varthabharthi

ಕರ್ನಾಟಕ

ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ವಾರ್ತಾ ಭಾರತಿ : 10 Jul, 2019

ತುಮಕೂರು,ಜು.10: ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ-ಯುಕೆಜಿ ಪ್ರಾರಂಭಿಸಲು, ಬಾಕಿ ಗೌರವಧನ, ಕೋಳಿಮೊಟ್ಟೆ, ತರಕಾರಿ ಹಣ ಬಿಡುಗಡೆಗಾಗಿ ಮತ್ತು ಕೇಂದ್ರ ಸರ್ಕಾರದಿಂದ 2018 ಅಕ್ಟೋಬರ್ ನಲ್ಲಿ ಹೆಚ್ಚಳವಾದ ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

ಈ ವೇಳೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‍ಕೆಜಿ, ಯುಕೆಜಿ ಪ್ರಾರಂಭಿಸಬೇಕು. ರಾಜ್ಯದ ಹಲವು ಕಡೆ ಮೂರ್ನಾಲ್ಕು ತಿಂಗಳಾದರೂ ಇನ್ನೂ ಗೌರವಧನ ನೀಡಿಲ್ಲ. ಪ್ರತಿ ತಿಂಗಳು ಗೌರವಧನ ಪಾವತಿಯಾಗುವಂತೆ ನೋಡಿಕೊಳ್ಳಬೇಕು' ಎಂದು ಆಗ್ರಹಿಸಿದರು.

ಅಂಗನವಾಡಿ ನೌಕರರಿಗೆ ಆರೋಗ್ಯ ಕ್ಷೀಣಿಸಿದಾಗ ಅಥವಾ ಮರಣ ಹೊಂದಿದಾಗ ಬರುವ ಹಣ ಬರುತ್ತಿಲ್ಲ, ನಿವೃತ್ತಿಯಾದ ನೌಕರರಿಗೆ ಯಾವ ಸೌಲಭ್ಯವೂ ಇಲ್ಲ, ಇಂತಹ ಸಂದರ್ಭದಲ್ಲಿಯೂ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಸರಿಯಾಗಿ ಗ್ಯಾಸ್ ವಿತರಣೆಯಾಗುತ್ತಿಲ್ಲ. ಈ ಮದ್ಯೆ ಅಂಗನವಾಡಿ ನೌಕರರ ಮೇಲೆ ಶಿಸ್ತು ಕ್ರಮ ನಡೆಯುತ್ತಲೇ ಇದೆ. ಗೌರವಧನ ಆಧಾರದಲ್ಲಿ ದುಡಿಯುವ ನೌಕರರನ್ನು ಶೋಷಿಸಬಾರದು ಎಂದರು. ಮೇಲ್ವಿಚಾರಕಿಯರ ಹುದ್ದೆಗಳಿಗೆ ಅಂಗನವಾಡಿ ನೌಕರರಿಗೆ ಶೇ 50ರಷ್ಟು ಮುಂಬಡ್ತಿ ಕೊಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವಿದೆ. ಆದರೆ ಈ ನಿಯಮವನ್ನು ರಾಜ್ಯ ಸರ್ಕಾರ ಸರಿಯಾಗಿ ಪಾಲಿಸುತ್ತಿಲ್ಲ ಎಂದ ಅವರು, ಕಾಯಿಲೆಗಳು ಬಂದಾಗ ಪರ್ಯಾಯ ವ್ಯವಸ್ಥೆ ಮಾಡಬೇಕು. ವರ್ಗಾವಣೆ, ಮುಂಭಡ್ತಿ ಸಿಗಬೇಕು ಎಂದು ಆಗ್ರಹಿಸಿದರು.

ಸೇವಾ ಹಿರಿತನದ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು. ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ಮುಂತಾದ ರಾಜ್ಯಗಳಲ್ಲಿ 11 ರಿಂದ 12 ಸಾವಿರ ವೇತನ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ 18 ಸಾವಿರ ರೂ. ಗೌರವಧನ ಹೆಚ್ಚಳವಾಗಬೇಕು, ದಿನಕ್ಕೆ 6.30 ಗಂಟೆ ಕೆಲಸ ಮಾತೃ ಪೂರ್ಣ ಮತ್ತಿತರ ಕೆಲಸಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾತೃಪೂರ್ಣ ಯೋಜನೆಯ ನಂತರ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿರುವುದರಿಂದ ಕಾರ್ಯಕರ್ತೆಯರಿಗೆ ನೀಡುವ ಗೌರವಧನದ ಶೇ.75 ರಷ್ಟು ಸಹಾಯಕಿಯರಿಗೆ ಕೊಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಸಹಾಯಕಿ ಕಾರ್ಯಕರ್ತೆಗಾಗಿ ಮುಂಭಡ್ತಿ ಪಡೆಯಲು ಇರುವ ವಯಸ್ಸಿನ, ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಹಿಂದೆ ಗ್ಯಾಸ್ ಸಿಲಿಂಡರ್ ಹಣವನ್ನು ನಮ್ಮ ಖಾತೆಗೆ ಒಂದೇ ಬಾರಿ ಜಮಾ ಮಾಡಲಾಗುತ್ತಿತ್ತು. ಆದರೆ ಈಗ ಈ ಹಣವನ್ನು ನಮ್ಮ ಖಾತೆಗೆ ಜಮಾ ಮಾಡುತ್ತಿಲ್ಲ. ಗ್ಯಾಸ್ ಸಿಲಿಂಡರ್ ಗೆ ಕಾರ್ಯಕರ್ತೆಯು ಹಣವನ್ನು ನೀಡಿ ಪಡೆದ ನಂತರ, ಬಿಲ್ಲುಗಳನ್ನು ಕಚೇರಿಗೆ ಸಲ್ಲಿಸಬೇಕು. ನಂತರ ಆರು ತಿಂಗಳಿಗೋ ಅಥವಾ ವರ್ಷದ ನಂತರ ಕಾರ್ಯಕರ್ತೆಯ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋಟಿಮೊಟ್ಟೆ, ತರಕಾರಿ ಬಿಲ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಜಿಲ್ಲೆಯಲ್ಲಿ ಕೆಲವು ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡುತ್ತಿರುವ ಕಿರುಕುಳ, ಮಾನಸಿಕ ಹಿಂಸೆ ನಿಲ್ಲಬೇಕು ಹಾಗೂ ಭಾಗ್ಯಲಕ್ಷ್ಮಿ ಅರ್ಜಿ ಪಡೆಯುವಾಗ, ಬಾಂಡ್ ನೀಡುವಾಗ ಮತ್ತು ಸಹಾಯಕಿಯರಿಗೆ ಮುಂಭಡ್ತಿ, ಅನುಕಂಪದ ಆಧಾರದಲ್ಲಿ ಆಯ್ಕೆಯಾದವರ ಹತ್ತಿರ ಹಣ ವಸೂಲಿ, ನ್ಯೂಟ್ರಿಕ್ಲಬ್ ನಡೆಸುತ್ತಿರುವವರ ಮೇಲೆ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು, ಸಂಘದ ಖಜಾಂಚಿ ಬಿ.ಎಸ್.ಅನುಸೂಯ ಮಾತನಾಡಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)