varthabharthi


ವಿಶೇಷ-ವರದಿಗಳು

"ಭವಿಷ್ಯದಲ್ಲಿ ಚುನಾವಣೆಗಳು ಕಾಟಾಚಾರವಾಗಲಿವೆ! "

ಅಧಿಕಾರದ ಹಂಬಲ ತ್ಯಾಗ ಮಾಡದೆ ವಿರೋಧಿಗಳನ್ನು ಸೋಲಿಸಲಾಗದು: ರಾಹುಲ್ ರಾಜೀನಾಮೆ ಪತ್ರದ ಪೂರ್ಣಪಾಠ

ವಾರ್ತಾ ಭಾರತಿ : 4 Jul, 2019

ಕಾಂಗ್ರೆಸ್ ಪಕ್ಷದ ಆಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಬುಧವಾರ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ತನ್ನ ರಾಜೀನಾಮೆಗೆ ಕಾರಣವಾದ ಅಂಶಗಳನ್ನು, ತನ್ನ ಆಶಯಗಳನ್ನು ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಗಂಡಾಂತರಗಳ ಬಗ್ಗೆ ನಾಲ್ಕು ಪುಟಗಳ ಪತ್ರವೊಂದನ್ನು ಕೂಡಾ ಪ್ರಕಟಿಸಿದ್ದಾರೆ. ಅದರ ಪೂರ್ಣಪಾಠವನ್ನು ಇಲ್ಲಿ ನೀಡಲಾಗಿದೆ.

ಕಾಂಗ್ರೆಸ್ ಪಕ್ಷದ ಸೇವೆ ಸಲ್ಲಿಸುವುದು ನನಗೆ ದೊರೆತ ಗೌರವವಾಗಿದೆ. ಅದರ ವೌಲ್ಯಗಳು ಹಾಗೂ ಆದರ್ಶಗಳು ನಮ್ಮ ಸುಂದರವಾದ ದೇಶದ ಜೀವನಾಡಿಯಾಗಿ ಸೇವೆ ಸಲ್ಲಿಸಿವೆ. ನಾನು ಈ ದೇಶಕ್ಕೆ ಹಾಗೂ ನನ್ನ ಸಂಸ್ಥೆಗೆ ಅಪಾರವಾದ ಕೃತಜ್ಞತೆ ಹಾಗೂ ಪ್ರೀತಿಯ ಋಣಭಾರವನ್ನು ಹೊಂದಿದ್ದೇನೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಆದ ನಷ್ಟಕ್ಕೆ ನಾನು ಹೊಣೆಗಾರನಾಗಿದ್ದೇನೆ. ನಮ್ಮ ಪಕ್ಷದ ಭವಿಷ್ಯತ್ತಿನ ಬೆಳವಣಿಗೆಗೆ ಉತ್ತರದಾಯಿತ್ವವು ನಿರ್ಣಾಯಕವಾದುದಾಗಿದೆ. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.

ಪಕ್ಷದ ಪುನರ್‌ನಿರ್ಮಾಣಕ್ಕೆ ಕಠಿಣ ನಿರ್ಧಾರಗಳ ಅಗತ್ಯವಿದೆ ಹಾಗೂ 2019ರ ವೈಫಲ್ಯಕ್ಕೆ ಹಲವಾರು ಜನರನ್ನು ಹೊಣೆಗಾರರನ್ನಾಗಿ ಮಾಡಬೇಕಾಗಿದೆ. ಆದರೆ ಪಕ್ಷದ ಅಧ್ಯಕ್ಷನಾಗಿ ನನ್ನ ಹೊಣೆಗಾರಿಕೆಯನ್ನು ನಿರ್ಲಕ್ಷಿಸಿ, ಇತರರನ್ನು ಹೊಣೆಗಾರರನ್ನಾಗಿ ಮಾಡುವುದು ಅನ್ಯಾಯವೆನಿಸುವುದು.

