varthabharthi

ನಿಮ್ಮ ಅಂಕಣ

ಚುನಾವಣೆಗಳು ಕೇವಲ ಸರಕಾರವನ್ನು ಚುನಾಯಿಸುವ ಸಾಧನವೋ ಅಥವಾ ಒಂದು ಅರ್ಥಪೂರ್ಣ ಪ್ರಜಾತಾಂತ್ರಿಕ ಪ್ರಕ್ರಿಯೆಯೋ?

ಏಕಕಾಲಿಕ ಚುನಾವಣೆ ಮತ್ತು ಉತ್ತರದಾಯಿತ್ವಗಳ ನಡುವಿನ ಸಂಘರ್ಷ

ವಾರ್ತಾ ಭಾರತಿ : 10 Jul, 2019
ಕೃಪೆ: Economic and Political Weekly

ಈ ಪರಿಕಲ್ಪನೆಯನ್ನು ಜಾರಿಗೆ ತರಬೇಕೆಂದರೆ ಹಲವಾರು ಶಾಸನಸಭೆಗಳ ಅವಧಿಯನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದ ಸಾರಾಂಶದಲ್ಲಿ ಜನಾದೇಶವನ್ನು ಗೌಣಗೊಳಿಸಿದಂತೆಯೇ ಆಗುತ್ತದೆ. ಈ ಪ್ರಕ್ರಿಯೆಯನ್ನು ಸಂವಿಧಾನದ ಕಲಂ 356ನ್ನು ಹೇರದೆ ಸರ್ವಸಮ್ಮತಿಯಿಂದ ಜಾರಿ ಮಾಡಿದರೂ ಅದು ದೇಶದ ಒಕ್ಕೂಟ ತತ್ವಕ್ಕೆ ಧಕ್ಕೆ ತರುತ್ತದೆ. 


‘ಒಂದು ದೇಶ ಮತ್ತು ಒಂದು ಚುನಾವಣೆ’ ಎನ್ನುವುದು ಬಿಜೆಪಿಯ ಮಟ್ಟಿಗೆ ಅತ್ಯಂತ ಆದ್ಯತೆಯುಳ್ಳ ವಿಷಯವಾಗಿದೆ. 2019ರ ಜೂನ್ 19ರಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಈ ಅಜೆಂಡಾವನ್ನು ಆದ್ಯತೆಯ ಮೇಲೆ ಚರ್ಚೆಗೆ ತಂದಿದ್ದರಲ್ಲಿ ಇದು ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿತ್ತು. ಲೋಕಸಭೆಗೂ ಮತ್ತು ದೇಶದ ಎಲ್ಲಾ ವಿಧಾನಸಭೆಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ತನ್ನ ಪ್ರಸ್ತಾಪವನ್ನು ಅದು ಅದರದ್ದೇ ಆದ ರೀತಿಯಲ್ಲಿ ನಿರ್ವಚನ ಮಾಡುತ್ತದೆ. ಈ ಪ್ರಸ್ತಾಪದ ಬಗ್ಗೆ ಎನ್‌ಡಿಎಯ ಅಂಗಪಕ್ಷಗಳಲ್ಲಿ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳಲ್ಲಿ ಸಮ್ಮತಿ ಇದ್ದರೂ ಉಳಿದ ವಿರೋಧ ಪಕ್ಷಗಳು ಮಾತ್ರ ಬಿಜೆಪಿಯ ಈ ಪ್ರಸ್ತಾಪವು ಸಂವಿಧಾನಕ್ಕೆ ಮತ್ತು ದೇಶದ ಒಕ್ಕೂಟ ಸ್ವರೂಪಕ್ಕೆ ತೀವ್ರ ರೀತಿಯಲ್ಲಿ ಧಕ್ಕೆ ತರುತ್ತದೆಂಬ ನೆಲೆಯಲ್ಲಿ ವಿರೋಧಿಸುತ್ತಿದ್ದಾರೆ. ಇಂತಹ ಬೆಳವಣಿಗೆಯು ಆಳುವ ಪಕ್ಷದ ಸರ್ವಾಧಿಕಾರಿ ಧೋರಣೆಯನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎಂದು ಸಹ ಕೆಲವರು ತೀವ್ರವಾದ ಅನುಮಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದಲೇ ಈ ವಿಷಯದ ಬಗ್ಗೆ ಕೂಲಂಕಷವಾದ ಸಮಾಲೋಚನೆ ಮತ್ತು ಎಚ್ಚರಿಕೆಯಿಂದ ಕೂಡಿದ ಚರ್ಚೆಗಳೂ ನಡೆಯುವ ಅಗತ್ಯವಿದೆ. ಏಕಕಾಲದಲ್ಲಿ ಚುನಾವಣೆಯನ್ನು ನಡೆಸಬೇಕೆಂಬ ಪ್ರಸ್ತಾಪ ಹೊಸದೇನಲ್ಲ.

