varthabharthi


ವಿಶೇಷ-ವರದಿಗಳು

ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಮಾಧ್ಯಮದ ಸಮಸ್ಯೆ

ವಾರ್ತಾ ಭಾರತಿ : 3 Jul, 2019
ಕೆ. ಸದಾಶಿವ

ಭಾಗ - 1

ಮಗುವಿನ ಕಲಿಕೆ ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಅದು ಅದಕ್ಕೆ ಹೆಚ್ಚು ಪರಿಚಯವಿರುವ ಮಾತೃಭಾಷೆಯಲ್ಲೇ ಆಗಬೇಕು. ಏನೇನೂ ಪರಿಚಯವಿಲ್ಲದ ಇಂಗ್ಲಿಷ್ ಭಾಷೆಯಲ್ಲಿ ಕಲಿಯ ಹೊರಟಾಗ ಮಗು ವಿಷಯದ ಗ್ರಹಿಕೆಯಲ್ಲಿ ಹಿಂದೆ ಬೀಳುತ್ತದೆ. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಪ್ರಯತ್ನಿಸುವುದರ ಜೊತೆಜೊತೆಗೇ, ವಿಷಯವನ್ನು ಕಲಿತುಕೊಳ್ಳಲು ಪ್ರಯತ್ನ ಮಾಡುವ ಇಮ್ಮಡಿ ಹೊರೆಯನ್ನು ಮಗು ಹೊರಬೇಕಾಗುತ್ತದೆ.

 ಕರ್ನಾಟಕ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಆರಂಭಿಸುವುದಕ್ಕೆ ಸರಕಾರ ಹೆಜ್ಜೆಯಿಟ್ಟಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಕಳೆದ ಕೆಲವು ವರ್ಷಗಳಿಂದ ಪರ-ವಿರೋಧ ಚರ್ಚೆಗಳೂ ನಡೆದಿವೆ. ಕೆಲವು ಕನ್ನಡ ಸಾಹಿತಿಗಳು ಮತ್ತು ಕೆಲವು ಕನ್ನಡಪರ ಹೋರಾಟಗಾರರು ಇದನ್ನು ವಿರೋಧಿಸುತ್ತಿದ್ದಾರೆ, ಸದ್ಯ ವಿಶ್ವದ ಅನೇಕ ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಹೆಚ್ಚಾಗಿ ಬಳಕೆಯಲ್ಲಿರುವುದರಿಂದ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಉತ್ತಮ ಉದ್ಯೋಗ ಪಡೆಯುವ ಅವಕಾಶಗಳು ಹೆಚ್ಚು ಎಂದು ನಂಬಿರುವವರ ಸಂಖ್ಯೆಯೂ ದೊಡ್ಡದಿದೆ. ಸದ್ಯ ಕರ್ನಾಟಕದ ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಮಾಧ್ಯಮ ಕನ್ನಡ ಇರಬೇಕು ಎಂಬ ವಾದದ ಬಗ್ಗೆ ವಿಚಾರ ಮಾಡೋಣ.

