varthabharthi

ನಿಮ್ಮ ಅಂಕಣ

ಗಾಂಧೀಜಿ, ವೀರಸಾವರ್ಕರ್ ಮತ್ತು ರಸ್ತೆ ಹೊಂಡಗಳು

ವಾರ್ತಾ ಭಾರತಿ : 5 Jul, 2019
-ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು

ಮಾನ್ಯರೇ,

ನಮ್ಮ ಸಭೆಗಳಲ್ಲಿ, ವಿದ್ಯುನ್ಮಾನ ಪ್ರಸಾರಗಳಲ್ಲಿ, ಲೇಖನಗಳಲ್ಲಿ ನಡೆಯುವ ರಾಜಕೀಯ ಚರ್ಚೆ-ವಿಶ್ಲೇಷಣೆ-ಕಿರಿಚಾಟ- ಸೂಕ್ಷ್ಮ್ಮಾತಿಸೂಕ್ಷ್ಮ ಸಿದ್ಧಾಂತ ವಿವರಣೆ, ಆರೋಪ ಉತ್ತರಗಳೆಲ್ಲ ಅದ್ಭುತ. ದಂಗುಬಡಿಸುವ ಪಾಂಡಿತ್ಯ, ತರ್ಕ, ಧೂರ್ತತನ, ಜ್ಞಾನ ಎಲ್ಲ ಇರುತ್ತವೆ. ಐತಿಹಾಸಿಕ ವ್ಯಕ್ತಿಗಳ ದೈವೀಕರಣ-ದುಷ್ಟೀಕರಣ, ನಾಯಕ, ಖಳನಾಯಕ ಪಾತ್ರಗಳಲ್ಲಿ ನಿತ್ಯ ಜರಗುತ್ತವೆ. ಗಾಂಧೀಜಿ, ಸಾವರ್ಕರ್, ಅಂಬೇಡ್ಕರ್, ಬಸವಣ್ಣ , ಶ್ರೀರಾಮ, ಶ್ರೀಕೃಷ್ಣರಿಂದ ತೊಡಗಿ ಇಂದಿನವರ ವರೆಗೆ ಸ್ಥಾನ ನಿರ್ಣಯ, ಮಾಪನ ಎಲ್ಲ ಅತ್ಯದ್ಭುತವಾಗಿರುತ್ತದೆ.

ಆದರೆ, ವರ್ಷಗಟ್ಟಲೆ ದುರಸ್ತಿಯಾಗದ ರಸ್ತೆಗಳು, ಜಲಮಟ್ಟವಿಲ್ಲದ ರಸ್ತೆ ರಚನೆಗಳು, ಚರಂಡಿ ಇಲ್ಲದ ಮಹಾ ಮಾರ್ಗಗಳು, ಅನ್ಯಾಯದ ರಸ್ತೆ ಟೋಲ್ ಸುಂಕಗಳು, ಪ್ರಾಥಮಿಕ ಶಾಲೆಗಳು -ಈ ಕುರಿತು ‘ತಜ್ಞ’ ಚರ್ಚೆ ನಡೆಯುವುದಿಲ್ಲ. ಎಡ-ಬಲ ಯಾರೂ ಈ ಕುರಿತು ಗಟ್ಟಿದನಿ ಎತ್ತುವುದಿಲ್ಲ ಯಾಕೆ?
 ಇಂದು ಬೇಕಾಗಿರುವುದು ಸೂಕ್ಷ್ಮ ತಾತ್ವಿಕ ಚರ್ಚೆಗಳಷ್ಟೇ ಅಲ್ಲ. ರಾಜಕೀಯ ನಿಲುವು, ಮತ ಭಿನ್ನಮತ, ಇತಿಹಾಸದಲ್ಲಿ ವ್ಯಕ್ತಿಯ ಸ್ಥಾನಗಳ ನಿರ್ಣಯ- ಇವನ್ನೆಲ್ಲ ಮೀರಿದ ದೈನಂದಿನ ಶಾಸಕೀಯ ಅಧಿಕಾರಶಾಹೀಯ ಮತ್ತು ವ್ಯಾವಹಾರಿಕವಾದ, ಎಲ್ಲರಿಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರ.

ತಕ್ಕಮಟ್ಟಿಗೆ ಅಧಿಕಾರಸ್ಥರ ಪರಿಚಯ ಇರುವವರಿಗೆ ಕೂಡ ಒಂದು ರಸ್ತೆ ಹೊಂಡ ಸರಿಪಡಿಸುವಂತೆ ಮಾಡಲು ಆಗುವುದಿಲ್ಲ. ‘ಜನರೆಡೆಗೆ ಅಧಿಕಾರ’, ‘ವಿಕೇಂದ್ರೀಕರಣ’ ‘ಸ್ಪಂದನಶೀಲ ಆಡಳಿತ’ -ಎಲ್ಲ ಸದಾಶಯಗಳೂ ಘೋಷಿತವಾಗುತ್ತವೆ. ಇವೆಲ್ಲ ಪ್ರಾಮಾಣಿಕವೆಂದೇ ಒಪ್ಪಿದರೂ, ವಾಸ್ತವದಲ್ಲಿ ‘‘ಗಾಂಧಿ ತತ್ವ ಚರ್ಚಿಸಿದರೆ, ನಮ್ಮ ಊರಿನ ಸೇತುವೆ ಮುರಿದುದಕ್ಕೆ, ಶಾಲೆಯ ಕಟ್ಟಡ ಹಾಳಾದುದಕ್ಕೆ ಉಪಯೋಗವಿದೆಯೇ?’’ ಎಂಬ ಸಾಮಾನ್ಯನ ಪ್ರಶ್ನೆಗೆ ಉತ್ತರವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)