varthabharthi

ಸಂಪಾದಕೀಯ

ಚುನಾವಣೆಯೇ ಪಾಠ ಕಲಿಸೀತು

ವಾರ್ತಾ ಭಾರತಿ : 10 Jul, 2019

ಸರಕಾರದ ಅಳಿವು ಉಳಿವು ಅಂತಿಮವಾಗಿ ಸ್ಪೀಕರ್ ಅಂಗಳಕ್ಕೆ ಬಂದು ನಿಂತಿದೆ. ಮುಖ್ಯಮಂತ್ರಿ ಹೊರತು ಪಡಿಸಿದಂತೆ ಬಹುತೇಕ ಸಚಿವರು ರಾಜೀನಾಮೆ ನೀಡಿರುವುದರಿಂದ ಸದ್ಯಕ್ಕೆ ರಾಜ್ಯದಲ್ಲಿ ಸರಕಾರವೆನ್ನುವುದು ಅಸ್ತಿತ್ವದಲ್ಲೇ ಇಲ್ಲ. ಅದು ಅಧಿಕೃತವಾಗಿ ಘೋಷಣೆಯಾಗುವುದಷ್ಟೇ ಬಾಕಿ ಉಳಿದಿದೆ. ಇದೇ ಸಂದರ್ಭದಲ್ಲಿ ಹಲವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಈಗಾಗಲೇ ಕೆಲವು ರಾಜೀನಾಮೆಗಳ ಕುರಿತಂತೆ ಸ್ಪೀಕರ್ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಅಂದರೆ, ಮೈತ್ರಿ ಸರಕಾರಕ್ಕೆ ಈಗ ಸ್ಪೀಕರ್ ನಿರ್ಧಾರವೇ ಕಟ್ಟ ಕಡೆಯ ಆಸರೆಯಾಗಿದೆ. ಸ್ಪೀಕರ್ ತನ್ನ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಂಡರೆ ಸರಕಾರ ಉಳಿಯುವುದಿಲ್ಲ. ಆದರೆ ಈ ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ, ಸ್ಪೀಕರ್ ತಮ್ಮ ಸ್ಥಾನಕ್ಕೆ ಪೂರ್ಣ ಪ್ರಮಾಣದಲ್ಲಿ ಬದ್ಧರಾಗಿ ಕೆಲಸ ಮಾಡಿದ್ದು ಕಡಿಮೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೆ. ಜಿ. ಬೋಪಯ್ಯ ಅವರು ಈ ಸ್ಪೀಕರ್ ಸ್ಥಾನದ ಘನತೆಯನ್ನು ಮಣ್ಣು ಪಾಲು ಮಾಡಿದ್ದರು. ಆದರೆ ರಮೇಶ್ ಕುಮಾರ್ ಅವರಂತಹ ಹಿರಿಯ ಮುತ್ಸದ್ದಿ ಆ ಮಟ್ಟಕ್ಕೆ ಖಂಡಿತ ತಲುಪಲಾರರು. ಆದರೆ ಮೈತ್ರಿ ಸರಕಾರವನ್ನು ಉಳಿಸಲು ತನ್ನಿಂದಾದಷ್ಟು ಪ್ರಯತ್ನವನ್ನು ಮಾಡುವುದಂತೂ ಖಂಡಿತ. ಅಂದರೆ ರಮೇಶ್ ಕುಮಾರ್ ಅವರು ಸರಕಾರವನ್ನು ಉಳಿಸಲು ತನ್ನ ಕೊನೆಯ ಪ್ರಯತ್ನಕ್ಕೆ ಇಳಿಯಲಿದ್ದಾರೆ.

