varthabharthi


ಸುಗ್ಗಿ

ಜಾತಿ ನನ್ನನ್ನು ಬಾಲ್ಯದಿಂದ ಹಿಂಬಾಲಿಸುತ್ತ ಬಂದಿದೆ: ಪ. ರಂಜಿತ್

ವಾರ್ತಾ ಭಾರತಿ : 7 Jul, 2019
ಸಂದರ್ಶನ: ಶ್ರೀನಿವಾಸ್ ರಾಮಾನುಜಂ

ತಮಿಳು ಸಿನೆಮಾ ನಿರ್ದೇಶಕ ಏನು ಯಾಕೆ ತನ್ನ ಬದುಕು ಮತ್ತು ಕೆಲಸದಲ್ಲಿ ರಾಜಕೀಯವಾಗಿರುವುದು ಅನಿವಾರ್ಯ ಎಂದು ವಿವರಿಸುತ್ತಾರೆ.

ಪ. ರಂಜಿತ್‌ರವರ ಕಚೇರಿ ಒಂದು ಗ್ರಂಥಾಲಯವನ್ನು ಹೋಲುತ್ತದೆ. ಅಲ್ಲಿ ಪುಸ್ತಕಗಳ ಕಪಾಟಿನಲ್ಲಿ ಮಾರ್ಕ್ಸ್, ಅಂಬೇಡ್ಕರ್ ಮತ್ತು ಪೆರಿಯಾರ್ ಜತೆ ಜತೆಯಾಗಿ ಕಾಣಿಸುತ್ತಾರೆ. ರಂಜಿತ್ ತಮಿಳು ಸಿನೆಮಾದಲ್ಲಷ್ಟೆ ಅಲ್ಲ, ಜಾತಿಪದ್ಧತಿಯ ವಿರುದ್ಧ ಒಂದು ಧ್ವನಿಯಾಗಿಯೂ ಮುಖ್ಯರಾಗಿದ್ದಾರೆ. ಕಳೆದ ಕೆಲವು ವಾರಗಳು ಅವರಿಗೆ ಮುಖ್ಯವಾಗಿದ್ದವು, ಯಾಕೆಂದರೆ 11ನೇ ಶತಮಾನದ ತಮಿಳು ಚಕ್ರವರ್ತಿ ರಾಜ ರಾಜ ಚೋಳನ್ ಬಗ್ಗೆ ಅವರು ಹೇಳಿದ ಮಾತುಗಳು ಕೆಲವರ ಸಿಟ್ಟಿಗೆ ಕಾರಣವಾಗಿದ್ದವು. ಅವರಿಗೆ ನ್ಯಾಯಾಲಯ ಶರತ್ತು ಬದ್ಧ ಪ್ರತೀಕ್ಷಾ ಜಾಮಿನು ನೀಡಿತ್ತು.

►ನೀವ್ಯಾಕೆ ರಾಜ ರಾಜ ಚೋಳನ್ ವಿಷಯವನ್ನು ಈಗ ಪ್ರಸ್ತಾಪಿಸಿದಿರಿ?

   -ಸ್ಥಳದ ಕಾರಣಕ್ಕಾಗಿ (ತಂಚಾವೂರು) ನಾನು ಪ್ರಸ್ತಾಪ ಮಾಡ ಬೇಕಾಯಿತು. ಎಲ್ಲರೂ ರಾಜ ತಮ್ಮ ಜಾತಿಗೆ ಸೇರಿದವ ಎಂದು ವಾದಿಸುತ್ತಿದ್ದಾರೆ. ನನ್ನ ಮುಖ್ಯ ಪ್ರಶ್ನೆ ಇದು: ಅವನ ಆಳ್ವಿಕೆಯ ಕಾಲದಲ್ಲಿ ದುಡಿಯುವ ವರ್ಗಕ್ಕೆ ಯಾಕೆ ಜಮೀನಿನ ಒಡೆತನವಿರಲಿಲ್ಲ?

►ರಾಜ ರಾಜ ಚೋಳನ್ ಭವ್ಯವಾದ ದೇವಾಲಯಗಳನ್ನು ನಿರ್ಮಿಸಿದ ಮತ್ತು ಗೋಡೆಯ ಮೇಲಿನ ಕೆತ್ತನೆಗಳಲ್ಲಿ ಕ್ಷೌರಿಕರ ಮತ್ತು ಮಡಿವಾಳರ ಹೆಸರುಗಳನ್ನು ಕೂಡ ಸೇರಿಸಿದ್ದ. ಈ ಬಗ್ಗೆ ನೀವು ಏನು ಹೇಳುತ್ತೀರಿ?

