varthabharthi

ಸುಗ್ಗಿ

ಬಾಲ್ಯದ ಗಾಯಗಳು

ಆತ್ಮವಿಶ್ವಾಸಕ್ಕೆ ಬಿದ್ದ ಪೆಟ್ಟುಗಳು

ವಾರ್ತಾ ಭಾರತಿ : 6 Jul, 2019
ನಿರೂಪಣೆ: ಸೌಮ್ಯಶ್ರೀ ಗೋಣೀಬೀಡು

ಭಾಗ-3

ನಾನು ಪುಟ್ಟವಳಿದ್ದಾಗ, ನನ್ನ ಹುಟ್ಟಿನ ಬಗ್ಗೆ ಕೇಳಿದರೆ, ನನ್ನ ಅಪ್ಪ, ಅಜ್ಜಿ, ನಾವು ನಿನ್ನನ್ನು ದೊಂಬರ ಬಳಿ ಮೂರು ಮರ ತೌಡುಕೊಟ್ಟು ಕೊಂಡುಕೊಂಡೆವು ಎಂದು ಹೇಳುತ್ತಿದ್ದರು. ಅದು ತಮಾಷೆಗಾಗಿ ಹೇಳಿದ್ದರೂ, ನನಗೆ ಕೆಲವೊಮ್ಮೆ ಅದು ನಿಜವಿರಬಹುದಾ ಎಂದು ಅನುಮಾನ ಬರುತ್ತಿತ್ತು. ನನ್ನ ನಿಜವಾದ ಅಪ್ಪ, ಅಮ್ಮ, ಬೇರೆ ಇರಬಹುದಾ ಎಂದು ಕುತೂಹಲವಾಗುತ್ತಿತ್ತು. ನಾನು ಕೊಂಡುಕೊಂಡ ಮಗು ಎಂದು ನನ್ನನ್ನು ಕಡಿಮೆ ಪ್ರೀತಿಸುತ್ತಾರೇನೋ ಅನಿಸುತ್ತಿತ್ತು. ನಾನು ಸ್ಕೂಲಿಗೆ ಹೋಗಿದ್ದಾಗ, ಅವರ ನಿಜವಾದ ಮಕ್ಕಳು ಮನೆಗೆ ಬಂದು ಹೋಗುತ್ತಾರೆ ಎಂದು ಅನುಮಾನ. ನನ್ನನ್ನು ಪ್ರೀತಿಸುವವರಿಂದ ಬೇಕೆಂದೇ ದೂರ ಇಟ್ಟಿದ್ದಾರೆ ಅನ್ನಿಸುತ್ತಿತ್ತು. ನನ್ನ ಸೃಜನಾತ್ಮಕ ಮೆದುಳು, ಈ ಕಥೆಗಳನ್ನೆಲ್ಲಾ ಹೆಣೆದು, ನನ್ನ ನೆಮ್ಮದಿಯನ್ನು ಹಾಳುಮಾಡುತ್ತಿತ್ತು. ಯಾರಿಗಾದರೂ ಹೇಳಿದರೆ ನಗುತ್ತಾರೆ ಎಂದು ಸುಮ್ಮನಿರುತ್ತಿದ್ದೆ. ಆದರೆ, ಅನುಭವಿಸಿದ ಭಾವನೆಗಳೆಲ್ಲಾ ನಿಜವೇ ತಾನೇ? 

