varthabharthi


ವಿಶೇಷ-ವರದಿಗಳು

'ಇವಿಎಂ' ಹಣೆಬರಹವನ್ನು ನಿರ್ಧರಿಸಬೇಕೇ?

ವಾರ್ತಾ ಭಾರತಿ : 5 Jul, 2019
ಹೈದರ್ ಅಬ್ಬಾಸ್

ಭಾರತದ ಚುನಾವಣಾ ಆಯೋಗ ಮಾತ್ರ ಇಲೆಕ್ಟ್ರಾನಿಕ್ ಮತಯಂತ್ರಗಳು 99.9 ಶುದ್ಧ ಚಿನ್ನವಲ್ಲ. ಬದಲಾಗಿ ಶೇ. 100 ಚಿನ್ನ. 24 ಕ್ಯಾರೆಟ್ ಬಂಗಾರ ಎಂದು ಹೇಳುತ್ತಿದೆ. ಆಧುನಿಕ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಮೋಸದಿಂದಾಗಿ ತಂತ್ರಜ್ಞಾನ ಮತಯಂತ್ರಗಳಲ್ಲಿ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆಯುವ ಪರೀಕ್ಷೆಗಳಾಗಿರುವುದರಿಂದ ಅವುಗಳ ಫಲಿತಾಂಶ ನೋಟಾ (ಎನ್‌ಒಟಿಎ) ಸೇರಿದಂತೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆಂಬುದು ಎಲ್ಲರೂ ಗಮನಿಸಬೇಕಾದ ವಾಸ್ತವ.

ಬಿಜೆಪಿ ವಿರುದ್ಧ ಹೋರಾಡಿದ ಸಂಪೂರ್ಣ ವಿಪಕ್ಷ ಸೋತು ಕುಳಿತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಭಾರತದ 17ನೇ ಲೋಕಸಭಾ ಚುನಾವಣೆಯಲ್ಲಿ 350ರ ಗಡಿಯೊಂದಿಗೆ ಯಶಸ್ಸು ಸಾಧಿಸಿದೆ. ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ನಿರೀಕ್ಷಿತ ಫಲಿತಾಂಶ ಪಡೆಯಲು ವಿಫಲವಾಯಿತು. ಅಲ್ಲಿ ಬಿಜೆಪಿ 62 ಸೀಟುಗಳನ್ನು ಗೆದ್ದು, ಮೈತ್ರಿಗೆ ಒಟ್ಟು 80ರಲ್ಲಿ 15 ಸೀಟುಗಳು ಮಾತ್ರ ಲಭಿಸಿದವು. ಶೋಚನೀಯ ಸೋಲಿನ ಬಳಿಕ ಬಿಎಸ್ಪಿ ಅಧಿನಾಯಕಿ ಮಾಯಾವತಿ ಇವಿಎಂ ಬಗ್ಗೆ ಹುಬ್ಬೇರಿಸಿದರು. ಈಗ ದಯಮಾಡಿ 2017ರ ಯುಪಿ ಅಸೆಂಬ್ಲಿ ಚುನಾವಣೆಗಳತ್ತ ತಿರುಗಿ ನೋಡೋಣ. ಆಗ ಎಸ್ಪಿಯ ಸಿಎಂ ಅಖಿಲೇಶ್ ತುಟಿಪಿಟಿಕ್ ಎಂದಿರಲಿಲ್ಲ; ಆದರೆ ಮಾಯಾವತಿ ಈಗ ಮಾಡಿರುವ ಹಾಗೆಯೇ ಇವಿಎಂ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಯಾಕೆ? ಯುಪಿಯಲ್ಲಿ ಎಸ್ಸಿ ಮತ್ತು ಮುಸ್ಲಿಮರ ಮತಗಳು ಒಟ್ಟು 403 ಕ್ಷೇತ್ರಗಳ ಪೈಕಿ 86 ಮಿಸಲು ಕ್ಷೇತ್ರಗಳಲ್ಲಿ, ಶೇ. 50ಕ್ಕಿಂತಲೂ ಹೆಚ್ಚು ಇವೆ. ಇವುಗಳಲ್ಲಿ 77 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಗೆದ್ದಿದ್ದವು. ಇದು ಬಿಎಸ್ಪಿಯನ್ನು ಅಧೀರ ಗೊಳಿಸಿತ್ತು. ಹಾಗಾದರೆ ಬಿಎಸ್ಪಿಯ ಪಾರಂಪರಿಕ ಮತ ನೆಲೆಯಾಗಿದ್ದ ಜಾಟವರು ಮತ್ತು ಮುಸ್ಲಿಮರು ಬಿಜೆಪಿಗೆ ಮತ ನೀಡಿದ್ದರೇ? ಈ ಪ್ರಶ್ನೆಗೆ ಸರಿಯಾದ ಉತ್ತರ ಬೇಕಾಗಿದೆ. ಯಾಕೆಂದರೆ ಬಿಜೆಪಿ ಹೊರತುಪಡಿಸಿ ಪ್ರತಿಯೊಂದು ಪಕ್ಷಕ್ಕೂ ಈ ಪ್ರಶ್ನೆ ಮರಣಗಂಟೆಯನ್ನು ಬಾರಿಸಿದೆ.