ಮುಂದಿನ ಕಾಂಗ್ರೆಸ್ ಅಧ್ಯಕ್ಷರನ್ನು ನಾನಾಗಿಯೇ ನಾಮಕರಣ ಮಾಡಬೇಕೆಂದು ನನ್ನ ಹಲವಾರು ಸಹದ್ಯೋಗಿಗಳು ಸೂಚಿಸಿದ್ದರು. ನಮ್ಮ ಪಕ್ಷವನ್ನು ಹೊಸಬರಾದವರು ಮುನ್ನಡೆಸುವುದು ಮುಖ್ಯವಾಗಿದೆ. ಹೀಗಾಗಿ ಆ ವ್ಯಕ್ತಿಯನ್ನು ನಾನು ಆಯ್ಕೆ ಮಾಡುವುದು ಸರಿಯಾಗಲಾರದು. ನಮ್ಮಲ್ಲಿ ಆಗಾಧವಾದ ಇತಿಹಾಸ ಹಾಗೂ ಪರಂಪರೆ, ಹೋರಾಟ ಹಾಗೂ ಘನತೆಯನ್ನು ಹೊಂದಿದ ಪಕ್ಷವಾಗಿದ್ದು ನಾನದನ್ನು ಅಪಾರವಾಗಿ ಗೌರವಿಸುತ್ತೇನೆ. ಭಾರತದ ಸಂರಚನೆಯಲ್ಲಿ ಅದು ಹಾಸುಹೊಕ್ಕಾಗಿದೆ ಹಾಗೂ ನಮ್ಮನ್ನು ಧೈರ್ಯ, ಪ್ರೀತಿ ಹಾಗೂ ನಿಷ್ಠೆಯೊಂದಿಗೆ ಯಾರು ಮುನ್ನಡೆಸುವರೆಂಬ ಕುರಿತು ಪಕ್ಷವು ಉತ್ತಮವಾದ ನಿರ್ಧಾರವನ್ನು ಕೈಗೊಳ್ಳುವುದಾಗಿ ನಾನು ನಂಬುತ್ತೇನೆ.

ರಾಜೀನಾಮೆ ನೀಡಿದ ತಕ್ಷಣವೇ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ಸಹದ್ಯೋಗಿಗಳಿಗೆ, ನೂತನ ಅಧ್ಯಕ್ಷನ ಹುಡುಕಾಟವನ್ನು ಆರಂಭಿಸುವ ಕಾರ್ಯವನ್ನು ಗುಂಪೊಂದಕ್ಕೆ ವಹಿಸುವಂತೆ ಸಲಹೆ ಮಾಡಿದ್ದೇನೆ. ಹಾಗೆ ಮಾಡಲು ನಾನು ಅವರಿಗೆ ಅಧಿಕಾರ ನೀಡಿದ್ದೆ ಹಾಗೂ ಈ ಪ್ರಕ್ರಿಯೆಗೆ ಹಾಗೂ ಅಧಿಕಾರದ ಸುಗಮ ವರ್ಗಾವಣೆಗೆ ಸಂಪೂರ್ಣ ಬೆಂಬಲವನ್ನು ನೀಡಲು ನಾನು ಬದ್ಧನಾಗಿದ್ದೇನೆ.

