varthabharthi

ಸಿನಿಮಾ

ದೇವಕಿ: ತಾಯಿ ದೇವಕಿ; ವಾತ್ಸಲ್ಯದ ನಾಯಕಿ

ವಾರ್ತಾ ಭಾರತಿ : 7 Jul, 2019
ಶಶಿಕರ ಪಾತೂರು

ಈಗಾಗಲೇ ‘ಮಮ್ಮಿ’ ಎನ್ನುವ ಚಿತ್ರದ ಮೂಲಕ ತಾಯಿಯಾಗಿ ನಟಿಸಿ ಗಮನ ಸೆಳೆದ ಪ್ರಿಯಾಂಕ ಮತ್ತು ಆಕೆಯನ್ನು ಹಾಗೆ ತೋರಿಸಿದ ನಿರ್ದೇಶಕ ಇಬ್ಬರೂ ಮರಳಿ ಬಂದಿದ್ದಾರೆ. ಈ ಬಾರಿ ತಾಯಿಯ ವಾತ್ಸಲ್ಯವನ್ನು ತೋರಿಸಲು ಚಿತ್ರಕ್ಕೆ ಆಯ್ದುಕೊಂಡಿರುವ ಸಬ್ಜೆಕ್ಟ್ ಮತ್ತು ಕತೆ ನಡೆಯುವ ಜಾಗ ಎರಡು ಕೂಡ ಚಿತ್ರಕ್ಕೆ ಹೊಸತನ ತಂದುಕೊಟ್ಟಿದೆ.