  ಬಿಜೆಪಿ ಯಾಕೆ ವಿಪಕ್ಷಗಳನ್ನು ಗಲಿಬಿಲಿಗೊಳಿಸಿತು? ಯಾಕೆ ಕಂಗಾಲಾಗಿಸಿತು? ಎಂಬುದಕ್ಕೆ ಹಲವಾರು ಕಾರಣಗಳಿವೆ. ಬಿಜೆಪಿ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ನಡುವಿನ ಒಂದು ಸ್ಪರ್ಧೆ ಎಂಬಂತೆ ಬಿಂಬಿಸಿತು. ಇದು ಅದರ ಅದ್ಭುತ ತಂತ್ರ, ಮಾಸ್ಟರ್ ಸ್ಟ್ರೋಕ್. ಕಳೆದ ಐದು ವರ್ಷಗಳಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕವು ಕೂಡ, ಪ್ರತಿಯೊಂದು ಅಪಾಯಕಾರಿ ಸಂದರ್ಭದಲ್ಲೂ ತುರ್ತಾಗಿ ಪ್ರತಿಕ್ರಯಿಸಲಿಲ್ಲ; ಸಮರೋಪಾದಿಯಲ್ಲಿ ಕಾರ್ಯಾಚರಿಸಲಿಲ್ಲ. ಅಂದರೆ ಅವರ ಅವಶ್ಯಕತೆ ಅತ್ಯಂತ ಹೆಚ್ಚು ಇದ್ದಾಗಲೂ ಅವರು ಮುನ್ನಲೆಗೆ ಬರಲಿಲ್ಲ, ಅದು ನೋಟು ರದ್ದತಿ, ನ್ಯಾಯಮೂರ್ತಿ ಲೋಯಾ ಸಾವು, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಬೊಬ್ಬೆ ಹೊಡೆದದ್ದು, ರೈತರ ಆತ್ಮಹತ್ಯೆಗಳು ಅಥವಾ ಲಲಿತ ಮೋದಿ, ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ವಂಚಕರ ವಿದೇಶ ಪಲಾಯನ ಯಾವುದೇ ವಿಷಯ ಇರಬಹುದು ಅಥವಾ ಮಹೇಶ್ ಶಾ ಮತ್ತು ಜಯ್ ಶಾರವರ ಸಂಪತ್ತಿನಲ್ಲಿ ಭಾರೀ ಹೆಚ್ಚಳ, ಸಿಬಿಐ ವರ್ಸಸ್ ಸಿಬಿಐ ಅಥವಾ ಆರ್‌ಬಿಐಯ ತಪ್ಪು ನಿಭಾವಣೆ ಈ ಯಾವ ಸಂದರ್ಭದಲ್ಲಿಯೂ ದೇಶವು ರಾಹುಲ್ ಗಾಂಧಿ ಯಾವುದೇ ರೀತಿಯ ‘ಆಮರಣಾಂತ ಉಪವಾಸ’ದಂತಹ ಕ್ರಮ ತೆಗೆದುಕೊಂಡದ್ದನ್ನು ನೋಡಲಿಲ್ಲ. ಇಂತಹ ಒಂದು ಕ್ರಮವನ್ನು ದೇಶದ ಮುಖ್ಯ ವಿರೋಧ ಪಕ್ಷದ ನಾಯಕನೊಬ್ಬ ತೆಗೆದುಕೊಳ್ಳಬೇಕೆಂದು ಜನತೆ ನಿರೀಕ್ಷಿಸುವುದು ಸಹಜ. ಆಶ್ಚರ್ಯಕರವಾಗಿ, ರಾಹುಲ್ ಕೂಡ ಇವಿಎಂ ಬಗ್ಗೆ ಧ್ವನಿ ಎತ್ತಿದರು, ಆದರೆ ಅವರ ಧ್ವನಿ ಕೇಳಿಬಂದಾಗ ತುಂಬಾ ತಡವಾಗಿತ್ತು. 2018ರ ಡಿಸೆಂಬರ್‌ನಲ್ಲಿ ನಾಲ್ಕು ರಾಜ್ಯಗಳಲ್ಲಿ ಚುನಾವಣೆಗಳು ನಡೆದ ಬಳಿಕ ಅವರು ಹೇಳಿದರು: ‘‘ಭಾರತದಲ್ಲಿ ಇವಿಎಂಗಳ ಬಗ್ಗೆ ನಮ್ಮ ಸಮಸ್ಯೆಗಳು ಇನ್ನೂ ಉಳಿದಿದೆ.’’

