ಕುರುಕ್ಷೇತ್ರ, ಫೈಲ್ವಾನ್ ಬಾಕ್ಸ್ ಆಫೀಸ್ ಪೈಪೋಟಿ
ಕನ್ನಡ ಚಿತ್ರೋದ್ಯಮದಲ್ಲಿ ಬಾಕ್ಸ್ ಆಫೀಸಿನಲ್ಲಿ ಚಿತ್ರಗಳ ನಡುವೆ ಪೈಪೋಟಿ ಏರ್ಪಡುತ್ತಿರುವುದು ವಿರಳ. ಆದರೆ, ಮುಂದಿನ ಆಗಸ್ಟ್ನಲ್ಲಿ ಕನ್ನಡ ಚಿತ್ರೋದ್ಯಮ ದಶಕದ ಅತಿ ದೊಡ್ಡ ಬಾಕ್ಸ್ ಆಫೀಸ್ ಪೈಪೋಟಿ ನೋಡಲಿದೆ. ದರ್ಶನ್ ಅಭಿನಯದ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ ಹಾಗೂ ಸುದೀಪ್ ಅಭಿನಯದ ‘ಫೈಲ್ವಾನ್’ ಮುಂದಿನ ತಿಂಗಳು ವರಲಕ್ಷ್ಮೀ ಉತ್ಸವದ ಸಂದರ್ಭ ತೆರೆಗೆ ಅಪ್ಪಳಿಸಲಿದೆ.
‘ಫೈಲ್ವಾನ್’ ಚಿತ್ರ ಆಗಸ್ಟ್ 9ರಂದು ಜಗತ್ತಿನಾದ್ಯಂತ ಬಿಡುಗಡೆ ಯಾಗಲಿದೆ ಎಂದು ಫೈಲ್ವಾನ್ ನಿರ್ದೇಶಕ ಎಸ್. ಕೃಷ್ಣ ಈಗಾಗಲೇ ದೃಢಪಡಿಸಿದ್ದಾರೆ. ಆದರೆ, ‘ಕುರುಕ್ಷೇತ್ರ’ದ ನಿರ್ದೇಶಕರು ಇದುವರೆಗೆ ಚಿತ್ರ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಕನ್ನಡ ಚಿತ್ರೋದ್ಯಮದಲ್ಲಿ ಬಾಕ್ಸ್ ಆಫೀಸ್ ಪೈಪೋಟಿ ನಡೆಯುವುದು ವಿರಳ. 2006ರಲ್ಲಿ ದರ್ಶನ್ ಅಭಿನಯದ ‘ಸುಂಟರ ಗಾಳಿ’ ಹಾಗೂ ಸುದೀಪ್ ಅಭಿನಯದ ‘ಮೈ ಆಟೊಗ್ರಾಫ್’ ಮೊದಲ ಬಾರಿಗೆ ಬಾಕ್ಸ್ ಆಫೀಸಿನಲ್ಲಿ ಮುಖಾ ಮುಖಿಯಾಗಿತ್ತು. 13 ವರ್ಷಗಳ ಬಳಿಕ ಮತ್ತೆ ದರ್ಶನ್ ಹಾಗೂ ಸುದೀಪ್ ಚಿತ್ರಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಈ ಪೈಪೋಟಿ ನಿರ್ಮಾಪಕರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ರಾಜ್ಯದಲ್ಲಿ ದರ್ಶನ್ ಹಾಗೂ ಸುದೀಪ್ ಅವರಿಗೆ ತಮ್ಮದೇ ಅಭಿಮಾನಿ ಬಳಗ ಇರುವುದರಿಂದ ಈ ಪರಿಸ್ಥಿತಿ ಸಂಕೀರ್ಣವಾಗಲಿದೆ. ‘ಫೈಲ್ವಾನ್’ ಚಿತ್ರದ ಬಿಡುಗಡೆಗಿಂತ ಒಂದು ವಾರ ಮುಂಚಿತ ವಾಗಿ ಆಗಸ್ಟ್ 2ರಂದು ‘ಕುರುಕ್ಷೇತ್ರ’ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಯೋಚಿಸುತ್ತಿದ್ದಾರೆ ಎಂಬ ವದಂತಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ‘ಫೈಲ್ವಾನ್’ ಚಿತ್ರ ಆಗಸ್ಟ್ 2ರಂದು ಚಿತ್ರ ಬಿಡುಗಡೆಯಾದರೆ ಸಣ್ಣ ಬಜೆಟ್ನ ಚಿತ್ರಗಳಿಗೆ ಕೊಂಚ ಮಟ್ಟಿಗೆ ಹಣ ಮಾಡಿಕೊಳ್ಳಲು ಅವಕಾಶವಾಗಬಹುದು. ಅಲ್ಲದೆ ಇದರಿಂದ ರಾಜ್ಯಾದ್ಯಂತದ ವಿತರಣೆಗಾರರಿಗೆ ಪ್ರಮುಖ ಬಿಡುಗಡೆ ದೊರಕಬಹುದು.