ನನ್ನ ಹೋರಾಟವು ಯಾವತ್ತೂ ರಾಜಕೀಯ ಅಧಿಕಾರಕ್ಕಾಗಿ ನಡೆದ ಸರಳ ಯುದ್ಧವಾಗಿರಲಿಲ್ಲ. ನನಗೆ ಬಿಜೆಪಿ ಬಗ್ಗೆ ಯಾವುದೇ ದ್ವೇಷ ಅಥವಾ ಕ್ರೋಧವಿಲ್ಲ. ಆದರೆ ನನ್ನ ದೇಹದ ಪ್ರತಿಯೊಂದು ಕಣವೂ ಭಾರತದ ಕುರಿತಾದ ಅವರ ಚಿಂತನೆಯನ್ನು ಸಹಜವಾಗಿ ಪ್ರತಿರೋಧಿಸುತ್ತದೆ. ಯಾಕೆಂದರೆ ಅವರ ಚಿಂತನೆಗಳೊಂದಿಗೆ ನೇರ ಸಂಘರ್ಷವನ್ನು ಹೊಂದುವ ಭಾರತೀಯ ಚಿಂತನೆಯು ನನ್ನನ್ನು ವ್ಯಾಪಿಸಿಕೊಂಡಿದೆ. ಇದೇನು ಹೊಸ ಯುದ್ಧವಲ್ಲ. ಸಹಸ್ರಾರು ವರ್ಷಗಳಿಂದ ಅದು ನಮ್ಮ ಮಣ್ಣಿನಲ್ಲಿ ಅಂತರ್ಗತವಾಗಿದೆ. ಅವರು ವಿಭಿನ್ನತೆಗಳನ್ನು ನೋಡುವಲ್ಲಿ ನಾನು ಸಾಮ್ಯತೆಯನ್ನು ಕಾಣುತ್ತೇನೆ. ಅವರು ದ್ವೇಷವನ್ನು ಕಾಣುವಲ್ಲಿ ನಾನು ಪ್ರೀತಿಯನ್ನು ಕಾಣುತ್ತೇನೆ. ಅವರು ಯಾವುದಕ್ಕೆ ಹೆದರುತ್ತಾರೋ ನಾನದನ್ನು ಆಲಂಗಿಸಿಕೊಳ್ಳುತ್ತೇನೆ.

ಸಹಾನುಭೂತಿಯ ಚಿಂತನೆಯು ನನ್ನ ಒಲವಿನ ಕೋಟಿ ಕೋಟಿ ಪೌರರ ಹೃದಯವನ್ನು ವ್ಯಾಪಿಸಿಕೊಂಡಿದೆ. ಭಾರತದ ಈ ಚಿಂತನೆಯನ್ನೇ ನಾವು ಈಗ ಬಲವಾಗಿ ರಕ್ಷಿಸಬೇಕಾಗಿದೆ.

ನಮ್ಮ ದೇಶ ಹಾಗೂ ನಾವು ಪಾಲಿಸಬೇಕಾದ ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಯು, ನಮ್ಮ ದೇಶದ ಸಂರಚನೆಯನ್ನು ನಾಶಪಡಿಸುವ ಉದ್ದೇಶವನ್ನು ಹೊಂದಿದೆ. ದಾರಿಯಿಲ್ಲದೆ ನಾನು ಈ ಹೋರಾಟದಿಂದ ಹಿಂದೆ ಸರಿಯುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕನಾಗಿದ್ದೇನೆ ಹಾಗೂ ಅದರ ಸೇವೆ ಹಾಗೂ ರಕ್ಷಣೆಯನ್ನು ನಾನು ನನ್ನ ಕೊನೆಯ ಉಸಿರಿನ ತನಕವೂ ಮುಂದುವರಿಸುವೆ.