 2014ರಿಂದ ಇವಿಎಂ ಬಗ್ಗೆ ಸಾಕಷ್ಟು ತಕರಾರು, ವಾದ ಪ್ರತಿವಾದ ನಡೆಯುತ್ತ ಬಂದಿದೆ. ಇವಿಎಂ ಬಳಕೆಯ ಅವಧಿಯಲ್ಲೇ ಬಿಜೆಪಿ ಕೇಂದ್ರದಲ್ಲಿ ಊಹಾತೀತವಾಗಿ ಅಧಿಕಾರಕ್ಕೇರಿತು. ಬಳಿಕ 2017ರ ಯುಪಿಯಲ್ಲಿ ಮತ್ತು ಇಂದಿನವರೆಗೆ ಅದೇ ರೀತಿಯಾಗಿ ನಡೆದಿದೆ. ಇವಿಎಂಗಳು ಸಂಪೂರ್ಣ ಸುರಕ್ಷಿತ ಮತ್ತು ಯಾರಿಂದಲೂ ಅವುಗಳಲ್ಲಿ ಕೈಚಳಕ ತೋರಲು ಸಾಧ್ಯವಿಲ್ಲವೆಂದು ಭಾರತದ ಚುನಾವಣಾ ಆಯೋಗ ಆಗೊಮ್ಮೆ ಈಗೊಮ್ಮೆ ಹೇಳುತ್ತಾ ಬಂದಿದೆ. ಆದರೆ ಭಾರತದ ಮಿಲಿಯನ್‌ಗಟ್ಟಲೆ ನಾಗರಿಕರಾಗಿ, ಜನಸಾಮಾನ್ಯರಾಗಿ ಚುನಾವಣಾ ಮತಯಂತ್ರಗಳ (ಇವಿಎಂ) ಬಗ್ಗೆಯೇ ಜನಮತ, ಮತಗಣನೆ ನಡೆಯಲಿ ಎಂದು ನಾವು ಹೇಳಬಾರದೆ? ಇವಿಎಂಗಳ ಬಗ್ಗೆ ಚನಾವಣಾ ಆಯೋಗದ ಮುಖ್ಯ ಸಮರ್ಥನೆ ಮತ್ತು ವಾದ: ಅದು ಮತಗಳು ಅಸಿಂಧುವಾಗುವುದನ್ನು ತಡೆಯುತ್ತದೆ ಹಾಗೂ ಫಲಿತಾಂಶ ಘೋಷಣೆಯಲ್ಲಾಗುವ ವಿಳಂಬವನ್ನು ಕಡಿಮೆಮಾಡಿ ಸಮಯ ಉಳಿತಾಯ ಮಾಡುತ್ತದೆ ಎನ್ನುವುದು. ಆದರೆ ಚುನಾವಣೆಗಳು ಈಗ ತಿಂಗಳುಗಳ ಕಾಲ ನಡೆಯುತ್ತಿರುವುದರಿಂದ ಇಸಿಐಯ ಮೂಲ ಉದ್ದೇಶವನ್ನು ಅದೇ ವಿಫಲಗೊಳಿಸಿದಂತಾಗಿದೆ. ಈಗ ತಂತ್ರಜ್ಞಾನ ಮತ್ತು ಮೂಲ ಚೌಕಟ್ಟಿನಲ್ಲಿ ಭಾರೀ ಮುನ್ನಡೆ ಆಗಿದೆಯಾದರೂ, ಮೋದಿ-1ನೇ ಸರಕಾರವು ಪ್ರತಿಯೊಂದು ಇವಿಎಂನ ವಿವಿಪ್ಯಾಟ್‌ನ ಪರೀಕ್ಷೆಗೆ ಒಪ್ಪಬೇಕಾಯಿತು. ಆದರೆ ಅದೊಂದರಿಂದಲೇ ವಿಪಕ್ಷಗಳ ಭಯ ದೂರವಾಗಿಲ್ಲ. ಎಲ್ಲ ವಿಪಕ್ಷಗಳು ಜತೆಯಾಗಿ ಹೋಗಿ ಇವಿಎಂ ವಿವಿಪ್ಯಾಟ್‌ನ ಶೇ. 100 ಪರಿಶೀಲನೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದವು. ಆದರೆ ಅಂತಿಮವಾಗಿ, ಮೇ 22ರಂದು ಅದನ್ನು ಮನವಿಯನ್ನು ಸುಪ್ರೀಂ ಕೋರ್ಟ್ ರಗಳೆ ಉಪಟಳವೆಂದು ತಳ್ಳಿಹಾಕಿತು. ಆ ಮೊದಲು ಕನಿಷ್ಠ ಐದು ಮತಗಟ್ಟೆಗಳನ್ನು ಪ್ರತಿಯೊಂದು ಅಸೆಂಬ್ಲಿ ಕ್ಷೇತ್ರದಿಂದ ಲಾಟರಿ ರೀತಿಯಲ್ಲಿ (ರ್ಯಾಂಡಮ್) ಆಯ್ಕೆ ಮಾಡಿ ಪರಿಶೀಲಸಬೇಕೆಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಆಜ್ಞೆ ಮಾಡಿತ್ತು.

