varthabharthi

ನಿಮ್ಮ ಅಂಕಣ

ಭಗವಾನ್‌ರ ಹೇಳಿಕೆಗಳ ಸಮರ್ಥಕರು....!

ವಾರ್ತಾ ಭಾರತಿ : 10 Jul, 2019
ಇಸ್ಮತ್ ಪಜೀರ್

ನಮ್ಮ ಕಾಲದಲ್ಲಿ ಕನ್ನಡ ಸಾಹಿತಿ ಭಗವಾನ್‌ರಷ್ಟು ಶ್ರೀರಾಮನನ್ನು ಟೀಕಿಸಿದವರು ಇನ್ನೊಬ್ಬರಿಲ್ಲ.. ಭಗವಾನ್ ಹೇಳಿಕೆಗಳು ಎಷ್ಟು ಕೆಟ್ಟವಾಗಿರುತ್ತದೆಂದರೆ ರಾಮನ ಮೇಲೆ ವಿಶ್ವಾಸವಿಲ್ಲದವರೂ, ರಾಮನ ಕುರಿತಂತೆ ಒಳ್ಳೆಯ ಅಭಿಪ್ರಾಯವಿಲ್ಲದವರೂ ಭಗವಾನ್‌ರ ಹೇಳಿಕೆಗಳನ್ನು ವಿರೋಧಿಸುವಷ್ಟು. ದೇಶದ ಬಹುತೇಕ ಪ್ರಗತಿಪರರು ರಾಮನ ಮೇಲೆ ವಿಶ್ವಾಸವಿರುವವರಲ್ಲ. ಆದರೆ ಅವರು ಭಗವಾನ್‌ರ ಪರ ಯಾವತ್ತೂ ನಿಲ್ಲಬಯಸುವುದಿಲ್ಲ. ಏಕೆಂದರೆ ಮೊದಲನೆಯದಾಗಿ ನಮಗೆ ವಿಶ್ವಾಸ ಇಲ್ಲ ಎಂದ ಮಾತ್ರಕ್ಕೆ ಇತರರ ನಂಬಿಕೆಗೆ ಅಷ್ಟೊಂದು ಕೀಳಾಗಿ ಯಾವ ಕಾರಣಕ್ಕೂ ಘಾಸಿ ಮಾಡುವುದು, ಭಾವನೆಗಳನ್ನು ನೋಯಿಸುವುದು ಸಲ್ಲ ಎಂದೇ ಬಹುತೇಕ ಪ್ರಗತಿಪರರ ವಾದ.

