varthabharthi

ಕ್ರೀಡೆ

ವಿಶ್ವಕಪ್‌ನಲ್ಲಿ ಭಾರತ-ನ್ಯೂಝಿಲ್ಯಾಂಡ್ ಇತಿಹಾಸ

ವಾರ್ತಾ ಭಾರತಿ : 9 Jul, 2019

ಮ್ಯಾಂಚೆಸ್ಟರ್, ಜು.9: ಭಾರತ ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಗ್ರೂಪ್ ಹಂತದಲ್ಲಿ ಆಡಬೇಕಾಗಿದ್ದ ಪಂದ್ಯ ಮಳೆಗಾಹುತಿಯಾಗಿತ್ತು. ಮಂಗಳವಾರ ಮ್ಯಾಂಚೆಸ್ಟರ್‌ನಲ್ಲಿ ಮತ್ತೊಮ್ಮೆ ಕಿವೀಸನ್ನು ಸೆಮಿ ಫೈನಲ್‌ನಲ್ಲಿ ಎದುರಿಸಲಿದೆ. ಟೂರ್ನಿ ಆರಂಭವಾಗುವ ಮೊದಲು ಅಭ್ಯಾಸ ಪಂದ್ಯದಲ್ಲಿ ಟ್ರೆಂಟ್‌ಬೌಲ್ಟ್ ನೇತೃತ್ವದ ನ್ಯೂಝಿಲ್ಯಾಂಡ್ ವೇಗದ ಬೌಲಿಂಗ್ ವಿಭಾಗ ಭಾರತದ ಬ್ಯಾಟಿಂಗ್ ಸರದಿಯನ್ನು ಭೇದಿಸಿ 6 ವಿಕೆಟ್‌ಗಳ ಜಯ ಸಾಧಿಸಿತ್ತು.

ವಿಶ್ವಕಪ್‌ನ ಹೆಡ್-ಟು-ಹೆಡ್ ದಾಖಲೆಯಲ್ಲಿ ನ್ಯೂಝಿಲ್ಯಾಂಡ್ ತಂಡ ಭಾರತ ವಿರುದ್ಧ ಮೇಲುಗೈ ಸಾಧಿಸಿದೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು 7 ಬಾರಿ ಸೆಣಸಾಡಿದ್ದು, ಈ ಪೈಕಿ 4ರಲ್ಲಿ ನ್ಯೂಝಿಲ್ಯಾಂಡ್ ಗೆಲುವಿನ ನಗೆ ಬೀರಿದೆ.

► ಭಾರತ-ನ್ಯೂಝಿಲ್ಯಾಂಡ್ 1975ರಲ್ಲಿ ಮೊದಲ ಮುಖಾಮುಖಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 230 ರನ್ ಗಳಿಸಿತ್ತು. ಭಾರತದ ಪರ ಅಬಿದ್ ಅಲಿ ಅರ್ಧಶತಕ ದಾಖಲಿಸಿದ್ದರು. ಆಲ್‌ರೌಂಡರ್ ಅಲಿ 98 ಎಸೆತಗಳಲ್ಲಿ 70 ರನ್ ಗಳಿಸಿದ್ದರು. ಕಿವೀಸ್ ತಂಡ ಗ್ಲೆನ್ ಟರ್ನರ್ ಶತಕದ ನೆರವಿನಿಂದ 58.5 ಓವರ್‌ಗಳಲ್ಲಿ 6 ವಿಕೆಟ್‌ಗಳ ಗೆಲುವು ದಾಖಲಿಸಿತ್ತು.

► 1979ರಲ್ಲಿ ಪ್ರಾಬಲ್ಯ ಕಾಯ್ದುಕೊಂಡಿದ್ದ ಕಿವೀಸ್

ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ನ್ಯೂಝಿಲ್ಯಾಂಡ್ 182 ರನ್‌ಗೆ ನಿಯಂತ್ರಿಸಿತ್ತು. ಸುನೀಲ್ ಗವಾಸ್ಕರ್ 55 ರನ್ ಗಳಿಸಿ ಹ್ಯಾಡ್ಲಿಗೆ ವಿಕೆಟ್ ಒಪ್ಪಿಸಿದ್ದರು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಕಿವೀಸ್ ತಂಡ ಬ್ರೂಸ್ ಎಡ್ಗರ್(84) ಹಾಗೂ ಟರ್ನರ್(43)ಸಾಹಸದಿಂದ 8 ವಿಕೆಟ್ ಜಯ ದಾಖಲಿಸಿತು.

