್ರತಿಪಾದನೆಯನ್ನು ಲಾ ಕಮಿಷನ್ ಸಹ ತರ್ಕಿಸಿ, ಈ ಅಂಶದ ಮೇಲೆ ತನ್ನ ಅಭಿಪ್ರಾಯ ತಿಳಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳನ್ನು ಕೋರಿದೆ. ಆದರೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಮುಖಂಡರು ಒಂದು ಭಾಗವಷ್ಟೆ. ಚುನಾವಣೆಗೆ ಸಂಬಂಧಿಸಿದ ಈ ಇಡೀ ಪ್ರಕ್ರಿಯೆಯಲ್ಲಿ ಚುನಾವಣಾ ಸಂಸ್ಥೆಗೆ, ಕಾನೂನು ವ್ಯವಸ್ಥೆಗೆ, ಎಲ್ಲಕ್ಕೂ ಮಿಗಿಲಾಗಿ ಭಾರತೀಯ ಮತದಾರ ಪ್ರಜೆಗೆ ಸಹ ಪಾಲು ಇದೆ. ಅದಕ್ಕಾಗಿಯೇ ಈ ಮುಖ್ಯವಾದ ಅಂಶದ ಮೇಲೆ ಒಂದು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಮುನ್ನ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಪರಿಗಣಿಸಬೇಕು.

‘ಒಂದು ದೇಶ-ಒಂದೇ ಚುನಾವಣೆ’ ಹೆಸರಿನಲ್ಲಿ ಪ್ರಸ್ತುತ ವಿಸ್ತಾರವಾಗಿ ಪ್ರಚಾರವಾಗುತ್ತಿರುವ ಜಂಟಿಚುನಾವಣೆ ಘೋಷಣೆ ಅತಿ ಅಪಾಯಕರ ಸಂಕೇತಗಳನ್ನು ಹೊರಹಾಕುತ್ತಿದೆ. ಒಂದು ಮಾತಿನಲ್ಲಿ ಹೇಳಬೇಕೆಂದರೆ ಜಂಟಿ ಚುನಾವಣೆಯ ಭಾವನೆ ವಿವಿಧ ಜಾತಿಗಳ ಸಮ್ಮಿಶ್ರಿತ ಸಂಸ್ಕೃತಿಯಾಗಿ ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತೀಯ ವೈವಿಧ್ಯವನ್ನು ನಿರ್ಮೂಲಿಸಿ ಇಡೀ ದೇಶವನ್ನು ಏಕಜಾತಿ ಚಕ್ರದಲ್ಲಿ ತೂರಿಸುವ ಗುಣದೊಂದಿಗೆ ಮುಂದೆ ಬರುತ್ತಿದೆ.

ರಾಷ್ಟ್ರೀಯತೆಯ ಮುಸುಕಿನಲ್ಲಿ ಚುನಾವಣೆ ಗೆದ್ದುಕೊಳ್ಳುವುದು ಎಂಬ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ ಆಡಳಿತ ಪಕ್ಷಕ್ಕೆ ಜಂಟಿ ಚುನಾವಣೆಗಳು ವರವಾಗಿ ಬದಲಾಗುವುದು ಖಂಡಿತ. ಆದರೆ ಅತಿ ದೊಡ್ಡ ದೇಶವಾಗಿರುತ್ತಾ ತಾನೇ ಒಂದು ಖಂಡವಾಗಿ ವಿಕಸಿಸುತ್ತಿರುವ ಭಾರತದೇಶದಲ್ಲಿ ಚುನಾವಣಾ ಕಮಿಷನ್ ಸಿದ್ಧತೆಯ ರೀತಿ ನೀತಿಗಳನ್ನು ಪರಿಶೀಲಿಸುವವರಿಗೆ ಒಂದು ವಿಷಯ ಸ್ಪಷ್ಟವೆ. ಅದು, ಪ್ರಧಾನಿ ನರೇಂದ್ರ ಮೋದಿ, ಅವರ ಸಹಾಯಕರು ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕೆ ಮಾಡಬೇಕಾದ ಮುಖ್ಯ ಕರ್ತವ್ಯ ಏನೆಂದರೆ ಒಂದೇ ದಿನ ದೇಶಾದ್ಯಂತ ಪೋಲಿಂಗ್ ನಿರ್ವಹಿಸಿ, ಫಲಿತಾಂಶಗಳನ್ನು ನಾಲ್ಕುದಿನಗಳ ಒಳಗೇ ಘೋಷಿಸ ಬೇಕೆಂದು ಚುನಾವಣಾ ಕಮಿಷನ್‌ಅನ್ನು ಕೋರುವುದು.