   -ದೇವಾಲಯದ ಶಿಲ್ಪದ ಬಗ್ಗೆ ನನಗೆ ವಿಸ್ಮಯವಾಗುತ್ತದೆ. ಅದು ಅಷ್ಟೊಂದು ಭವ್ಯವಾಗಿದೆ. ಆದರೆ ಜಾತಿ ತನ್ನ ಕೊಳಕು ತಲೆಯನ್ನು ಎತ್ತಿದ್ದು ಅವನ ಆಳ್ವಿಕೆಯ ಕಾಲದಲ್ಲೇ. ಆಗ ಬೇರೆ ಬೇರೆ ಜಾತಿಗಳಿಗೆ ಪ್ರತ್ಯೇಕ ಸ್ಮಶಾನ (ಮಸಣ)ಗಳು ಕೂಡ ಇದ್ದವು. ಹಲವು ಪುಸ್ತಕಗಳು ಇದನ್ನು ಹೇಳುತ್ತವೆ.

►ಸಿನೆಮಾ ತಯಾರಕನೊಬ್ಬನಿಗೆ ತನ್ನ ಕೆಲಸ ಮತ್ತು ತನ್ನ ಕಾರ್ಯ ಕ್ಷೇತ್ರದ ಹೊರಗೆ ರಾಜಕೀಯವಾಗಿ ಇರುವುದು ಯಾಕೆ ಮುಖ್ಯ?

   -ನಾನು ನನ್ನ ಬದುಕಿನಲ್ಲಿ ಕಲಿತದ್ದನ್ನು ಸಿನೆಮಾದಲ್ಲಿ ತೋರಿಸಬೇಕು, ಹೇಳಬೇಕು. ನಾನು ಬೆಳೆಯುವ ದಿನಗಳಿಂದ ಜಾತಿಯ ಪ್ರಶ್ನೆ ನನ್ನನ್ನು ಹಿಂಬಾಲಿಸುತ್ತ ಬಂದಿದೆ. ಆದ್ದರಿಂದ ನಾನೊಬ್ಬ ಸಿನೆಮಾ ನಿರ್ದೇಶಕನಾದಾಗ ನಾನು ಆ ಕುರಿತು ಮಾತಾಡಲೇ ಬೇಕಾಯಿತು. ಉದಾಹರಣೆಗೆ ಒಂದು ಮರವನ್ನೇ ತೆಗೆದುಕೊಳ್ಳಿ ಅಥವಾ ಒಂದು ಬಾವಿ ಅಥವಾ ಒಂದು ಆಟದ ಮೈದಾನ. ನನ್ನ ಹಳ್ಳಿಯ ಹೆಚ್ಚಿನ ಜನರು ಅದನ್ನೆಲ್ಲ ಸೌಂದರ್ಯ ಅಥವಾ ಆನಂದದ ತಾಣಗಳೆಂದು ಕಾಣುತ್ತಿದ್ದರು. ಆದರೆ ನನಗೆ ಹಾಗೆ ಕಾಣಿಸುತ್ತಿರಲಿಲ್ಲ.. ಯಾಕೆಂದರೆ ಅದು ನನಗೆ ಸೇರಿದ್ದಲ್ಲ ಎಂದು ಸಮಾಜ ನನಗೆ ಹೇಳುತ್ತಲೇ ಇತ್ತು. ನನಗೆ ಒಬ್ಬ ದಲಿತರಿಗೆ ಮರ ಹತ್ತುವ ಅಥವಾ ಬಾವಿಯನ್ನು ಬಳಸುವ ಹಕ್ಕಿಲ್ಲ ಎಂದು ಯಾರೋ ಹೇಳುತ್ತಿದ್ದರು: ಎಲ್ಲರೂ ಬಳಸುವ ಯಾವುದೋ ಒಂದನ್ನು ನಾನ್ಯಾಕೆ ಬಳಸುವಂತಿಲ್ಲ? ಅಂತ ನಾನು ಯೋಚಿಸುತ್ತಿದ್ದೆ. ಆದ್ದರಿಂದ ನಾನು ಇವತ್ತು ಒಂದು ಮರವನ್ನೋ, ಬಾವಿಯನ್ನೋ ಚಿತ್ರೀಕರಿಸುವಾಗ, ನಾನು ಅದನ್ನು ಕೇವಲ ಕಲಾತ್ಮಕವಾಗಿ ನೋಡಲಾರೆ: ಅದು ನನಗೆ ಬೇರೆಯೇ ಆದ ಒಂದು ಕತೆಯನ್ನು ಹೇಳುತ್ತದೆ. ನಾನು ಆ ಕತೆಯನ್ನು ಹೇಳುವ ಸಿನೆಮಾ ತಯಾರಕನಾಗಲು ಬಯಸುತ್ತೇನೆ.

