varthabharthiಸಂಪಾದಕೀಯ

ರಾಹುಲ್ ಮುಂದಿರುವ ಮುಳ್ಳಿನ ದಾರಿ

ವಾರ್ತಾ ಭಾರತಿ : 5 Jul, 2019

ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವುದರ ಜೊತೆಗೆ ಕಾಂಗ್ರೆಸ್ ಎನ್ನುವ ಪುರಾತನ ಮರಕ್ಕೆ ಅಂಟಿಕೊಂಡಿರುವ ಹಿರಿಯ ಗೆದ್ದಲುಗಳನ್ನು ಝಾಡಿಸುವ ರೂಪದಲ್ಲಿ ‘ವಿದಾಯ ಪತ್ರ’ವೊಂದನ್ನು ಬರೆದಿದ್ದಾರೆ. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಹೆಸರನ್ನು ರಾಜಕೀಯವಾಗಿ ಪಿತ್ರಾರ್ಜಿತ ಆಸ್ತಿಯ ರೂಪದಲ್ಲಿ ಅನುಭವಿಸಿಕೊಂಡು ಬರುತ್ತಿರುವ ಕೆಲವು ಹಿರಿಯ ರಾಜಕಾರಣಿಗಳಿಗೆ ಈ ಪತ್ರ ಮರ್ಮಾಘಾತವನ್ನು ನೀಡಿದೆ. ವರ್ತಮಾನದ ರಾಜಕೀಯ ಈ ದೇಶವನ್ನು ಪ್ರಪಾತದ ಕಡೆಗೆ ಅತಿವೇಗದಲ್ಲಿ ತಳ್ಳುತ್ತಿರುವ ಬಗೆಯನ್ನು ಕಂಡು ಆತಂಕದಿಂದ ಈ ಪತ್ರವನ್ನು ರಾಹುಲ್ ಅವರು ಬರೆದಂತಿದೆ. ಸದ್ಯದ ಕಾಂಗ್ರೆಸ್‌ಗೆ ಆ ದುರಂತವನ್ನು ತಡೆಯುವ ಯಾವ ಶಕ್ತಿಯೂ ಇಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಗಿದೆ.

ಒಂದು ಕಾಲದಲ್ಲಿ ಗಾಂಧಿ ಕುಟುಂಬದ ವರ್ಚಸ್ಸಿನಿಂದಲೇ ಮತಗಳು ಹುಟ್ಟುತ್ತಿದ್ದವು. ಕಾಂಗ್ರೆಸ್‌ನೊಳಗಿರುವ ಹಿರಿಯ ನಾಯಕರು ಇನ್ನೂ ಅದೇ ವರ್ಚಸ್ಸನ್ನು ನೆಚ್ಚಿಕೊಂಡಿರುವುದು ಕಾಂಗ್ರೆಸ್ ದುರಂತಕ್ಕೆ ಮೊದಲ ಕಾರಣ. ಈ ದೇಶದ ಎಲ್ಲ ಸಂಸ್ಥೆಗಳು ಪಕ್ಷಪಾತಿಯಾಗಿರುವುದನ್ನು ರಾಹುಲ್ ಗಾಂಧಿ ಗುರುತಿಸುತ್ತಾರೆ. ಸಂಸ್ಥೆಗಳಷ್ಟೇ ಅಲ್ಲ, ಈ ದೇಶವನ್ನು ಪೊರೆಯುತ್ತಾ ಬಂದಿರುವ ಜಾತ್ಯತೀತ ವೌಲ್ಯಗಳೇ ಸದ್ಯಕ್ಕೆ ನೆಲೆ ಕಳೆದುಕೊಂಡಿವೆ. ಪರಂಪರೆ, ಪ್ರಜಾಸತ್ತೆ, ಸಂವಿಧಾನ, ದೇಶದ ಕುರಿತ ಪರಿಕಲ್ಪನೆಗಳನ್ನೇ ವಿರೂಪಗೊಳಿಸಲಾಗಿದೆ ಮತ್ತು ಅವೆಲ್ಲದರ ಯಶಸ್ಸು ಆರೆಸ್ಸೆಸ್‌ನಂತಹ ಸಂಘಟನೆಗಳಿಗೆ ಸಲ್ಲಬೇಕಾಗಿದೆ. ಆದರೆ ಒಂದನ್ನು ಗಮನಿಸಬೇಕು. ಈ ದೇಶವನ್ನು ಅತಿ ಹೆಚ್ಚು ಕಾಲ ಆಳಿರುವುದು ಆರೆಸ್ಸೆಸ್ ಅಥವಾ ಬಿಜೆಪಿಯಲ್ಲ. ಸುಮಾರು 70 ವರ್ಷಗಳ ಕಾಲ ಈ ದೇಶದ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿತ್ತು. ಈ ದೇಶದ ಜಾತ್ಯತೀತ ಪರಂಪರೆಗಳ ಅಳಿವು ಉಳಿವಿನ ಹೊಣೆಗಾರಿಕೆ ಕಾಂಗ್ರೆಸ್‌ನದ್ದೇ ಆಗಿತ್ತು. ಗಾಂಧಿ, ಅಂಬೇಡ್ಕರ್ ಪಕ್ಕಕ್ಕಿರಲಿ, ಕನಿಷ್ಠ ನೆಹರೂ ನಂಬಿಕೊಂಡ ವೌಲ್ಯಗಳನ್ನಾದರೂ ತಳಸ್ತರದಲ್ಲಿ ಆಳವಾಗಿ ಬಿತ್ತುವ ಕೆಲಸ ನಡೆದಿದ್ದರೆ, ಇಂದು ಅವುಗಳು ಮರವಾಗಿ ಬೆಳೆದು ಈ ದೇಶಕ್ಕೆ ಒಂದಿಷ್ಟು ನೆರಳು ನೀಡುತ್ತಿತ್ತು. ಒಂದೆಡೆ ಕಾಂಗ್ರೆಸ್ ಈ ದೇಶವನ್ನು ಆಳುತ್ತಿರುವಾಗಲೇ, ಆರೆಸ್ಸೆಸ್ ಸಂವಿಧಾನ ವಿರೋಧಿ ವೌಲ್ಯಗಳನ್ನು ಯಶಸ್ವಿಯಾಗಿ ಬಿತ್ತುವುದಕ್ಕೆ ಹೇಗೆ ಸಾಧ್ಯವಾಯಿತು? ಒಂದು ಸರಕಾರಕ್ಕೆ ಪರ್ಯಾಯವಾಗಿ ತನ್ನ ಸಂಸ್ಥೆಗಳನ್ನು ವಿಸ್ತರಿಸುತ್ತಾ, ಜನಸಾಮಾನ್ಯರಲ್ಲಿ ಸಂವಿಧಾನ ವಿರೋಧಿ, ಪ್ರಜಾಸತ್ತೆಗೆ ವಿರೋಧಿಯಾದ ವೌಲ್ಯಗಳನ್ನು ದೇಶಾದ್ಯಂತ ಹರಡುವುದಕ್ಕೆ ಆರೆಸ್ಸೆಸ್‌ಗೆ ಸಾಧ್ಯವಾಯಿತು ಎನ್ನುವುದೇ ಕಾಂಗ್ರೆಸ್ ಆಡಳಿತದ ಅತಿ ದೊಡ್ಡ ಸೋಲು. ಜಾತ್ಯತೀತನಂತೆ ನಟಿಸುತ್ತಿದ್ದ ಕಾಂಗ್ರೆಸ್‌ನ ನೆರಳಲ್ಲೇ ಕೋಮುವಾದಿ ಶಕ್ತಿಗಳು ಬೆಳೆದವು ಎನ್ನುವ ವಾಸ್ತವವನ್ನು ರಾಹುಲ್‌ಗಾಂಧಿ ಅರ್ಥಮಾಡಿಕೊಳ್ಳಬೇಕಾಗಿದೆ.