ಇಡೀ ದೇಶದಲ್ಲಿ ಚುನಾವಣೆಯನ್ನು ಒಂದೇ ದಿನದಲ್ಲಿ ಮುಗಿಸುವುದರಿಂದ ನಮಗೆ ಎಷ್ಟೋ ಪ್ರಯೋಜನಗಳು ಸಿದ್ಧಿಸುತ್ತವೆ. ಇವುಗಳಲ್ಲಿ ಮೊತ್ತ ಮೊದಲನೆಯದು ಏನೆಂದರೆ ಎಗ್ಸಿಟ್ ಪೋಲ್ ಹೆಸರಿನಲ್ಲಿ ಪಕ್ಷಗಳ ಗೆಲುವು ಸೋಲುಗಳನ್ನು ಕುರಿತು ಯದ್ವಾತದ್ವಾ ಸಾಗುತ್ತಿರುವ ಅಂದಾಜುಗಳನ್ನು ನಿಯಂತ್ರಿಸಬಹುದು. ಎಗ್ಸಿಟ್ ಪೋಲ್ ತನಗೆ ತಾನೇ ಒಂದು ದಂಧೆಯಾಗಿ ಬದಲಾಗಿ, ಮಾರ್ಕೆಟ್‌ನಲ್ಲಿನ ದಲ್ಲಾಳಿಗಳಿಗೆ ಫಲಿತಾಂಶಗಳ ಅಂದಾಜಿನ ಹೆಸರಿನಲ್ಲಿ ಕೋಟ್ಯಂತರ ರೂ.ಗಳನ್ನು ಲೂಟಿ ಮಾಡುವ ಅವಕಾಶ ಕಲ್ಪಿಸುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಯ ಕ್ಯಾಂಪೇನ್ ಮಾರ್ಚ್ 10ರಂದು ಆರಂಭವಾಗಿ ಮೇ 19ರಂದು ಕೊನೆಯ ಪ್ರಚಾರ ದೊಂದಿಗೆ ಮುಗಿಯಿತು. ಮೇ 23ರಂದು ಫಲಿತಾಂಶಗಳ ಘೋಷಣೆ ಆಯಿತು. ಇಷ್ಟು ಸುದೀರ್ಘಕಾಲ ಜರುಗುವ ಚುನಾವಣಾ ಪ್ರಕ್ರಿಯೆಯಿಂದ ಅನೇಕ ವದಂತಿಗಳು ಹರಡುತ್ತಾ, ಅಂದಾಜುಗಳು ಬೆಳೆಯುತ್ತಾ ಹೋಗುವುದಷ್ಟೇ ಅಲ್ಲ..... ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷತೆಯ ಬಗ್ಗೆ, ಭಾರತ ಚುನಾವಣಾ ಕಮಿಷನ್ ಕಾರ್ಯವಿಧಾನದ ಮೇಲೆ ಸಂಶಯಗಳನ್ನು ಎಬ್ಬಿಸುತ್ತದೆ. ಆದ್ದರಿಂದ ಮೋದಿ ಜಂಟಿ ಚುನಾವಣೆಗಳನ್ನು ಬಯಸುವುದಾದಲ್ಲಿ ದೇಶಾದ್ಯಂತ ಒಂದೇ ದಿನ ಪೋಲಿಂಗ್ ಪೂರ್ತಿ ಮಾಡಿ, ನಂತರದ ನಾಲ್ಕೈದು ದಿನಗಳಲ್ಲಿಯೇ ಫಲಿತಾಂಶಗಳನ್ನು ಹೊರಹಾಕುವಂತೆ ಸೂಕ್ತ ಏರ್ಪಾಟುಗಳು ಮಾಡಬೇಕು. ಅಗತ್ಯವಾದ ಕಡೆ ಮರುಮತದಾನ ನಡೆಸುವುದು, ಇವಿಎಂಗಳನ್ನು ಎಣಿಕೆಯ ಕೇಂದ್ರಗಳಿಗೆ ಸಾಗಿಸುವುದಕ್ಕೆ ಈ ಐದು ದಿನಗಳ ಅವಧಿ ಸಾಕಾಗುತ್ತದೆ.