 ಒಂದು ಭಾಷೆ ಉಳಿಯುವುದು ಅದರ ಬಳಕೆಯಿಂದ ಮಾತ್ರ ಎಂಬುದು ನಿರ್ವಿವಾದ. ಹಾಗಾಗಿ ಕನ್ನಡ ಭಾಷೆಯ ಉಳಿವಿಗಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಳಕೆಗೆ ಅವಕಾಶ ಮಾಡಿಕೊಡುವುದು ಅಗತ್ಯ ಮತ್ತು ಅನಿವಾರ್ಯ. ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ಗೆ ಪ್ರಾಶಸ್ತ್ಯ ನೀಡಿದರೆ ಅಥವಾ ಅದನ್ನು ಕಲಿಕಾ ಮಾಧ್ಯಮ ಮಾಡಿದರೆ, ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತದೆಂಬ ಆತಂಕ ಕನ್ನಡಾಭಿಮಾನಿಗಳದ್ದು. ಈ ಅಭಿಪ್ರಾಯ ತಪ್ಪಲ್ಲವೆಂಬುದೂ ನಿಜ. ಪ್ರಾಥಮಿಕ ಹಂತದಿಂದಲೇ ಕಲಿಕಾ ಮಾಧ್ಯಮ ಇಂಗ್ಲಿಷ್ ಆದರೆ, ಮಕ್ಕಳಲ್ಲಿ ಇಂಗ್ಲಿಷ್‌ನ ಬಳಕೆ ಕನ್ನಡಕ್ಕಿಂತ ಹೆಚ್ಚಾಗುತ್ತದೆ. ಕನ್ನಡ ಪ್ರಥಮ ಭಾಷೆ ಆಗಿದ್ದರೂ ಕೂಡ, ಇಲ್ಲಿ ಕಲಿಕಾ  ಮಾಧ್ಯಮವೆಂಬ ಕಾರಣದಿಂದ ಇಂಗ್ಲಿಷ್‌ಗೆ ಪ್ರಾಶಸ್ತ್ಯ ಹೆಚ್ಚು. ಕನ್ನಡವನ್ನು ಮಕ್ಕಳು ಅವಶ್ಯವಿದ್ದಷ್ಟು ಮಾತ್ರ ಬಳಕೆ ಮಾಡುತ್ತಾರೆ. ಕನ್ನಡ ಭಾಷೆಯ ಭವಿಷ್ಯಕ್ಕೆ ಅದೊಂದು ಹೊಡೆತವೇ ಸರಿ.

  ಕನ್ನಡ ಭಾಷೆಯನ್ನು ಉಳಿಸಲೋಸುಗ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಬೇಕೇ, ಎಂಬ ಪ್ರಶ್ನೆಯನ್ನು ಅನೇಕರು ಎತ್ತುವುದು ಅಸಹಜವೇನೂ ಅಲ್ಲ. ಯಾಕೆಂದರೆ ನಾಡಿನ ಬಹುಮಂದಿಗೆ ಇಂಗ್ಲಿಷ್ ಮಾಧ್ಯಮದ ಕಲಿಕೆಯು ಉದ್ಯೋಗವನ್ನು ಒದಗಿಸಿಕೊಡುತ್ತದೆ, ಆ ಮೂಲಕ ಬದುಕಿಗೆ ಭದ್ರತೆಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಅವರಿಗೆ ಇಂಗ್ಲಿಷ್ ಅನ್ನದ ಭಾಷೆ ಆಗಿದೆ. ಅಂದರೆ ಮಗು ಪಡೆದ ಶಿಕ್ಷಣದಿಂದ ಮುಂದೆ ಅದಕ್ಕೆ ಉದ್ಯೋಗ ದೊರೆಯುವುದು ಸುಲಭವಾಗಬೇಕು. ಇಂದಿನ ದಿನಗಳಲ್ಲಿ ಯಾವುದೇ ಉದ್ಯೋಗ ಪಡೆಯಲು ಇಂಗ್ಲಿಷ್‌ನ ಜ್ಞಾನ ಅತ್ಯವಶ್ಯ. ಅದರಲ್ಲೂ ಉನ್ನತ ಮಟ್ಟದ ಉದ್ಯೋಗ ಪಡೆಯಬೇಕಾದರೆ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿರಬೇಕು. ಆ ಸಾಮರ್ಥ್ಯ ಬರಬೇಕಾದರೆ ಪ್ರಾಥಮಿಕ ಹಂತದಿಂದಲೇ ಕಲಿಕಾ ಮಾಧ್ಯಮ ಇಂಗ್ಲಿಷ್ ಇರಬೇಕೆಂಬುದು ಇವರ ನಂಬಿಕೆ.