1982ರಲ್ಲೇ ಚುನಾವಣಾ ಆಯೋಗವು ಈ ಪ್ರಸ್ತಾಪವನ್ನು ಮಾಡಿತ್ತು ಮತ್ತು 1999ರಲ್ಲಿ ಕಾನೂನು ಆಯೋಗವೂ ಸಹ ಇದೇ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಹಾಲಿ ಪ್ರಸ್ತಾಪಕ್ಕೆ ಪ್ರೇರಣೆ ಕೊಟ್ಟಿರುವುದು ನೀತಿ ಆಯೋಗದ ಸದಸ್ಯರು ಸಾರ್ವಜನಿಕ ಚರ್ಚೆಗೆಂದು ಸಿದ್ಧಪಡಿಸಿದ ಚರ್ಚಾ ಪತ್ರದಲ್ಲಿ ಈ ಬಗ್ಗೆ ಇರುವ ಪ್ರಸ್ತಾಪಗಳು ಮತ್ತು ಕಾನೂನು ಆಯೋಗದ ಇತ್ತೀಚಿನ ವರದಿಗಳು. ಮೇಲಾಗಿ ಪ್ರಧಾನಮಂತ್ರಿಗಳು ತಮ್ಮ ಭಾಷಣಗಳಲ್ಲಿ ಮತ್ತು ‘ಮನ್‌ಕಿ ಬಾತ್’ ಎಂಬ ಸ್ವಗತಗಳಲ್ಲಿ ಇದರ ಪರವಾಗಿ ಬಲವಾಗಿ ಪ್ರತಿಪಾದನೆ ಮಾಡುವ ಮೂಲಕ ಆ ಪ್ರಸ್ತಾಪಗಳಿಗೆ ರಾಜಕೀಯ ತೂಕವನ್ನು ಒದಗಿಸುತ್ತಿದ್ದಾರೆ. ಮೂಲಭೂತವಾಗಿ ಈ ಪ್ರತಿಪಾದನೆಯು ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷತೆಯನ್ನು ಹೆಚ್ಚಿಸಿ ಮತ್ತು ವೆಚ್ಚಗಳನ್ನು ತಗ್ಗಿಸುವ ತರ್ಕಗಳನ್ನು ಆಧರಿಸಿವೆ. 1969ರ ನಂತರದಲ್ಲಿ ಒಂದಾದನಂತರ ಒಂದರಂತೆ ಬೇರೆ ಬೇರೆ ಅವಧಿಯಲ್ಲಿ ನಡೆಯುತ್ತಿರುವ ಚುನಾವಣೆಗಳನ್ನು ತಪ್ಪಿಸಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆಗಳನ್ನು ನಡೆಸಿದರೆ ವೆಚ್ಚವನ್ನು ತಗ್ಗಿಸಬಹುದೆಂಬುದು ನಿರೀಕ್ಷಿಸಲಾಗುತ್ತಿದೆ.

