varthabharthiಸಂಪಾದಕೀಯ

ಉಳ್ಳವರ ಪರ ಮುಂಗಡ ಪತ್ರ

ವಾರ್ತಾ ಭಾರತಿ : 7 Jul, 2019

 ಬಜೆಟ್ ಪ್ರತಿಯನ್ನು ಬ್ರಿಫ್‌ಕೇಸ್‌ನಲ್ಲಿ ಇರಿಸಿಕೊಂಡು ಸಂಸತ್ತಿಗೆ ಬರುವ ಬದಲಾಗಿ ಕೆಂಪು ಬಣ್ಣದ ಬಟ್ಟೆಯಲ್ಲಿ ಇಟ್ಟುಕೊಂಡು ಬಂದಿರುವುದನ್ನು ಬಿಟ್ಟರೆ ಈ ಆಯವ್ಯಯದಲ್ಲಿ ಹೊಸದೇನೂ ಇಲ್ಲ ಅಂದರೆ ಅತಿಶಯೋಕ್ತಿಯಲ್ಲ. ಚರ್ಮದ ವಸ್ತು ಶುಭಕರವಲ್ಲ ಅದಕ್ಕಾಗಿ ಕೆಂಪು ಬಟ್ಟೆಯಲ್ಲಿ ಬಜೆಟ್ ಕಡತವನ್ನು ಸುತ್ತಿಕೊಂಡು ಬರಲಾಯಿತೆಂದು ಹೇಳಲಾಗುತ್ತದೆ.

ಆದರೆ ಈ ಮುಂಗಡ ಪತ್ರ ಜನರ ಯಾವ ನಿರೀಕ್ಷೆಯನ್ನೂ ಈಡೇರಿಸಿಲ್ಲ. 2019-_20ರ ಈ ಮುಂಗಡ ಪತ್ರ ಅಡ್ಡಹಾದಿ ಹಿಡಿದ ಅರ್ಥ ವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರುವ ಯಾವ ಕ್ರಮಗಳನ್ನೂ ಸೂಚಿಸಿಲ್ಲ. ವಾಸ್ತವವಾಗಿ ಈ ಮುಂಗಡ ಪತ್ರ ಸಿರಿವಂತರನ್ನು ಇನ್ನಷ್ಟು ಸಿರಿವಂತರನ್ನಾಗಿ, ಕೋಟ್ಯಧೀಶರನ್ನು ಬಹು ಕೋಟ್ಯಧೀಶರನ್ನಾಗಿ ಮಾಡುವ ಗುರಿ ಹೊಂದಿರುವದು ಸ್ಪಷ್ಟವಾಗುತ್ತದೆ.

 ಬಜೆಟ್ ಓದಿದ ಹಣಕಾಸು ಸಚಿವರ ಭಾಷಣ ಕೇಳಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ, ಸುಂದರವಾಗಿದೆ ಎಂಬ ಹುಸಿ ಭರವಸೆಯನ್ನು ಮೂಡಿಸುತ್ತದೆ. ಆದರೆ ಕಣ್ಣಿಗೆ ರಾಚುವ ಬೆಲೆ ಏರಿಕೆ, ನಾಲ್ಕೂವರೆ ದಶಕಗಳಲ್ಲೇ ಭಯಾನಕ ಸ್ವರೂಪ ತಾಳಿದ ನಿರುದ್ಯೋಗ, ಸುಮಾರು ಏಳು ಲಕ್ಷ ಕೈಗಾರಿಕೆಗಳಿಗೆ ಜಡಿದ ಬೀಗ, ಬೆಂಬಲ ಬೆಲೆಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು, ಈ ಯಾವ ಅಂಶಗಳ ಪ್ರಸ್ತಾವವಿಲ್ಲದೆ ಈ ಬಜೆಟ್ ಕುಸಿದು ಬೀಳುವ ಮಣ್ಣಿನ ಗೋಡೆಗೆ ಸುಣ್ಣ , ಬಣ್ಣ ಬಳೆದು ಸುಂದರವಾಗಿ ಕಾಣುವಂತೆ ಮಾಡಿದಂತಿದೆ.