ಎರಡನೆಯದಾಗಿ ಒಂದೇ ವಿಚಾರವನ್ನು ಪದೇ ಪದೇ ಅನವಶ್ಯಕ ಕೆರೆದು ಹುಣ್ಣು ಶಾಶ್ವತವಾಗಿ ವಾಸಿಯಾಗದಂತೆ ಮಾಡುವುದೂ ಒಪ್ಪತಕ್ಕದ್ದಲ್ಲ.
ರಾಮಭಕ್ತರೆಲ್ಲರೂ ಆರೆಸ್ಸೆಸ್‌ನ ಮನುಷ್ಯ ವಿರೋಧೀ ಸಿದ್ಧಾಂತವನ್ನು ಒಪ್ಪುವವರಲ್ಲ ಮತ್ತು ಸಂಘಪರಿವಾರವನ್ನು ವಿರೋಧಿಸುವ ಬಹಳಷ್ಟು ರಾಮಭಕ್ತರೂ ಇದ್ದಾರೆ.
ಮೂರನೆಯದಾಗಿ ಭಗವಾನ್ ಮಾಡುವಂತಹ ಟೀಕೆ ಎಷ್ಟು ಕೆಟ್ಟದಾಗಿರುತ್ತದೋ ಅಷ್ಟು ಬಲಪಂಥೀಯರಿಗೆ ಲಾಭ. ರಾಜಕೀಯವಾಗಿ ಅದು ಅವರ ಮತಬ್ಯಾಂಕನ್ನು ಮತ್ತಷ್ಟು ಮಜಬೂತಾಗಿಸುತ್ತದೆ.
 ರಾಮನ ಮೇಲೆ ನಂಬಿಕೆಯಿಲ್ಲದಂತಹ ನಾನು ಮತ್ತು ನನ್ನಂತಹ ಪ್ರಗತಿಪರ ಧೋರಣೆಯುಳ್ಳವರೆಲ್ಲಾ ರಾಮಾಯಣವನ್ನು ಭಾರತದ ಶ್ರೇಷ್ಠ ಪೌರಾಣಿಕ ಮಹಾಕಾವ್ಯಗಳಲ್ಲೊಂದು ಎಂದು ಒಪ್ಪುತ್ತೇವೆ. ಜೊತೆಜೊತೆಗೆ ರಾಮಾಯಣದ ಕುರಿತಂತೆ ನಾವು ಬೇರೆ ಬೇರೆ ಆಯಾಮಗಳಲ್ಲಿ ಯೋಚಿಸುತ್ತೇವೆ, ಚರ್ಚಿಸುತ್ತೇವೆ. ಯಾವ ಕಾರಣಕ್ಕೂ ರಾಮಾಯಣ ಎಂಬ ಮಹಾಕಾವ್ಯವನ್ನು ನಿರಾಕರಿಸುವುದಿಲ್ಲ. ಉದಾಹರಣೆಗೆ ರಾಮನ ಮೇಲೆ ಎಳ್ಳಷ್ಟೂ ನಂಬಿಕೆ, ಭಕ್ತಿ ಇವ್ಯಾವುವೂ ಇಲ್ಲದ ನಾನು ಕೂಡಾ ರಾಮಾಯಣವನ್ನು ಆಸಕ್ತಿಯಿಂದ ಓದಿದ್ದೇನೆ, ತುಸು ಅಭ್ಯಸಿಸಿದ್ದೇನೆ ಮತ್ತು ಅಲ್ಲಿನ ಕೆಲವು ವಿಚಾರಗಳ ಬಗ್ಗೆ ಸಾಹಿತ್ಯದ ವೇದಿಕೆಗಳಲ್ಲಿ ನನ್ನ ತಕರಾರನ್ನು ಎತ್ತಿರುತ್ತೇನೆ. ಆದರೆ ಯಾವತ್ತೂ ರಾಮಭಕ್ತರ ನಂಬಿಕೆಗಳಿಗೆ ಘಾಸಿಯುಂಟು ಮಾಡಿಲ್ಲ. ಶಂಭೂಕ ವಧೆಯ ಕುರಿತಂತೆ ನನಗಿರುವ ತಕರಾರುಗಳ ಕುರಿತಂತೆ ಸಾಹಿತ್ಯದ ನೆಲೆಯಲ್ಲಿ ಚರ್ಚಿಸಿದ್ದೇನೆ. ಶೂರ್ಪನಖಿಯ ಮೂಗು ಮತ್ತು ಮೊಲೆ ಕೊಯ್ಯುವ ಅಮಾನವೀಯ ಪ್ರಸಂಗವನ್ನು ಕುರಿತ ಅಧ್ಯಾಯವನ್ನು ಓದುತ್ತಾ ಪ್ರೇಮ ಭಿಕ್ಷೆ ಬೇಡಿದ ಶೂರ್ಪನಖಿಗಾಗಿ ಮರುಗಿದ್ದೇನೆ. ಅದರಾಚೆಗೆ ಕನಕದಾಸರ ‘ರಾಮಧಾನ್ಯ ಚರಿತೆ’ ಎಂಬ ಮಹಾಕಾವ್ಯವನ್ನು ನನ್ನ ಮಾತೃ ಭಾಷೆ ಬ್ಯಾರಿಗೆ ಅನುವಾದಿಸಿದ್ದೇನೆ. ಕನಕದಾಸರ ರಾಮಧಾನ್ಯ ಚರಿತೆಯಲ್ಲಿ ರಾಗಿ ಮತ್ತು ಅಕ್ಕಿಯ ನಡುವಿನ ಮೇಲು ಕೀಳೆಂಬ ವಾಗ್ವಾದವನ್ನು ಆಸ್ವಾದಿಸಿದ್ದೇನೆ. ಅಲ್ಲಿ ರಾಗಿಯನ್ನು ಕೀಳೆಂದು ಹೀಗಳೆದ ಅಕ್ಕಿಯ ವಿರುದ್ಧ ಅರ್ಥಾತ್ ನ್ಯಾಯದ ಪರವಾಗಿ ರಾಜ ಶ್ರೀರಾಮಚಂದ್ರ ನೀಡಿದ ತೀರ್ಪನ್ನು ಮೆಚ್ಚಿದ್ದೇನೆ.