ಅಷ್ಟು ಮಾತ್ರವಲ್ಲದೆ ಪದೇಪದೇ ಚುನಾವಣೆಗಳು ನಡೆಯುವುದರಿಂದ ಪದೇಪದೇ ಮಾದರಿ ನೀತಿ ಸಂಹಿತೆಯನ್ನು ಅನುಸರಿಸಬೇಕಾಗುತ್ತದೆ. ಹೀಗಾಗಿ ಏಕಕಾಲದಲ್ಲಿ ಚುನಾವಣೆಯು ನಡೆದರೆ ಆಡಳಿತಾತ್ಮಕ ನೀತಿ ನಿರ್ಣಯಗಳನ್ನು ಕೈಗೊಳ್ಳಲು ಪದೇಪದೇ ಒದಗುತ್ತಿರುವ ಇಂತಹ ಅಡ್ಡಿಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಇಂತಹ ವಾದಗಳೆಲ್ಲಾ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಂಬಂಧಪಟ್ಟ ವಾದಗಳಾಗಿದ್ದು ಸಂವಿಧಾನಾತ್ಮಕ ತತ್ವ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಕಿಂಚಿತ್ತೂ ಗಮನವೀಯುವುದಿಲ್ಲ. ಈ ಪರಿಕಲ್ಪನೆಯನ್ನು ಜಾರಿಗೆ ತರಬೇಕೆಂದರೆ ಹಲವಾರು ಶಾಸನಸಭೆಗಳ ಅವಧಿಯನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದ ಸಾರಾಂಶದಲ್ಲಿ ಜನಾದೇಶವನ್ನು ಗೌಣಗೊಳಿಸಿದಂತೆಯೇ ಆಗುತ್ತದೆ. ಈ ಪ್ರಕ್ರಿಯೆಯನ್ನು ಸಂವಿಧಾನದ ಕಲಂ 356ನ್ನು ಹೇರದೆ ಸರ್ವಸಮ್ಮತಿಯಿಂದ ಜಾರಿ ಮಾಡಿದರೂ ಅದು ದೇಶದ ಒಕ್ಕೂಟ ತತ್ವಕ್ಕೆ ಧಕ್ಕೆ ತರುತ್ತದೆ. ಶಾಸನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇದ್ದ ಏಕಕಾಲಿಕತೆಯು ತಪ್ಪಿಹೋಗಲು ಪ್ರಧಾನ ಕಾರಣ ಕೇಂದ್ರ ಸರಕಾರಗಳ ಮಧ್ಯಪ್ರವೇಶವೇ ಆಗಿದ್ದರೂ ಆ ನಂತರದ ದಿನಗಳಲ್ಲಿ ವಿವಿಧ ರಾಜಕೀಯ ಶಕ್ತಿಗಳ ನಡುವಿನ ಸಮೀಕರಣಗಳ ಬದಲಾವಣೆಗಳ ಕಾರಣದಿಂದಾಗಿಯೂ ಅದು ಒಕ್ಕೂಟ ಸ್ವರೂಪವನ್ನು ಗಟ್ಟಿಗೊಳಿಸುತ್ತಿದೆ.