ಇನ್ನು ಎರಡನೇ ವಿಷಯ. ‘ಒಂದು ದೇಶ-ಒಂದೇ ಚುನಾವಣೆ’ ವಿಧಾನದಲ್ಲಿ ಚುನಾವಣಾ ನಿಧಿಗಳನ್ನು ಸರಕಾರವೇ ಒದಗಿಸುವುದು. ಪೋಲಿಂಗ್ ನಡೆಯುವುದಕ್ಕೆ ಎರಡು ತಿಂಗಳ ಮುನ್ನವೇ ರಾಜಕೀಯ ಪರವಾದ ಜಾಹೀರಾತುಗಳನ್ನು, ಒಪೀನಿಯನ್ಸ್ ಪೋಲ್‌ಗಳನ್ನು ನಿಷೇಧಿಸಬೇಕಾಗುತ್ತದೆ. ಮೂರನೆಯದು ರಾಜ್ಯ ಅಸೆಂಬ್ಲಿಗಳು ವಿವಿಧ ಕಾಲಗಳಲ್ಲಿ ಏರ್ಪಡುತ್ತಿರುತ್ತವೆ. ಇದು ಯಾವಾಗಲೂ ಸಂಭವಿಸುವ ಪ್ರಕ್ರಿಯೆ. ಶಾಸನ ಸಭೆಗಳಿಗೆ ಸಹ ಏಕಕಾಲದಲ್ಲಿ ಚುನಾವಣೆಗಳು ಹಿಂದೆ ನಡೆಯುತ್ತಿದ್ದವು. ಆದರೆ ಆ ಬಳಿಕ ವಿವಿಧ ರಾಜ್ಯಗಳ ಅಸೆಂಬ್ಲಿಗಳ ಕಾಲಾವಧಿ ಬದಲಾಗುತ್ತಾ ಬಂದಿತು. ಸರಕಾರಗಳು ಕುಸಿದು ಬೀಳುವುದು, ರಾಷ್ಟ್ರಪತಿ ಆಡಳಿತದಂತಹ ಹಲವು ಪರಿಣಾಮಗಳು ಇದಕ್ಕೆ ಕಾರಣ. ಇಂತಹವು ಪದೇ ಪದೇ ಜರುಗುವುದು ಸಹಜ.