ಇಷ್ಟಕ್ಕೂ ಸರಕಾರ ಉಳಿಯಲೇ ಬೇಕು ಎನ್ನುವಂತಹ ಆಗ್ರಹ ಜನಸಾಮಾನ್ಯರಲ್ಲಿ ಕಾಣುತ್ತಿಲ್ಲ. ಶಾಸಕರು ಮತ್ತು ರಾಜಕೀಯ ಮುಖಂಡರ ವರ್ತನೆಗಳಿಂದ ಜನರು ರೋಸಿ ಹೋಗಿದ್ದಾರೆ. ರಾಜೀನಾಮೆ ನೀಡಿದವರಾರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಅಥವಾ ಯಾವುದೇ ಜನಸಾಮಾನ್ಯರ ಬೇಡಿಕೆಗಳನ್ನು ಮುಂದಿಟ್ಟು ರಾಜೀನಾಮೆ ನೀಡಿಲ್ಲ. ವೈಯಕ್ತಿಕ ವೈಮನಸ್ಯಗಳು, ಅಧಿಕಾರ, ಪ್ರತಿಷ್ಠೆ, ಹಣ ಇತ್ಯಾದಿಗಳೇ ಶಾಸಕರ ರಾಜೀನಾಮೆಗಳಿಗೆ ಮುಖ್ಯ ಕಾರಣ. ಸದ್ಯದ ಅತಂತ್ರ ಸ್ಥಿತಿಗೆ ‘ಬಿಜೆಪಿ ಕಾರಣ’ ಎಂದು ಸುಲಭವಾಗಿ ಆರೋಪಿಸಬಹುದಾದರೂ, ಬಿಜೆಪಿಯ ಹಣ, ಅಧಿಕಾರದ ಲಾಲಸೆಗೆ ಬಲಿಯಾಗಿರುವ ‘ಜಾತ್ಯತೀತ’ರೆಂದು ಸ್ವಯಂ ಘೋಷಿಸಿಕೊಂಡ ಶಾಸಕರನ್ನೇ ಈ ಬೆಳವಣಿಗೆಗಳಿಗೆ ನಾವು ನೇರವಾಗಿ ಹೊಣೆ ಮಾಡಬೇಕಾಗುತ್ತದೆ. ಅಧಿಕಾರ ಮತ್ತು ಹಣದ ಮುಂದೆ ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲ ಎನ್ನುವುದನ್ನು ಅವರು ಸಾಬೀತು ಪಡಿಸಿದ್ದಾರೆ. ಬಿಜೆಪಿಯನ್ನು ಮುಂದಿಟ್ಟುಕೊಂಡು ಈ ಶಾಸಕರು ‘ಬ್ಲಾಕ್‌ಮೇಲ್ ರಾಜಕಾರಣ’ ನಡೆಸುತ್ತಿದ್ದಾರೆ. ತಮಗೆ ಮತ ನೀಡಿದ ಮತದಾರರ ಕುರಿತಂತೆ ಎಳ್ಳಷ್ಟು ಕಾಳಜಿಯಿಲ್ಲದೆ, ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡಲು ಮುಂದಾಗಿರುವ ಈ ಜನಪ್ರತಿನಿಧಿಗಳಿಂದ ಕ್ಷೇತ್ರಕ್ಕೆ ಸಂಬಂಧಿಸಿ ಮತದಾರರು ಯಾವ ನಿರೀಕ್ಷೆಗಳನ್ನು ಇಟ್ಟಿಲ್ಲ. ಜೊತೆಗೆ ಯಾವ ದಾರಿಯಲ್ಲಾದರೂ ಸರಿ, ಅಧಿಕಾರ ಹಿಡಿಯಲೇ ಬೇಕು ಎನ್ನುವ ಯಡಿಯೂರಪ್ಪ ನೇತೃತ್ವದ ಬಿಜೆಪಿಯ ಕುರಿತಂತೆಯೂ ಮತದಾರರು ಅಷ್ಟೇ ಹೇವರಿಕೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಒಂದು ವೇಳೆ ಸ್ಪೀಕರ್ ಪ್ರಯತ್ನದಿಂದಾಗಿ ಸರಕಾರ ಉಳಿದರೂ ಅದರಿಂದ ರಾಜ್ಯಕ್ಕೆ ಯಾವ ಪ್ರಯೋಜನವಿದೆ? ಈಗ ಇರುವ ಅತೃಪ್ತರನ್ನು ಅಧಿಕಾರ, ಹಣದ ಆಮಿಷಗಳ ಮೂಲಕ ಸಂತೈಸಿ ಮೈತ್ರಿ ಸರಕಾರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬಹುದು. ಆದರೆ ಆಗ ಇವರ ಬದಲಿಗೆ ಹೊಸ ಅತೃಪ್ತರು ಹುಟ್ಟುವುದಿಲ್ಲ ಎನ್ನುವುದಕ್ಕಾಗುತ್ತದೆಯೇ? ಈ ಅತೃಪ್ತರು ಅನುಸರಿಸಿದ ಬ್ಲಾಕ್‌ಮೇಲ್ ರಾಜಕಾರಣವನ್ನು ಮುಂದಿನ ದಿನಗಳಲ್ಲಿ ಹೊಸ ಅತೃಪ್ತರು ಅನುಸರಿಸಬಹುದು.