    ಈ ನಂಬಿಕೆಯನ್ನು ಗಟ್ಟಿಗೊಳಿಸುವ ವಿದ್ಯಮಾನಗಳೇ ನಮ್ಮ ಸುತ್ತಮುತ್ತ ಇವೆ. ಎಲ್ಲೆಡೆ ನೋಡಿದರೂ ಆಂಗ್ಲಮಾಧ್ಯಮ ಶಾಲೆಗಳು ಮತ್ತು ಅಲ್ಲಿ ತುಂಬಿ ತುಳುಕುವ ವಿದ್ಯಾರ್ಥಿಗಳು. ಕಳೆದ ಕೆಲವು ದಶಕಗಳಿಂದ ಆಂಗ್ಲಮಾಧ್ಯಮದಲ್ಲಿ ಓದಿದವರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರೆಲ್ಲಾ ಉತ್ತಮ ಉದ್ಯೋಗಗಳನ್ನು ಪ್ರಾಪ್ತಿಸಿಕೊಂಡಿರುವುದು ಕೂಡ ಕಣ್ಣಿಗೆ ಕಾಣುತ್ತಿದೆ. ಸಾಮಾನ್ಯ ಕೂಲಿಕಾರರ ಮಕ್ಕಳು ಕೂಡ ಆಂಗ್ಲಮಾಧ್ಯಮ ಶಾಲೆಗಳಿಗೆ ಹೋಗುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಹೀಗಿರುವಾಗ ಆಂಗ್ಲಮಾಧ್ಯಮ ಶಾಲೆಗಳನ್ನು ವಿರೋಧಿಸುವುದು ಅನೇಕರಿಗೆ ಸರಿ ಬರಲಾರದು. ನಾಡಿನ ಬಹುಪಾಲು ಜನರ ಇಂಗಿತವನ್ನು ಮನಗಂಡೇ ಕರ್ನಾಟಕದ ಮುಖ್ಯಮಂತ್ರಿಗಳು ಸರಕಾರಿ ಶಾಲೆಗಳಲ್ಲೂ ಆಂಗ್ಲಮಾಧ್ಯಮಕ್ಕೆ ಒತ್ತು ಕೊಟ್ಟಿರುವಂತೆ ಕಾಣುತ್ತದೆ. ಇದನ್ನು ವಿರೋಧಿಸುವುದೆಂದರೆ, ಆ ಸರಕಾರಿ ಶಾಲೆಗಳಲ್ಲಿ ಕಲಿಯುವ ಬಡ ಮಕ್ಕಳಿಗೆ ಇಂಗ್ಲಿಷ್ ಕಲಿಯುವ ಅವಕಾಶವನ್ನು ನಿರಾಕರಿಸಿದಂತೆ ಕಾಣುತ್ತದೆ.

 ಕನ್ನಡದ ಮೇಲಿನ ಅಭಿಮಾನ ಮತ್ತು ಇಂಗ್ಲಿಷ್ ಅನ್ನದ ಭಾಷೆ ಎಂಬ ಅಂಶಗಳನ್ನು ಒತ್ತಟ್ಟಿಗಿಟ್ಟು, ಶಿಕ್ಷಣದ ಸಿದ್ಧಾಂತದ ಹಿನ್ನೆಲೆಯಲ್ಲಿ ಒಂದಿಷ್ಟು ವಿಚಾರ ಮಾಡೋಣ. ಪ್ರಾಥಮಿಕ ಶಾಲಾ ಹಂತದಲ್ಲಿ ಮಗುವಿನ ಕಲಿಕೆ ಅದು ಅದರ ಮಾತೃಭಾಷೆಯಲ್ಲೇ ಇರಬೇಕು ಎಂಬುದು ಜಗತ್ತಿನಾದ್ಯಂತ ಶಿಕ್ಷಣತಜ್ಞರು ಒಮ್ಮತದಿಂದ ಒಪ್ಪಿರುವ ಸತ್ಯ. ಮಗುವಿನ ಕಲಿಕೆ ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಅದು ಅದಕ್ಕೆ ಹೆಚ್ಚು ಪರಿಚಯವಿರುವ ಮಾತೃಭಾಷೆಯಲ್ಲೇ ಆಗಬೇಕು. ಏನೇನೂ ಪರಿಚಯವಿಲ್ಲದ ಇಂಗ್ಲಿಷ್ ಭಾಷೆಯಲ್ಲಿ ಕಲಿಯ ಹೊರಟಾಗ ಮಗು ವಿಷಯದ ಗ್ರಹಿಕೆಯಲ್ಲಿ ಹಿಂದೆ ಬೀಳುತ್ತದೆ. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಪ್ರಯತ್ನಿಸುವುದರ ಜೊತೆಜೊತೆಗೇ, ವಿಷಯವನ್ನು ಕಲಿತುಕೊಳ್ಳಲು ಪ್ರಯತ್ನ ಮಾಡುವ ಇಮ್ಮಡಿ ಹೊರೆಯನ್ನು ಮಗು ಹೊರಬೇಕಾಗುತ್ತದೆ. ಎಳೆ ಮಗುವಿನ ಮೇಲೆ ಇದು ಒತ್ತಡವನ್ನು ಹಾಕುವುದರಿಂದ ಇದು ಮಗುವಿನ ಕಲಿಕಾ ಪ್ರಕ್ರಿಯೆಗೆ ಬಾಧಕವಾಗುತ್ತದೆ.