ನಾವು ಬಲವಾದ ಹಾಗೂ ಗೌರವಾನ್ವಿತವಾದ ಚುನಾವಣಾ ಹೋರಾಟವನ್ನು ನಡೆಸಿದೆವು. ನಮ್ಮ ಅಭಿಯಾನವು ಭ್ರಾತೃತ್ವ, ಸಹಿಷ್ಣುತೆ ಹಾಗೂ ಭಾರತದ ಎಲ್ಲಾ ಜನತೆ, ಧರ್ಮಗಳು ಹಾಗೂ ಸಮುದಾಯಗಳ ಗೌರವಕ್ಕಾಗಿ ಆಗಿತ್ತು. ನಾನು ವೈಯಕ್ತಿಕವಾಗಿ ಪ್ರಧಾನಿ, ಆರೆಸ್ಸೆಸ್ ಹಾಗೂ ಅವರು ವಶಪಡಿಸಿಕೊಂಡಿದ್ದ ಸಂಸ್ಥೆಗಳೊಂದಿಗೆ ಎಲ್ಲಾ ಶಕ್ತಿಯನ್ನು ಬಳಸಿಕೊಂಡು ಹೋರಾಡಿದ್ದೆ. ನಾನು ಯಾಕೆ ಹೋರಾಡಿದೆನೆಂದರೆ, ನಾನು ಭಾರತವನ್ನು ಪ್ರೀತಿಸುತ್ತಿದ್ದೇನೆ. ಮತ್ತು ನಾನು ಭಾರತದ ಆದರ್ಶಗಳ ರಕ್ಷಣೆಗಾಗಿ ಹೋರಾಡಿದ್ದೇನೆ. ಕೆಲವು ಸಮಯಗಳಲ್ಲಿ ನಾನು ಸಂಪೂರ್ಣವಾಗಿ ಒಬ್ಬಂಟಿಯಾಗಿದ್ದೇನೆ ಹಾಗೂ ಆ ಬಗ್ಗೆ ನನಗೆ ತೀವ್ರವಾದ ಅಭಿಮಾನವಿದೆ. ನನಗೆ ಪ್ರೀತಿ ಹಾಗೂ ಸಭ್ಯತೆಯನ್ನು ಕಲಿಸಿಕೊಟ್ಟಿರುವ ಪುರುಷರು , ಮಹಿಳೆಯರು, ಕಾರ್ಯಕರ್ತರು ಹಾಗೂ ಪಕ್ಷದ ಸದಸ್ಯರ ಚೈತನ್ಯ ಹಾಗೂ ಸಮರ್ಪಣಾಭಾವದಿಂದ ಬಹಳಷ್ಟು ಕಲಿತಿರುವೆ.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯಲು ದೇಶದ ಸಂಸ್ಥೆಗಳು ನಿಷ್ಪಕ್ಷಪಾತ ಧೋರಣೆಯನ್ನು ಹೊಂದಿರಬೇಕಾದ ಅಗತ್ಯವಿದೆ. ಮುಕ್ತವಾದ ಮಾಧ್ಯಮ, ಸ್ವತಂತ್ರ ನ್ಯಾಯಾಂಗ, ಪಾರದರ್ಶಕವಾದ ಚುನಾವಣಾ ಆಯೋಗ ಈ ಮಧ್ಯಸ್ಥಗಾರರಿಲ್ಲದೆ ಚುನಾವಣೆಯು ನ್ಯಾಯಸಮ್ಮತವಾಗಲಾರದು. ವಿತ್ತ ಸಂಪನ್ಮೂಲಗಳ ಮೇಲೆ ಒಂದು ಪಕ್ಷಕ್ಕೆ ಸಂಪೂರ್ಣವಾದ ಏಕಸ್ವಾಮ್ಯವಿದ್ದಲ್ಲಿ ಚುನಾವಣೆಯು ಮುಕ್ತವಾಗಿ ನಡೆಲಾರದು.

2019ರ ಚುನಾವಣೆಯಲ್ಲಿ ನಾವು ರಾಜಕೀಯ ಪಕ್ಷವಾಗಿ ಹೋರಾಡಲಿಲ್ಲ. ಬದಲಿಗೆ ನಾವು ಭಾರತ ಸರಕಾರದ ಇಡೀ ಆಡಳಿತಯಂತ್ರ, ಪ್ರತಿಪಕ್ಷಗಳ ವಿರುದ್ಧ ಎತ್ತಿಕಟ್ಟಲಾಗಿದ್ದ ಪ್ರತಿಯೊಂದು ಸಂಸ್ಥೆಯ ವಿರುದ್ಧವೂ ಹೋರಾಡಿದೆವು. ಒಂದೊಮ್ಮೆ ನಾವು ಪಾಲಿಸಿಕೊಂಡು ಬಂದಿದ್ದ ಸಾಂಸ್ಥಿಕ ನಿಷ್ಪಕ್ಷಪಾತ ಧೋರಣೆ ಈಗ ಭಾರತದಲ್ಲಿ ಅಸ್ತಿತ್ವದಲ್ಲಿಲ್ಲವೆಂಬುದು ಈಗ ಸ್ಫಟಿಕದಂತೆ ಸ್ಪಷ್ಟವಾಗಿದೆ.