ದೇವಕಿ ಕೋಲ್ಕತಾದಲ್ಲಿ ವಾಸವಿರುವ ಕನ್ನಡದ ಮಹಿಳೆ. ಆರಾಧ್ಯ ಎಂಬ ಹೆಣ್ಣು ಮಗುವಿನ ತಾಯಿಯಾದ ಬಳಿಕ ಮತ್ತೆ ಗರ್ಭಿಣಿಯಾದ ಪತ್ನಿಯನ್ನು ಪತಿ ವಿರೋಧಿಸುತ್ತಾನೆ! ಮಗು ಬೇಡ ಎಂಬ ಹೊಡೆದಾಟದಲ್ಲಿ ಅಬಾರ್ಷನ್‌ಗೆ ಕಾರಣವಾಗುವ ಪತಿಯಿಂದ ದೂರವಾಗುತ್ತಾಳೆ ದೇವಕಿ. ಹೀಗೆ ಹತ್ತು ವರ್ಷದ ಮಗಳು ಆರಾಧ್ಯಳ ಜತೆಗೆ ಜೀವನ ನಡೆಸುವ ದೇವಕಿಯ ಸನಿಹದಿಂದ ಆರಾಧ್ಯ ನಾಪತ್ತೆಯಾದರೆ ಆಕೆಯ ಪತ್ತೆಗಾಗಿ ದೇವಕಿ ನಡೆಸುವ ಅಲೆದಾಟ ಹೇಗಿರಬಹುದು? ಮತ್ತು ಆ ಅಲೆದಾಟ ಆಕೆಯ ಬದುಕಿನ ಹೊಸಮುಖಗಳನ್ನು ಪ್ರೇಕ್ಷಕರಿಗೆ ಹೇಗೆ ಪರಿಚಯಿಸುತ್ತಾ ಹೋಗುತ್ತದೆ ಎನ್ನುವುದನ್ನು ತೋರಿಸುವ ಚಿತ್ರವೇ ದೇವಕಿ.
ನಾಯಕಿಯಾಗಿ ಪ್ರಿಯಾಂಕ ಅವರಿಗೆ ಗ್ಲಾಮರ್ ಪ್ರದರ್ಶನದ ಅಗತ್ಯ ಬೀಳುವುದಿಲ್ಲ. ಯಾಕೆಂದರೆ ಆಕೆಯ ಬದುಕಿನ ಗ್ರಾಮರೇ ಕೆಟ್ಟಿರುತ್ತದೆ. ಅದನ್ನು ಸರಿಪಡಿಸುವ ಓಡಾಟಕ್ಕೆ ಸಿಲುಕಿರುವ ತಾಯಿಯಾಗಿ ಆಕೆ ಒಮ್ಮೆ ಮಹಾ ಚಾಣಾಕ್ಷೆಯಂತೆ ಕಂಡರೆ ಮತ್ತೊಮ್ಮೆ ಮಹಾ ದಡ್ಡಿಯಾಗಿ ಗೋಚರಿಸುತ್ತಾರೆ. ಅದಕ್ಕೆ ಅವರು ನಿರ್ವಹಿಸಿದ ಪಾತ್ರದ ಚೌಕಟ್ಟು ಕಾರಣ ಎಂದು ಹೇಳಬಹುದು. ಆದರೆ ಮಗುವನ್ನು ಅಪಹರಿಸಿದವರನ್ನು ಹಿಡಿಯುವಲ್ಲಿ ಪದೇ ಪದೇ ಕೂದಲೆಳೆ ಅಂತರದಿಂದ ತಪ್ಪಿಸಿಕೊಳ್ಳುವ ಪೊಲೀಸ್ ಪಾತ್ರ ಮಾತ್ರ ಕೋಲ್ಕತಾ ಪೊಲೀಸರ ಸಾಮರ್ಥ್ಯವನ್ನು ಸಂದೇಹಿಸುವಂತೆ ಮಾಡಿರುವುದು ಸುಳ್ಳಲ್ಲ! ಅಂಥದೊಂದು ಪೊಲೀಸ್ ಪಾತ್ರವಾದರೂ ಕೂಡ ಪ್ರಿಯಾಂಕರಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತಾ ಹೋಗುವ ಪಾತ್ರವನ್ನು ಎಂದಿನಂತೆ ಸಹಜ ಶೈಲಿಯಿಂದ ನಿಭಾಯಿಸಿದ್ದಾರೆ ಕಿಶೋರ್. ಇನ್ನು ಆರಾಧ್ಯ ಎನ್ನುವ ಮಗಳ ಪಾತ್ರವನ್ನು ಖುದ್ದು ಪ್ರಿಯಾಂಕ ಉಪೇಂದ್ರರ ಮಗಳು ಐಶ್ವರ್ಯಾ ನಿರ್ವಹಿಸಿರುವುದು ವಿಶೇಷ. ಆಕೆಗೆ ಇದು ಪ್ರಥಮ ಚಿತ್ರವಾದರೂ ವಯೋಸಹಜ ಮುಗ್ಧತೆಗಳನ್ನು ಉಳಿಸಿಕೊಂಡೇ ನಟಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ತಾಯಿಯ ಪರವಾಗಿ ಆಕೆ ಆಡುವ ಮಾತುಗಳು ಚಿತ್ರದ ಹೈಲೈಟ್ ಆಗಿವೆ.