 ದೇಶವನ್ನು ಬಾಧಿಸುತ್ತಿರುವ ಕಡು ಬಡತನದ ಬಗ್ಗೆ ಯಾವುದೇ ನಿರ್ದಿಷ್ಟ ಕಾರ್ಯಕ್ರಮ ಪ್ರಕಟಿಸದ ಈ ಮುಂಗಡಪತ್ರ ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿಗಳ ಮಹಾಪೂರವನ್ನೇ ಹರಿಸಿದೆ. 400 ಕೋಟಿಗಿಂತ ಕಡಿಮೆ ವ್ಯವಹಾರ ನಡೆಸುವ ಕಂಪೆನಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ ದೊಡ್ಡ ಕಂಪೆನಿಗಳು ತಮ್ಮ ವ್ಯವಹಾರವನ್ನು ವಿಭಜಿಸಿ ತೆರಿಗೆ ವಂಚಿಸಲು ಅನುಕೂಲ ಮಾಡಿಕೊಡಲಾಗಿದೆ.

ಈ ಬಜೆಟ್‌ನಲ್ಲಿ ತುಂಬಾ ಜನಪ್ರಿಯ ಕಾರ್ಯಕ್ರಮ ಹಾಗೂ ಘೋಷಣೆಗಳಿಗೆ ಕೊರತೆಯಿಲ್ಲ. ಆದರೆ ಸರಕು ಸೇವೆಗಳ ಬೇಡಿಕೆ ಹೆಚ್ಚಿಸಿ ಜನರು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಯಾವ ನಿರ್ದಿಷ್ಟ ಕಾರ್ಯಕ್ರಮಗಳೂ ಮುಂಗಡ ಪತ್ರದಲ್ಲಿಲ್ಲ.

ಕಳೆದ 45 ವರ್ಷಗಳಲ್ಲೇ ಕಂಡು ಕೇಳರಿಯದ ನಿರುದ್ಯೋಗ, ದೇಶದಲ್ಲಿ ತಾಂಡವವಾಡುತ್ತಿದೆ. ಇದು ಹೀಗೇ ಬೆಳೆಯುತ್ತ ಹೋದರೆ ಮುಂದೆ ದೇಶದಲ್ಲಿ ತೀವ್ರ ಪ್ರಕ್ಷೋಭೆಗೆ ಕಾರಣವಾಗಬಹುದು. ಆದರೆ ಈ ಬಜೆಟ್‌ನಲ್ಲಿ ನಿರುದ್ಯೋಗ ನಿವಾರಣೆಗೆ ಯಾವುದೇ ನಿರ್ದಿಷ್ಟ ಯೋಜನೆ, ಕಾರ್ಯಕ್ರಮಗಳಿಲ್ಲ.

 ಜನಸಾಮಾನ್ಯರು ಭಾರೀ ನಿರೀಕ್ಷೆ ಇಟ್ಟುಕೊಂಡು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯನ್ನು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಜನರ ನಿರೀಕ್ಷೆಗೆ ಈ ಮುಂಗಡಪತ್ರ ಸರಿಯಾಗಿ ಸ್ಪಂದಿಸಿಲ್ಲ.ವಿತ್ತೀಯ ಕೊರತೆಯನ್ನು ನೀಗಿಸಲು ಕ್ರಮಗಳನ್ನು ಪ್ರಕಟಿಸಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸಿರುವುದರಿಂದ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗಲಿದೆ. ಇದರಿಂದ ಹಣದುಬ್ಬರ ಕೂಡ ವಿಪರೀತವಾಗಲಿದೆ. ಸಂಬಳದಾರರಿಗೆ ಆದಾಯ ತೆರಿಗೆಯಲ್ಲಿ ಹೆಚ್ಚಿನ ವಿನಾಯತಿ ಲಭಿಸಿಲ್ಲ.

 ಭಾರತದ ಆರ್ಥಿಕತೆ ಏಶ್ಯಾ ಖಂಡದ ಅತಿ ದೊಡ್ಡ ಆರ್ಥಿಕತೆ. ಇದನ್ನು ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ಡಾಲರ್ ಮೊತ್ತಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ಈ ಮುಂಗಡ ಪತ್ರ ಹೊಂದಿದೆ. ಆದರೆ ಇದನ್ನು ಕಾರ್ಯಗತಗೊಳಿಸುವ ನಿರ್ದಿಷ್ಟ ಕಾರ್ಯಕ್ರಮಗಳು ಈ ಬಜೆಟ್‌ನಲ್ಲಿಲ್ಲ.