‘ಇವಿಎಂಗಳನ್ನು ಬದಲಾಯಿಸಲಾಗಿದೆ’, ‘ಕಳೆದು ಹೋಗಿರುವ 19 ಲಕ್ಷ ಇವಿಎಂಗಳು’ ಇತ್ಯಾದಿ ಆಪಾದನೆಗಳ ನಡುವೆಯೇ ಮೋದಿ ಸರಕಾರ-2 ಈ ಹಿಂದೆ ಇಲ್ಲದ ಭಾರೀ ಅಬ್ಬರದೊಂದಿಗೆ ವಿರಾಜಮಾನವಾಗಿದೆ. ಈ ಆಪಾದನೆಗಳನ್ನು ಮಾಡಿರುವ ವಿಪಕ್ಷಗಳ ತಕರಾರುಗಳನ್ನು ಮುಜುಗರಕ್ಕೊಳಗಾದ ಒಂದು ಬೆಕ್ಕು ಗೋಡೆಯನ್ನು ಪರಚಿದಂತೆ ಎಂದು ಹೇಳಿ ತಳ್ಳಿಹಾಕಲಾಗಿದೆ ಮತ್ತು ಸದ್ಯದಲ್ಲೇ ಈ ಗದ್ದಲ, ಹಿಮ್ಮೇಳ ಬಿಜೆಪಿಯ ವಿಜಯದ ಸಂಭ್ರಮದಲ್ಲಿ ಕರಗಿ ಇಲ್ಲವಾಗುತ್ತದೆ. ಆದರೆ ಇವಿಎಂ ಮಾದರಿಯ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರದ ಮಿಲಿಯಗಟ್ಟಲೆ ಮತದಾರರ ಕುದಿಯುತ್ತಿರುವ ಅತೃಪ್ತಿಯನ್ನು, ಅತೃಪ್ತಿಯ ಧ್ವನಿಯನ್ನು ಉಡುಗಿಸುವುದು ಬಿಜೆಪಿಯ ಗೆಲುವಿನ ಸಂಭ್ರಮಕ್ಕೆ ಸಾಧ್ಯವಾದೀತೇ? ಉತ್ತರಪ್ರದೇಶದಲ್ಲಿ ಕೇಳಿಬಂದ ಜನರ ಹಾಡು, ಪಲ್ಲವಿ, ಅನುಪಲ್ಲವಿ ‘ಹಮ್ ತೋ ಭಯ್ಯೆ ಇವಿಎಂ ಕೋ ಹೀ ದೇಕರ್ ಆಯೇ ಹೈ’ (ಗೆಳೆಯಾ, ನಾನು ಇವಿಎಂಗೇ ಮತ ನೀಡಿದೆ). ಯೋಗಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ (2017) ರಾಜ್ಯದ ರಾಜಧಾನಿ ಲಕ್ನೋ ಒಂದು ಆಘಾತಕಾರಿ ಸುದ್ದಿಯನ್ನು ಕೇಳಿ ಬೆಚ್ಚಿ ಬಿದ್ದಿತು. ಸರಕಾರದ ಅಧಿಕಾರಿಗಳು ಲಕ್ನೋದ ಹಲವಾರು ಪೆಟ್ರೋಲ್ ಪಂಪ್‌ಗಳ ಮೇಲೆ ದಾಳಿ ನಡೆಸಿದಾಗ, ಪೆಟ್ರೋಲ್ ಅಳತೆಯನ್ನು ಮೋಸ ಮಾಡುವ ಒಂದು ಚಿಪ್ ಅನ್ನು ‘ಪೆಟ್ರೋಲ್-ಪೋರರ್’ನ ಒಳಗೆ ಇಟ್ಟಿರುವುದನ್ನು ಪತ್ತೆ ಹಚ್ಚಿದರು! ಅಲ್ಲಿಯವರೆಗೆ ಕುಟಿಲ ಪೆಟ್ರೋಲ್ ಪಂಪ್ ಮಾಲಕರು ಪೆಟ್ರೋಲ್ ಅಳತೆಯಲ್ಲಿ ಮೋಸ ಮಾಡುವ ಮೂಲಕ ತಮ್ಮ ಮಿಲಿಯಗಟ್ಟಲೆ ಹಣವನ್ನು ದೋಚಿದ್ದಾರೆಂದು ಹೇಳಿದರೆ ಲಕ್ನೋದಲ್ಲಿ ಯಾರಾದರೂ ನಂಬುತ್ತಿದ್ದರೇ? ವಿದೇಶಗಳಲ್ಲಿ ಕುಳಿತಿರುವ ಹ್ಯಾಕರ್‌ಗಳು ನಮ್ಮ ಫೂಲ್-ಪ್ರೂಫ್ ಬ್ಯಾಂಕ್ ಖಾತೆಗಳಿಂದ ಲಕ್ಷಗಟ್ಟಲೆ ಹಣ ಕೊಳ್ಳೆಹೊಡೆಯುವ ಸುದ್ದಿಗಳನ್ನು ನಾವು ಕೇಳುತ್ತಿಲ್ಲವೆ?