ಅಮ್ಮ ನನ್ನ ಹುಟ್ಟಿನ ಕಥೆಯನ್ನು ಸಾವಿರಬಾರಿ ಹೇಳಿದ್ದರೂ, ಅವಳ ಹೊಟ್ಟೆಯ ಮೇಲೆ, ಸಿಜಿೀರಿಯನ್ ಆಪರೇಷನ್ನಿನ ಕಲೆ ನೋಡಿದ್ದರೂ, ಅಪ್ಪ, ಅಜ್ಜಿಯ ಮಾತು ಮನದಲ್ಲಿ ಉಳಿದಿತ್ತು

ಅಮೆರಿಕದ ಫ್ರಾಕು:

ನನ್ನ ಸೋದರಮಾವ ಅಮೆರಿಕೆಯಲ್ಲಿದ್ದಾರೆ. ಅವರು ಅಲ್ಲಿಂದ ಇಲ್ಲಿಗೆ ಬಂದಾಗ ಎಲ್ಲರಿಗೂ ಏನಾದರೂ ತರುತ್ತಿದ್ದರು. ಕಡ್ಡಾಯವಾಗಿ ಮಕ್ಕಳಿಗೆ ಏನಾದರೂ ತರುತ್ತಿದ್ದರು. ಹಾಗೆ ನನಗೆ ಒಮ್ಮೆ ಒಂದು ಫ್ರಾಕು ತಂದರು. ತಿಳಿ ಹಳದಿ ಬಣ್ಣ. ಉಬ್ಬಿದ ತೋಳುಗಳು. ಎದೆಯ ಮೇಲೆ ಮಡಿಕೆ ಮಡಿಕೆ ಹಾಕಿದ ಫ್ರಿಲ್, ಸೊಂಟದಿಂದ ನೆರಿಗೆ ನೆರಿಗೆಯಾಗಿ ಉದ್ದಕ್ಕೆ. ಆ ನೆರಿಗೆಗಳು ಸುಕ್ಕುಕಟ್ಟುತ್ತಿರಲಿಲ್ಲ. ನಾವು ನೋಡಿದ್ದ ನೆರಿಗೆಯಂತೆ ಮಡಿಸುತ್ತಿರಲಿಲ್ಲ. ಬಹಳ ಚೆನ್ನಾಗಿತ್ತು. ಮಾವ ಅದನ್ನು ನನಗೆ ಕೊಟ್ಟಾಗ ನನಗೆ ಅದು ದೊಡ್ದದು. ಊರಿಗೆ ಬಂದು ಮನೆಯಲ್ಲಿ ತೋರಿಸಿದ ಮೇಲೆ, ಅಜ್ಜಿ ಅದನ್ನು ಎತ್ತಿ ಬೀರುವಿನಲ್ಲಿ ಇಟ್ಟಿದ್ದರು. ನನಗೆ ಅದನ್ನು ಹಾಕಿಕೊಳ್ಳಲು ಆಸೆ, ಆದರೆ ಈಗಲೇ ಬೇಡ ಎಂದು ಅ ಫ್ರಾಕು ಬೀರುವಿನಲ್ಲಿ ಕೂತಿತ್ತು.

ನನ್ನ ಎರಡನೇ ಸೋದರತ್ತೆಯ ಮಗಳು, ನನಗಿಂತ ಎರಡು ವರ್ಷ ದೊಡ್ದವಳು. ಅವಳಿಗೆ ಅವಳ ಅತ್ತೆಯ ಮಕ್ಕಳು ಉಪಯೋಗಿಸಿದ ಬಟ್ಟೆಗಳನ್ನು ಕೊಡುತ್ತಿದ್ದರು. ಅವಳ ಅಪ್ಪ ಅವಳಿಗೆ ಒಂದಷ್ಟು ಹೊಸಬಟ್ಟೆಗಳನ್ನು ತಂದುಕೊಡುತ್ತಿದ್ದರು. ಆವಳಿಂದ ಆ ಬಟ್ಟೆಗಳಲ್ಲಿ ಕೆಲವು ನನಗೆ ರವಾನೆಯಾಗುತ್ತಿದ್ದವು. ನನ್ನ ನಂತರ, ನಮ್ಮ ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಆಳುಗಳ ಮಕ್ಕಳಿಗೆ ಹೋಗುತ್ತಿದ್ದವು. ಹೀಗೆ ಉಪಯೋಗಿಸಿದ ಬಟ್ಟೆ ಕೊಡುವುದು ಹೊಸತೇನೂ ಆಗಿರಲಿಲ್ಲ. ಬಹಳ ಸರ್ವೇ ಸಾಮಾನ್ಯವಾಗಿ ನಡೆಯುತ್ತಿದ್ದ ವಿದ್ಯಮಾನ. ನನ್ನ ಚಿಕ್ಕಪ್ಪನ ಮಗಳು, ನನ್ನದೇ ವಯಸ್ಸಿನವಳು, ಆ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಒಬ್ಬರು ಉಪಯೋಗಿಸಿದ ಬಟ್ಟೆ ನನ್ನ ಮಗಳಿಗೆ ಬೇಡ ಎಂದು ನನ್ನ ಚಿಕ್ಕಮ್ಮ ಹೇಳುತ್ತಿದ್ದರು. ಹಾಗೆ ಬಟ್ಟೆ ಇಸಿದುಕೊಳ್ಳುವುದು ಹೀನಾಯವೇನೋ ಅನ್ನಿಸುತ್ತಿತ್ತು.

ಈ ಅತ್ತೆಯ ಮಗಳು, ಬೆಳ್ಳಗೆ ಚೆನ್ನಾಗಿದ್ದಳು. ಅವಳು ಬೇಸಿಗೆ ರಜಕ್ಕೆ ನಮ್ಮ ಊರಿಗೆ ಬಂದಾಗ, ನನಗೆ ಹಾಕಲು ಕೊಟ್ಟಿರದ ನನ್ನ ಫ್ರಾಕನ್ನು ಅವಳಿಗೆ ಹಾಕಿ ನೋಡಿದರು. ನನ್ನ ಮನಸ್ಸಿಗೆ ಬಲು ಬೇಜಾರಾಯಿತು. ನನ್ನ ಬೇಜಾರನ್ನು ತಿಳಿಸಿದರೆ, ಸ್ವಾರ್ಥಿ, ಹೊಟ್ಟೆಕಿಚ್ಚು ಎಂಬ ಹಣೆಪಟ್ಟಿ. ಹಾಗೆ ಮಾಡಬಾರದಮ್ಮಾ, ಅಜ್ಜಿಯ ಪಾಠ. ನನಗೆ ಹಾಕಲು ಕೊಡದ, ನನ್ನ ಬಟ್ಟೆ, ಅವಳಿಗೆ, ಆದರೆ, ನನಗೆ ಅವಳಿಂದ ಸಿಗುವುದು, ಅವಳು ಹಾಕಿ ಬಳಸಿದ ಬಟ್ಟೆ. ಕೆಲದಿನಗಳಾದ ಮೇಲೆ, ನನ್ನ ಫ್ರಾಕ್ ಕಡೆಗೂ ನನಗೆ ಹಾಕಲು ದೊರೆಯಿತು.

ನಮ್ಮ ಪಕ್ಕದ ಮನೆಯವರು ನಮ್ಮ ದಾಯಾದಿಗಳು. ರಾಗ ದ್ವೇಷ ತುಂಬಿದ ಸಂಬಂಧ. ಆಗ ರಾಗಕ್ಕಿಂತ ದ್ವೇಷವೇ ಜಾಸ್ತಿ. ನಾನು ಫ್ರಾಕು ಹಾಕಿದ ಒಂದು ದಿನ, ನನ್ನ ಅಜ್ಜಿ, ತಾತ ನನ್ನನ್ನು ನಮ್ಮ ಪಕ್ಕದ ಮನೆಗೆ ಕಳುಹಿಸಿದರು. ಈ ಹೊಸಬಟ್ಟೆಯಲ್ಲಿ ನೀನೆಷ್ಟು ಚೆನ್ನಾಗಿ ಕಾಣಿಸುತ್ತೀಯ ಎಂದು ಅವರನ್ನು ಕೇಳು. ಮಕ್ಕಳನ್ನು ಹೀಗೆ ಪ್ರದರ್ಶನ ಅಥವಾ ಅಹಂಕಾರದ ವಸ್ತುಗಳನ್ನಾಗಿ ಮಾಡಬಾರದು ಎಂಬ ತಿಳುವಳಿಕೆ ನನ್ನ ಅಜ್ಜಿ, ತಾತರಿಗಿರಲಿಲ್ಲವೇ?