►ನೀವು ಅದನ್ನು ಕಲಾತ್ಮಕ ಸಿನೆಮಾದ ಮೂಲಕ ಹೇಳಬಹುದು. ಆದರೆ ಅದನ್ನು ಕಮರ್ಶಿಯಲ್, ಸೂಪರ್ ಸ್ಟಾರ್ ಸಿನೆಮಾಗಳಲ್ಲಿ ಹೇಳುವಾಗ ನಿಮಗೆ ಎದುರಾಗುವ ಸವಾಲುಗಳು ಯಾವುವು?

   -ರಜನಿ ಸರ್ ನನ್ನನ್ನು ಭೇಟಿಯಾದಾಗ ಅವರು ನಾನು ತಯಾರಿಸಿದ್ದ ಅಟ್ಟಕತಿ (2012) ಮತ್ತು ಮದ್ರಾಸ್ (2014) ನಂತಹ ವಾಸ್ತವಿಕ ಸಿನೆಮಾಗಳನ್ನು ನೋಡಿದ ಬಳಿಕವೇ ನನ್ನನ್ನು ಆಯ್ಕೆ ಮಾಡಿದ್ದರೆಂದು ನನಗೆ ಗೊತ್ತಿತ್ತು. ಆದ್ದರಿಂದ ಕಬಾಲಿ (2016) ಮತ್ತು ಕಾಲಾ (2018) ಸಿನೆಮಾಗಳು ನನಗೆ ಆರಾಮವಾಗಿದ್ದ ರೀತಿಯಲ್ಲೇ ಇರಬೇಕೆಂದು ನಾನು ನಿಶ್ಚಯಿಸಿದೆ.

►ನೀವು ರಾಜಕೀಯವಾಗುವಂತೆ ಮಾಡಿದ ಯಾವುದಾದರೂ ಮರೆಯಲಾಗದ ಘಟನೆ ನಡೆದಿದೆಯೇ ?

   -ಹೌದು, ಅದು ನನ್ನ ಜೀವನ ಶೈಲಿಯ ಒಂದು ಭಾಗವಾಗಿತ್ತು. ನನ್ನ ನೆರೆಮನೆಯ ಹುಡುಗ ಶಾಲೆಯಲ್ಲಿ ನನಗೆ ಒಂದು ಗ್ಲಾಸ್ ನೀರು ಕೊಟ್ಟ ರೀತಿಯಲ್ಲೇ ಅದು ವ್ಯಕ್ತವಾಗುತ್ತಿತ್ತು. ಅಥವಾ ಅಂಗಡಿಯಾತ ಚಿಲ್ಲರೆಯನ್ನು ನನ್ನ ಕೈಯಲ್ಲಿ ಇಡದೆ ಕೌಂಟರ್‌ನ ಮೇಲೆ ಇಡುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು. ಇಂತಹ ಹಲವಾರು ಘಟನೆಗಳಿವೆ. ಇತರರಿಗೆ ಇದೆಲ್ಲ ಕ್ಷುಲ್ಲಕವಾಗಿರಬಹುದು. ಆದರೆ ದಲಿತರಾದ ನಮ್ಮನ್ನು, ನನ್ನನ್ನು ಇಂತಹ ಘಟನೆ ತುಂಬ ಡಿಸ್ಟರ್ಬ್ ಮಾಡಿತು, ತುಂಬ ಕಲಕಿತು.