► 1987ರ ವಿಶ್ವಕಪ್: ಭಾರತಕ್ಕೆ ಗೆಲುವು ತಂದ ಸಿಧು ಹಾಗೂ ಕಪಿಲ್ ದೇವ್

1987ರಲ್ಲಿ ಮೊದಲ ಬಾರಿ ಉಪ-ಖಂಡದಲ್ಲಿ ವಿಶ್ವಕಪ್ ಆಯೋಜಿಸಲಾಗಿತ್ತು. ಹಾಲಿ ಚಾಂಪಿಯನ್ ಭಾರತ ನವಜೋತ್ ಸಿಂಗ್ ಸಿಧು(75 ರನ್, 71 ಎಸೆತ) ಹಾಗೂ ನಾಯಕ ಕಪಿಲ್‌ದೇವ್(72 ರನ್, 58 ಎಸೆತ) ಬೆಂಬಲದಿಂದ 7 ವಿಕೆಟ್‌ಗೆ 252 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕಿವೀಸ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು. ಭಾರತ ತಂಡ ಮೊದಲ ಬಾರಿ ಕಿವೀಸ್ ವಿರುದ್ಧ ವಿಶ್ವಕಪ್‌ನಲ್ಲಿ ಜಯ ಸಾಧಿಸಿತು.

► 1987ರ ವಿಶ್ವಕಪ್: ಗವಾಸ್ಕರ್ ಶತಕ, ಚೇತನ್ ಶರ್ಮಾ ಹ್ಯಾಟ್ರಿಕ್

1987ರ ಅಕ್ಟೋಬರ್ 31 ರಂದು ಭಾರತ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಲು ನ್ಯೂಝಿಲ್ಯಾಂಡ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುವ ಅಗತ್ಯವಿತ್ತು. ಚೇತನ್ ಶರ್ಮಾ ಸತತ ಮೂರು ಎಸೆತಗಳಲ್ಲಿ ರುಥರ್‌ಫೋರ್ಡ್, ಇಯಾನ್ ಸ್ಮಿತ್ ಹಾಗೂ ಎವೆನ್ ಚಾಟ್‌ಫೀಲ್ಡ್ ವಿಕೆಟ್ ಪಡೆದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.ದೊಡ್ಡ ಮೊತ್ತದತ್ತ ಸಾಗುತ್ತಿದ್ದ ಕಿವೀಸ್‌ನ್ನು 9 ವಿಕೆಟ್‌ಗೆ 221 ರನ್‌ಗೆ ಕಡಿವಾಣ ಹಾಕಲಾಗಿತ್ತು. ಶರ್ಮಾ ಸಾಹಸದ ಬಳಿಕ ಭಾರತದ ದಾಂಡಿಗರು 42.2 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿದರು. ಗವಾಸ್ಕರ್ ಹಾಗೂ ಶ್ರೀಕಾಂತ್ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ ಮೊದಲ ವಿಕೆಟ್‌ಗೆ 136 ರನ್ ಸೇರಿಸಿದರು. ಶ್ರೀಕಾಂತ್ ಅರ್ಧಶತಕ(75 ರನ್, 58 ಎಸೆತ)ಗಳಿಸಿದರೆ ಗವಾಸ್ಕರ್ ವೃತ್ತಿಜೀವನದ ಏಕೈಕ ಶತಕ ದಾಖಲಿಸಿ ಭಾರತಕ್ಕೆ 107 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.

► 1992ರ ವಿಶ್ವಕಪ್: ತೆಂಡುಲ್ಕರ್ ಅರ್ಧ ಶತಕ ವ್ಯರ್ಥ

1987ರ ವಿಶ್ವಕಪ್‌ನಲ್ಲಿ 2 ಬಾರಿ ಭಾರತವನ್ನು ಸೋಲಿಸಲು ವಿಫಲವಾಗಿದ್ದ ಕಿವೀಸ್ 1992ರ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತೆಂಡುಲ್ಕರ್ ಅರ್ಧಶತಕ(84)ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಕಿವೀಸ್ 47.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

► 1999ರ ವಿಶ್ವಕಪ್: ನ್ಯೂಝಿಲ್ಯಾಂಡ್ ಗೆ ಮತ್ತೊಮ್ಮೆ ಸೋತ ಭಾರತ

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿರಂತರವಾಗಿ ವಿಕೆಟ್ ಕಳೆದುಕೊಂಡರೂ ಅಜಯ್ ಜಡೇಜ (76, 103 ಎಸೆತ)ಅರ್ಧಶತಕದ ನೆರವಿನಿಂದ 250ಕ್ಕೂ ಅಧಿಕ ರನ್ ಗಳಿಸಿತು. ಕಿವೀಸ್ 48.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು.

►2003ರ ವಿಶ್ವಕಪ್: ಮಿಂಚಿದ ಝಹೀರ್ ಖಾನ್, ಭಾರತಕ್ಕೆ ಜಯ

ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ನ್ಯೂಝಿಲ್ಯಾಂಡ್ ತಂಡ ಪಂದ್ಯದ ಮೊದಲ ಓವರ್‌ನಲ್ಲಿ ಮೆಕ್‌ಮಿಲನ್ ಹಾಗೂ ಅಸ್ಟ್ಲೇ ವಿಕೆಟ್ ಕಳೆದುಕೊಂಡಿತು. ಈ ಇಬ್ಬರು ಝಹೀರ್‌ಖಾನ್‌ಗೆ ವಿಕೆಟ್ ಒಪ್ಪಿಸಿದ್ದರು. ಬ್ರೆಂಡನ್ ಮೆಕಲಂ ಹಾಗೂ ಕ್ರಿಸ್ ಹ್ಯಾರಿಸ್ ವಿಕೆಟ್ ಪಡೆದ ಝಹೀರ್ ನ್ಯೂಝಿಲ್ಯಾಂಡ್‌ನ್ನು 146 ರನ್‌ಗೆ ನಿಯಂತ್ರಿಸಿದರು.