ಇವನ್ನೆಲ್ಲಾ ನಾನಾಗಲೀ ನಾವು ರಾಮನನ್ನು ನಂಬದ ಯಾರೇ ಆಗಲೀ ಯಾಕೆ ಮಾಡಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ದೃಷ್ಟಿಯಲ್ಲಿ ರಾಮಾಯಣ ಭಾರತದ ಒಂದು ಸುಂದರ ಮಹಾಕಾವ್ಯ.

ಕನ್ನಡದ ವಿವಿಧ ಸಾಹಿತಿಗಳು ರಾಮಾಯಣವನ್ನು ಬೇರೆ ಬೇರೆ ರೀತಿಯಲ್ಲಿ ಮುರಿದು ಕಟ್ಟಿದ್ದಾರೆ. ಉದಾಹರಣೆಗೆ ರಾಷ್ಟ್ರಕವಿ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’, ಪೋಲಂಕಿ ರಾಮಮೂರ್ತಿಯವರ ‘ಸೀತಾಯಣ’. ಇವೆಲ್ಲಾ ನಮ್ಮ ಚಿಂತನೆಯ ಹರವನ್ನು ವಿಸ್ತಾರಗೊಳಿಸುತ್ತದೆ. ಪೋಲಂಕಿಯವರ ಸೀತಾಯಣವಂತೂ ನಮ್ಮನ್ನು ರಾಮಾಯಣದ ಕುರಿತಂತೆ ಭಿನ್ನ ದೃಷ್ಟಿಕೋನದಲ್ಲಿ ಯೋಚಿಸುವಂತೆ ಮಾಡುತ್ತದೆ. ಸೀತಾಮಾತೆಯ ಕುರಿತು ಅನುಕಂಪ ಹುಟ್ಟಿಸುತ್ತದೆ. ಸೀತಾಮಾತೆಯನ್ನು ಕಣ್ಣೆತ್ತಿಯೂ ನೋಡದ ರಾವಣನ ಬಗ್ಗೆ ಅಭಿಮಾನ ಮೂಡಿಸುತ್ತದೆ.
ಭಾರತದಲ್ಲಿರುವುದು ಒಂದೇ ವಿಧದ ರಾಮಾಯಣವಲ್ಲ. ನಮ್ಮ ದೇಶದ್ದೇ ಕೆಲವು ಬುಡಕಟ್ಟು ಸಮುದಾಯಗಳಿಗೆ ರಾವಣ ಮಹಾ ಪುರುಷ. ಅವರ್ಯಾರೂ ರಾವಣನ ಹೆಸರಲ್ಲಿ ಕೊಲೆ, ದೊಂಬಿ ಮಾಡಿದ ಉದಾಹರಣೆಯೂ ದೇಶದ ಚರಿತ್ರೆಯಲ್ಲಿ ಕಾಣಸಿಗುವುದಿಲ್ಲ.