ಸರಕಾರದ ಮುಂಚೂಣಿಯಲ್ಲಿರುವವರಿಗೆ ಈ ಅತೃಪ್ತರನ್ನು ಸಂತೈಸುವುದೇ ಕೆಲಸವಾದರೆ ನಾಡಿನ ಅಭಿವೃದ್ಧಿಗೆ ಸಮಯ ಎಲ್ಲಿ ಸಿಗಬೇಕು? ಇಂತಹ ಅಭದ್ರ ಸರಕಾರ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಹೆಚ್ಚಿಸುತ್ತದೆಯೇ ಹೊರತು, ಅಲ್ಲಿ ಅಭಿವೃದ್ಧಿಗೆ ಸ್ಥಾನವೇ ಇರುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಕಾಲದಲ್ಲೂ ಇಂತಹದೇ ಅತಂತ್ರ ಸ್ಥಿತಿ ರಾಜ್ಯದಲ್ಲಿ ಭ್ರಷ್ಟಾಚಾರಗಳಿಗೆ ಮುಕ್ತಪರವಾನಿಗೆ ನೀಡಿತು. ಇದೀಗ ಇತಿಹಾಸ ಮರುಕಳಿಸಲು ಹೊರಟಿದೆ. ಈ ರಾಜಕೀಯ ಅತಂತ್ರವನ್ನು ಬಿಜೆಪಿ ಬಳಸಿಕೊಳ್ಳುವುದಕ್ಕೆ ಮುಂದಾಗಿದೆ. ಯಾವ ದಾರಿಯಲ್ಲಾದರೂ ಸರಿ, ಮುಖ್ಯಮಂತ್ರಿಯಾಗಲೇ ಬೇಕು ಎನ್ನುವ ಅತ್ಯಾತುರದಲ್ಲಿದ್ದಾರೆ ಯಡಿಯೂರಪ್ಪ. ಲೋಕಸಭಾ ಚುನಾವಣೆಯ ಭರ್ಜರಿ ವಿಜಯದ ಬಳಿಕ, ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ದ ಕುರಿತಂತೆ ಕೇಂದ್ರ ಬಿಜೆಪಿ ವರಿಷ್ಠರು ನಿರುತ್ಸಾಹವನ್ನು ತಾಳಿದ್ದರು. ಆಪರೇಷನ್ ಕಮಲದ ಕಳಂಕವಿಲ್ಲದೆ, ನೇರವಾಗಿ ಚುನಾವಣೆಯನ್ನು ಎದುರಿಸಿ ಬಹುಮತದ ಜೊತೆಗೆ ಅಧಿಕಾರ ಹಿಡಿಯಬೇಕು ಎನ್ನುವ ಸೂಚನೆಯನ್ನೂ ರಾಜ್ಯ ನಾಯಕರಿಗೆ ನೀಡಿದ್ದರು. ಆದರೆ ಇದೀಗ ರಾಜಕೀಯ ವಾತಾವರಣ ಪಕ್ಷಕ್ಕೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರಲ್ಲಿ ಹೊಸ ಆಸೆ ಹುಟ್ಟಿದೆ. ಆದರೆ, ಈ ಕುದುರೆ ವ್ಯಾಪಾರವೆಂದರೆ ಕೋಟ್ಯಂತರ ರೂಪಾಯಿಗಳ ಹಣದ ವ್ಯವಹಾರ. ಇಷ್ಟೊಂದು ಹಣ ಬಿಜೆಪಿಗೆ ಎಲ್ಲಿಂದ ಬರುತ್ತದೆ? ಎನ್ನುವ ಚರ್ಚೆಗೆ ಈಗಾಗಲೇ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿದೆ. ಇತರ ಪಕ್ಷಗಳಿಂದ ಬಿಜೆಪಿಯ ಕಡೆಗೆ ವಾಲಿದವರು ಯಾವುದೇ ಬದ್ಧತೆ, ಸಿದ್ಧಾಂತಗಳ ಮೇಲೆ ನಂಬಿಕೆಯಿಟ್ಟವರಲ್ಲ. ಹಣ ಮತ್ತು ಅಧಿಕಾರವೇ ಅವರ ವೌಲ್ಯಗಳು. ಬಿಜೆಪಿ ನೇತೃತ್ವದಲ್ಲಿ ಹೊಸತಾಗಿ ಸರಕಾರ ರಚನೆಯಾದರೂ ಸಮಸ್ಯೆ ಪುನರಾವರ್ತನೆಯಾಗುವುದು ಖಂಡಿತ.

