varthabharthi

ಪ್ರಚಲಿತ

ಕಾಂಗ್ರೆಸ್ ಮುಂದೆ ಈಗ ಉಳಿದ ದಾರಿ ಯಾವುದು?

ವಾರ್ತಾ ಭಾರತಿ : 8 Jul, 2019
ಸನತ್ ಕುಮಾರ ಬೆಳಗಲಿ

ಕಾಂಗ್ರೆಸ್‌ಗೆ ಜನರ ಮಧ್ಯದಲ್ಲಿ ಹೋಗಿ ಬೆಳೆಯಲು ಸಾಕಷ್ಟು ಅವಕಾಶಗಳಿದ್ದವು. ಹೊಸ ಪೀಳಿಗೆಯ ಯುವಕರು ಕೋಮುವಾದಿ ಸಂಘಟನೆಗಳತ್ತ ಹೋಗುವುದನ್ನು ತಡೆಯಬೇಕಾಗಿತ್ತು. ಕಳೆದ 2017ರಲ್ಲಿ ಇಂದಿರಾ ಗಾಂಧಿಯವರು ಬದುಕಿದ್ದರೆ ನೂರು ವರ್ಷ ತುಂಬುತ್ತಿತ್ತು. ದೇಶಕ್ಕಾಗಿ ಬಲಿದಾನ ಮಾಡಿದ ಆ ತಾಯಿಯ ಶತಮಾನೋತ್ಸವವನ್ನು ಕಾಂಗ್ರೆಸ್‌ನವರು ಸರಿಯಾಗಿ ಎಲ್ಲೂ ಆಚರಿಸಲಿಲ್ಲ.

ತಮಾನದ ಇತಿಹಾಸ ಇರುವ ಕಾಂಗ್ರೆಸ್ ಸ್ಥಿತಿ ಏಕೆ ಹೀಗಾಗಿದೆ? 70 ವರ್ಷಗಳ ಕಾಲ ಈ ದೇಶವನ್ನಾಳಿದ ಪಕ್ಷ ಅದು. ಸ್ವಾತಂತ್ರಾನಂತರ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ ಚರಿತ್ರೆ ಅದಕ್ಕಿದೆ. ಆದರೆ ತನ್ನ ಸಾಧನೆಗಳನ್ನೇ ತಾನು ಹೇಳಿಕೊಳ್ಳಲಾಗದ ಸ್ಥಿತಿಗೆ ಅದು ತಲುಪಿದೆ. ಅಂತಲೇ ಇತ್ತೀಚಿನ ಲೋಕಸಭಾ ಚುನಾವಣೆ ನಂತರ ರಾಹುಲ್ ಗಾಂಧಿ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದರು.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್ ಗಾಂಧಿ ಅದನ್ನು ವಾಪಸ್ ಪಡೆಯಲು ನಿರಾಕರಿಸಿದರು. ಹೊಸ ಅಧ್ಯಕ್ಷರ ನಾಮನಿರ್ದೇಶನ ಮಾಡಲು ಅವರು ಒಪ್ಪಲಿಲ್ಲ. ರಾಜೀನಾಮೆ ಕೊಟ್ಟ ನಂತರ ಪಕ್ಷದ ಸದಸ್ಯರು ಮತ್ತು ಬೆಂಬಲಿಗರಿಗೆ ಬರೆದ ಪತ್ರದಲ್ಲಿ ಹಲವು ಮುಖ್ಯ ಅಂಶಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಪಕ್ಷದ ಸೋಲಿಗಾಗಿ ದಿಗ್ವಿಜಯ ಸಿಂಗ್ ಅವರಂಥ ಹಿರಿಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ತಾವೂ ಹೊಣೆ ಹೊತ್ತುಕೊಂಡಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಇನ್ನೊಂದು ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ. ‘ತನ್ನ ಹೋರಾಟ ಎಂದಿಗೂ ರಾಜಕೀಯ ಅಧಿಕಾರಕ್ಕಾಗಿ ನಡೆದಿಲ್ಲ. ಬಿಜೆಪಿ ಬಗ್ಗೆ ಕೋಪವಾಗಲಿ ಅಥವಾ ದ್ವೇಷವಾಗಲಿ ಇಲ್ಲ. ಆದರೆ ಆರೆಸ್ಸೆಸ್ ಕಲ್ಪನೆಯ ಭಾರತವನ್ನು ನಾನು ಒಪ್ಪುವುದಿಲ್ಲ. ನನ್ನ ರಕ್ತದ ಕಣ ಕಣವೂ ಅದನ್ನು ವಿರೋಧಿಸುತ್ತದೆ. ನಮ್ಮ ಸಂಘರ್ಷ ವೈಯಕ್ತಿಕವಲ್ಲ. ನಮ್ಮ ಕಲ್ಪನೆಯ ಭಾರತಕ್ಕೂ ಬಿಜೆಪಿ ಅಂದರೆ ಸಂಘಪರಿವಾರ ಕಲ್ಪನೆಯ ಭಾರತಕ್ಕೂ ವೈಚಾರಿಕ ಸಂಘರ್ಷವಿದೆ. ಇದೇನು ಹೊಸದಲ್ಲ. ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ’ ಎಂದು ರಾಹುಲ್ ಹೇಳಿದ್ದಾರೆ