ನನ್ನ ಓದಿನ ಅನುಭವದಲ್ಲಿ ರಾಮಾಯಣದಲ್ಲಿ ಎಲ್ಲೂ ರಾಮನ ಹೆಸರು ಹೇಳಿ ಕೊಂದದ್ದು, ಹಲ್ಲೆ ಮಾಡಿದ್ದು, ದೊಂಬಿಯೆಬ್ಬಿಸಿದ್ದು ಇವ್ಯಾವುವನ್ನೂ ನಾನು ತಿಳಿದಿಲ್ಲ. ರಾಮಾಯಣದಲ್ಲೆಲ್ಲೂ ರಾಮನ ಅನುಯಾಯಿಗಳಾಗಲೀ, ಆತನ ರಾಜ್ಯದ ಪ್ರಜೆಗಳಾಗಲೀ, ರಾಮ ಭಕ್ತರಾಗಲೀ, ರಾಮನ ಪರಮ ಅನುಚರ ಹನುಮಂತನಾಗಲೀ ರಾಮನ ಹೆಸರು ಹೇಳಿ ಕೊಲೆ, ಹಲ್ಲೆ ಮಾಡಿದ್ದು ಕಾಣಸಿಗುವುದಿಲ್ಲ. ಯಾರಿಂದಲೂ ಬಲವಂತವಾಗಿ ‘ಜೈ ಶ್ರೀ ರಾಮ್’ ಎಂದು ಹೇಳಿಸಿದ್ದೋ..., ಅದನ್ನು ಹೇಳದ್ದಕ್ಕೆ ಹಲ್ಲೆ ಮಾಡಿದ್ದೋ, ಕೊಂದದ್ದೋ ಇಲ್ಲ. ಹನುಮಂತನ ರಾಮಭಕ್ತಿಗಿಂತ ಈ ಕಾಲದ ರಾಮಭಕ್ತರ ಭಕ್ತಿ ಹೆಚ್ಚೇ...?
ಅಸಲಿಗೆ ರಾಮಾಯಣದಲ್ಲಿ ರಾಮನ ಹೆಸರಲ್ಲಿ ಇವ್ಯಾವುವೂ ಇಲ್ಲದಿರುವಾಗ ಇವರು ಮಾಡುತ್ತಿರುವುದನ್ನು ರಾಮಭಕ್ತಿಯೆಂದರೆ ಅದು ರಾಮನಿಗೆ ಮಾಡುವ ಅವಮಾನವಾಗದೇ....?
ಮೊನ್ನೆ ಮೊನ್ನೆ ಹಿಂಸ್ರಪಶು ರಾಮಭಕ್ತರ ನೆಚ್ಚಿನ ಸಾಹಿತಿ ಎಸ್.ಎಲ್. ಭೈರಪ್ಪನವರೂ ರಾಮಾಯಣದಲ್ಲಿ ಬಹಳಷ್ಟು ಕಟ್ಟು ಕತೆಗಳಿವೆ ಎಂದಿದ್ದಾರೆ. ಇದೂ ಒಂದರ್ಥದಲ್ಲಿ ಭಗವಾನರ ಹೇಳಿಕೆಗಳ ಸಮರ್ಥನೆ.
ಸದ್ಯ ರಾಮನ ಹೆಸರಲ್ಲಿ ನಡೆಯುತ್ತಿರುವ ಕೊಲೆ, ಹಲ್ಲೆ ಮತ್ತು ದೊಂಬಿಯನ್ನು ನೋಡಿದರೆ ಭಗವಾನ್ ಹೇಳಿದ ರಾಮನೇ ನಿಜವಾದ ರಾಮನೋ ಎಂದೆನಿಸುತ್ತದೆ. ಈ ರೀತಿಯ ದುಷ್ಕೃತ್ಯಗಳ ಮೂಲಕ ಹಿಂಸ್ರಪಶು ರಾಮಭಕ್ತರು ಅವರ ಆರಾಧ್ಯ ರಾಮನನ್ನು ಬಲವಂತವಾಗಿ ಭಗವಾನ್‌ರ ದೃಷ್ಟಿಕೋನದ ಅಚ್ಚಿನಲ್ಲಿ ಕೂರಿಸಲು ಯತ್ನಿಸುವಂತಿದೆ.

ನಾವು ರಾಮನ ಬಗೆಗೆ ವಿವಿಧ ಚರ್ಚೆಗಳನ್ನು ನೋಡಿದ್ದೇವೆ.ಅದಾಗ್ಯೂ ನಮ್ಮ ತಲೆಯಲ್ಲಿ ಎಳವೆಯಲ್ಲಿ ಕೂರಿಸಿಲಾದ ರಾಮ ಮರ್ಯಾದಾಪುರುಷೋತ್ತಮ, ನ್ಯಾಯವಂತ ರಾಜ, ಪ್ರಜಾಪ್ರೇಮಿ ರಾಜ... ಈಗಿನ ರಾಮಭಕ್ತರ ವರಸೆ ಅವೆಲ್ಲವನ್ನೂ ನಿರಾಕರಿಸಿ ಸಾಹಿತಿ ಭಗವಾನ್ ಹೇಳಿದ್ದನ್ನು ಪ್ರಾಯೋಗಿಕವಾಗಿ ಸಮರ್ಥಿಸುವಂತಿದೆ..

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)