ಸಾರ್ವತ್ರಿಕ ಚುನಾವಣೆಗಳು ನಡೆಯುವ ತನಕ ರಾಜ್ಯಗಳ ಅಸೆಂಬ್ಲಿಗಳನ್ನು ಅನಿಶ್ಚಿತವಾಗಿ ಇಡಲಾರರು. ಹಾಗೆ ಇಟ್ಟರೆ ಅದು ಪೂರ್ತಿ ಸಮಸ್ಯಾತ್ಮಕವಾಗಿ ಬದಲಾಗುತ್ತದೆ. ಅದಲ್ಲದೇ ರಾಷ್ಟ್ರೀಯ ಸಮಸ್ಯೆಗಳು ಹಾಗೂ ರಾಜ್ಯಗಳ ಸ್ಥಳೀಯ ಸಮಸ್ಯೆಗಳ ಮಧ್ಯೆ ತುಂಬಾ ದೊಡ್ಡ ವ್ಯತ್ಯಾಸ ಇರುತ್ತದೆ. ಇವೆರಡೂ ಎಂದೂ ಒಂದಾಗಿ ಇರಲಾರವು. ಈಗೀಗ ಚುನಾವಣಾ ವ್ಯವಸ್ಥೆಗಾಗಿ ಆಗುತ್ತಿರುವ ಭಾರೀ ಪ್ರಮಾಣದ ಖರ್ಚನ್ನು ತಗ್ಗಿಸಬೇಕೆಂದು ಪ್ರಧಾನಿ ಭಾವಿಸುವುದರಲ್ಲಿ ತಪ್ಪಿಲ್ಲ. ನಾವು ಅರ್ಥ ಮಾಡಿಕೊಳ್ಳಬಲ್ಲೆವು ಕೂಡಾ.

ಆದರೆ ವಾಸ್ತವ ಏನೆಂದರೆ ಸ್ವತಃ ಅವರ ಪಕ್ಷವೇ ಈ ಸಲದ ಚುನಾವಣೆಯಲ್ಲಿ ವಿಪರೀತವಾಗಿ ಖರ್ಚು ಮಾಡಿತು. ಇತರ ಪಕ್ಷಗಳೆಲ್ಲಾ ಸೇರಿ ಕೂಡಾ ಬಿಜೆಪಿ ಮಾಡಿದ ಖರ್ಚಿನಲ್ಲಿ ಕನಿಷ್ಠ ಶೇ. 50 ಸಹ ವೆಚ್ಚ ಮಾಡಲಾರದೇ ಹೋದವು. ಆದ್ದರಿಂದ ಭಾರೀ ಪ್ರಮಾಣದಲ್ಲಿ ಹಣ ಚೆಲ್ಲಾಡಿ ಅಧಿಕಾರಕ್ಕೆ ಬಂದ ಪಕ್ಷ ತನ್ನೊಂದಿಗೆ ಸಮಾನ ಮಟ್ಟವನ್ನು ಹೊಂದಿರುವ ಪಕ್ಷಗಳ ಅಸ್ತಿತ್ವವನ್ನು ಎಂದೂ ಅಂಗೀಕರಿಸದು.

ಅದಕ್ಕೆ ಪ್ರಸ್ತುತ ಕೇಂದ್ರ ಸರಕಾರ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಕ್ಕೋಸ್ಕರ ದುಡುಕಿನಿಂದ ತನ್ನ ಅಧಿಕಾರ ಚಲಾಯಿಸುವುದಕ್ಕೆ ಇಷ್ಟ ಬಂದಂತೆ ವರ್ತಿಸುತ್ತಿದೆ. ಪ್ರಜಾಪ್ರಭುತ್ವ ನಿಜಕ್ಕೂ ಬಲಿಷ್ಠವಾಗಬೇಕೆಂದರೆ ಅಮೆರಿಕ ಅಧ್ಯಕ್ಷೀಯ ಪಾಲನೆ ತರಹದಲ್ಲಿ ನಮ್ಮ ದೇಶದಲ್ಲೂ ಎರಡು ಅವಧಿಗಳಿಗೆ ಮೀರಿ ಯಾರೂ ಪ್ರಧಾನಿ ಪದವಿಗಳಿಗೆ ಏರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದು ಪ್ರಜಾಸ್ವಾಮೀಕರಣದ ಪ್ರಕ್ರಿಯೆಯನ್ನು ಸಂಘಟಿತಗೊಳಿಸುತ್ತದೆ.

