varthabharthi

ಕ್ರೀಡೆ

ಇಂದು ಭಾರತ-ಕಿವೀಸ್ ಹೆವೋಲ್ಟೇಜ್ ಸೆಮಿಫೈನಲ್

ವಾರ್ತಾ ಭಾರತಿ : 9 Jul, 2019

ಮ್ಯಾಂಚೆಸ್ಟರ್, ಜು.8: ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ.

 ಭಾರತ ವಿಶ್ವಕಪ್‌ನಲ್ಲಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 15 ಅಂಕಗಳನ್ನು ಪಡೆದು ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ನ್ಯೂಝಿಲ್ಯಾಂಡ್ 5 ಪಂದ್ಯಗಳಲ್ಲಿ ಜಯ ಗಳಿಸಿ 11 ಅಂಕಗಳನ್ನು ಪಡೆದು ಅಂಕಪಟ್ಟಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದೆ.

ಪಾಕಿಸ್ತಾನ ಕೂಡಾ ನ್ಯೂಝಿಲ್ಯಾಂಡ್‌ನಷ್ಟೇ ಅಂಕಗಳನ್ನು ಪಡೆದಿದ್ದರೂ ರನ್‌ರೇಟ್‌ನಲ್ಲಿ ಹಿನ್ನಡೆ ಅನುಭವಿಸಿ, ಸೆಮಿಫೈನಲ್ ಅವಕಾಶ ವಂಚಿತಗೊಂಡಿದೆ.

    ಭಾರತದ ಅಗ್ರ ಸರದಿಯ ಬ್ಯಾಟಿಂಗ್ ಬಲಿಷ್ಠವಾಗಿದ್ದು, ರೋಹಿತ್ ಶರ್ಮಾ ಅವರು ನ್ಯೂಝಿಲ್ಯಾಂಡ್‌ನ ದಾಳಿಯನ್ನು ಚಿಂದಿ ಉಡಾಯಿಸಲು ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ರೋಹಿತ್ ಶರ್ಮಾ , ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ ಅವರು ನ್ಯೂಝಿಲ್ಯಾಂಡ್‌ನ ಲ್ಯೂಕೆ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್, ಮತ್ತು ಮ್ಯಾಟ್ ಹೆನ್ರಿ ದಾಳಿಯನ್ನು ಸಮರ್ಥವಾಗಿ ಎದುರಿಸಿದರೆ, ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸ್‌ರನ್ನು ಸ್ಪಿನ್ನರ್‌ಗಳು , ರಾಸ್ ಟೇಲರ್‌ನ್ನು ಜಸ್‌ಪ್ರೀತ್ ಬುಮ್ರಾ ಕಟ್ಟಿ ಹಾಕಿದರೆ ಭಾರತಕ್ಕೆ ಗೆಲುವು ಸಾಧ್ಯ.

ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿದ್ದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನೆರ್ ತಂತ್ರವನ್ನು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಚೆನ್ನಾಗಿ ಅರಿತುಕೊಂಡಿದ್ದಾರೆ. ಭಾರತಕ್ಕೆ ರೋಹಿತ್ ಶರ್ಮಾ (647 ರನ್), ಲೋಕೇಶ್ ರಾಹುಲ್(360 ರನ್ ), ವಿರಾಟ್ ಕೊಹ್ಲಿ(442 ರನ್) ಬ್ಯಾಟಿಂಗ್‌ನಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ನ್ಯೂಝಿಲ್ಯಾಂಡ್‌ಗೆ ಬೌಲರ್‌ಗಳಾದ ಫರ್ಗ್ಯುಸನ್ (17 ವಿಕೆಟ್), ಬೌಲ್ಟ್(15 ವಿಕೆಟ್), ಮ್ಯಾಟ್ ಹೆನ್ರಿ(10 ವಿಕೆಟ್ ), ಆಲ್‌ರೌಂಡರ್‌ಗಳಾದ ಜಿಮ್ಮಿ ನಿಶಾಮ್ (11 ವಿಕೆಟ್) ಮತ್ತು ಕಾಲಿನ್ ಡಿ ಗ್ರಾಂಡ್‌ಹೋಮ್(5 ವಿಕೆಟ್ ) ಯಶಸ್ಸು ತಂದು ಕೊಟ್ಟಿದ್ದಾರೆ. ನ್ಯೂಝಿಲ್ಯಾಂಡ್‌ನ ಬ್ಯಾಟಿಂಗ್ ಚೆನ್ನಾಗಿಲ್ಲ. ಅಗ್ರಸರದಿಯ ಬ್ಯಾಟ್ಸ್‌ಮನ್‌ಗಳಾದ ವಿಲಿಯಮ್ಸನ್ ಒಟ್ಟು 481 ರನ್ ಮತ್ತು ರಾಸ್ ಟೇಲರ್ 261 ರನ್ ದಾಖಲಿಸಿದ್ದಾರೆ. ಭಾರತದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ (17 ವಿಕೆಟ್) ಮತ್ತು ಮುಹಮ್ಮದ್ ಶಮಿ (14 ವಿಕೆಟ್) ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

►ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ರಿಷಭ್ ಪಂತ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮಾಯಾಂಕ್ ಅಗರ್‌ವಾಲ್, ರವೀಂದ್ರ ಜಡೇಜ, ಕೇದಾರ್ ಜಾಧವ್.

►ನ್ಯೂಝಿಲ್ಯಾಂಡ್: ಕೇನ್ ವಿಲಿಯಮ್ಸನ್(ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ರಾಸ್ ಟೇಲರ್, ಟಾಮ್ ಲಥಾಮ್(ವಿಕೆಟ್ ಕೀಪರ್), ಟಾಮ್ ಬ್ಲುಂಡೆಲ್, ಕಾಲಿನ್ ಡಿ ಗ್ರಾಂಡ್‌ಹೋಮ್, ಜಿಮ್ಮಿ ನಿಶಾಮ್, ಟ್ರೆಂಟ್ ಬೌಲ್ಟ್, ಲ್ಯುಕೆ ಫರ್ಗ್ಯುಸನ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನೆರ್, ಹೆನ್ರಿ ನಿಕೊಲ್ಸ್, ಟಿಮ್ ಸೌಥಿ, ಐಶ್ ಸೋಧಿ.

ಪಂದ್ಯದ ಸಮಯ: ಅಪರಾಹ್ನ 3:00 ಗಂಟೆಗೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)