ಏಕೆಂದರೆ ಚುನಾವಣೆಗಳು ಬೇರೆಬೇರೆ ಸಮಯದಲ್ಲಿ ನಡೆಯುವುದರಿಂದ ಆಯಾ ರಾಜ್ಯಗಳಲ್ಲಿನ ನಿರ್ದಿಷ್ಟ ಸಮಸ್ಯೆಗಳು ಮತ್ತು ಅದನ್ನು ನಿರ್ವಹಿಸುತ್ತ ಪ್ರಾದೇಶಿಕ ಪಕ್ಷಗಳು ತಳೆಯುವ ಧೋರಣೆಗಳ ಬಗ್ಗೆ ಮಾತ್ರವೇ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ. ಏಕಕಾಲಿಕತೆಯಿಂದಾಗಿ ಈ ಪ್ರಾದೇಶಿಕ ಗಮನವು ತಪ್ಪುತ್ತದೆ ಮತ್ತು ಏಕತ್ವ ಹಾಗೂ ಕೇಂದ್ರೀಕರಣದ ಮೇಲೆ ಹೆಚ್ಚಿನ ಒತ್ತು ಬೀಳುತ್ತದೆ. ಅದರಲ್ಲೂ ಅಧಿಕಾರ ರೂಢ ಕೇಂದ್ರ ಸರಕಾರದ ಬಳಿ ಹೆಚ್ಚಿನ ಸಂಪನ್ಮೂಲವಿರುವ ಮತ್ತು ಚುನಾವಣಾ ಕಥನವನ್ನು ಒಂದು ಪಕ್ಷವೇ ನಿರ್ಧರಿಸುವಂತಹ ಇವತ್ತಿನ ಸಂದರ್ಭದಲ್ಲಿ ಈ ಆತಂಕ ಇನ್ನೂ ಹೆಚ್ಚು. ಲೋಕಸಭಾ ಚುನಾವಣೆಗಿಂತ ಶಾಸನಸಭಾ ಚುನಾವಣೆಗಳು ಬೇರೆಯಾಗಿ ನಡೆಯುವುದರಿಂದ ಕೇಂದ್ರ ಸರಕಾರದ ಮೇಲೆ ಪ್ರಜಾತಾಂತ್ರಿಕ ಒತ್ತಡಗಳನ್ನು ಸೃಷ್ಟಿಸಲೂ ಸಾಧ್ಯವಾಗುತ್ತದೆ ಹಾಗೂ ಬೇರೆಬೇರೆ ಸಮಯದಲ್ಲಿ ಚುನಾವಣೆಗಳು ನಡೆಯುವುದರಿಂದ ಕೇಂದ್ರ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನಹೋರಾಟಗಳ ಪ್ರತಿರೋಧವನ್ನು ಪ್ರತ್ಯೇಕವಾಗಿ ಮತ್ತು ನಿರ್ದಿಷ್ಟವಾಗಿ ರೂಪಿಸಲೂ ಸಾಧ್ಯವಾಗುತ್ತದೆ. ಇದರ ಜೊತೆಗೆ ಏಕಕಾಲಿಕವಾಗಿ ಚುನಾವಣೆ ನಡೆಸಬೇಕೆಂಬ ಪ್ರಸ್ತಾಪವು ಶಾಸಕಾಂಗದ ಮೂಲಕ ಸರಕಾರವು ಜನರಿಗೆ ಉತ್ತರದಾಯಿತ್ವವನ್ನು ಹೊಂದಿರಬೇಕೆಂಬ ತತ್ವವನ್ನೂ ಉಲ್ಲಂಘಿಸುತ್ತದೆ.

ಇದೇಕೆಂದರೆ ಏಕಕಾಲಿಕ ಚುನಾವಣಾ ವ್ಯವಸ್ಥೆ ಉಳಿದು ಮುಂದುವರಿಯಬೇಕೆಂದರೆ ಒಂದು ಸರಕಾರ ಏನೇ ಆದರೂ ಐದು ವರ್ಷದ ಅವಧಿಯುದ್ದಕ್ಕೂ ಅಧಿಕಾರ ಅನುಭವಿಸುವುದು ಕಡ್ಡಾಯವಾಗುತ್ತದೆ. ಹಾಗೆ ಕಡ್ಡಾಯಗೊಳಿಸುವ ನಿಯಮವಿಲ್ಲದೆ ಹೋದಲ್ಲಿ ಕೇಂದ್ರ ಸರಕಾರವನ್ನೋ ಅಥವಾ ರಾಜ್ಯ ಸರಕಾರವನ್ನೋ ಅವಿಶ್ವಾಸ ಮತದಿಂದ ಉರುಳಿಸಿ ಮಧ್ಯಂತರ ಚುನಾವಣೆಗಳನ್ನು ಅಗತ್ಯಗೊಳಿಸಿಬಿಟ್ಟರೆ ಈ ಏಕಕಾಲಿಕ ಚುನಾವಣಾ ವ್ಯವಸ್ಥೆ ಆಚರಣೆಗೆ ಬರದಂತಾಗುತ್ತದೆ. ಅಂತಹ ಸಂದರ್ಭದಲ್ಲಿ, ಪರ್ಯಾಯ ಸರಕಾರವನ್ನು ರಚಿಸುವ ಸಾಧ್ಯತೆ ಇದ್ದರೆ ಮಾತ್ರ ಅವಿಶ್ವಾಸ ಮತವನ್ನು ಮುಂದಿಡಬೇಕೆಂಬ ತಥಾಕಥಿತ ರಚನಾತ್ಮಕ ಅವಿಶ್ವಾಸ ಗೊತ್ತುವಳಿಯ ಮೂಲಕ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಅಥವಾ ಉಳಿದ ಅವಧಿಗಾಗಿ ಮಾತ್ರ ತುರ್ತು ಚುನಾವಣೆಯನ್ನು ನಡೆಸುವ ಮೂಲಕ ನಿಭಾಯಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಆದರೆ ಈ ಯಾವುದೇ ಪ್ರಸ್ತಾಪಗಳು ಸಂವಿಧಾನದಲ್ಲಿಲ್ಲ. ನಿಗದಿತ ಅವಧಿಯ ಸರಕಾರದ ಪ್ರಸ್ತಾಪವನ್ನು ಮುಂದಿಡುತ್ತಾ ಸ್ಥಿರತೆ ಮತ್ತು ನಿರಂತರತೆಯ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆಯೇ ವಿನಃ ಇದರಿಂದ ಪ್ರಜಾತಂತ್ರದ ಗುಣಮಟ್ಟ ಎಷ್ಟರಮಟ್ಟಿಗೆ ಅಸ್ಥಿರಗೊಳ್ಳುತ್ತದೆಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ.