ಸಿನೆಮಾದ ಟ್ರೇಲರ್ ಗಮನಿಸಿದಾಗ ವಿದ್ಯಾಬಾಲನ್ ನಟನೆಯ ಕಹಾನಿ ಚಿತ್ರದ ಹೋಲಿಕೆ ಕಂಡುಬಂದಿತ್ತು. ಆದರೆ ಕೋಲ್ಕತಾ ಹಿನ್ನೆಲೆ ಎನ್ನುವುದನ್ನು ಬಿಟ್ಟರೆ ಆ ಚಿತ್ರಕ್ಕೂ ಇದಕ್ಕೂ ಯಾವ ಸಂಬಂಧಗಳಿಲ್ಲ ಎನ್ನುವುದು ಕತೆ ಶುರುವಾಗುತ್ತಿದ್ದಂತೆ ಅರಿವಾಗುತ್ತದೆ. ಆದರೆ ಇದೇ ಕೋಲ್ಕತಾ ಹಿನ್ನೆಲೆಯಲ್ಲಿ ಮಗಳನ್ನು ಕಳೆದುಕೊಂಡ ತಂದೆಯ ಹುಡುಕಾಟದ ಕತೆಯನ್ನು ಹೇಳಿರುವ ಚಿತ್ರ ಕಮಲಹಾಸನ್ ರ ‘ಮಹಾನದಿ’ ಚಿತ್ರ ನೆನಪಾಗುವುದು ಸಹಜ. ಮಕ್ಕಳ ಕಳ್ಳ ಸಾಗಾಣೆಯ ವಿಚಾರಕ್ಕಾಗಿ ಕೋಲ್ಕತಾ ತೋರಿಸುವುದು ಚಿತ್ರದ ಅಗತ್ಯವಾಗಿರಬಹುದಾದರೂ ಚಿತ್ರವನ್ನು ಬಂಗಾಳಿಯಲ್ಲಿ ಕೂಡ ಯಶಸ್ವಿ ಪ್ರದರ್ಶನ ಕಾಣಿಸುವ ಉದ್ದೇಶ ಚಿತ್ರತಂಡದಲ್ಲಿ ಇರುವಂತೆ ಕಂಡಿದೆ. ಅದಕ್ಕೆ ಅಲ್ಲಿಯೂ ತಾರೆಯಾಗಿ ಗುರುತಿಸಿಕೊಂಡಂತಹ ಪ್ರಿಯಾಂಕ ಅವರ ಆಯ್ಕೆ ಮಾತ್ರವಲ್ಲ, ಆರಾಧ್ಯ, ಕಿಶೋರ್‌ರನ್ನು ಹೊರತು ಪಡಿಸಿದರೆ ಮತ್ತೊಂದು ಕನ್ನಡದ ಮುಖವನ್ನು ಬಳಸದಿರುವುದನ್ನು ಕೂಡ ಕಾರಣ ನೀಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕಿಶೋರ್ ನಿರ್ವಹಿಸಿರುವ ತನಿಖಾಧಿಕಾರಿಯ ಪಾತ್ರ ತಾನು ಕನ್ನಡಿಗ ಎಂದು ಪರಿಚಯಿಸಿಕೊಂಡರೂ ಅವರೊಂದಿಗೆ ದೇವಕಿ ಹಿಂದಿ, ಬಂಗಾಳಿಗಳಲ್ಲೇ ಹೆಚ್ಚು ಮಾತುಗಳನ್ನಾಡುವುದು ವಿಪರ್ಯಾಸ ಎನಿಸುತ್ತದೆ. ಅದೇ ರೀತಿ ಕನ್ನಡದಲ್ಲಿ ಉತ್ತರಿಸುವ ಕಿಶೋರ್ ಪಾತ್ರದ ತುಟಿಚಲನೆಗಳನ್ನು ಕಾಣದಂತೆ ಬುದ್ಧಿವಂತಿಕೆಯಿಂದ ಚಿತ್ರಿಸಿರುವುದು ಇದನ್ನೊಂದು ಬಂಗಾಳಿ ಚಿತ್ರವಾಗಿ ಸ್ಥಾಪಿಸುವ ಪ್ರಯತ್ನ ನಡೆದಿರುವುದನ್ನು ಸೂಚಿಸುತ್ತದೆ. ಚಿತ್ರದ ಅಂತ್ಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಧ್ವನಿಯ ಮೂಲಕ ಕತೆಗೊಂದು ವ್ಯಾಖ್ಯಾನ ನೀಡುತ್ತಾರೆ. ಆದರೆ ಅದಕ್ಕೆ ಮೊದಲೇ ಆರಾಧ್ಯ ತಾಯಿಯ ಬಗ್ಗೆ ಹೇಳುವ ಸಂಭಾಷಣೆ ಒಂದು ತಾರ್ಕಿಕ, ಮೌಲ್ಯಯುತ ಅಂತ್ಯವನ್ನು ಚಿತ್ರಕ್ಕೆ ನೀಡುವಲ್ಲಿ ಯಶಸ್ವಿಯಾಗಿರುತ್ತದೆ. ನೊಬಿನ್ ಪೌಲ್ ಸಂಗೀತ, ವೇಣು ಛಾಯಾಗ್ರಹಣ ಚಿತ್ರದ ಪಾಸಿಟಿವ್ ಅಂಶಗಳಾಗಿವೆ.
ಚಿತ್ರಕ್ಕೆ ಆಯ್ದುಕೊಂಡಿರುವ ವಸ್ತು, ಹಿನ್ನೆಲೆ ಮತ್ತು ನಿರೂಪಣೆಯ ಕಾರಣದಿಂದ ವಿಭಿನ್ನವಾಗಿ ನಿಲ್ಲುವ ದೇವಕಿ ಚಿತ್ರವನ್ನು ವೀಕ್ಷಿಸುವುದು ಸಂಬಂಧಗಳ ನಡುವಿನ ಕಾಳಜಿಯನ್ನು ಹೆಚ್ಚಿಸಿಕೊಳ್ಳಲು ಪೂರಕವಾದೀತು.

ತಾರಾಗಣ: ಪ್ರಿಯಾಂಕ ಉಪೇಂದ್ರ, ಕಿಶೋರ್
ನಿರ್ದೇಶನ: ಲೋಹಿತ್ ಎಚ್
ನಿರ್ಮಾಣ: ರವೀಶ್, ಅಕ್ಷಯ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)