ಇವುಗಳು ನಾವು ದಿನನಿತ್ಯ ಕೇಳುವ ಸುದ್ದಿಗಳು. ತಂತ್ರಜ್ಞಾನದಲ್ಲಿ ಹೇಗೆ ಕೈಚಳಕ ತೋರಿ ಮೋಸ ಮಾಡಬಹುದೆಂಬುದಕ್ಕೆ ಈ ಸುದ್ದಿಗಳೇ ಉದಾಹರಣೆಗಳು. ಆದರೆ ಭಾರತದ ಚುನಾವಣಾ ಆಯೋಗ ಮಾತ್ರ ಇಲೆಕ್ಟ್ರಾನಿಕ್ ಮತಯಂತ್ರಗಳು 99.9 ಶುದ್ಧ ಚಿನ್ನವಲ್ಲ. ಬದಲಾಗಿ ಶೇ. 100 ಚಿನ್ನ. 24 ಕ್ಯಾರೆಟ್ ಬಂಗಾರ ಎಂದು ಹೇಳುತ್ತಿದೆ. ಆಧುನಿಕ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಮೋಸದಿಂದಾಗಿ ತಂತ್ರಜ್ಞಾನ ಮತಯಂತ್ರಗಳಲ್ಲಿ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆಯುವ ಪರೀಕ್ಷೆಗಳಾಗಿರುವುದರಿಂದ ಅವುಗಳ ಫಲಿತಾಂಶ ನೋಟಾ (ಎನ್‌ಒಟಿಎ) ಸೇರಿದಂತೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆಂಬುದು ಎಲ್ಲರೂ ಗಮನಿಸಬೇಕಾದ ವಾಸ್ತವ.