ಅಂತೂ, ಅವರ ಮನೆಗೆ ಹಿಂಜರಿಕೆಯಿಂದಲೇ ಹೋದೆ. ಅವರ ಮನೆಯ ತಾತ, ‘‘ಚೆನ್ನಾಗಿರುವುದೆಂದರೆ ನಿನಗೇನು ಗೊತ್ತು, ಆಫೀಸು ರೂಮಿನಲ್ಲಿ ಹೋಗಿ, ನನ್ನ ಮೊಮ್ಮಗಳ ಫೋಟೊ ನೋಡು. ಅದು ಸೌಂದರ್ಯ’’ ಎಂದರು. ಅವರ ಮಗಳ ಮಗಳ ಫೋಟೊ ಅಲ್ಲಿತ್ತು. ಅವಳು ಬೆಳ್ಳಗೆ, ಲಕ್ಷಣವಾಗಿ ಇದ್ದಳು. ಅವಳ ಗಲ್ಲದಲ್ಲಿ ದೃಷ್ಟಿ ಬೊಟ್ಟಿನಂತೆ ಒಂದು ಮಚ್ಚೆ ಇತ್ತು. ಮಕ್ಕಳು ಹೇಗೇ ಇದ್ದರೂ ಲಕ್ಷಣ, ಅವರನ್ನು ಅವಮಾನಿಸಬಾರದು ಎಂಬ ತಿಳುವಳಿಕೆ ನನ್ನ ಪಕ್ಕದ ಮನೆಯವರಿಗೆ ಇರಲಿಲ್ಲವೇ?

ನಾನು ಚೆನ್ನಾಗಿಲ್ಲ ಅನ್ನುವ ಅಭಿಪ್ರಾಯ ಬೆಳೆಯಲಾರಂಭಿಸಿತು. ಸೌಂದರ್ಯವೆಂದರೆ, ಬೆಳ್ಳಗಿರಬೇಕು. ನನ್ನ ಅಪ್ಪನನ್ನು ಕೇಳುತ್ತಿದ್ದೆ, ‘ನನ್ನ ಅತ್ತೆ ಮಗಳು, ಚಿಕ್ಕಪ್ಪನ ಮಗಳ್ಯಾಕೆ ಬೆಳ್ಳಗಿದ್ದಾರೆ, ನಾನ್ಯಾಕಿಲ್ಲ’ ಎಂದು. ಅಪ್ಪ, ಅವರೆಲ್ಲಾ ಮೈಗೆ ಸುಣ್ಣ ಬಳಿದಿದ್ದಾರೆ ಎನ್ನುತ್ತಿದ್ದರು. ಮನೆಯಲ್ಲಿ, ಸುಣ್ಣ ಕುದಿಸುತ್ತಿದ್ದರು, ಕಾಫಿಗಿಡಗಳಿಗೆ ಹಚ್ಚಲು. ಅದನ್ನು ಅಪ್ಪ, ನನಗೂ ಯಾಕೆ ಹಚ್ಚಬಾರದು ಎಂದು ಯೋಚಿಸುತ್ತಿದ್ದೆ. ಸದ್ಯ, ಎಂದೂ ನಾನೇ ನನ್ನ ಮೈಗೆ ಸುಣ್ಣ ಬಳಿಯಲು ಹೋಗಲಿಲ್ಲ.

ಮುಂದುವರಿಯುವುದು...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)