ಹೊರಗಿನಿಂದ ಬಂದವರು ಮತ್ತು ಒಳಗಿರುವವರ ನಡುವೆ ತಿಕ್ಕಾಟಗಳು ನಡೆಯುವ ಸಾಧ್ಯತೆಗಳಿವೆ. ಯಡಿಯೂರಪ್ಪ ಅವರು ತಮ್ಮ ಹಳೆಯ ದಿನಗಳನ್ನೊಮ್ಮೆ ನೆನೆದುಕೊಳ್ಳುವುದು ಉಚಿತ. ರಾಜ್ಯದ ಅಭಿವೃದ್ಧಿ ಕುರಿತ ಯಾವ ಹಿತಾಸಕ್ತಿಯನ್ನು ಹೊಂದದ ಈ ಸರಕಾರ ರಾಜ್ಯಕ್ಕೆ ಭಾರೀ ಹೊರೆಯಾಗಲಿದೆ. ಆಪರೇಷನ್ ಕಮಲದ ಮೂಲಕ ಇತರ ಶಾಸಕರನ್ನು ಸೆಳೆದು ಬಿಜೆಪಿ ಸರಕಾರ ನಡೆಸಿ ಅರ್ಧದಲ್ಲೇ ವಿಫಲವಾದರೆ ಅದು ಮುಂದಿನ ಚುನಾವಣೆಯ ವೇಳೆ ಬಿಜೆಪಿಯನ್ನೂ ಸಂಕಷ್ಟಕ್ಕೆ ತಳ್ಳಲಿದೆ. ಬದಲಿಗೆ, ಈ ಮೈತ್ರಿ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ನೇರವಾಗಿ ಚುನಾವಣೆಯನ್ನು ಎದುರಿಸುವುದರಿಂದಲೇ ಬಿಜೆಪಿಗೆ ಹೆಚ್ಚು ಲಾಭವಿದೆ. ಆ ಮೂಲಕ ಬಿಜೆಪಿ ಬಹುಮತದಿಂದ ಅಧಿಕಾರವನ್ನು ಹಿಡಿಯುವ ಸಾಧ್ಯತೆಗಳಿವೆ. ರಾಜ್ಯಕ್ಕೂ ಒಂದು ಸುಭದ್ರ ಸರಕಾರ ದೊರಕಿದಂತಾಗುತ್ತದೆ. ಆದರೆ ಕೇಂದ್ರದ ವರಿಷ್ಠರು ಯಡಿಯೂರಪ್ಪರನ್ನು ಮುಖ್ಯಮಂತ್ರಿಯನ್ನಾಗಿಸುವುದು ಮಾತ್ರ ದೂರದ ಮಾತಾಗಿರುವುದರಿಂದ ಯಡಿಯೂರಪ್ಪ ನಡೆ ಏನು ಎನ್ನುವುದನ್ನು ಊಹಿಸುವುದು ಸುಲಭ. ಒಟ್ಟಿನಲ್ಲಿ ತೇಪೆ ಹಚ್ಚಿದ ಮೈತ್ರಿಗಿಂತ ರಾಷ್ಟ್ರಪತಿ ಆಡಳಿತವೇ ನಾಡಿಗೆ ಒಳಿತನ್ನು ಮಾಡಬಹುದು. ರಾಜೀನಾಮೆ ಪ್ರಹಸದ ಮೂಲಕ ಅಧಿಕಾರ, ಹಣದ ಬೆನ್ನು ಹತ್ತಿದ ಶಾಸಕರಿಗೆ ಚುನಾವಣೆಯಷ್ಟೇ ತಕ್ಕ ಪಾಠವನ್ನು ಕಲಿಸೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)