varthabharthi

ಬೆಂಗಳೂರು

ಅಧಿಕಾರಿಗಳು ವಾರ್ಡ್ ಸಮಿತಿ ಸಭೆಗೆ ಹಾಜರಾಗುತ್ತಿಲ್ಲ: ಬಿಬಿಎಂಪಿ ಆಡಳಿತ ಪಕ್ಷದಿಂದಲೇ ಆರೋಪ

ವಾರ್ತಾ ಭಾರತಿ : 10 Jul, 2019

ಬೆಂಗಳೂರು, ಜು.10: ಅಧಿಕಾರಿಗಳು ವಾರ್ಡ್ ಸಮಿತಿ ಸಭೆಗೆ ಹಾಜರಾಗುತ್ತಿಲ್ಲ. ಫೋನ್ ಮೂಲಕ ಸಂಪರ್ಕಿಸಿದರೆ ಕ್ಯಾರೆ ಎನ್ನುತ್ತಿಲ್ಲ. ನಮ್ಮ ಮಾತಿಗೆ ಬೆಲೆ ಇಲ್ಲವೇ, ಜನಪ್ರತಿನಿಧಿಗಳಿಗೆ ಅಧಿಕಾರ ನೀಡಿ, ಇಲ್ಲದಿದ್ದರೆ ಬಿಬಿಎಂಪಿಗೆ ಬೀಗ ಹಾಕಿ ಎಂದು ಆಡಳಿತ ಪಕ್ಷದ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದರು.

ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಸದಸ್ಯೆ ರೂಪ ಲಿಂಗೇಶ್, ಆಶಾ ಸುರೇಶ್ ಸೇರಿದಂತೆ ಹಲವು ಸದಸ್ಯರು ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಆರೋಪಿಸಿದರು.

ಪಾಲಿಕೆಯಲ್ಲಿ ನಿರ್ಣಯಗಳ ಮಂಡನೆ ನಂತರ ಮಾತನಾಡಿದ ಕಾಂಗ್ರೆಸ್ ಸದಸ್ಯೆ ರೂಪ ಲಿಂಗೇಶ್, ವಾರ್ಡ್‌ಗಳಲ್ಲಿ ನಡೆಯುವ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸ್ಥಳೀಯ ಸದಸ್ಯರನ್ನು ಕರೆಯದೇ ಕಡೆಗಣಿಸುತ್ತಿದ್ದಾರೆ. ಅಧಿಕಾರಿಗಳು ವಾರ್ಡ್ ಸಮಿತಿ ಸಭೆಗೆ ಹಾಜರಾಗುತ್ತಿಲ್ಲ. ಫೋನ್ ಮೂಲಕ ಸಂಪರ್ಕಿಸಿದರೆ, ಕ್ಯಾರೆ ಎನ್ನುತ್ತಿಲ್ಲ. ನಮ್ಮ ಮಾತಿಗೆ ಬೆಲೆ ಇಲ್ಲವೇ? ಪಾಲಿಕೆ ವ್ಯಾಪ್ತಿಯಲ್ಲಿ ಏನಾದರೂ ಕಾಮಗಾರಿ ಆರಂಭಿಸಿದರೆ ಸ್ಥಳೀಯ ಸದಸ್ಯರನ್ನು ಆಹ್ವಾನಿಸಬೇಕು. ಆದರೆ, ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಆಶಾ ಸುರೇಶ್, ವಾರ್ಡ್ ಅಭಿವೃದ್ಧಿಗೆ ಅನುದಾನ ಉಪಯೋಗಿಸಿಕೊಳ್ಳಲಾಗುತ್ತಿಲ್ಲ. ಕಾಮಗಾರಿ ನಡೆಸಲು ವಿಳಂಬ ಧೋರಣೆ ನಡೆಸುತ್ತಿದ್ದಾರೆ. ಎಚ್‌ಎಂಟಿ ವಾರ್ಡ್‌ನ ಮಕ್ಕಳಿಗೆ ಸೈಕಲ್ ವಿತರಣೆಯಾಗಿಲ್ಲ. ಜನಪ್ರತಿನಿಧಿಗಳಿಗೆ ಅಧಿಕಾರ ನೀಡಿ, ಇಲ್ಲದಿದ್ದರೆ ಪಾಲಿಕೆಗೆ ಬೀಗ ಹಾಕಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಈ ವೇಳೆ ಸದಸ್ಯರ ಗಲಾಟೆ ಹೆಚ್ಚಾದ ಕಾರಣ ಕೌನ್ಸಿಲ್ ಸಭೆಯನ್ನು ಮೇಯರ್ ಮುಂದೂಡಿದರು.