ರಾಹುಲ್ ಗಾಂಧಿ ಹೇಳಿದ ಮಾತನ್ನು ಕಾಂಗ್ರೆಸ್‌ನ ಅನೇಕ ನಾಯಕರು ಹೇಳುವುದಿಲ್ಲ. ಸೈದ್ಧಾಂತಿಕ ತಲೆಯಲ್ಲಿ ಶೂನ್ಯವನ್ನು ತುಂಬಿಕೊಂಡ ಇವರಿಗೆ ಅಧಿಕಾರ ಮತ್ತು ಹಣ ಬೇಕು. ಅದಕ್ಕಾಗಿ ಕಾಂಗ್ರೆಸ್ ಬೇಕು. ಇಂಥವರೇ ಕಾಂಗ್ರೆಸ್‌ನ್ನು ಮೃದು ಹಿಂದುತ್ವದ ದಾರಿಗೆ ಕೊಂಡೊಯ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗುಡಿ ಗುಂಡಾರ ಸುತ್ತಾಡುವಂತೆ ಮಾಡಿದರು. ಅಂಗಿ ಬಿಚ್ಚಿ ಅರ್ಚಕರ ಮುಂದೆ ನಿಲ್ಲುವಂತೆ ಮಾಡಿದರು. ಇಂಥವರ ನಿಜ ಸ್ವರೂಪ ರಾಹುಲ್ ಗಾಂಧಿಯವರಿಗೆ ಈಗ ಗೊತ್ತಾದಂತೆ ಕಾಣುತ್ತದೆ.

ಕಾಂಗ್ರೆಸ್‌ನಲ್ಲಿ ಸೇರಿಕೊಂಡ ಇಂಥ ಸೋಮಾರಿ ನಾಯಕರಿಂದಾಗಿ ಪಕ್ಷ ಈಗ ಈ ಸ್ಥಿತಿಗೆ ಬಂದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಪರಿಣಾಮಕಾರಿಯಾದ ಪ್ರತಿರೋಧ ಒಡ್ಡುವಲ್ಲಿ ಕಾಂಗ್ರೆಸ್ ವಿಫಲಗೊಂಡಿತು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರೇನೋ ಮೋದಿ ಸರಕಾರವನ್ನು ತುದಿಗಾಲ ಮೇಲೆ ನಿಲ್ಲಿಸಿದ್ದರು, ಅದಕ್ಕಾಗಿ ಚುನಾವಣೆಯಲ್ಲಿ ಭಾರೀ ಬೆಲೆ ತೆತ್ತರು. ಆದರೆ ಉಳಿದ ಕಾಂಗ್ರೆಸ್ ನಾಯಕರು ಬಿಜೆಪಿ ಪರಿಕಲ್ಪನೆಯ ಭಾರತವನ್ನು ವಿರೋಧಿಸಿ ಎಂದೂ ಮಾತಾಡಲಿಲ್ಲ.

