varthabharthiಸಂಪಾದಕೀಯ

ಪುತ್ತೂರಿನಲ್ಲೊಂದು ಬಿಹಾರ!

ವಾರ್ತಾ ಭಾರತಿ : 6 Jul, 2019

ಎಲ್ಲೋ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ‘ಬುದ್ಧಿವಂತರ ಜಿಲ್ಲೆ’ ಎಂದು ಕರೆಸಿಕೊಳ್ಳುತ್ತಿರುವ ದಕ್ಷಿಣ ಕನ್ನಡ ಸಾಕ್ಷಿಯಾಗುತ್ತಿದೆ. ‘ಅಳಿಯ ಕಟ್ಟಿ’ನ ಮೂಲಕ ಮಹಿಳೆಯ ಕೈಗೆ ಸಮಾಜದ ನೇತೃತ್ವವನ್ನು ವಹಿಸಿಕೊಟ್ಟ ತುಳುನಾಡು, ಇಂದು ವಿದ್ಯಾರ್ಥಿನಿಯೊಬ್ಬಳ ಸಾಮೂಹಿಕ ಅತ್ಯಾಚಾರದ ಕಾರಣಕ್ಕಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕರಾವಳಿಯ ತುಳುವ ಪರಂಪರೆಗೆ ಈ ಸುದ್ದಿ ಬಾರೀ ಕಳಂಕವನ್ನು ತಂದಿದೆ. ಸನಾತನ ಸಂಸ್ಕೃತಿಯ ಪೋಷಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಳಿಗಾಗಿ ಪುತ್ತೂರಿನ ವಿವೇಕಾನಂದ ಕಾಲೇಜು ಕರಾವಳಿಯ ಆಸುಪಾಸಿನಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಇಂತಹ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಈ ಅತ್ಯಾಚಾರ ಪ್ರಕರಣದಲ್ಲಿ ಗುರುತಿಸಿಕೊಂಡಿರುವುದು, ನಮ್ಮ ಸಮಾಜ ಸಾಗುತ್ತಿರುವ ಅಧಃಪತನದ ಆಳವನ್ನು ಹೇಳುತ್ತಿದೆ. ಈ ಕ್ರೌರ್ಯದಲ್ಲಿ ಭಾಗಿಯಾಗಿರುವ ಎಲ್ಲ ವಿದ್ಯಾರ್ಥಿಗಳು 20 ವರ್ಷಕ್ಕಿಂತ ಕೆಳಗಿನವರು ಎನ್ನುವುದು ಇನ್ನೊಂದು ಆಘಾತಕಾರಿ ಅಂಶವಾಗಿದೆ.