ಅದೇ ಸಮಯದಲ್ಲಿ ರಾಜಕೀಯ ಪಕ್ಷಗಳು ಸಹ ಅಂತರ್ಗತವಾಗಿ ಪ್ರಜಾಸ್ವಾಮೀಕರಣ ಪ್ರಕ್ರಿಯೆಗೆ ಅನುಮತಿಸಬೇಕು. ಆಗ ಮಾತ್ರವೇ ನಮ್ಮ ದೇಶದಲ್ಲಿನ ರಾಜಕೀಯ ಪಕ್ಷಗಳು ವಿವಿಧ ರಾಜಕೀಯ ಕುಟುಂಬಗಳ ವಾರಸತ್ವದ ಹಕ್ಕಾಗಿ ಬದಲಾಗಲಾರವು. ಮೇಲಾಗಿ ‘ಒಂದು ದೇಶ-ಒಂದೇ ಚುನಾವಣೆ’ ಎನ್ನುವುದು ಯಾವ ರೀತಿಯಲ್ಲಿ ನೋಡಿದರೂ ಸಾಧ್ಯವಾಗುವಂತಿಲ್ಲ. ಒಂದು ಅಸೆಂಬ್ಲಿಯಲ್ಲೇ ಏಕೆ, ಪಾರ್ಲಿಮೆಂಟೇ ಏಕೆ, ಪಂಚಾಯತ್‌ಗಳು, ಪಟ್ಟಣ ಸ್ಥಳೀಯಾಡಳಿತ ಸಂಸ್ಥೆಗಳು, ಜಿಲ್ಲಾ ಪರಿಷತ್‌ಗಳು ಎಲ್ಲಕ್ಕೂ ಒಂದೇ ಸಮಯದಲ್ಲಿ ಚುನಾವಣೆ ನಿರ್ವಹಿಸಿದರೆ ಆಯ್ತಲ್ಲ! ಇದು ಎಷ್ಟು ಅವಾಸ್ತವವಾದ ಅವಿವೇಕದ ಪ್ರಸ್ತಾಪವೆಂದು ಅರ್ಥ ಮಾಡಿಕೊಳ್ಳಬಹುದು.

ಪ್ರಧಾನಿ ಮೋದಿ ತಲೆಯಲ್ಲಿ ಹುಟ್ಟಿ ಬಂದ ಈ ಜಂಟಿ ಚುನಾವಣೆಯ ಯೋಜನೆಯಲ್ಲಿ ಹೊಸತನ ಎಂಬುದು ಇಲ್ಲ. ಇತಿಹಾಸದಲ್ಲಿ ಶಕ್ತಿ ಶಾಲಿಯಾದ ಪ್ರತಿವ್ಯಕ್ತಿ ಸರ್ವಾಧಿಕಾರಿ ಎದುರಿಲ್ಲದ ಅಧಿಕಾರವನ್ನು ಬಯಸಿದ್ದಾದರೆ ಅದು ಆಚರಣಾತ್ಮಕ ಅಲ್ಲ. ವಾಸ್ತವ ಮೊದಲೇ ಅಲ್ಲ. ರಾಜ್ಯ ಸರಕಾರಗಳ ಪದವಿ ಕಾಲವನ್ನು ಆಧರಿಸಿ ವಿವಿಧ ರಾಜ್ಯಗಳ ಶಾಸನ ಸಭೆಗಳು ವಿವಿಧ ಕಾಲಗಳಲ್ಲಿ ಚುನಾವಣೆಗೆ ಹೋಗುತ್ತಿರುತ್ತವೆ. ಈ ಚಕ್ರದ ಆಚೆ ಯಾರೂ ಎಂತಹ ಪ್ರಯೋಜನವನ್ನೂ ಪಡೆಯಲಾರರು.

ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ತನ್ನ ಚರಿತ್ರೆಯಲ್ಲಿ ಎಂದೂ ಇಲ್ಲದಂತಹ ಉಜ್ವಲ ದೆಸೆಯನ್ನು ಈಗ ಅನುಭವಿಸುತ್ತಿದೆ. ಮೇಲಾಗಿ ದೇಶದಲ್ಲಿನ ಪ್ರತೀ ಆಡಳಿತ ವ್ಯವಸ್ಥೆ ಅದರ ಕೈಗಳಲ್ಲೇ ಇವೆ. ಈ ದುರಹಂಕಾರದಿಂದಲೇ ಅದು ದೇಶಾದ್ಯಂತ ಸಮಸ್ತ ವಿರೋಧ ಪಕ್ಷಗಳನ್ನು ದಿಗ್ಬಂಧಿಸಬೇಕೆಂದು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿಯ ದುರಾಸೆಗೆ ದೇಶ ತೆರಬೇಕಾದ ಬೆಲೆ ಅಸಾಧಾರಣವಾಗಿ ಇರುತ್ತದೆ.

‘ಒಂದು ದೇಶ, ಒಂದೇ ಚುನಾವಣೆ’ ಎಂದು ಮೋದಿ ಮಾಡಿದ ಪ್ರತಿಪಾದನೆಯನ್ನು ಲಾ ಕಮಿಷನ್ ಸಹ ತರ್ಕಿಸಿ, ಈ ಅಂಶದ ಮೇಲೆ ತನ್ನ ಅಭಿಪ್ರಾಯ ತಿಳಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳನ್ನು ಕೋರಿದೆ. ಆದರೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಮುಖಂಡರು ಒಂದು ಭಾಗವಷ್ಟೆ. ಚುನಾವಣೆಗೆ ಸಂಬಂಧಿಸಿದ ಈ ಇಡೀ ಪ್ರಕ್ರಿಯೆಯಲ್ಲಿ ಚುನಾವಣಾ ಸಂಸ್ಥೆಗೆ, ಕಾನೂನು ವ್ಯವಸ್ಥೆಗೆ, ಎಲ್ಲಕ್ಕೂ ಮಿಗಿಲಾಗಿ ಭಾರತೀಯ ಮತದಾರ ಪ್ರಜೆಗೆ ಸಹ ಪಾಲು ಇದೆ. ಅದಕ್ಕಾಗಿಯೇ ಈ ಮುಖ್ಯವಾದ ಅಂಶದ ಮೇಲೆ ಒಂದು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಮುನ್ನ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಪರಿಗಣಿಸಬೇಕು.