ಇವಿಎಂಗಳ ಕುರಿತಾದ ಯಾವುದೇ ತಕರಾರುಗಳನ್ನು ಇನ್ನು ಸುಪ್ರೀಂ ಕೋರ್ಟ್ ಅಂತಿಮವಾಗಿ ಪರಿಗಣಿಸುವುದಿಲ್ಲವೆಂದು ದೃಢಪಟ್ಟಿದೆಯಾದ್ದರಿಂದ ರಾಷ್ಟ್ರವು ಇವಿಎಂನ ಅಡಿಯಲ್ಲೇ ಸುತ್ತಾಡಬೇಕಾಗಿದೆ. ಈ ರಾಷ್ಟ್ರದಲ್ಲಿ ಮಿಲಿಯಗಟ್ಟಲೆ ಜನರು ಭಿಕ್ಷುಕರು, ರಿಕ್ಷಾ ಎಳೆಯುವವರು, ದಿನ ಕೂಲಿ ಕಾರ್ಮಿಕರು ಮತ್ತು ನಿರಕ್ಷರಿಗಳು ಇದನ್ನು ಜರ್ಮನಿಗೆ ಹೋಲಿಸಿದರೆ ಅಲ್ಲಿ ಬಹುಸಂಖ್ಯೆಯ ಜನರು ಭಾರತದ ಜನರಿಗಿಂತ ತುಂಬ ಹೆಚ್ಚು ಶಿಕ್ಷಿತರು ಮತ್ತು ತಂತ್ರಜ್ಞಾನ ನಿಪುಣರು. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಅಂತಹ ಮುಂದುವರಿದ ರಾಷ್ಟ್ರವಾಗಿರುವ ಜರ್ಮನಿಯಲ್ಲೇ, 2009ರಲ್ಲಿ ಜರ್ಮನಿಯ ಸುಪ್ರೀಂ ಕೋರ್ಟ್ ಹೀಗೆ ಆಜ್ಞೆ ಮಾಡಿತ್ತು: ‘‘ಇಲೆಕ್ಟ್ರಾನಿಕ್ ವೋಟಿಂಗ್ (ಮತದಾನ) ಅಸಾಂವಿಧಾನಿಕ, ಯಾಕೆಂದರೆ ಇವಿಎಂಗಳಲ್ಲಿ ಮತಗಳ ನಿಖರವಾದ ದಾಖಲೆ ಮತ್ತು ಟ್ಯಾಲಿಯಲ್ಲಿ ಒಳಗೊಂಡಿರುವ ನಿಖರವಾದ ಕ್ರಮಗಳನ್ನು ಪ್ರಕ್ರಿಯೆಗಳನ್ನು ಸಾಮಾನ್ಯ ನಾಗರಿಕನೊಬ್ಬ ಅರ್ಥ ಮಾಡಿಕೊಳ್ಳಲಾರ’’. ಇವಿಎಂಗಳನ್ನು ಜರ್ಮನಿ, ಹಾಲೆಂಡ್ ಮತ್ತು ಐರ್ಲ್ಯಾಂಡ್‌ನಲ್ಲಿ ನಿಷೇಧಿಸಲಾಗಿದೆ. ಜಪಾನ್ ಮತ್ತು ಸಿಂಗಾಪುರ ಮತಪೆಟ್ಟಿಗೆಗಳನ್ನೇ ಬಳಸುತ್ತಿವೆ. ಆದರೆ ಇವಿಎಂಗಳ ಮೂಲಕ ನಡೆಯುವ ಮತದಾನದ ವಿಷಯದಲ್ಲಿ ‘‘ನಿನಗಿಂತ ನಾನು ಹೆಚ್ಚು ಪವಿತ್ರ’’ ಎಂಬ ರೀತಿಯಲ್ಲಿ ನಮ್ಮ ಚುನಾವಣಾ ಆಯೋಗವು ಮತಯಂತ್ರಗಳಿಗೆ ಇನ್ನೂ ಅಂಟಿಕೊಂಡು ಕೂತಿದೆ. ನಿಜ ಹೇಳಬೇಕೆಂದರೆ, ಇವತ್ತಿನ ಪ್ರಪಂಚದಲ್ಲಿ ‘ಇಲೆಕ್ಷನ್ ಹ್ಯಾಕಿಂಗ್’ (ಚುನಾವಣಾ ಮೋಸ) ಒಂದು ವಾಣಿಜ್ಯ ಆಟವಾಗಿದೆ. ಈ ವಿಷಯದಲ್ಲಿ ಇನ್ನಷ್ಟು ವಿವರಗಳು, ಪುರಾವೆಗಳು ನಿಮಗೆ ಬೇಕಾದಲ್ಲಿ ಟ್ಯಾಬ್ಲೆಟ್ ಮ್ಯಾಗಜಿನ್‌ನಲ್ಲಿ ಪ್ರಕಟವಾಗಿರುವ ಒಂದು ಲೇಖನವನ್ನು ಓದಿ. ಆ ಲೇಖನದ ಶೀರ್ಷಿಕೆ ‘ಡಿಡ್ ಆ್ಯನ್ ಇಸ್ರೇಲಿ ಕಂಪೆನಿ ಹ್ಯಾಕ್ ಜಿಂಬಾಬ್ವೆ ಇಲೆಕ್ಷನ್?’ (ಫೆಬ್ರವರಿ 28, 2017).