ನೀರಿನ ಬಳಕೆ, ನೈರ್ಮಲ್ಯಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.ಗ್ರಾಮೀಣ ಆರ್ಥಿಕತೆಗೂ ಒತ್ತು ನೀಡಲಾಗಿದೆ. ಆದರೆ ತೆರಿಗೆ ಸಂಗ್ರಹ ನಿರೀಕ್ಷಿಸಿದಂತೆ ಆಗದಿದ್ದರೆ ವಿತ್ತೀಯ ಕೊರತೆಯನ್ನು ನೀಗಿಸುವುದು ಕಷ್ಟಕರವಾಗಲಿದೆ.

ಸ್ಟಾರ್ಟಪ್ ಕಂಪೆನಿಗಳಿಗೆ ನೀಡುವ ತೆರಿಗೆ ವಿನಾಯಿತಿಯು ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಹೊಸ ಲಾಭದಾಯಕ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿ ತೆರಿಗೆ ತಪ್ಪಿಸಿಕೊಳ್ಳಲು ಈ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮುಂಗಡ ಪತ್ರ 27 ಲಕ್ಷ ಕೋಟಿ ರೂಪಾಯಿ ಮೊತ್ತದ ಬೃಹತ್ ಗಾತ್ರ ಹೊಂದಿದೆ. ಏಳು ಲಕ್ಷ ಕೋಟಿ ರೂಪಾಯಿಯ ವಿತ್ತೀಯ ಕೊರತೆಯನ್ನು ಹೊಂದಿದೆ. ಈ ಕೊರತೆ ನೀಗಿಸಲು ಸರಕಾರಿ ಒಡೆತನದ ಆಸ್ತಿ ಪಾಸ್ತಿಗಳನ್ನು ಮಾರಾಟ ಮಾಡುವ ಅಪಾಯಕಾರಿ ಅಂಶಗಳು ಆಯವ್ಯಯದಲ್ಲಿವೆ. ಬಿಜೆಪಿ ಸರಕಾರದ ಹಿಂದಿನ ಅಧಿಕಾರಾವಧಿಯಲ್ಲಿ ಮೂರು ಲಕ್ಷ ಕೋಟಿ ರೂ. ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡಲಾಗಿದೆ.

 ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಹತ್ತು ಲಕ್ಷ ಕೋಟಿ ರೂಪಾಯಿ ಮೀಸಲು ನಿಧಿ ಇದೆ. ಈ ಹಣದ ಮೇಲೆ ಮೋದಿ ಸರಕಾರ ಕಣ್ಣು ಹಾಕಿದೆ. ಹೀಗಾಗಿ ಆರ್‌ಬಿಐನ ಗವರ್ನರ್‌ಗಳು ಒಬ್ಬೊಬ್ಬರಾಗಿ ರಾಜೀನಾಮೆ ಕೊಡುತ್ತಾ ಬಂದರು. ಕೇಂದ್ರ ಸರಕಾರ ಕೃಷಿ ಇ ಮಾರ್ಕೆಟಿಂಗ್‌ಗೆ ಪ್ರೋತ್ಸಾಹ ನೀಡುವ ಮೂಲಕ ಕೃಷಿ ಮಾರುಕಟ್ಟೆಯನ್ನು ನಾಶ ಮಾಡಿ ವಿದೇಶಿ ಕಂಪೆನಿಗಳಿಗೆ ಹಸ್ತಾಂತರ ಮಾಡಲು ಹೊರಟಿದೆ. ಇದರಿಂದ ಇಡೀ ದೇಶಿ ಮಾರುಕಟ್ಟೆ ನಿರ್ನಾಮವಾಗುತ್ತಿದೆ.

1964 ರ ಭೂ ಕಾಯ್ದೆಗೆ ತಿದ್ದುಪಡಿ ತಂದು ವಿದೇಶಿ ಕಂಪೆನಿಗಳಿಗೆ ನೇರವಾಗಿ ಭೂಮಿಯನ್ನು ಕೊಡಲು ಮಸಲತ್ತು ನಡೆದಿದೆ.

 ಒಟ್ಟಾರೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರದ ಈ ಬಜೆಟ್ ಕಾರ್ಪೊರೇಟ್ ಬಂಡವಾಳಶಾಹಿಗೆ ಉತ್ತೇಜನ ನೀಡಿ ದುಡಿಯುವ ಬಡ ಜನರನ್ನು ಬೀದಿಪಾಲು ಮಾಡುವ ಬಜೆಟ್ ಅಂದರೆ ತಪ್ಪಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)