ರಾಹುಲ್ ಗಾಂಧಿ ಹೇಳಿದ ಆರೆಸ್ಸೆಸ್ ಪರಿಕಲ್ಪನೆಯ ಭಾರತ ಅಂದರೆ ಸಾವರ್ಕರ್ ಮತ್ತು ಗೊಳ್ವಾಲ್ಕರ್ ಕಲ್ಪನೆಯ ಮನುವಾದಿ ಭಾರತ. ಅದಕ್ಕೆ ಹಿಂದುತ್ವದ ಮುಖವಾಡ. ಅದು ಭಾರತದ ಎಲ್ಲ ಜಾತಿ, ಮತ, ಸಮುದಾಯಗಳನ್ನು ಒಳಗೊಳ್ಳುವ ಬಹುತ್ವ ಭಾರತವಲ್ಲ, ಅದರ ಬದಲಿಗೆ ಎಲ್ಲವನ್ನೂ ಹಿಂದುತ್ವದ ಹೆಸರಿನ ಮನುವಾದದಡಿ ತರುವ ಏಕ ಧರ್ಮ, ಏಕ ಸಂಸ್ಕೃತಿಯ ಭಾರತ. ರಾಹುಲ್ ಗಾಂಧಿ ವಿರೋಧಿಸುತ್ತಿರುವುದು ಈ ಭಾರತವನ್ನು.

ಈ ಬಹುತ್ವ ಭಾರತ ಕಾಂಗ್ರೆಸ್ ಇಲ್ಲವೇ ಯಾವುದೇ ಪಕ್ಷದ ಕೊಡುಗೆಯಲ್ಲ. ಅದು ಭಾರತದ ಮಣ್ಣಿನಲ್ಲಿ ಆಳವಾಗಿ ಬೇರುಬಿಟ್ಟ ಭಾರತ. ದೇಶದ ಲಕ್ಷಾಂತರ ನಾಗರಿಕರಲ್ಲಿ ಈ ಬಹುಮುಖಿ ಭಾರತದ ಬಗ್ಗೆ ಇಂದಿಗೂ ಒಲವಿದೆ. ಭಾರತ ಹೊರಗಿನದನ್ನು ಪಡೆದುಕೊಳ್ಳಲು, ಹೊರಗೆ ನೀಡಲು ಎಂದೂ ಸಂಕೋಚ ಪಟ್ಟಿಲ್ಲ. ನಮ್ಮ ದಾರಾಶಿಖೊ ನಮ್ಮ ವೇದಗಳನ್ನು ವಿದೇಶಿಯರಿಗೆ ಪರಿಚಯಿಸಿದ. ಬಾಬಾ ಬುಡಾನ್ ಎಂಬ ಸೂಫಿ ಸಂತ ಕಾಫಿಯನ್ನು ನಮ್ಮ ಕರ್ನಾಟಕಕ್ಕೆ ಪರಿಚಯಿಸಿದ. ನಮ್ಮ ಹಿಂದುಸ್ತಾನಿ ಸಂಗೀತವನ್ನು ಕಲಿಸಿದವರು, ಬೆಳೆಸಿದವರು ಮುಸ್ಲಿಂ ಸಂಗೀತ ಪಂಡಿತರು. ನಾವು ಅಡುಗೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳನ್ನು ಆಮದು ಮಾಡಿಕೊಂಡಿದ್ದು ಅರಬ್ ದೇಶಗಳಿಂದ. ಹೀಗೆ ಪರಸ್ಪರ ಬೆರೆತ ಭಾರತವೇ ಬಹುತ್ವ ಭಾರತ. ರಾಹುಲ್ ಗಾಂಧಿ ಹೇಳುತ್ತಿರುವುದು ಈ ಭಾರತದ ಬಗ್ಗೆ.

ನಮ್ಮ ದೇಶ ಮತ್ತು ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಯ ಹಿಂದೆ ಈ ದೇಶದ ಆಧಾರ ಸ್ತಂಭವನ್ನೆ ನೆಲಕ್ಕುರುಳಿಸುವ ಹುನ್ನಾರವಿದೆ. ಅದಕ್ಕಾಗಿ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ ಮಾತು ಶ್ಲಾಘನೀಯ.