ನಮ್ಮ ದೇಶದ ಸಾಂಸ್ಥಿಕ ಸಂರಚನೆಯನ್ನು ವಶಪಡಿಸಿಕೊಳ್ಳುವ ಆರೆಸ್ಸೆಸ್ ಉದ್ದೇಶಿತ ಗುರಿಯು ಈಗ ಪೂರ್ಣಗೊಂಡಿದೆ. ನಮ್ಮ ಪ್ರಜಾಪ್ರಭುತ್ವವು ಮೂಲಭೂತವಾಗಿ ದುರ್ಬಲಗೊಂಡಿದೆ. ದೇಶದ ಭವಿಷ್ಯತ್ತಿಗೆ ನಿರ್ಣಾಯಕವಾದ ಚುನಾವಣೆಗಳು ಇನ್ನು ಮುಂದೆ ಕೇವಲ ಕಾಟಾಚಾರವಾಗಲಿವೆ.

ಈ ಅಧಿಕಾರದ ಗ್ರಹಣವು ದೇಶದ ಪಾಲಿಗೆ ಕಲ್ಪಿಸಲೂ ಸಾಧ್ಯವಾಗದಂತಹ ಹಿಂಸಾಚಾರ ಹಾಗೂ ವೇದನೆಗೆ ಕಾರಣವಾಗಲಿದೆ. ರೈತರು, ನಿರುದ್ಯೋಗಿ ಯುವಜನರು, ಮಹಿಳೆಯರು, ಬುಡಕಟ್ಟು ಜನರು, ದಲಿತರು ಹಾಗೂ ಅಲ್ಪಸಂಖ್ಯಾತರು ಅತ್ಯಂತ ಯಾತನೆಗೀಡಾಗಿದ್ದಾರೆ. ನಮ್ಮ ಆರ್ಥಿಕತೆ ಹಾಗೂ ದೇಶದ ವರ್ಚಸ್ಸಿನ ಮೇಲೆ ಇದರಿಂದಾಗಿರುವ ಪರಿಣಾಮವು ವಿನಾಶಕಾರಿಯಾಗಿದೆ. ಪ್ರಧಾನಿಯ ಗೆಲುವಿನಿಂದ, ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ನಿರಾಕರಿಸಲ್ಪಡಲಾರದು. ಯಾವುದೇ ಪ್ರಮಾಣದ ಹಣ ಅಥವಾ ಪ್ರಚಾರದಿಂದ ಸತ್ಯದ ಬೆಳಕನ್ನು ಮುಚ್ಚಿಹಾಕಲು ಸಾಧ್ಯವಿಲ್ಲ.

ನಮ್ಮ ಸಂಸ್ಥೆಗಳನ್ನು ಪುನಃಪಡೆದುಕೊಳ್ಳಲು ಅಥವಾ ಪುನರುಜ್ಜೀವನಗೊಳಿಸಲು ಭಾರತ ದೇಶವು ಒಗ್ಗೂಡಬೇಕಾಗಿದೆ. ಕಾಂಗ್ರೆಸ್ ಪಕ್ಷವು ಈ ಪುನರುಜ್ಜೀವನದ ಸಾಧನವಾಗಲಿದೆ.