ರಚನಾತ್ಮಕ ಅವಿಶ್ವಾಸ ಗೊತ್ತುವಳಿಯಂತಹ ಪರಿಕಲ್ಪನೆಗಳು ಸರಕಾರಗಳು ಶಾಸಕಾಂಗಕ್ಕೆ ಪ್ರತಿಯಾಗಿ ತೋರಬೇಕಾದ ಉತ್ತರದಾಯಿತ್ವವನ್ನು ದುರ್ಬಲಗೊಳಿಸುತ್ತದೆ ಮತ್ತು ಒಂದು ಪ್ರಜಾತಂತ್ರದಲ್ಲಿ ಸರಕಾರದ ಸ್ಥಿರತೆಯ ಪ್ರಶ್ನೆಗೆ ಉತ್ತರದಾಯಿತ್ವಕ್ಕಿಂತ ಹೆಚ್ಚಿನ ಮಹತ್ವವನ್ನು ನೀಡಬಹುದೇ ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ. ಪ್ರಜಾತಂತ್ರವನ್ನು ಹೀಗೆ ದುರ್ಬಲಗೊಳಿಸುವ ಮೂಲಕ ಈಗ ಕಣ್ಮರೆಯಲ್ಲಿ ಭಾರತೀಯ ರಾಜಕಾರಣವನ್ನು ಅಧ್ಯಕ್ಷೀಯ ಮಾದರಿಯಾಗಿಸಲು ನಡೆಯುತ್ತಿರುವ ಪ್ರಕ್ರಿಯೆಯನ್ನು ಇನ್ನಷ್ಟು ಆಳಗೊಳಿಸಿದಂತೆಯೂ ಆಗುತ್ತದೆ. ಈ ಪ್ರಕ್ರಿಯೆಯು ಸಂಪನ್ಮೂಲಗಳು ಸಹಜವಾಗಿಯೇ ಹೆಚ್ಚಿರುವ ರಾಷ್ಟ್ರೀಯ ಪಕ್ಷಗಳಿಗೆ ಪೂರಕವಾಗಿರುತ್ತದಲ್ಲದೆ ರಾಜಕೀಯ ಸ್ಪರ್ಧೆಯನ್ನು ಹೆಚ್ಚೆಚ್ಚು ದ್ವಿಪಕ್ಷೀಯಗೊಳಿಸುತ್ತದೆ ಮತ್ತು ನಾಯಕರ ವ್ಯಕ್ತಿತ್ವದ ಸುತ್ತ ಗಿರಕಿ ಹೊಡೆಯುವಂತೆ ಮಾಡುತ್ತದೆ. ಮೇಲೆ ಹೇಳಲಾದ ಪ್ರಜಾತಂತ್ರದ ನಿರ್ವಹಣಾ ದೃಷ್ಟಿಕೋನದ ಪರಿಕಲ್ಪನೆಗಳು ಜನರ ಸಾರ್ವಭೌಮತೆಯನ್ನು ಸಾರವಾಗಿ ಹೊಂದಿರುವ ಪ್ರಜಾತಂತ್ರದ ಪರಿಕಲ್ಪನೆಗೆ ವಿರುದ್ಧವಾಗಿದೆ. ಅಂತಹ ಪರಿಕಲ್ಪನೆಗಳು ಚುನಾವಣೆಗಳೆಂದರೆ ಜನರನ್ನು ಮತ್ತು ದೇಶವನ್ನು ಆಳಲು ಬೇಕಾದ ಸರಕಾರವನ್ನು ಆಯ್ಕೆ ಮಾಡುವ ಒಂದು ಪ್ರಕ್ರಿಯೆ ಅಥವಾ ವಿಧಾನ ಎಂದು ಮಾತ್ರ ಪರಿಗಣಿಸುತ್ತವೆ. ಈ ನಿರ್ವಹಣಾವಾದವು ತನ್ನ ಅತ್ಯಂತಿಕ ಸ್ಥಿತಿಯಲ್ಲಿ ಆಡಳಿತವನ್ನು ನಡೆಸಲು ಚುನಾವಣೆಯೇ ಒಂದು ಅಡ್ಡಿಯೆಂದೂ ಸಹ ಭಾವಿಸುತ್ತದೆ.