ಈ ಪ್ರಕರಣ ನಾಲ್ಕು ತಿಂಗಳ ಹಿಂದೆ ನಡೆದಿದ್ದರೂ, ಈವರೆಗೆ ಅದನ್ನು ಮುಚ್ಚಿಡಲಾಗಿತ್ತು. ಆರೋಪಿಗಳು ತಾವು ಚಿತ್ರೀಕರಿಸಿದ ಅತ್ಯಾಚಾರ ವಿಡೀಯೊವನ್ನು ತಾವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡದೇ ಇದ್ದಲ್ಲಿ ಘಟನೆ ಬೆಳಕಿಗೆ ಬರುತ್ತಲೇ ಇದ್ದಿರಲಿಲ್ಲ. ಸಂತ್ರಸ್ತೆ ದಲಿತ ಸಮುದಾಯಕ್ಕೆ ಸೇರಿದಾಕೆ ಎನ್ನುವುದೂ ಪ್ರಕರಣ ಗಂಭೀರ ಸ್ವರೂಪವನ್ನು ಪಡೆಯದೇ ಇರುವುದಕ್ಕೆ ಇನ್ನೊಂದು ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ದುರಂತವೆಂದರೆ, ಹೆಣ್ಣಿನ ಮೇಲೆ ನಡೆದ ದೌರ್ಜನ್ಯದ ಕಾರಣಕ್ಕಾಗಿ ಪುತ್ತೂರು ತಾಲೂಕು ಹಲವು ಬಾರಿ ಹೊತ್ತಿ ಉರಿದಿತ್ತು. ಹಿಂದಿನ ಘಟನೆಗಳಿಗೆ ಹೋಲಿಸಿದರೆ ಈ ಬಾರಿಯ ಪ್ರಕರಣ ಗಂಭೀರ ಸ್ವರೂಪದ್ದು. ಆದರೂ ಪುತ್ತೂರು ತಣ್ಣಗಿದೆ. ಸಾಧಾರಣವಾಗಿ ‘ಹಿಂದೂ ಹೆಣ್ಣು ಮಕ್ಕಳ ರಕ್ಷಕರು’ ಎಂದು ಗುರುತಿಸಿಕೊಂಡಿರುವ ಪುತ್ತೂರಿನ ಸಂಘಪರಿವಾರ ಕಾರ್ಯಕರ್ತರು ಇನ್ನೂ ಘಟನೆಯ ವಿರುದ್ಧ ಪ್ರತಿಭಟನೆಗೆ ಇಳಿದಿಲ್ಲ. ಈ ಹಿಂದಿನ ಘಟನೆಗಳಲ್ಲಿ ಸಂತ್ರಸ್ತರಾದ ಹೆಣ್ಣು ಮಕ್ಕಳು ಮೇಲ್ಜಾತಿಗೆ ಸೇರಿದವರು ಎನ್ನುವ ಕಾರಣಕ್ಕೋ ಅಥವಾ ಅಂದು ಆರೋಪಿ ಸ್ಥಾನದಲ್ಲಿದ್ದವರು ಇನ್ನೊಂದು ಧರ್ಮಕ್ಕೆ ಸೇರಿದವರು ಎನ್ನುವುದಕ್ಕೋ ಅಲ್ಲಿ ತೋರಿಸಿದ ಆಸಕ್ತಿ, ಈ ಪ್ರಕರಣದಲ್ಲಿ ಬಿಜೆಪಿಯಾಗಲಿ, ಸಂಘಪರಿವಾರವಾಗಲಿ ತೋರಿಸಿಲ್ಲ. ಇದೇ ಸಂದರ್ಭದಲ್ಲಿ, ಕೆಲವು ಮುಸ್ಲಿಮ್ ಸಂಘಟನೆಗಳು, ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಪ್ರತಿಭಟನೆಗಳಲ್ಲಿ ಅತಿ ಆಸಕ್ತಿಯನ್ನು ತೋರಿಸುತ್ತಿವೆೆ.