ಆದರೆ ಕಾಂಗ್ರೆಸ್‌ನ ಎಲ್ಲರಲ್ಲೂ ಈ ಬದ್ಧತೆ ಇಲ್ಲ. ನೆಹರೂ, ಗಾಂಧಿ ಮನೆತನದ ಹೆಸರು ಹೇಳಿ ಅಧಿಕಾರಕ್ಕೆ ಬರುವುದೊಂದೇ ಅವರ ಏಕೈಕ ಅಜೆಂಡಾ. ತಮ್ಮ ನಂತರ ತಮ್ಮ ಮಕ್ಕಳನ್ನು ಉತ್ತರಾಧಿಕಾರಿಗಳನ್ನಾಗಿ ಸಿದ್ಧಗೊಳಿಸಿದ್ದಾರೆ. ಇದಕ್ಕಾಗಿ ಇವರನ್ನು ಅಧಿಕಾರಕ್ಕೆ ತರಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬೆವರು ಸುರಿಸಬೇಕು. ಇವರು ಕುರ್ಚಿ ಹಿಡಿದು ಮಜಾ ಮಾಡಬೇಕು. ಇದಿಷ್ಟೇ ಅವರ ಗುರಿ.

ಕಾಂಗ್ರೆಸ್‌ಗೆ ಜನರ ಮಧ್ಯದಲ್ಲಿ ಹೋಗಿ ಬೆಳೆಯಲು ಸಾಕಷ್ಟು ಅವಕಾಶಗಳಿದ್ದವು. ಹೊಸ ಪೀಳಿಗೆಯ ಯುವಕರು ಕೋಮುವಾದಿ ಸಂಘಟನೆಗಳತ್ತ ಹೋಗುವುದನ್ನು ತಡೆಯಬೇಕಾಗಿತ್ತು. ಕಳೆದ 2017ರಲ್ಲಿ ಇಂದಿರಾ ಗಾಂಧಿಯವರು ಬದುಕಿದ್ದರೆ ನೂರು ವರ್ಷ ತುಂಬುತ್ತಿತ್ತು. ದೇಶಕ್ಕಾಗಿ ಬಲಿದಾನ ಮಾಡಿದ ಆ ತಾಯಿಯ ಶತಮಾನೋತ್ಸವವನ್ನು ಕಾಂಗ್ರೆಸ್‌ನವರು ಸರಿಯಾಗಿ ಎಲ್ಲೂ ಆಚರಿಸಲಿಲ್ಲ. ಬಿಜೆಪಿಯವರು ತಮ್ಮ ಪಕ್ಷದ ಅಧ್ಯಕ್ಷರಾಗಿದ್ದ ಯಾರಿಗೂ ಗೊತ್ತಿಲ್ಲದ ದೀನ ದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಮಾಡಿದರು. ಕಾಂಗ್ರೆಸ್ ತನ್ನನ್ನು ತಾನು ಜನರ ಬಳಿ ಅನಾವರಣಗೊಳಿಸಿಕೊಳ್ಳಲು ಹಿಂಜರಿಯಿತು.