ಹೀಗಿರುವಾಗ ಚುನಾವಣಾ ಆಯೋಗವು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಹೇಗೆ ಸಾಧ್ಯ? ಇವಿಎಂಗಳು ವಿಶ್ವಾಸಾರ್ಹವೆ? ಎಂಬ ಜನರ ಮೂಲಭೂತವಾದ ಪ್ರಶ್ನೆಗೆ ಅದು ಏನು ಉತ್ತರ ನೀಡಬಲ್ಲದು? ಅದು ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾದರೆ ಹೀಗೆ ಮಾಡಬಹುದು. ಮತದಾನ ಮಾಡಿದ ಬಳಿಕ ‘ಎರಡು ಪ್ರಿಂಟ್ ಜಾಟ್’ಗಳನ್ನು ನೀಡುವ ಒಂದು ಕ್ರಮವನ್ನು ವಿನ್ಯಾಸಗೊಳಿಸಿ ಅಳವಡಿಸುವುದು. ಎರಡರಲ್ಲಿ ಒಂದನ್ನು ಚುನಾವಣಾ ಆಯೋಗದ ವಶದಲ್ಲಿಟ್ಟುಕೊಂಡು ಇನ್ನೊಂದನ್ನು ಮತದಾರರಿಗೆ ಕೊಡುವುದು. ಅದರ ಮೇಲೆ ಒಂದು ಸಂಖ್ಯೆಯನ್ನು ನಮೂದಿಸಿ ಅದಕ್ಕೆ ಚುನಾವಣಾಧಿಕಾರಿ ಸಹಿ ಹಾಕಿರಬೇಕು. ಇದನ್ನು ಮತದಾನದ ಬಳಿಕ ಯಾವಾಗ ಬೇಕಾದರೂ ಮತದಾರ ಕೌಂಟರ್ ಚೆಕ್ ಮಾಡಬಹುದು.

