varthabharthi

ಕರ್ನಾಟಕ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ವಾರ್ತಾ ಭಾರತಿ : 10 Jul, 2019

ಮೈಸೂರು,ಜು.10: ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಪ್ರಾರಂಭಿಸಲು ಒತ್ತಾಯಿಸಿ ಬಾಕಿ ಗೌರವ ಧನ, ಕೋಳಿ ಮೊಟ್ಟೆ, ತರಕಾರಿ ಹಣದ ಬಿಡುಗಡೆಗಾಗಿ ಮತ್ತು ಕೇಂದ್ರ ಸರ್ಕಾರದಿಂದ 2018 ಅಕ್ಟೋಬರ್ ನಲ್ಲಿ ಹೆಚ್ಚಳವಾದ ಗೌರವ ಧನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾಕಾರರು ಮಾತನಾಡಿ, ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್ ಪಿಸಿ ಆಧಾರಿತ ಪೆನ್ಶನ್ ನೀಡಬೇಕು. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಗೌರವಧನ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಬಂದಿಲ್ಲ. ಕೋಳಿಮೊಟ್ಟೆ, ತರಕಾರಿ ಹಣ 3-4 ತಿಂಗಳಿನಿಂದ ಬಂದಿಲ್ಲ. ಸರಿಯಾಗಿ ಗ್ಯಾಸ್ ವಿತರಣೆಯಾಗಿಲ್ಲ. ಅಂಗನವಾಡಿ ನೌಕರರು ಕಾಯಿಲೆ ಬಿದ್ದಾಗ, ಮರಣ ಹೊಂದಿದಾಗ ಬರುವ ಹಣ ಬರುತ್ತಿಲ್ಲ. ನಿವೃತ್ತಿಯಾದ ನೌಕರರಿಗೆ ಯಾವುದೇ ಸೌಲಭ್ಯವಿಲ್ಲ. ಗೌರವ ಧನದ ಆಧಾರದಲ್ಲಿ ದುಡಿಯುವ ಇವರನ್ನು ಮತ್ತಷ್ಟು ಶೋಷಿಸಬಾರದು ಎಂದರು.

ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಭಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮದುವೆಯಾಗದ ಹೆಣ್ಣು ಮಕ್ಕಳಿಗೆ ಷರತ್ತನ್ನು ತೆಗೆದು ಕುಟುಂಬದವರಿಗೆ ಎಂದು ತಿದ್ದುಪಡಿ ಮಾಡಬೇಕು. ಖಾಲಿಯಿರುವ ಸಹಾಯಕಿಯರ ಮತ್ತು ಕಾರ್ಯಕರ್ತೆಯರ ಹುದ್ದೆಯನ್ನು ತುಂಬಬೇಕು. ಹಲವು ಯೋಜನೆಗಳಿಗೆ ಡಿಡಿ, ಡಿಒ ಸಿಡಿಪಿಒ  ಮೇಲ್ವಿಚಾರಕಿಯರನ್ನು ಖಾಯಂ ಆಗಿ ನೇಮಕ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಮಾವಳಿ ರಚಿಸಬೇಕು. ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್ ಆಗಬೇಕು. ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು. ಅಂಗನವಾಡಿ ನೌಕರರು ಇಲಾಖಾ ಕೆಲಸಗಳಿಗಾಗಿ ಓಡಾಡುವಾಗ ಆಗುವ ಅಪಘಾತಗಳಿಗೆ ಪರಿಹಾರ ನೀಡಬೇಕು. 5ವರ್ಷಗಳನ್ನು ಪೂರೈಸಿದ ಮೇಲ್ವಿಚಾರಕಿಯನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೆಚ್.ಎಸ್.ಸುನಂದಾ, ಧರ್ಮಾವತಿ, ಕೆ.ಪಿ.ಕಾವೇರಮ್ಮ, ಮಂಗಳಗೌರಮ್ಮ, ಪುಷ್ಪಲತಾ, ವಸಂತ, ವಿಜಯ, ಮಂಜುಳ, ಪುಷ್ಪಲತಾ, ಅಜಿತಾ, ಲೀಲಾವತಿ, ನೀಲಮ್ಮ, ರಾಣಿ, ಲಕ್ಷ್ಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)