ಕಾಂಗ್ರೆಸ್‌ನ ಈ ವೈಫಲ್ಯಕ್ಕೆ ಕಾರಣ ಸ್ವಾತಂತ್ರಾನಂತರ ಅದು ತನ್ನ ಬೇರು ಮಟ್ಟದ ಪ್ರಭಾವವನ್ನು ಉಳಿಸಿಕೊಳ್ಳುವಲ್ಲಿ ಸೋಲನ್ನಪ್ಪಿತು. ಪಕ್ಷಕ್ಕೆ ಬರುವ ಕಾರ್ಯಕರ್ತರಿಗೆ ತನ್ನದೇ ಗಾಂಧಿ, ನೆಹರೂ ಸಿದ್ಧಾಂತದ ತರಬೇತಿ ನೀಡಲಿಲ್ಲ. ಪಕ್ಷಕ್ಕೆ ಅಧಿಕಾರಕ್ಕಾಗಿ ಬರುವವರ ಸಂಖ್ಯೆ ಹೆಚ್ಚಾಯಿತು. ಇಷ್ಟೆಲ್ಲ ದೌರ್ಬಲ್ಯಗಳಿದ್ದರೂ ಇಂದಿರಾ ಗಾಂಧಿಯವರ ಗರೀಬಿ ಹಠಾವೊ ಕಾರ್ಯಕ್ರಮ ಪಕ್ಷದ ಕೈ ಹಿಡಿಯಿತು. ಆದರೆ 70ರ ದಶಕದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣ ದೇಶದಲ್ಲಿ ನೆಲೆ ಕಂಡುಕೊಂಡಿತು. 60ರ ದಶಕದಲ್ಲಿ ಸೋಶಿಯಲಿಸ್ಟ್ ನಾಯಕ ರಾಮ ಮನೋಹರ್ ಲೋಹಿಯಾ ಅವರಿಂದ ಚಾಲನೆ ಪಡೆದ ಕಾಂಗ್ರೆಸ್ ವಿರೋಧಿ ರಾಜಕಾರಣ ಜೆಪಿ ಚಳವಳಿಯ ಕಾಲದಲ್ಲಿ ಉತ್ತುಂಗ ಸ್ಥಿತಿ ತಲುಪಿತು. ಇಂದಿರಾ ಗಾಂಧಿ 1977ರಲ್ಲಿ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡರು.

80ರ ದಶಕದ ಆರಂಭದಲ್ಲಿ ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿತ್ತು. ಅದರ ಬೆನ್ನಲ್ಲೇ ಪೂರ್ವ ಯುರೋಪ್‌ನ ಕಮ್ಯುನಿಸ್ಟ್ ಸರಕಾರಗಳು ಒಂದೊಂದಾಗಿ ಉರುಳಿದವು. ಅದಾದ ನಂತರ 90ರ ದಶಕದಲ್ಲಿ ಭಾರತದಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಜಾಗತೀಕರಣ, ಉದಾರೀಕರಣದ ಕರಾಳ ಶಕೆ ಆರಂಭವಾಯಿತು. ಇದಕ್ಕೆ ಪೂರಕವಾಗಿ 1992 ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡಿತು. ಆನಂತರ ದೇಶದ ರಾಜಕೀಯ ಚಿತ್ರವೇ ಬದಲಾಯಿತು.

ಈ ಎಲ್ಲ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಿಯೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಳ್ಳಬಹುದಿತ್ತು. ಆದರೆ ಅಷ್ಟರಲ್ಲಿ ಪಕ್ಷದ ಸಂಘಟನೆಯ ಜಂಘಾಬಲವೇ ಉಡುಗಿ ಹೋಗಿತ್ತು. ಇಂದಿರಾ ಗಾಂಧಿ ಹತ್ಯೆಯ ನಂತರ ರಾಜೀವ್ ಗಾಂಧಿ ಅವರ ಕೊಲೆಯ ನಂತರ ಸೋನಿಯಾ ಗಾಂಧಿ, ಅವರ ನಂತರ ರಾಹುಲ್ ಗಾಂಧಿ ಹೀಗೆ ಗಾಂಧಿ ಕುಟುಂಬವನ್ನೇ ಅವಲಂಬಿಸಿದ ಕಾಂಗ್ರೆಸ್ ಈಗ ತೀವ್ರ ಬಿಕ್ಕಟ್ಟಿನಲ್ಲಿದೆ. ಕಾಂಗ್ರೆಸ್ ಮುಕ್ತ ಮಾಡಲು ಹೊರಟ ಫ್ಯಾಶಿಸ್ಟ್‌ರ ಹೊಡೆತದಿಂದ ತತ್ತರಿಸಿ ಹೋಗಿದೆ.