ನಿರ್ಣಯ ತಿರಸ್ಕೃತ: ಈಗಾಗಲೇ ವಾರ್ಡ್ ಸಮಿತಿ ರಚನೆಯಾಗಿದ್ದು, ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿದರೆ ಸದಸ್ಯರ ಹಕ್ಕು ಕಡಿಮೆಯಾಗುತ್ತದೆ ಎಂದು ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗಿದ್ದರಿಂದ ಶಾಸಕರ ನೇತೃತ್ವದ ಸಮಿತಿ ರಚನೆ ನಿರ್ಣಯ ತಿರಸ್ಕೃತಗೊಂಡಿತು.

ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿದರೆ ಪಾಲಿಕೆ ಸದಸ್ಯರ ಮೇಲೆ ಸವಾರಿ ನಡೆಯಲಿದೆ. ಸಮಿತಿ ರಚನೆಗೆ ರಾಜ್ಯ ಸರಕಾರಕ್ಕೆ ಮಾತ್ರ ಅವಕಾಶವಿದೆ. ಕಾರ್ಪೊರೇಷನ್‌ಗಳಿಗೆ ಅಧಿಕಾರವಿಲ್ಲ ಎಂದರು. ಸದಸ್ಯರ ಹೇಳಿಕೆಗೆ ಮಾಜಿ ಮೇಯರ್ ಪದ್ಮಾವತಿ ಧ್ವನಿಗೂಡಿಸಿದರು. ಮೇಯರ್ ಗಂಗಾಂಬಿಕೆ ಈ ನಿರ್ಣಯ ಕೈ ಬಿಡಲಾಗುವುದೆಂದು ಆದೇಶಿಸಿದರು.

ಜನಪ್ರತಿನಿಧಿಗಳನ್ನು ಕಡೆಗಣಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಆಯುಕ್ತರು ಸಭೆ ನಡೆಸಿ ಎಚ್ಚರಿಕೆ ನೀಡಬೇಕು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

ಜನಪ್ರತಿನಿಧಿಗಳ ಪವರ್ ಏನೆಂಬುದು ಅಧಿಕಾರಿಗಳಿಗೆ ತೋರಿಸಬೇಕಿದೆ. ಅಧಿಕಾರಿಗಳು ಕೌನ್ಸಿಲ್ ಸಭೆಯಲ್ಲಿ ಭಾಗಿಯಾಗದೇ ಕರ್ತವ್ಯಲೋಪ ಎಸಗುತ್ತಿದ್ದಾರೆ. ಆದ್ದರಿಂದ ಜನಪ್ರತಿನಿಧಿಗಳನ್ನು ಕಡೆಗಣಿಸುವ ಅಧಿಕಾರಿಗಳನ್ನು ಅಮಾನತು ಮಾತನಾಡಬೇಕು.

-ಪದ್ಮನಾಭರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ನಾಯಕ

ಪಾಲಿಕೆ ನಿರ್ಣಯಗಳು

* ಬಸವೇಶ್ವರ ನಗರದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಬಸವಣ್ಣನ ಪುತ್ಥಳಿ ನಿರ್ಮಾಣ.

* ವಿದ್ಯಾಪೀಠ ವ್ಯಾಪ್ತಿಯ ಶ್ರೀಕಂಠೇಶ್ವರ ಉದ್ಯಾನದಲ್ಲಿ ಭ್ರೂಣ ಹತ್ಯಾ ಸ್ತಂಭ ಸ್ಥಾಪನೆ.

* ಎಂ.ಎನ್.ಕೃಷ್ಣರಾವ್ ಪಾರ್ಕ್‌ನ ಶೆಟಲ್ ಬ್ಯಾಡ್‌ಮಿಂಟನ್ ಒಳಾಂಗಣ ಕ್ರೀಡಾಂಗಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಕ್ರೀಡಾಂಗಣವೆಂದು ನಾಮಕರಣ.

* ರಾಜಾಜಿನಗರ ಮೋದಿ ಜಂಕ್ಷನ್‌ನಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಿಸಲು ಮೇಯರ್ ಅನುದಾನದಡಿ 73 ಲಕ್ಷ ರೂ. ಬಿಡುಗಡೆ.

* ರಾಜಾಜಿನಗರ ಸ್ಟಾರ್ ಬಜಾರ್ ಹತ್ತಿರ ಡಾ. ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣಕ್ಕೆ 99 ಲಕ್ಷ ರೂ.

* ಇಂದಿರಾನಗರ ಮುಖ್ಯರಸ್ತೆಯಲ್ಲಿ ಡಾ. ರಾಜ್‌ಕುಮಾರ್, ಇಂದಿರಾಗಾಂಧಿ ಪ್ರತಿಮೆ ನಿರ್ಮಾಣ, ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಅಂಬರೀಶ್, ವಿಷ್ಟುವರ್ಧನ ಪ್ರತಿಮೆ ಸ್ಥಾಪನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)