   ಆದರೆ ಇಂದು ಆಂಗ್ಲಮಾಧ್ಯಮದಲ್ಲೇ ಶಿಕ್ಷಣ ಪಡೆದು, ಕಾಲೇಜು ಹಂತದಲ್ಲಿ ಓದುತ್ತಿರುವವರಿಗಾಗಲೀ, ಉದ್ಯೋಗ ಪಡೆದಿರುವವರಿಗಾಗಲೀ ಯಾವ ತೊಂದರೆಯೂ ಆಗಿಲ್ಲವಲ್ಲ ಎಂದು ವಾದಿಸುವವರಿರಬಹುದು. ಅದು ನಿಜವೇ. ಆದರೆ ಅವರು ತಮ್ಮ ಪ್ರಾಥಮಿಕ ಶಾಲಾ ಕಲಿಕಾ ಹಂತದಲ್ಲಿ ಸಾಕಷ್ಟು ಒತ್ತಡಗಳನ್ನು ಎದುರಿಸಿಯೇ ಮುಂದೆ ಬಂದಿದ್ದಾರೆ. ಅರ್ಥವನ್ನೇ ತಿಳಿಯದೆ ಕಂಠಪಾಠ ಮಾಡಬೇಕಾದ ಹೊರೆ, ಅನ್ಯ ಭಾಷೆಯ ಮೇಲೆ ಹಿಡಿತ ಕಡಿಮೆಯಿರುವ ಕಾರಣ ಕೇಳಬೇಕಾದುದನ್ನೂ ಹೇಳಬೇಕಾದುದನ್ನೂ ಅಭಿವ್ಯಕ್ತಿಸಲಾಗದೆ, ಮೌನಕ್ಕೆ ಶರಣಾಗಬೇಕಾದ ಅನಿವಾರ್ಯತೆ, ಸೃಜನಶೀಲತೆಗೆ ಉಂಟಾದ ಹಾನಿಗಳು ಸಾಮಾನ್ಯವಾಗಿ ಗೋಚರವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಆಂಗ್ಲಮಾಧ್ಯಮದಲ್ಲಿ ಕಲಿತ ಮಕ್ಕಳು ಇಂಗ್ಲಿಷ್‌ನಲ್ಲಿ ವ್ಯಾವಹಾರಿಕವಾಗಿ ಮಾತನಾಡಲು ಸಮರ್ಥರಾಗುತ್ತಾರೆಯೇ ಹೊರತು, ಸ್ವಂತ ವಿಚಾರಗಳನ್ನು ಖಚಿತ ಶೈಲಿಯಲ್ಲಿ ನಿರೂಪಿಸುವಲ್ಲಿ ಹಿಂದೆ ಬೀಳುತ್ತಾರೆ. ಹಾಗೆಂದು ಆಂಗ್ಲಮಾಧ್ಯಮದಲ್ಲಿ ಓದಿದವರೆಲ್ಲಾ ಸೃಜನಶೀಲರಾಗುವುದಿಲ್ಲ ಎಂಬುದು ಅಭಿಪ್ರಾಯವಲ್ಲ. ಇಂಗ್ಲಿಷ್‌ನಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಪಡೆದು, ಸೃಜನಶೀಲತೆಯನ್ನು ಮೈಗೂಡಿಸಿಕೊಂಡವರೂ ಇದ್ದಾರೆ. ಅಂತಹವರ ಸಂಖ್ಯೆ ತುಂಬಾ ಕಡಿಮೆ.

 ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆಯೇ ಕಲಿಕಾ ಮಾಧ್ಯಮವಾಗಬೇಕೆಂದು ಹೇಳುವಾಗ ಭಾರತದ ಸಂದರ್ಭದಲ್ಲಿ ಒಂದು ಸಮಸ್ಯೆ ಎದುರಾಗುತ್ತದೆ. ನಮ್ಮ ದೇಶದ ಉದ್ದಗಲಕ್ಕೂ ನಾನಾ ಮಾತೃಭಾಷೆಗಳಿವೆ. ಕರ್ನಾಟಕದಲ್ಲೇ ಕನ್ನಡವಲ್ಲದೆ ತುಳು, ಕೊಂಕಣಿ, ಬ್ಯಾರಿ ಮಾತೃಭಾಷೆಯವರಿದ್ದಾರೆ. ಈ ಭಾಷೆಗಳನ್ನೂ ಕಲಿಕಾ ಮಾಧ್ಯಮ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಬರುತ್ತದೆ. ಮಾತೃಭಾಷೆಯೇ ಕಲಿಕಾ ಮಾಧ್ಯಮವಾಗಬೇಕೆಂದು ಹೇಳುವ ವಿದೇಶಗಳ ಪರಿಸ್ಥಿತಿ ಬೇರೆ ಇರುತ್ತದೆ. ಭಾರತದಲ್ಲಿರುವಂತೆ ಅಲ್ಲಿ ಅನೇಕ ಭಾಷೆಗಳಿರುವ ಸಂದರ್ಭಗಳಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಮಾತೃಭಾಷೆ ಎಂದು ಪರಿಗಣಿಸುವಾಗ, ಮಗುವಿಗೆ ಹೆಚ್ಚು ಪರಿಚಿತವಿರುವ ಭಾಷೆ ಅಥವಾ ಅದರ ಪರಿಸರದ ಭಾಷೆ ಎಂದು ಪರಿಗಣಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಅದು ಕನ್ನಡವೇ ಆಗುತ್ತದೆ. ಮಗು ಮನೆಯೊಳಗೆ ಆಡುವ ಭಾಷೆ ಬೇರೆ ಇದ್ದರೂ, ಮನೆಯ ಹೊರಗೆ ಕನ್ನಡಕ್ಕೇ ಹೆಚ್ಚು ತೆರೆದುಕೊಳ್ಳುತ್ತದೆ. ಕರ್ನಾಟಕದಲ್ಲಿ ಆಡಳಿತದ ಭಾಷೆ ಕನ್ನಡ. ಸುತ್ತಮುತ್ತ ನೋಡಿದಲ್ಲೆಲ್ಲ ಕನ್ನಡದ ಫಲಕಗಳು, ಕನ್ನಡ ಪತ್ರಿಕೆ, ಪುಸ್ತಕಗಳು, ಕನ್ನಡ ಭಾಷಾ ಬಳಕೆಯ ಸಂದರ್ಭಗಳು ಇತರ ಭಾಷೆಗಳಿಗಿಂತ ಹೆಚ್ಚು ಇರುತ್ತವೆ. ಮಗುವಿನ ಹೆತ್ತವರಿಗೂ ಕನ್ನಡ ಪರಿಚಿತವೇ ಇರುವುದರಿಂದ ಕರ್ನಾಟಕದ ಸಂದರ್ಭದಲ್ಲಿ ಪರಿಸರದ ಭಾಷೆಯಾದ ಕನ್ನಡವೇ ಕಲಿಕಾ ಮಾಧ್ಯಮವಾಗುವುದು ಸೂಕ್ತ.