 ಕಾಂಗ್ರೆಸ್‌ನೊಳಗಿರುವ ಇತರ ನಾಯಕರಿಗೆ ರಾಹುಲ್‌ಗಾಂಧಿ ರಾಜೀನಾಮೆ ನೀಡುವುದು ಬೇಕಾಗಿಲ್ಲ. ಯಾಕೆಂದರೆ, ಅವರಿಗೆ ಕಾಂಗ್ರೆಸ್ ಉಳಿಯಬೇಕಾಗಿದೆ. ಅವರು ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಅವರಿಗೆ ಕಾಂಗ್ರೆಸ್ ಉಳಿಯಬೇಕಾಗಿದೆಯೇ ಹೊರತು, ಕಾಂಗ್ರೆಸ್ ಹಿಂದಿನಿಂದ ಪ್ರತಿಪಾದಿಸುತ್ತಾ ಬಂದಿರುವ ಜಾತ್ಯತೀತ ವೌಲ್ಯಗಳ ಉಳಿಯುವಿಕೆಗಾಗಿಯೋ, ದೇಶದ ಭವಿಷ್ಯಕ್ಕಾಗಿಯೋ ಅಲ್ಲ. ಕಾಂಗ್ರೆಸ್‌ನೊಳಗಿರುವ ಬಹುತೇಕ ನಾಯಕರೊಳಗೆ ಗಾಂಧೀಜಿಯ ಹಿಂದೂ ಸ್ವರಾಜ್ಯ ಮತ್ತು ಆರೆಸ್ಸೆಸ್‌ನ ಹಿಂದುತ್ವದ ಬಗ್ಗೆ ಸ್ಪಷ್ಟತೆಯಿಲ್ಲ. ಆರೆಸ್ಸೆಸ್ ಇದನ್ನು ಸಹಜವಾಗಿಯೇ ದುರ್ಬಳಕೆ ಮಾಡಿಕೊಂಡು ಬಂದಿದೆ. ಕಾಂಗ್ರೆಸ್‌ನೊಳಗಿದ್ದು ಆರೆಸ್ಸೆಸ್‌ನ ಕಾರ್ಯಕ್ರಮಗಳನ್ನು ಒಳಗೊಳಗೆ ಇಷ್ಟಪಡುವ ನಾಯಕರ ದೊಡ್ಡ ಸಂಖ್ಯೆಯಿದೆ. ಆ ಸಂಖ್ಯೆಯನ್ನು ಬಳಸಿಕೊಂಡೇ ಆರೆಸ್ಸೆಸ್ ದೇಶಾದ್ಯಂತ ತನ್ನ ಸಂಘಟನೆಗಳನ್ನು ವಿಸ್ತರಿಸುತ್ತಾ ಹೋಯಿತು. ಪ್ರಣವ್ ಮುಖರ್ಜಿಯಂತಹ ಹಿರಿಯ ನಾಯಕರೇ ಅದಕ್ಕೆ ಉತ್ತಮ ಉದಾಹರಣೆ. ಕಾಂಗ್ರೆಸ್‌ನಲ್ಲಿ ಇರುವವರೆಗೂ ಸಕಲ ಅಧಿಕಾರಗಳನ್ನು ಅನುಭವಿಸಿದ ಮುಖರ್ಜಿ, ನಿವೃತ್ತರಾದಾಕ್ಷಣ ಆರೆಸ್ಸೆಸ್‌ನ ವೇದಿಕೆಯಲ್ಲಿ ಕುಳಿತು ತನ್ನ ಬದ್ಧತೆಯನ್ನು ಬಹಿರಂಗಪಡಿಸಿದರು. ಮುಖರ್ಜಿಯನ್ನು ಆರೆಸ್ಸೆಸ್ ಅತ್ಯಂತ ಗೌರವಾದರಗಳಿಂದ ಕಾಣುತ್ತದೆಯೆನ್ನುವುದೇ ಕಾಂಗ್ರೆಸ್‌ನೊಳಗಿನ ಟೊಳ್ಳುತನವನ್ನು ಬಹಿರಂಗಪಡಿಸುತ್ತದೆ. ಕಾಂಗ್ರೆಸ್‌ನೊಳಗಿದ್ದುಕೊಂಡೇ ಆರೆಸ್ಸೆಸ್‌ನ್ನು ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಭಾವಿಸುತ್ತಾ ಅದರ ಜೊತೆಗೆ ಒಳಗಿಂದೊಳಗೆ ಗುರುತಿಸುತ್ತಿರುವ ನಾಯಕರು ಹಲವರಿದ್ದಾರೆ. ಕಾಂಗ್ರೆಸ್ ಅವರಿಗೆ ಮುಖ್ಯವಾಗುವುದು ಅದು ಪ್ರತಿಪಾದಿಸುವ ತತ್ವ, ಸಿದ್ಧಾಂತದ ಕಾರಣಗಳಿಗಾಗಿ ಅಲ್ಲ.

