varthabharthi

ರಾಷ್ಟ್ರೀಯ

ಸರಕಾರದ ಬಳಿ ಬಚ್ಚಿಡಲು ಬಹಳಷ್ಟಿದೆ: ಪತ್ರಕರ್ತರ ಪ್ರವೇಶ ನಿಷೇಧಕ್ಕೆ ಸಿಪಿಎಂ ಟೀಕೆ

ವಾರ್ತಾ ಭಾರತಿ : 10 Jul, 2019

ಹೊಸದಿಲ್ಲಿ,ಜು.10: ತನ್ನ ಆವರಣದಲ್ಲಿ ಪತ್ರಕರ್ತರ ಪ್ರವೇಶವನ್ನು ವಿತ್ತ ಸಚಿವಾಲಯವು ನಿರ್ಬಂಧಿಸಿರುವುದನ್ನು ಟೀಕಿಸಿರುವ ಸಿಪಿಎಂ,ಸರಕಾರದ ಬಳಿ ‘ಬಚ್ಚಿಡಲು ಬಹಳಷ್ಟಿದೆ ’ಎಂದು ಹೇಳಿದೆ.

ಸಚಿವಾಲಯದಲ್ಲಿ ಪತ್ರಕರ್ತರ ಪ್ರವೇಶದ ಮೇಲೆ ಯಾವುದೇ ನಿಷೇಧವಿಲ್ಲ ಮತ್ತು ಅವರ ಪ್ರವೇಶವನ್ನು ಸುಗಮಗೊಳಿಸಲು ಪದ್ಧತಿಯೊಂದನ್ನು ತರಲಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಯೋರ್ವರು ಈ ಮೊದಲು ಸ್ಪಷ್ಟನೆಯನ್ನು ನೀಡಿದ್ದರು.

ವಾಡಿಕೆಯಂತೆ ಮುಂಗಡಪತ್ರ ತಯಾರಿಗೆ ಎರಡು ತಿಂಗಳ ಮೊದಲು ಸಚಿವಾಲಯ ಪ್ರವೇಶಕ್ಕೆ ಪತ್ರಕರ್ತರಿಗೆ ಅವಕಾಶವಿರುವುದಿಲ್ಲ.

ಸುಳ್ಳುಗಳನ್ನು ಹೇಳುತ್ತಿರುವ ಮತ್ತು ಅಂಕಿಅಂಶಗಳನ್ನು ಉತ್ಪ್ರೇಕ್ಷಿಸುತ್ತಿರುವ ಸರಕಾರದ ಬಳಿ ಬಚ್ಚಿಡಲು ಬಹಳಷ್ಟಿದೆ. ಪಾರದರ್ಶಕತೆಯು ನಿಯಮವಾಗಿರಬೇಕಾದ ಈ ಯುಗದಲ್ಲಿ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲು ಈ ಸರಕಾರವು ಬಯಸುತ್ತಿದೆ. ಪ್ರತಿ ಹೆಜ್ಜೆಯಲ್ಲಿಯೂ ಮಾಹಿತಿ ಹಕ್ಕನ್ನು ನಾಶಗೊಳಿಸಲು ಅದು ತೊಡಗಿರುವಾಗ ಈ ಕ್ರಮವು ಅಚ್ಚರಿಯನ್ನುಂಟು ಮಾಡುವುದಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಹೇಳಿದರು.

ಸುದ್ದಿಗಾರರ ಕಳವಳಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ನಡುವೆಯೇ ಮಂಗಳವಾರ ವಿದೇಶಾಂಗ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿಯು,ಸಚಿವಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂಬ ವರದಿಗಳಿಗೆ ಸ್ಪಷ್ಟನೆಯನ್ನು ಟ್ವೀಟಿಸಿತ್ತು.

ಪೂರ್ವ ನಿಗದಿತ ಭೇಟಿ ಅನುಮತಿಯ ಆಧಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಅವಕಾಶವಿದೆ. ಇತರ ಯಾವುದೇ ನಿರ್ಬಂಧಗಳನ್ನು ಹೇರಲಾಗಿಲ್ಲ ಎಂದು ಅದು ಸಮಜಾಯಿಷಿ ನೀಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)