ಭಾರತ ರನ್ ಬೆನ್ನಟ್ಟುವಾಗ ವೀರೇಂದ್ರ ಸೆಹ್ವಾಗ್, ಸೌರವ್ ಗಂಗುಲಿ ಹಾಗೂ ಸಚಿನ್ ತೆಂಡುಲ್ಕರ್‌ರನ್ನು 21 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಆಗ ಮುಹಮ್ಮದ್ ಕೈಫ್ ಹಾಗೂ ರಾಹುಲ್ ದ್ರಾವಿಡ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ತಂಡವನ್ನು ಆಧರಿಸಿದರು. ಭಾರತಕ್ಕೆ ಇನ್ನೂ 56 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.

ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತ

ಭಾರತ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಆರು ಬಾರಿ ಸೆಮಿ ಫೈನಲ್‌ನಲ್ಲಿ ಸೆಣಸಾಡಿದೆ. 3ರಲ್ಲಿ ಗೆಲುವು, ಇನ್ನೂ 3ರಲ್ಲಿ ಸೋಲು ಕಂಡಿದೆ. ಇದೀಗ 7ನೇ ಬಾರಿ ಸೆಮಿ ಫೈನಲ್‌ಗೆ ತಲುಪಿರುವ ಭಾರತ ಜು.14 ರಂದು ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಪಡೆಯಲು ನ್ಯೂಝಿಲ್ಯಾಂಡ್‌ನೊಂದಿಗೆ ಹೋರಾಟ ನಡೆಸಲಿದೆ.

ಭಾರತ ವಿಶ್ವಕಪ್‌ನಲ್ಲಿ ಸತತ ಮೂರನೇ ಬಾರಿ ಅಂತಿಮ-4ರ ಹಂತ ತಲುಪಿದೆ. 2011ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ 2015ರಲ್ಲಿ ಆಸ್ಟ್ರೇಲಿಯಕ್ಕೆ ಸೋಲುಂಡಿತ್ತು.

  • 1983ರ ವಿಶ್ವಕಪ್, ಮ್ಯಾಂಚೆಸ್ಟರ್, ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಜಯ
  • 1987ರ ವಿಶ್ವಕಪ್, ಮುಂಬೈ, ಇಂಗ್ಲೆಂಡ್ ವಿರುದ್ಧ 35 ರನ್ ಸೋಲು
  • 1996ರ ವಿಶ್ವಕಪ್, ಕೋಲ್ಕತಾ, ಶ್ರೀಲಂಕಾ ವಿರುದ್ಧ ಸೋಲು
  • 2003ರ ವಿಶ್ವಕಪ್, ಡರ್ಬನ್, ಕೀನ್ಯ ವಿರುದ್ಧ 91 ರನ್ ಗೆಲುವು
  • 2011ರ ವಿಶ್ವಕಪ್, ಮೊಹಾಲಿ-ಪಾಕ್ ವಿರುದ್ಧ 29 ರನ್ ಗೆಲುವು
  • 2015ರ ವಿಶ್ವಕಪ್, ಸಿಡ್ನಿ, ಆಸ್ಟ್ರೇಲಿಯ ವಿರುದ್ದ 95 ರನ್ ಸೋಲು

► ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್

ಆಡಿದ ಪಂದ್ಯಗಳು: 07, ಗೆಲುವು: 01, ಸೋಲು: 06

 ವರ್ಷ​      ಎದುರಾಳಿ         ಸ್ಥಳ                 ಫಲಿತಾಂಶ

1975  ವೆಸ್ಟ್‌ಇಂಡೀಸ್  ಓವಲ್  5 ವಿಕೆಟ್‌ಗಳ ಸೋಲು
1979   ಇಂಗ್ಲೆಂಡ್‌  ಮ್ಯಾಂಚೆಸ್ಟರ್  9 ರನ್‌ಗಳ ಸೋಲು
1992   ಪಾಕಿಸ್ತಾನ   ಆಕ್ಲೆಂಡ್   4 ವಿಕೆಟ್‌ಗಳ ಸೋಲು
1999   ಪಾಕಿಸ್ತಾನ  ಮ್ಯಾಂಚೆಸ್ಟರ್  9 ವಿಕೆಟ್‌ಗಳ ಸೋಲು
2007   ಶ್ರೀಲಂಕಾ   ಕಿಂಗ್ಸ್‌ಸ್ಟನ್  81 ರನ್‌ಗಳ ಸೋಲು
2011  ಶ್ರೀಲಂಕಾ  ಕೊಲಂಬೊ  5 ವಿಕೆಟ್‌ಗಳ ಸೋಲು
2015  ದ. ಆಫ್ರಿಕ  ಆಕ್ಲೆಂಡ್   4 ವಿಕೆಟ್‌ಗಳ ಗೆಲುವು

                            ‌                 

                                        

                                               

                                             

                                                   

                                               

                                                   

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)