ಗಾಂಧಿ ಕುಟುಂಬದ ಬಲದಿಂದ ಅಧಿಕಾರ ಹಿಡಿಯುವ ಒಂದು ದಾರಿಯಾಗಿ ಮಾತ್ರ ಅವರು ಕಾಂಗ್ರೆಸ್‌ನ್ನು ಬಳಸಿಕೊಳ್ಳುತ್ತಿದ್ದಾರೆ. ಆದುದರಿಂದಲೇ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸ್ಫೋಟವಾದಾಕ್ಷಣ ಕಾಂಗ್ರೆಸ್‌ನೊಳಗಿರುವ ನಾಯಕರಿಗೆ ಸುಲಭವಾಗಿ ಬಿಜೆಪಿ ಸೇರುವುದಕ್ಕೆ ಸಾಧ್ಯವಾಗುತ್ತದೆ. ಕಾಂಗ್ರೆಸ್ ಈ ದೇಶವನ್ನು 70 ವರ್ಷ ಆಳಿತೇ ಹೊರತು, ಅದು ಈ ದೇಶದ ಪ್ರಜಾಸತ್ತಾತ್ಮಕವಾದ ವೌಲ್ಯಗಳನ್ನು ಉಳಿಸಲು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ನೀಡಿದ ಕೊಡುಗೆಗಳು ಸೊನ್ನೆ. ಬದಲಿಗೆ ಅದೇ ಕಾಂಗ್ರೆಸ್‌ನ ಆಡಳಿತವನ್ನು ಬಳಸಿಕೊಂಡು ಆರೆಸ್ಸೆಸ್ ತನ್ನ ಸಿದ್ಧಾಂತವನ್ನು ಯಶಸ್ವಿಯಾಗಿ ಜನಸಾಮಾನ್ಯರ ಕಡೆಗೆ ಕೊಂಡೊಯ್ಯಿತು. ಎಲ್ಲ ಸಂಸ್ಥೆಗಳು ಪಕ್ಷಪಾತಿಯಾಗಿವೆ ಎಂದು ರಾಹುಲ್‌ಗಾಂಧಿ ಹತಾಶೆಯಿಂದ ಹೇಳುತ್ತಾರೆ. ಆದರೆ ಇದೇನು ಆಕಸ್ಮಿಕವಾಗಿ ನಡೆದಿರುವುದಲ್ಲ. ಅದರ ಹಿಂದೆ ಆರೆಸ್ಸೆಸ್‌ನ ಹಲವು ದಶಕಗಳ ಶ್ರಮವಿದೆ.

ಆರೆಸ್ಸೆಸ್ ಸಂಘಟನೆ ಕೇವಲ ಕವಾಯತುಗಳಿಗೆ ಅಥವಾ ಪ್ರಬೋಧನೆಗಳಿಗೆ ಸೀಮಿತವಾಗಿಲ್ಲ. ದೇಶಾದ್ಯಂತ ಕಾರ್ಯಕರ್ತರಿಗೆ ಸಕಲ ತರಬೇತಿಗಳನ್ನು ನೀಡಿ, ಅವರನ್ನು ಪೂರ್ಣ ತಲೆಕೆಡಿಸಿ ವಿವಿಧ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಹಂತಹಂತವಾಗಿ ನುಗ್ಗಿಸುತ್ತಾ ಬಂದಿದೆ. ಸೇನೆ, ಪೊಲೀಸ್ ಇಲಾಖೆ, ರಾ, ಗುಪ್ತಚರ ಇಲಾಖೆ, ತನಿಖಾ ಸಂಸ್ಥೆಗಳು ಹೀಗೆ ಯಾವ ವಲಯಗಳನ್ನೂ ಅವರು ಬಿಟ್ಟಿಲ್ಲ. ಹತ್ತು ವರ್ಷ ಬಿಜೆಪಿ ಅಧಿಕಾರ ಹಿಡಿದರೆ, ಆ ಅವಧಿಯಲ್ಲಿ ಆರೆಸ್ಸೆಸ್ ಎಲ್ಲ ಅಧಿಕಾರ ವಲಯಗಳನ್ನು ತನ್ನ ಸೂತ್ರಕ್ಕೆ ತೆಗೆದುಕೊಂಡಿದೆ. ಐಎಎಸ್‌ನಂತಹ ಉನ್ನತ ಹುದ್ದೆಗಳಲ್ಲಿ ಮೇಲ್ಜಾತಿಯ ಜನರೇ ಹೆಚ್ಚಿರುವುದರಿಂದ, ಮೇಲ್ಜಾತಿಯ ಅಧಿಕಾರಿಗಳು ಸಹಜವಾಗಿಯೇ ಆರೆಸ್ಸೆಸ್‌ಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ದೇಶವನ್ನು ನಿಜವಾದ ಅರ್ಥದಲ್ಲಿ ಆಳುತ್ತಿರುವುದು ಜನಪ್ರತಿನಿಧಿಗಳಲ್ಲ, ಅಧಿಕಾರಶಾಹಿ ಎನ್ನುವುದನ್ನು ಅರ್ಥ ಮಾಡಿಕೊಂಡು ಈ ನಿಟ್ಟಿನಲ್ಲಿ ಆರೆಸ್ಸೆಸ್ ಕಾರ್ಯಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಇಂದು ಯಾವ ಸರಕಾರ ಅಸ್ತಿತ್ವಕ್ಕೆ ಬಂದರೂ, ಈ ದೇಶವನ್ನು ಆರೆಸ್ಸೆಸ್ ಮನಸ್ಸುಗಳೇ ಆಳುವಂತಹ ಸನ್ನಿವೇಶವನ್ನು ಅದು ನಿರ್ಮಿಸಿದೆ.