ಇಂದು ಪುತ್ತೂರು ಎಂದಲ್ಲ, ದೇಶಾದ್ಯಂತ ಯಾವುದೇ ಹೆಣ್ಣಿನ ಮೇಲೆ ದೌರ್ಜನ್ಯಗಳು ನಡೆದರೆ ಆರೋಪಿಗಳು ಮತ್ತು ಸಂತ್ರಸ್ತರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವುದರ ಆಧಾರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿವೆ. ಪ್ರತಿಭಟನೆ ನಡೆಯಬೇಕಾದರೆ ಸಂತ್ರಸ್ತೆ ಹಿಂದೂ ಆದರೆ ಸಾಕಾಗುವುದಿಲ್ಲ, ಆರೋಪಿ ಇನ್ನೊಂದು ಧರ್ಮಕ್ಕೆ ಸೇರಿದವನಾಗಿರಬೇಕು. ಮಹಿಳೆಯ ಮೇಲಿನ ದೌರ್ಜನ್ಯಗಳಲ್ಲಿ ಸಂಘಪರಿವಾರ ಪ್ರತಿಭಟಿಸಲು ಪಾಲಿಸಿಕೊಂಡು ಬಂದಿರುವ ಅಲಿಖಿತ ನಿಯಮವಿದು. ಬಹುಶಃ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾದವರಲ್ಲಿ ಒಬ್ಬ ಅನ್ಯ ಧರ್ಮೀಯನಿದ್ದಿದ್ದರೆ ಇಂದು ಪುತ್ತೂರಿಗೆ ಅಕ್ಷರಶಃ ಬೆಂಕಿ ಬೀಳುತ್ತಿತ್ತು. ವಿಪರ್ಯಾಸವೆಂದರೆ, ಈ ಸಾಮೂಹಿಕ ಅತ್ಯಾಚಾರ ಬಹಿರಂಗವಾದ ದಿನ, ದಕ್ಷಿಣ ಕನ್ನಡಾದ್ಯಂತ ಸಂಘ ಪರಿವಾರ ಕಾರ್ಯಕರ್ತರು ಗೋರಕ್ಷಣೆಯ ಹೆಸರಲ್ಲಿ ಸಾರ್ವಜನಿಕವಾಗಿ ಭಾಷಣದ ಬೆಂಕಿ ಹಚ್ಚುವುದರಲ್ಲಿ ನಿರತರಾಗಿದ್ದರು. ಹೆಣ್ಣು ಯಾವ ಧರ್ಮಕ್ಕೇ ಸೇರಿರಲಿ, ಆಕೆಯ ಮೇಲೆ ಎಸಗುವ ದೌರ್ಜನ್ಯ ಜಗತ್ತಿನ ಸಮಸ್ತ ಹೆಣ್ಣಿನ ಮೇಲೆ ಎಸಗುವ ದೌರ್ಜನ್ಯ ಎನ್ನುವ ಮನಃಸ್ಥ್ಝಿತಿಯನ್ನು ಬೆಳೆಸಿಕೊಳ್ಳುವವರೆಗೆ ಇಂತಹ ಕ್ರೌರ್ಯಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಆರೋಪಿ ಯಾವ ಧರ್ಮಕ್ಕೇ ಸೇರಿರಲಿ, ಆತನಿಗೆ ಗರಿಷ್ಠ ಶಿಕ್ಷೆಯನ್ನು ಬಯಸುವ ಸಮಾಜ ನಮ್ಮದಾಗಬೇಕು. ಆರೋಪಿ ತನ್ನ ಧರ್ಮಕ್ಕೇ ಸೇರಿದವನು ಎಂದಾಗ ವೌನ ತಾಳುವುದು ಪರೋಕ್ಷವಾಗಿ ಅಂತಹ ಕೃತ್ಯಗಳಿಗೆ ನೀಡುವ ಪರೋಕ್ಷ ಕುಮ್ಮಕ್ಕಾಗಿದೆ. ಫೆಬ್ರವರಿಯಲ್ಲಿ ನಡೆದ ಈ ಸಾಮೂಹಿಕ ಅತ್ಯಾಚಾರ ಈವರೆಗೆ ಗುಟ್ಟಾಗಿಯೇ ಉಳಿಯುವುದಕ್ಕೆ ಸಮಾಜದ ಇಂತಹ ಮನಃಸ್ಥಿತಿಯೂ ಮುಖ್ಯ ಕಾರಣವಾಗಿದೆ.

ಇಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ಬಗ್ಗೆ ಮಾತ್ರವಲ್ಲ, ಅತ್ಯಾಚಾರಗೈದ ವಿದ್ಯಾರ್ಥಿಗಳ ‘ದುರಂತ’ಗಳ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ. ವಿದ್ಯಾರ್ಥಿ ಕಾಲಘಟ್ಟವೆನ್ನುವುದು ವ್ಯಕ್ತಿತ್ವವನ್ನು ರೂಪಿಸುವ ಹಂತವಾಗಿದೆ. ಈ ಹಂತದಲ್ಲೇ ಸಾಮೂಹಿಕ ಅತ್ಯಾಚಾರದಂತಹ ಆರೋಪಗಳನ್ನು ಹೊತ್ತು ವಿದ್ಯಾರ್ಥಿಗಳ ಬದುಕು ಮುಗಿದು ಹೋಗುವುದು ಸಮಾಜದ ದುರಂತವೇ ಸರಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಇಂತಹ ಕೃತ್ಯ ಎಸಗುವುದಕ್ಕೆ ಪ್ರೇರೇಪಿಸುವ ಸಂಗತಿಗಳ ಕುರಿತಂತೆ ಪಾಲಕರು, ಸಮಾಜ ಯೋಚಿಸಬೇಕಾಗಿದೆ. ಕೃತ್ಯವೆಸಗಿದ ವಿದ್ಯಾರ್ಥಿಗಳಿಗೆ ಸಂಘ ಪರಿವಾರದ ಹಿನ್ನೆಲೆಯಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳು ಕಲಿಯುತ್ತಿರುವ ವಿದ್ಯಾಸಂಸ್ಥೆಯೂ ಸಂಸ್ಕೃತಿ, ಧರ್ಮ ಇತ್ಯಾದಿಗಳಿಗೆ ಆದ್ಯತೆಗಳನ್ನು ನೀಡುವ ಮೂಲಕ ಹೆಸರುವಾಸಿಯಾಗಿದೆ. ಇಷ್ಟಾದರೂ ಈ ವಿದ್ಯಾರ್ಥಿಗಳನ್ನು ಇಂತಹದೊಂದು ಕೃತ್ಯಕ್ಕೆ ಪ್ರಚೋದಿಸಿದ ‘ವಾತಾವರಣ’ ಯಾವುದು? ಮುಖ್ಯವಾಗಿ ಸಂಘಪರಿವಾರ ಹಿನ್ನೆಲೆಯಿರುವವರೇ ಸಾಮೂಹಿಕ ಅತ್ಯಾಚಾರ, ಗುಂಪು ಥಳಿತ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಯಾಕೆ ಹೆಚ್ಚು ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ? ಎಲ್ಲೋ ಉತ್ತರ ಪ್ರದೇಶ, ಬಿಹಾರದಲ್ಲಿ ನಡೆಯುತ್ತಿದ್ದ ಘಟನೆಗಳು ಕರಾವಳಿಯಲ್ಲೂ ಕಾಣಿಸಿಕೊಳ್ಳುವುದಕ್ಕೆ ಸಂಘ ಪರಿವಾರ ಇಲ್ಲೂ ಆಳವಾಗಿ ಬೇರು ಬಿಡುತ್ತಿರುವ ಕಾರಣದಿಂದಲೇ ಇರಬಹುದೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಜೊತೆಗೆ ಗಾಂಜಾದಂತಹ ಮಾದಕ ವಸ್ತುಗಳು ಕಾಲೇಜು ಆವರಣವನ್ನು ಪ್ರವೇಶಿಸುತ್ತಿರುವುದನ್ನೂ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಗಾಂಜಾದಂತಹ ಮಾದಕ ದ್ರವ್ಯಗಳ ಜಾಲ ವ್ಯಾಪಕವಾಗಿ ಹರಡುತ್ತಿದೆ. ಪೊಲೀಸ್ ಇಲಾಖೆ ಇದರ ಮುಂದೆ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ. ಕರಾವಳಿಯಲ್ಲಿ ಹೆಚ್ಚುತ್ತಿರುವ ಅಪರಾಧಗಳ ಹಿಂದೆ ಪೊಲೀಸರ ಈ ಅಸಹಾಯಕತೆಯೂ ಕೆಲಸ ಮಾಡುತ್ತಿದೆ.

ಒಟ್ಟಿನಲ್ಲಿ ಪುತ್ತೂರಿನಲ್ಲಿ ನಡೆದಂತಹ ಕೃತ್ಯಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ‘ಬುದ್ಧಿವಂತ ಜಿಲ್ಲೆ’ಯ ನಾಗರಿಕರ ಕರ್ತವ್ಯವಾಗಿದೆ. ಇದು ಸಾಮೂಹಿಕ ಪ್ರಯತ್ನದಿಂದಷ್ಟೇ ಸಾಧ್ಯ. ಈ ನಿಟ್ಟಿನಲ್ಲಿ ಕಾಲೇಜುಗಳು, ಧಾರ್ಮಿಕ ಸಂಸ್ಥೆಗಳು, ಪೊಲೀಸ್ ಇಲಾಖೆ, ಪಾಲಕರು ಜೊತೆಗೂಡಿ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದಷ್ಟೇ ಅಲ್ಲ, ಇಂತಹ ಪ್ರಕರಣಗಳು ಇನ್ನಷ್ಟು ತೆರೆಮರೆಯಲ್ಲಿ ನಡೆದಿರುವ ಸಾಧ್ಯತೆಗಳ ಕುರಿತಂತೆ ತನಿಖೆ ನಡೆಯಬೇಕು. ಅವುಗಳನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಆರೋಪಿ ಮತ್ತು ಸಂತ್ರಸ್ತರ ಜಾತಿ, ಧರ್ಮಗಳು ನಮಗೆ ಮುಖ್ಯವಾಗದೆ ಎಸಗಿದ ಕ್ರೌರ್ಯವನ್ನಷ್ಟೇ ಗುರುತಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಿ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಬೀದಿಗಿಳಿದಾಗ ಮಾತ್ರ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಸಂಭವಿಸದಂತೆ ತಡೆಯಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)