ಭಾರತ ಈಗಲೂ ಪರಿಣತಿ ಹೊಂದುತ್ತಾ ಇರುವ, ಪ್ರಜಾಪ್ರಭುತ್ವವಾಗಿ, ಅಭಿವೃದ್ಧಿಶೀಲ ದೇಶವಾಗಿರುತ್ತದೆ. ಬೆಳೆಯುತ್ತಿರುವ ದೇಶ ಅನೇಕ ಸವಾಲುಗಳನ್ನು ಎದುರಿಸಬೇಕಾಗಿರುತ್ತದೆ. ಇವುಗಳಲ್ಲಿ ಅತಿದೊಡ್ಡ ಸವಾಲು ಉತ್ತಮ, ಪಾರದರ್ಶಕವಾದ, ಸಮರ್ಥ ಆಡಳಿತವನ್ನು ನೀಡುವುದು. ಆದರೆ ನಮ್ಮ ದೇಶದಲ್ಲಿ ರಾಜಕೀಯ ನಾಯಕರು ಅಧಿಕಾರಕ್ಕೆ ಬರುವ ಮುನ್ನ ಆಶ್ವಾಸನೆಗಳನ್ನು ಉದುರಿಸಿ, ಚುನಾವಣೆಯಾಗಿ ಅಧಿಕಾರದಲ್ಲಿ ಬಂದ ಬಳಿಕ ಅವನ್ನು ಲೀಲಾಜಾಲವಾಗಿ ಮರೆತು ಹೋಗುತ್ತಾ, ಬದಿಗಿಡುತ್ತಾ ಮತ್ತೊಂದು ಐದು ವರ್ಷಗಳವರೆಗೆ ಅಧಿಕಾರ ಚಲಾಯಿಸುತ್ತಾ ಇರುತ್ತಾರೆ. ಕೊನೆಗೆ ಮತ್ತೊಂದು ಸಲ ಚುನಾವಣೆ ಸಮೀಪಿಸುತ್ತಿರುವಾಗ ಮಾತ್ರವೇ ಇವರಿಗೆ ಹಿಂದೆ ಮಾಡಿದ ಪ್ರಮಾಣಗಳು ನೆನಪಿಗೆ ಬರುತ್ತವೆ. ಅಭಿವೃದ್ಧಿ ಹೊಂದಿದ ದೇಶಗಳಂತೆ ಅಲ್ಲದೆ ಭಾರತದಂತಹ ಅಭಿವೃದ್ಧಿ ಶೀಲ ದೇಶದಲ್ಲಿ ರಾಜಕೀಯ ಮುಖಂಡರು, ಬ್ಯೂರೋಕ್ರಾಟ್‌ಗಳು ಕಾನೂನುಗಳನ್ನು ಪದೇಪದೇ ಉಲ್ಲಂಘಿಸುತ್ತಾ ಕಾನೂನು ಪಾಲನೆ ಜಾರಿಯಾಗದ ಪರಿಸ್ಥಿತಿಯನ್ನು ಬಳಸಿಕೊಂಡು ಶಿಕ್ಷೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದಲೇ ಅಧಿಕಾರ ಕೈವಶ ಮಾಡಿಕೊಂಡ ನಾಯಕರು, ಅವರ ಅಧಿಕಾರಿಗಳು ಸರಕಾರಿ ಸೇವಕರು ಅಧಿಕಾರವನ್ನು ಪದೇ ಪದೇ ದುರ್ಬಳಕೆ ಮಾಡುತ್ತಲೇ ಇರುತ್ತಾರೆ.

ರಾಜಕೀಯ ನಾಯಕರು ತಾವು ಕೊಟ್ಟ ಆಶ್ವಾಸನೆಗಳಿಗೆ ಕಟ್ಟು ಬೀಳದೇ ಹೋದರೆ ಅವರನ್ನು ತಿರಸ್ಕರಿಸುವ ಅವಕಾಶ ಮತದಾರರಿಗೆ ಐದು ವರ್ಷಗಳ ಒಳಗೆ ಸಿಗುತ್ತದೆಯೇ?. ಈ ಸ್ಥಿತಿಯಿಂದ ಬದಲಾವಣೆ ಬರುವವರೆಗೆ, ಅಸ್ತವ್ಯಸ್ತ ಆಡಳಿತ ಜಾರಿಯಾಗುತ್ತಿರುವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ಈಗ ಇರುವ ರೀತಿಯಲ್ಲಿ ಯಥಾಸ್ಥಿತಿಯಾಗಿ ಮುಂದುವರಿಸುವುದೇ ಉತ್ತಮ.