     ಚಿಕ್ಕ ಮಕ್ಕಳು ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಹಾಗಾಗಿ ಅವರಿಗೆ ಇಂಗ್ಲಿಷ್ ಕಲಿಕೆ ಕಷ್ಟವಾಗುವುದಿಲ್ಲ ಎಂಬ ವಾದವೂ ಇದೆ. ಅದು ನಿಜವೇ. ಎಳೆ ಮಕ್ಕಳು ದೊಡ್ಡವರಿಗಿಂತ ವೇಗವಾಗಿ ಹಲವು ಭಾಷೆಗಳನ್ನು ಕಲಿತುಕೊಳ್ಳಬಲ್ಲರು. ಆದರೆ ಆ ಸಾಮರ್ಥ್ಯ ಕೇವಲ ಸಂವಹನ ಮಾಡುವುದಕ್ಕೆ ಬೇಕಾಗುವಷ್ಟು ಇರುತ್ತದೆಯೇ ಹೊರತು, ಸ್ವತಂತ್ರವಾಗಿ ಯೋಚಿಸಲು ಬೇಕಾದಷ್ಟು ಸಾಮರ್ಥ್ಯ ಆ ಭಾಷೆಯಲ್ಲಿ ಬಂದಿರುವುದಿಲ್ಲ. ಪ್ರಾಥಮಿಕ ಹಂತದಲ್ಲಿ ಮಕ್ಕಳು ಜ್ಞಾನಾರ್ಜನೆ ಮಾಡುವಾಗ, ಯೋಚಿಸುವ ಸಾಮರ್ಥ್ಯವನ್ನು ಬೆಳೆಸಬೇಕಾಗುತ್ತದೆ. ಮಗುವಿಗೆ ಹೆಚ್ಚು ಪರಿಚಿತವಿರುವ ಪರಿಸರದ ಅಂದರೆ ಮಾತೃಭಾಷೆಯಲ್ಲಿ ಮಾತ್ರ ಅದು ಸಾಧ್ಯ. ತನಗೆ ಪರಿಚಯವೇ ಇಲ್ಲದ ಇಂಗ್ಲಿಷ್ ಭಾಷೆಯಲ್ಲಿ ಮಗು ಯೋಚಿಸುವುದಾದರೂ ಹೇಗೆ? ಮನೆ, ನೆರೆಹೊರೆ, ಸ್ನೇಹಿತವಲಯ ಎಲ್ಲವೂ ಇಂಗ್ಲಿಷ್ ಭಾಷೆಯದ್ದಾಗಿದ್ದಾಗ ಮಾತ್ರ ಆ ಭಾಷೆ ಮಗುವಿಗೆ ಹೆಚ್ಚು ಸುಪರಿಚಿತ. ಆದರೆ ಅಂತಹ ವಾತಾವರಣವುಳ್ಳ ಸಂದರ್ಭಗಳು ಕರ್ನಾಟಕದಲ್ಲಿ ವಿರಳಾತಿವಿರಳ.

 ಹಾಗಿದ್ದರೆ ಮಗು ಇಂಗ್ಲಿಷ್ ಕಲಿಯುವುದು ಯಾವಾಗ? ಸರಿಯಾಗಿ ಹೇಳುವುದಾದರೆ ಮಗು 5ನೇ ತರಗತಿಗೆ ಸೇರಿದ ಬಳಿಕವೇ ಇಂಗ್ಲಿಷ್ ಕಲಿಯಬೇಕು. ಕರ್ನಾಟಕದಲ್ಲಿ ಇದೀಗ 1ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ನಾಡಿನ ಹಲವು ಶಾಲೆಗಳಲ್ಲಿ ಈ ಪ್ರಯೋಗವನ್ನು ಅನಧಿಕೃತವಾಗಿ ಈ ಹಿಂದೆಯೇ ಆರಂಭಿಸಲಾಗಿದೆ. ಆದರೆ ಇದು ಮಕ್ಕಳ ಕಲಿಕೆಯ ಮೇಲೆ ಒತ್ತಡ ಹೇರಿದುದನ್ನು ಬಿಟ್ಟರೆ, ಇದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)