varthabharthi

ಕರ್ನಾಟಕ

ಭಾವನಾತ್ಮಕ ವಿಚಾರಗಳ ಮುಂದಿಟ್ಟು ಬಿಜೆಪಿ ಅಧಿಕಾರ ಹಿಡಿದಿದೆ: ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್

ವಾರ್ತಾ ಭಾರತಿ : 10 Jul, 2019

ಚಿಕ್ಕಮಗಳೂರು, ಜು.10: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದಿನ ಮೋದಿ ಸರಕಾರ ದೇಶದ ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸದಿದ್ದರೂ ಕೇವಲ ದ್ವೇಷದ ರಾಜಕಾರಣ ಹಾಗೂ ಭಾವನಾತ್ಮಕ ವಿಚಾರಗಳನ್ನು ಬಿತ್ತಿದ ಪರಿಣಾಮ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿಸುಂದರೇಶ್ ಆರೋಪಿಸಿದ್ದಾರೆ.

ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಮಟ್ಟದ ಸರ್ವಸದಸ್ಯರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಈ ಹಿಂದೆ ರಾಮಮಂದಿರದ ನಿರ್ಮಾಣದ ವಿಚಾರ ಜನರ ಮುಂದಿಟ್ಟಿದ್ದರು. ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಪ್ರತಿಯೊಬ್ಬರ ಬಡವರ ಖಾತೆಗೆ 15 ಲಕ್ಷ ಹಣ ಜಮಾಯಿಸುತ್ತೇವೆ, ವರ್ಷಕ್ಕೆ 2ಕೋಟಿ ಉದ್ಯೋಗ ನೀಡುತ್ತೇವೆ, ಬೆಲೆ ಏರಿಕೆ ಇಳಿಸುವುದಾಗಿ ಹತ್ತಾರು ಭರವಸೆಗಳನ್ನು ನೀಡಿದ್ದರು. ಆದರೆ ಕೇಂದ್ರ ಸರಕಾರ ತಾನು ನೀಡಿದ್ದ ಮಹತ್ವದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಕಳೆದ ಬಾರಿಯ ಲೋಕಸಭೆ ಚುನಾವಣೆ ಸಂದರ್ಭ ಫುಲ್ವಾಮ ಘಟನೆ ಮುಂದಿಟ್ಟು, ಹುತಾತ್ಮ ಸೈನಿಕರ ಹೆಸರನ್ನು ಬಳಸಿ ಹುಸಿ ದೇಶಪ್ರೇಮವನ್ನು ಪ್ರಚಾರ ಮಾಡಿ ಬಹುಮತ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತೇ ಹೊರತು ಅಭಿವೃದ್ಧಿ ಮುಂದಿಟ್ಟು ಅಧಿಕಾರ ಹಿಡಿದಿಲ್ಲ ಎಂದು ಸುಂದರೇಶ್ ಟೀಕಿಸಿದರು.