ಈ ಮಹತ್ವದ ಕಾರ್ಯವನ್ನು ಸಾಧಿಸಲು ಕಾಂಗ್ರೆಸ್ ಪಕ್ಷವು ಕ್ರಾಂತಿಕಾರಕವಾಗಿ ತಾನಾಗಿಯೇ ಬದಲಾಗಬೇಕಾಗಿದೆ. ಇಂದು ಬಿಜೆಪಿಯು ವ್ಯವಸ್ಥಿತವಾಗಿ ಭಾರತದ ಜನತೆಯ ಧ್ವನಿಯನ್ನು ಹೊಸಕಿಹಾಕುತ್ತಿದೆ. ಅವರ ಧ್ವನಿಗಳನ್ನು ರಕ್ಷಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ. ಭಾರತವು ಎಂದಿಗೂ ಒಂದೇ ಧ್ವನಿಯಾಗಲಾರದು. ಯಾವತ್ತೂ ಅದೊಂದು ಧ್ವನಿಗಳ ಸ್ವರಮೇಳವಾಗಿದೆ. ಅದುವೇ ಭಾರತ ಮಾತೆಯ ನೈಜವಾದ ಅಂತಃಸತ್ವವಾಗಿದೆ.

  ನನಗೆ ಬೆಂಬಲದ ಸಂದೇಶ ಹಾಗೂ ಪತ್ರಗಳನ್ನು ಬರೆದಿರುವ ದೇಶ ಹಾಗೂ ವಿದೇಶಗಳಲ್ಲಿರುವ ಸಾವಿರಾರು ಭಾರತೀಯರೇ ನಿಮಗೆ ಕೃತಜ್ಞತೆಗಳು. ಖಂಡಿತವಾಗಿಯೂ ನಾನು ನನ್ನ ಎಲ್ಲಾ ಶಕ್ತಿಯನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಆದರ್ಶಗಳಿಗಾಗಿ ಹೋರಾಟವನ್ನು ಮುಂದುವರಿಸುವೆ. ನನ್ನ ಸೇವೆ,ಸಲಹೆ, ಮಾಹಿತಿಗಳು ಅಗತ್ಯವಿದ್ದಾಗಲೆಲ್ಲಾ ನಾನು ಪಕ್ಷಕ್ಕೆ ಲಭ್ಯನಿರುತ್ತೇನೆ. ಕಾಂಗ್ರೆಸ್‌ನ ಆದರ್ಶವನ್ನು ಬೆಂಬಲಿಸುವವರು ಅದರಲ್ಲೂ ವಿಶೇಷವಾಗಿ ನಮ್ಮ ಸಮರ್ಪಣಾ ಮನೋಭಾವದ ಹಾಗೂ ಒಲವಿನ ಕಾರ್ಯಕರ್ತರಿಗೆ ಹೇಳುವುದೇನೆಂದರೆ ನಮ್ಮ ಭವಿಷ್ಯದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಹಾಗೂ ನಿಮ್ಮ ಬಗ್ಗೆ ನನಗೆ ಅಪಾರವಾದ ಪ್ರೀತಿಯಿದೆ. ಭಾರತದಲ್ಲಿ ಅಧಿಕಾರಕ್ಕಾಗಿ ಜೋತುಬೀಳುವುದು ಚಟವಾಗಿ ಬಿಟ್ಟಿದೆ. ಯಾರೂ ಕೂಡಾ ಇಲ್ಲಿ ಅಧಿಕಾರವನ್ನು ತ್ಯಜಿಸುವುದಿಲ್ಲ. ಆದರೆ ಅಧಿಕಾರಕ್ಕಾಗಿನ ನಮ್ಮ ಹಂಬಲವನ್ನು ತ್ಯಾಗ ಮಾಡದೆ ನಾವು ನಮ್ಮ ವಿರೋಧಿಗಳನ್ನು ಸೋಲಿಸಲಾರೆವು. ನಾನೊಬ್ಬ ಹುಟ್ಟಾ ಕಾಂಗ್ರೆಸಿಗ. ಈ ಪಕ್ಷವು ಯಾವತ್ತೂ ನನ್ನೊಂದಿಗಿದೆ ಹಾಗೂ ಅದು ನನ್ನ ಜೀವದ ರಕ್ತವಾಗಿದೆ ಮತ್ತು ಸದಾಕಾಲವೂ ಹಾಗೆಯೇ ಅದು ಉಳಿದುಕೊಳ್ಳಲಿದೆ.

ಜೈ ಹಿಂದ್

ರಾಹುಲ್ ಗಾಂಧಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)