►ನೀವು ಹೆಚ್ಚಾಗಿ ನಿಮ್ಮ ಬಾಲ್ಯದ ಅನುಭವಗಳ ಬಗ್ಗೆ ಹೇಳುತ್ತೀರಿ. ಆದರೆ 2019 ರಲ್ಲಿ ಪರಿಸ್ಥಿತಿ ತುಂಬ ಭಿನ್ನವಾಗಿಲ್ಲವೇ?

-ಹೇಗೆ ಭಿನ್ನ? ಶಾಲಾ ಮುಖ್ಯೋಪಾಧ್ಯಾಯಿನಿಯೊಬ್ಬರು ದಲಿತ ಮಕ್ಕಳಿಗೆ ಟಾಯ್ಲೆಟ್ ಕ್ಲೀನ್ ಮಾಡಲು ಹೇಳಿದರೆಂಬ ಸುದ್ದಿ ಮೊನ್ನೆಯಷ್ಟೆ ಬಂದಿದೆ; ಇಳವರಸನ್‌ನ ಸಾವು ಒಂದು ಆತ್ಮಹತ್ಯೆ ಎಂಬ ತೀರ್ಪು ಬಂದಿದೆ. ಹೀಗಿರುವಾಗ ಪರಿಸ್ಥಿತಿ ಬದಲಾಗಿದೆ ಎಂದು ನಾವು ಹೇಗೆ ಹೇಳಲು ಸಾಧ್ಯ? ನಮಗೆ ಮೀಸಲಾಯಿತಿಯನ್ನು ಕೂಡ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ; ನಾವು ಹೊಸಜಗತ್ತು, ಜಾತಿಯನ್ನು ಮರೆತು ನಾವೆಲ್ಲ ಸಮಾನರಾಗೋಣ ಎನ್ನುತ್ತೇವೆ. ಶತಮಾನಗಳ ಕಾಲದ ದಮನವನ್ನು, ತುಡಿತವನ್ನು ಮರೆತುಬಿಡಿ ಎಂದು ಜನರಿಗೆ ಹೇಳುವುದು ಕೂಡಾ ಒಂದು ಹಿಂಸೆಯೇ. ನಾವದನ್ನು ಚರ್ಚಿಸಿ ಅದಕ್ಕೆ ಪರಿಹಾರ ಕಂಡುಹಿಡಿಯಬೇಕು. ನಾವಿದನ್ನು ಮಾಡದೆ, ಪರಿಸ್ಥಿತಿ ಬದಲಾಗಿದೆ ಎಂದು ಹೇಳುವಂತಿಲ್ಲ

►ನಿಮ್ಮ ಸಂಭಾಷಣೆಗಳು ತುಂಬ ಪವರ್‌ಪುಲ್ ಅದು ಗಾಂಧಿ ಡ್ರೆಸ್ ಅಂಬೇಡ್ಕರ್ ಕೋಟ್ ಇರಲಿ, ಅಥವಾ ‘ನಿಲಮ್ ಎಂಗಲ್ ಉರಿಮಲ್’ ಇರಲಿ, ಅವುಗಳು ಬಂದು ಸ್ಟೇಟ್‌ಮೆಂಟ್ ಮಾಡುವ ಬದಲು ಕೇವಲ ಪಂಚ್ ಲೈನ್‌ಗಳಿಗಾಗಿ ಬಿಡುತ್ತವೆ ಎಂದು ನಿಮಗೆ ಎಂದಾದರೂ ಭಯವಾಗುತ್ತದೆಯೇ?

-ಇಲ್ಲ ನಾನು ಬರೆದ ‘ಗಾಂಧಿ-ಅಂಬೇಡ್ಕರ್’ ಸಾಲು ಓದಿ ರಜನಿ ಸರ್ ಸೂಪರ್ ಸರ್ ಎಂದಿದ್ದರು...

ನೀವು ಬಣ್ಣಗಳ ಮೂಲಕ ನಿಮ್ಮ ವಿಚಾರಗಳನ್ನು ವಿವರಿಸಲು ಪ್ರಯತ್ನಿಸುತ್ತೀರಿ. ಅದು ಯಶಸ್ವಿ ಪ್ರಯತ್ನವೇ?

-ಹೌದು ನಾನು ಯಶಸ್ವಿಯಾಗಿದ್ದೇನೆ ಅನ್ನಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)