varthabharthi

ನಿಮ್ಮ ಅಂಕಣ

ಜನಪ್ರತಿನಿಧಿಗಳೇ, ವಿಶ್ವಾಸ ಅಲುಗಾಡುತ್ತಿದೆ!

ವಾರ್ತಾ ಭಾರತಿ : 9 Jul, 2019
-ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು

ಮಾನ್ಯರೆ,

ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ, ಸಭೆಗಳಲ್ಲಿ ಜನಪ್ರತಿನಿಧಿಗಳು - (ಸ್ಥಳೀಯ ಸಂಸ್ಥೆ, ಶಾಸಕರು, ಸಂಸದರು ಮತ್ತು ಸಂಬಂಧಪಟ್ಟ ಅಧಿಕಾರಿಗಳು) ಆಗಾಗ ರಸ್ತೆ, ನೀರು, ಕೈಗಾರಿಕೆ, ಆರ್ಥಿಕ ಯೋಜನೆ, ಅಶನ, ವಸನ, ವಸತಿ ಸಹಿತ ಸಕಲ ಸೌಕರ್ಯಗಳ ಆಶ್ವಾಸನೆ ನೀಡುವುದು, ಸಚಿತ್ರವಾಗಿ ಕರತಾಡನಾದಿ ಸರ್ವ ಆಲಂಕಾರಿಕ ಸಹಿತ ಬರುತ್ತವೆ. ಸರಿ, ಅವರು ಹೇಳುವುದು ಸತ್ಯ ಮತ್ತು ಪ್ರಾಮಾಣಿಕವೇ ಇದ್ದೀತು. ಅವರೆಲ್ಲ ನಮ್ಮ ನಡುವಿನ ನಮ್ಮವರೇ. ಆದರೆ ರಸ್ತೆ ಹಾಳಾದಾಗ, ಸರಿಯಾದಾಗ, ಉದ್ಘಾಟಿಸಿದಾಗ, ಫಲಕ ಹಾಕುವಾಗ ಗಿಡ (ಒಂದೇ ಇದ್ದರೂ) ನೆಡುವಾಗ ಇವರ ಚಿತ್ರವೇ ಬರುತ್ತವೆ. ಹಾಳಾದಷ್ಟು ಹೆಚ್ಚು ಸಲ ಬರುತ್ತದೆ. ಆಶ್ವಾಸನೆಗಳು ಮಾತ್ರ ತೀರಾ ತಡವಾಗಿ, ಅರೆಬರೆಯಾಗಿ ಹೇಗೋ ‘ನೆರವೇರಿದಂತೆ’ ಮಾಡುವುದೇ ಅಧಿಕ. -ಈ ವಿಚಾರದಲ್ಲಿ ಎಲ್ಲ ಪಕ್ಷಗಳು ಒಂದೇ. ಯಾರನ್ನೂ ವಿಶೇಷವಾಗಿ ದೂರುವಂತಿಲ್ಲ!. ಯಾಕೆ ಹೀಗೆ? ಹೊಂಡವಿಲ್ಲದ ರಸ್ತೆ, ಕುಡಿಯುವ ನೀರು, ಪಠ್ಯಪುಸ್ತಕ ಅಗತ್ಯ, ಪ್ರಾಥಮಿಕ ಶಾಲಾ ಕಟ್ಟಡ -ಇಂತಹದ್ದನ್ನು ಸಕಾಲಕ್ಕೆ ಕೊಡಿಸಲು ಯಾಕೆ ಆಗುವುದಿಲ್ಲ.? ಇದು ಗಂಭೀರ ಪ್ರಶ್ನೆ. ಜನಪ್ರತಿನಿಧಿಗಳ ಸರ್ವಜ್ಞತೆ-ಸಂಸ್ಕೃತಿ, ಶಿಕ್ಷಣ, ಸಾಹಿತ್ಯ, ಕಲೆ, ನಗರ ನಿರ್ಮಾಣ, ದೇಶ ವಿದೇಶ ನೀತಿ, ಚರಂಡಿ ಯೋಜನೆ, ಅಣುಶಕ್ತಿ, ಕೃಷಿ, ಗೊಬ್ಬರ ತಯಾರಿ, ಹೈವೇ ಸುಧಾರಣೆ ಎಲ್ಲದರ ಬಗೆಗೆ ಮಾತನಾಡುವ ಅದ್ಭುತ ಜ್ಞಾನಗಳು ನಿಜವಿದ್ದರೂ ಹಾಸ್ಯಾಸ್ಪದವಾಗುತ್ತವೆೆ ಯಾಕೆ?

ಜನಪ್ರತಿನಿಧಿಗಳು ಗಂಭೀರವಾಗಿ ಯೋಚಿಸಬೇಕು. ಇದು ಆಡಳಿತ ಪಕ್ಷ ಪ್ರತಿಪಕ್ಷ ಪ್ರಶ್ನೆ ಅಲ್ಲ ಪ್ರಜಾತಂತ್ರದ ಉಳಿವಿನ ಪ್ರಶ್ನೆ. ಜನಪ್ರತಿನಿಧಿಗಳಿಗೆ ಹಿರಿಯ ಸಾಮಾಜಿಕ ಮುಂದಾಳು ಹರಿಕೃಷ್ಣ ಪುನರೂರು ಅವರು ನೇರವಾಗಿಯೇ ಹೇಳಿದ ವಿಚಾರ ಜ್ಞಾಪಿಸುವುದು ತಪ್ಪಾಗದು. ‘‘ಸ್ವಾಮೀ ನಮ್ಮ ನ್ಯಾಯಬದ್ಧವಾದ ಸಣ್ಣ ಬೇಡಿಕೆಗಳನ್ನೂ ನೀವು ಈಡೇರಿಸುವುದಿಲ್ಲ. ನಾವೇನು ನಕ್ಸಲೈಟ್ ಆಗಬೇಕೆನ್ನುತ್ತೀರೋ!’’ ಹೌದಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)