 ವಾಸ್ತವ ತನಗೆ ಮನವರಿಕೆಯಾಗಿದೆ ಎನ್ನುವುದನ್ನು ರಾಹುಲ್ ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಅದನ್ನು ಎದುರಿಸುವುದು ರಾಹುಲ್ ಪಾಲಿಗೆ ಸುಲಭವಿಲ್ಲ. ಅವರ ಮುಂದೆ ಎರಡು ಆಯ್ಕೆಗಳಿವೆ. ಒಂದು ದೇಶ ತೊರೆದು ವಿದೇಶದಲ್ಲಿ ನೆಮ್ಮದಿಯ ಕುಟುಂಬ ಜೀವನವನ್ನು ನಡೆಸುವುದು ಅಥವಾ ಕಾಂಗ್ರೆಸ್‌ನ್ನು ಪುನರ್ ಸಂಘಟಿಸುವುದು. ಕನಿಷ್ಠ 25 ವರ್ಷ ಅಧಿಕಾರದ ಆಸೆ ತೊರೆದು, ಗಾಂಧಿ, ನೆಹರೂ, ಅಂಬೇಡ್ಕರ್ ಬಿಟ್ಟು ಹೋಗಿರುವ ವೌಲ್ಯಗಳನ್ನು ತಳಸ್ತರದಲ್ಲಿ ಹರಡುತ್ತಾ, ಅಧಿಕಾರದ ಮೋಹವಿಲ್ಲದ, ದೇಶದ ಕುರಿತ ಬದ್ಧತೆಯುಳ್ಳ ಜಾತ್ಯತೀತ ಕಾರ್ಯಕರ್ತರ ಪಡೆಯನ್ನು ಕಟ್ಟುವುದು. ಅಧಿಕಾರವಿಲ್ಲದೆ ಒಂದು ದಿನವೂ ನಿರಾಳವಾಗಿ ಉಸಿರಾಡಲು ಸಾಧ್ಯವಿಲ್ಲದ ಕಾಂಗ್ರೆಸ್‌ನ ಉಳಿದ ನಾಯಕರು ರಾಹುಲ್‌ಗಾಂಧಿಯ ಈ ಪ್ರಯತ್ನಕ್ಕೆ ಕೈ ಜೋಡಿಸುವುದು ದೂರದ ಮಾತು. ದೇಶದ ಬಗ್ಗೆ ನಿಜಕ್ಕೂ ರಾಹುಲ್ ಗಾಂಧಿ ಕಾಳಜಿಯುಳ್ಳವರಾದರೆ, ಕಾಂಗ್ರೆಸ್ ಎನ್ನುವ ಪುರಾತನ ಡೈನಾಸರ್ ಪಳೆಯುಳಿಕೆಗಳನ್ನು ಮರು ಜೋಡಿಸಿ ಜೀವ ಕೊಡಲು ಯತ್ನಿಸುವುದರ ಬದಲು, ಬಿಜೆಪಿಯೇತರ ಪಕ್ಷಗಳಲ್ಲಿ ಹಂಚಿಹೋಗಿರುವ ಜಾತ್ಯತೀತ ಮನಸ್ಸುಗಳ ಜೊತೆಗೆ ಕೈ ಜೋಡಿಸುವುದು ಮೇಲು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)