varthabharthi

ಕ್ರೀಡೆ

ವಿಶ್ವಕಪ್ ಸೆಮಿಫೈನಲ್: ಅಗ್ರಸ್ಥಾನಿ ಭಾರತಕ್ಕೆ ನ್ಯೂಝಿಲೆಂಡ್ ಎದುರಾಳಿ

ವಾರ್ತಾ ಭಾರತಿ : 7 Jul, 2019

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವೀರೋಚಿತ ಸೋಲು ಕಾಣುವುದರೊಂದಿಗೆ ವಿಶ್ವಕಪ್ ರೌಂಡ್‌ರಾಬಿನ್ ಲೀಗ್ ಹಂತದಲ್ಲಿ ಎರಡನೇ ಸ್ಥಾನಕ್ಕೆ ಜಾರಿದೆ. 9 ಪಂದ್ಯಗಳಿಂದ 15 ಅಂಕ ಸಂಪಾದಿಸಿರುವ ಭಾರತ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದು, ಸೆಮಿಫೈನಲ್‌ನಲ್ಲಿ ನ್ಯೂಝಿಲೆಂಡ್ ಸವಾಲನ್ನು ಎದುರಿಸಲಿದೆ. ಅತಿಥೇಯ ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಎದುರಾಳಿ.

ಸೆಮಿಫೈನಲ್ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಮಂಗಳವಾರ (ಜುಲೈ 9) ನಡೆಯಲಿದೆ.

ಎರಡನೇ ಸೆಮಿಫೈನಲ್ ಪಂದ್ಯ ಬರ್ಮಿಂಗ್‌ಬ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ನ್ಯೂಝಿಲೆಂಡ್ ಎದುರಿನ ಪಂದ್ಯ ಮಳೆಯಿಂದ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಪ್ರಸಕ್ತ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ತಂಡದ ವಿರುದ್ಧ ಭಾರತ ಸೆಣೆಸಲಿದೆ.

ಭಾರತ ಏಳು ಗೆಲುವು, ಒಂದು ಸೋಲು ಹಾಗೂ ಒಂದು ಪಂದ್ಯ ರದ್ದಾದ ಹಿನ್ನೆಲೆಯಲ್ಲಿ 15 ಅಂಕ ಸಂಪಾದಿಸಿದ್ದರೆ, ದ್ವಿತೀಯ ಸ್ಥಾನಿ ಆಸ್ಟ್ರೇಲಿಯಾ (14) ಏಳು ಗೆಲುವು ದಾಖಲಿಸಿ ಎರಡು ಪಂದ್ಯ ಸೋತಿದೆ. 6 ಗೆಲುವು 3 ಸೋಲುಗಳೊಂದಿಗೆ ಅತಿಥೇಯ ಇಂಗ್ಲೆಂಡ್ ತೃತೀಯ ಸ್ಥಾನಿಯಾಗಿದ್ದು, 5 ಗೆಲುವು ದಾಖಲಿಸಿದ ನ್ಯೂಝಿಲೆಂಡ್ ಉತ್ತಮ ರನ್‌ರೇಟ್ ಆಧಾರದಲ್ಲಿ ಅಷ್ಟೇ ಅಂಕ ಗಳಿಸಿದ ಪಾಕಿಸ್ತಾನವನ್ನು ಮೀರಿಸಿ ಸೆಮಿಫೈನಲ್ ಟಿಕೆಟ್ ಪಡೆದಿದೆ. ನ್ಯೂಝಿಲೆಂಡ್ 3 ಪಂದ್ಯ ಸೋತಿದ್ದು, 1 ಪಂದ್ಯ ಮಳೆಗೆ ಆಹುತಿಯಾಗಿದೆ.

2015ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನ್ಯೂಝಿಲೆಂಡ್ ಎರಡನೇ ಸ್ಥಾನ ಪಡೆದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)