ದೇಶಾದ್ಯಂತ ಚುನಾವಣೆಗಳನ್ನು ಏಕಕಾಲದಲ್ಲಿ ನಿರ್ವಹಿಸುವುದರಲ್ಲಿ ಇರುವ ಅಸಂಬದ್ಧತೆಯನ್ನು, ಅಭಾಸವನ್ನು ಒಂದು ಸಲ ನೋಡಿರಿ. ಈ ಚುನಾವಣಾ ಸಮಯದಲ್ಲಿ ಅಮಿತ್ ಶಾ, ಸ್ಮತಿ ಇರಾನಿ ಗುಜರಾತ್‌ನಿಂದ ತಮ್ಮ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಎರಡು ವಿಭಿನ್ನ ದಿನಾಂಕಗಳಂದು ಇವರು ರಾಜೀನಾಮೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಚುನಾವಣಾ ಕಮಿಷನ್ ಒಂದು ಅಸಾಮಾನ್ಯ ಆದೇಶ ನೀಡಿ, ಆ ಎರಡು ರಾಜ್ಯಸಭಾ ಸ್ಥಾನಗಳಿಗೆ ವಿಭಿನ್ನ ದಿನಾಂಕಗಳಲ್ಲಿ ಪೋಲಿಂಗ್ ನಿರ್ವಹಿಸಿತು. ಆ ಎರಡು ಸ್ಥಾನಗಳನ್ನೂ ಬಿಜೆಪಿಗೆ ದಕ್ಕಿಸಿ ಕೊಡಬೇಕೆಂಬ ಈ ಯೋಚನೆಯ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದು ಭಾರೀ ಕಷ್ಟವೇನಲ್ಲ.

ಆಡಳಿತ ಪಕ್ಷದ ಇಷ್ಟಾಇಷ್ಟಗಳಿಗೆ ತಕ್ಕಂತೆ ಸೂತ್ರದ ಬೊಂಬೆಯಾಗಿ ಬದಲಾಗಿ ಚುನಾವಣಾ ಸಂಸ್ಥೆ ತನ್ನ ಪ್ರತಿಷ್ಠೆಯನ್ನು ತಾನೇ ಈ ವಿಧವಾಗಿ ಪತನಗೊಳಿಸಿಕೊಳ್ಳಬೇಕಿತ್ತಾ? ‘ಒಂದು ದೇಶ, ಒಂದೇ ಚುನಾವಣೆ’ ಎಂದು ಚರ್ಚೆ ಎಬ್ಬಿಸುತ್ತಿರುವ ಆಡಳಿತ ಪಕ್ಷಕ್ಕೆ ಗುಜರಾತ್‌ನಲ್ಲಿ ಎರಡು ರಾಜ್ಯಸಭಾ ಸ್ಥಾನಗಳಿಗೆ ಏಕಕಾಲದಲ್ಲಿ, ಒಂದೇ ದಿನಾಂಕದಂದು ಚುನಾವಣೆ ನಿರ್ವಹಿಸುವುದು ಸಾಧ್ಯವಾಗದೇ ಹೋಯಿತೇ? ಎಂಥ ವಂಚನೆ ಇದು!

ಜಂಟಿ ಚುನಾವಣೆ ಹೆಸರಿನಲ್ಲಿ ಅಧಿಕಾರಸ್ಥ ಪಕ್ಷ ಭವಿಷ್ಯತ್ತಿನಲ್ಲಿ ಮಾಡುವ ಚೇಷ್ಟೆಗಳು ಹೀಗೇ ಮುಂದುವರಿಯುತ್ತವೆ. ಸಂವಿಧಾನ ನೀಡಿದ ಭಾರತೀಯ ಬಹುಮುಖೀ ವೈವಿಧ್ಯವನ್ನು ನಿರ್ಮೂಲನೆ ಮಾಡುತ್ತಾ ಏಕ ಸಂಸ್ಕೃತಿ, ಏಕಜಾತಿ ತತ್ವವನ್ನು ಮುಂದಿನ ಸಾಲಿಗೆ ತೆಗೆದುಕೊಂಡು ಬರುವ ಹಾದಿಯಲ್ಲಿ ಆಡಳಿತ ಪಕ್ಷದ ಹುಚ್ಚಾಟ ಆರಂಭದಲ್ಲೇ ಈ ಮಟ್ಟದಲ್ಲಿ ಸಾಬೀತಾಗಿದೆ ಮತ್ತೆ!.

(ಲೇಖಕರು ಸಾಮಾಜಿಕ, ಮಾನವ ಹಕ್ಕು ಕಾರ್ಯಕರ್ತರು)

(ಕೃಪೆ -‘ಸಾಕ್ಷಿ’)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)