ಇದರಿಂದ ಖೋಟಾ (ಬೋಗಸ್) ಮತದಾನದ ಸಮಸ್ಯೆಯನ್ನು ಹಾಗೂ ಇವಿಎಂ-ವಿವಿ ಪ್ಯಾಟನ್ನು ಪರೀಕ್ಷಿಸುವ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಹುದು. ಅಲ್ಲದೆ ಮತಯಂತ್ರಗಳನ್ನು ಬದಲಾಯಿಸುವುದು, ಹ್ಯಾಕಿಂಗ್ ಮತ್ತು ಮತಯಂತ್ರಗಳು ನಾಪತ್ತೆಯಾಗುವುದು ಈ ಎಲ್ಲ ಸಮಸ್ಯೆಗಳನ್ನು ಒಂದೇ ಸಲಕ್ಕೆ ಪರಿಹರಿಸಿ ಬಿಡಬಹುದು. ಹೀಗೆ ಮಾಡಿದಲ್ಲಿ ಒಬ್ಬನ ಮತವನ್ನು ಒಬ್ಬನ ಬ್ಯಾಂಕ್ ಖಾತೆಗೆ ಸಮಾನವಾಗಿ ಪರಿಗಣಿಸಿದಂತಾಗುತ್ತದೆ. ಮತಯಂತ್ರಗಳನ್ನು ಮತದಾನ ವ್ಯವಸ್ಥೆಯನ್ನು ಬಲಪಡಿಸಿದಂತಾಗುತ್ತದೆ. ಆದರೆ ಇದೆಲ್ಲ ನನ್ನ ಕನಸೋ ಏನೋ ಅನ್ನಿಸುತ್ತದೆ.

(ಲೇಖಕರು ವಕೀಲರು, ಪತ್ರಕರ್ತರು ಮತ್ತು ಉತ್ತರ ಪ್ರದೇಶ ರಾಜ್ಯದ ಮಾಹಿತಿ ಆಯೋಗದ ಮಾಜಿ ಆಯುಕ್ತರಾಗಿದ್ದಾರೆ.)

ಕೃಪೆ: countercurrents

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)