ಅದರ ಪ್ರಕಾರ ಜನರೆಂದರೆ ರಾಜಕೀಯವಾಗಿ ಸಕ್ರಿಯರಲ್ಲದ ಮತದಾರಷ್ಟೆ ಆಗಿದ್ದು ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಮತ ಹಾಕಿ ಸರಕಾರಕ್ಕೆ ಜವಾಬ್ದಾರಿಯನ್ನು ಕೊಟ್ಟು ಸಾರ್ವಜನಿಕ ಬದುಕಿನಿಂದ ಹಿಂದೆ ಸರಿಯಬೇಕಾದವರು. ಆದರೆ ರಾಮಮನೋಹರ ಲೋಹಿಯಾ ಅವರು ವಾದಿಸುತ್ತಿದ್ದಂತೆ ಸಕ್ರಿಯ ಜನರು ಐದು ವರ್ಷಗಳ ಕಾಲ ಕಾಯುತ್ತಾ ಕೂರುವುದಿಲ್ಲ. ಚುನಾವಣೆಗಳಾಚೆಗೆ ನಡೆಯುವ ಜನರ ಹೋರಾಟಗಳು ಮತ್ತು ಚಳವಳಿಗಳ ಜೊತೆಗೆ ಚುನಾವಣೆಗಳೂ ಸಹ ಜನರ ಸಕ್ರಿಯ ರಾಜಕೀಯ ಚಟುವಟಿಕೆಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಇದು ಒಂದು ಆರೋಗ್ಯಕರ ಪ್ರಜಾತಂತ್ರಕ್ಕೆ ಅತ್ಯಗತ್ಯವೂ ಆಗಿರುತ್ತದೆ. ಎಷ್ಟೇ ಆದರೂ ಚುನಾವಣೆಯೆಂಬುದು ಜನರ ಸಾರ್ವಭೌಮತೆಯೆಂಬ ತತ್ವವನ್ನು ಆಚರಣೆಗೆ ತರುವ ಪ್ರಕ್ರಿಯೆಯಾಗಿದೆ. ಆದರೆ ಒಂದು ಹಣಬಲ ಮತ್ತು ಮಾಧ್ಯಮಬಲಗಳೇ ಆಳ್ವಿಕೆ ನಡೆಸುವ ಸನ್ನಿವೇಶದಲ್ಲಿ ಅಂಥ ಜನ ಚಟುವಟಿಕೆಗಳು ಎಷ್ಟರಮಟ್ಟಿಗೆ ಸಾಧ್ಯ ಎಂದು ಯಾರಾದರೂ ಕೇಳಬಹುದು. ಆದರೆ ಏಕಕಾಲಿಕ ಚುನಾವಣೆಯ ತರ್ಕವು ಅಂಥಾ ಸಾಧ್ಯತೆಯನ್ನು ಸಹ ಕೊನೆಗಾಣಿಸಲಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)