ಇಂತಹ ಸನ್ನಿವೇಶದಲ್ಲಿ ತಲೆಗೊಬ್ಬರಂತೆ ಮಾತಾಡುತ್ತಿದ್ದಾರೆ. ‘ಕಾಂಗ್ರೆಸ್ ನಾಶವಾಗಬೇಕು’ ಎಂದು ಮಾಜಿ ಲೋಹಿಯಾವಾದಿ ಯೋಗೇಂದ್ರ ಯಾದವ್ ಶಾಪ ಕೊಟ್ಟಿದ್ದಾರೆ. ಅವರ ಈ ಮಾತಿನಿಂದ ಸಂಘ ಪರಿವಾರಕ್ಕೆ ಹಂಡೆ ಹಾಲು ಕುಡಿದಷ್ಟು ಸಂತಸವಾಗಿದೆ. ಆದರೆ, ಭಾರತದ ಬಹುಮುಖಿ ಸಮಾಜದ ಉಳಿವಿನ ದೃಷ್ಟಿಯಿಂದ ಕಾಂಗ್ರೆಸ್ ನಂಥ ಎಡಕ್ಕೆ ವಾಲಿದ ಸೆಂಟ್ರಿಸ್ಟ್ ಪಾರ್ಟಿ ಇರಬೇಕು. ಭಾರತದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಇದು ಅಗತ್ಯ. ಇಂದಿಗೂ ಕಾಂಗ್ರೆಸ್ ಯಾವುದೇ ಜಾತಿ, ಇಲ್ಲವೇ ಕೋಮಿಗೆ ಸೇರಿದ ಪಕ್ಷವಲ್ಲ. ಅದರಲ್ಲಿ ಎಲ್ಲ ಸಮುದಾಯಗಳ ಜನರಿದ್ದಾರೆ. ಎಲ್ಲ ಹಳ್ಳಿ, ಪಟ್ಟಣಗಳಲ್ಲಿ ಆ ಪಕ್ಷವಿದೆ. ಅದು ನಾಶವಾದರೆ ಅದರ ಜಾಗಕ್ಕೆ ಬರಲು ಇನ್ನೊಂದು ಸಮಾಜವಾದಿ ಪಕ್ಷ ಈ ದೇಶದಲ್ಲಿಲ್ಲ. ಸೋಶಿಯಲಿಸ್ಟರು ಮೊದಲೇ ತಮ್ಮ ಪಕ್ಷವನ್ನು ತಾವು ವಿಸರ್ಜಿಸಿಕೊಂಡಿದ್ದಾರೆ. ಇನ್ನು ಕಮ್ಯುನಿಸ್ಟರು ಕ್ರಿಯಾಶೀಲರಾಗಿದ್ದರು. ಫ್ಯಾಶಿಸ್ಟ್‌ರ ವಿರುದ್ಧ ಹೋರಾಡಲು ಅವರೊಬ್ಬರ ಶಕ್ತಿ ಸಾಲದು. ಪ್ರಾದೇಶಿಕ ಪಕ್ಷಗಳನ್ನು ನಂಬುವಂತಿಲ್ಲ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಅನಿವಾರ್ಯತೆ ದೇಶಕ್ಕೆ ಇದೆ. ‘ಕಾಂಗ್ರೆಸ್ ನಾಶವನ್ನು ನಾವು ಬಯಸುವುದಿಲ್ಲ’ ಎಂದು ಹಿರಿಯ ಮಾರ್ಕ್ಸ್‌ವಾದಿ ನಾಯಕ ಹರಕಿಷನ್ ಸಿಂಗ್ ಸುರ್ಜಿತ ಅವರು 90ರ ದಶಕದಲ್ಲಿ ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದೆ.

ರಾಹುಲ್ ಗಾಂಧಿ ಭಾರತದ ಪರಿಕಲ್ಪನೆಯ ಬಗ್ಗೆ ಹೇಳಿದ ಮಾತು ಇಡೀ ಕಾಂಗ್ರೆಸ್ ಪಕ್ಷದ ಮಾತಾಗಬೇಕು. ಆಗ ಮಾತ್ರ ಬಹುತ್ವ ಭಾರತವನ್ನು ಫ್ಯಾಶಿಸಂನಿಂದ ರಕ್ಷಿಸಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)