ಶ್ರೀಮಂತ ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆ ರೂಪದಲ್ಲಿ ಪಡೆದ ಅಪಾರ ಪ್ರಮಾಣದ ಹಣ ಬಲವು ಬಿಜೆಪಿ ಪಕ್ಷದ ಚುನಾವಣಾ ಗೆಲುವಿಗೆ ಸಹಕಾರಿಯಾಗಿದೆ. ದೇಶದಲ್ಲಿ ಜಾತ್ಯತೀತ ಪಕ್ಷಗಳ ಮಹಾ ಘಟಬಂಧನದೊಳಗಿನ ಬಿರುಕು ಹಾಗೂ ಎಡ ಪಕ್ಷಗಳ ಹೊರತಾದ ರಾಜಕೀಯ ಮೈತ್ರಿ ಬಿಜೆಪಿ ಗೆಲುವಿಗೆ ವರದಾನವಾಗಿತ್ತು. ಇನ್ನು ಕರ್ನಾಟಕದಲ್ಲಿ ಕಮ್ಯೂನಿಸ್ಟರು ನೀಡಿದ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅರೆ-ಬರೆ ಮನಸ್ಸಿನಿಂದ ಮಾಡಿಕೊಂಡ ಮೈತ್ರಿ ಹಾಗೂ ಇತರ ಜಾತ್ಯತೀತ ಪ್ರಗತಿಪರ ರಾಜಕೀಯ ಶಕ್ತಿಗಳನ್ನು ಹೊರಗಿಟ್ಟ ಪರಿಣಾಮ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಭಾರಿ ಮುಖ ಭಂಗವಾಗುವಂತಾಯಿತು. ಅಲ್ಲದೆ ಸ್ವಜನ ಪಕ್ಷಪಾತ ಕುಟುಂಬ ರಾಜಕಾರಣವು ಮೈತ್ರಿಕೂಟದ ಸೋಲಿಗೆ ಕಾರಣವಾಗಿದೆ ಎಂದು ವಿಮರ್ಶಿಸಿದ ಅವರು, ಪ್ರಸಕ್ತ ಮೋದಿ ಸರಕಾರ ಕೋಮುವಾದವನ್ನೇ ತನ್ನ ರಾಜಕೀಯ ಅಧಿಕಾರಕ್ಕೆ ಬಂಡವಾಳವನ್ನಾಗಿಸಿಕೊಂಡಿದೆ. ಯಾವುದೇ ರಾಜಕೀಯ ಪಕ್ಷಗಳ ಇಂತಹ ನಿಲುವು ದೇಶದ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಸೌಹಾರ್ದಕ್ಕೆ ಮಾರಕ. ಇಂತಹ ರಾಜಕೀಯ ಪಕ್ಷಗಳ ಬಗ್ಗೆ ಮತದಾರನ್ನು ಜಾಗೃತರನ್ನಾಗಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚು ಕ್ರಿಯಾಶೀಲರಾಗಿರಬೇಕೆಂದು ಕರೆ ನೀಡಿದರು.

ಸಿಪಿಐನ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಮಾತನಾಡಿ, ದೇಶದ ರಾಜಕಾರಣ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಗೊಳಿಸುತ್ತಿದೆ. ದೇಶದ ಪ್ರಸಕ್ತ ರಾಜಕಾರಣ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಗೊಳಿಸುತ್ತಿದೆ. ದೇಶದ ರಾಜಕಾರಣವನ್ನು ಕಾರ್ಪೋರೇಟ್ ಕುಳಗಳು ನಿಯಂತ್ರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಅರಾಜಕತೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರದಲ್ಲಿ ಉಲ್ಬಣಿಸಿರುವ ರಾಜಕೀಯ ಕ್ಷೋಭೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸದನದಲ್ಲಿ ಬಹುಮತವು ಇಲ್ಲದೇ, ಜನಮತವು ಇಲ್ಲದ ಹಾಗೂ ಪರಸ್ಪರ ಮೈತ್ರಿ ರಾಜಕಾರಣದ ಬದ್ಧತೆಯು ಇಲ್ಲದಿರುವಾಗ ವಿರೋಧ ಪಕ್ಷದ ಸ್ಥಾನದಲ್ಲಿ ಕೂತು ರಾಜಕೀಯ ವ್ಯವಸ್ಥೆಗೆ ಗೌರವ ತರುವ ಅಗತ್ಯ ಇದೆ ಎಂದರು.

ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾದ್ಯ, ರಾಜ್ಯಸಹಕಾರ್ಯದರ್ಶಿ ಡಾ.ಕೆ.ಎಸ್.ಜನಾರ್ಧನ್, ಎ.ಐ.ವೈ.ಎಫ್ ರಾಜ್ಯ ಸಂಚಾಲಕ ಎಚ್.ಎಂ.ಸಂತೋಷ್, ರಾಜ್ಯಕಾರ್ಯಕಾರಣಿ ಸದಸ್ಯರಾದ ಬಿ.ಅಮ್ಜದ್, ಎಸ್.ಎಲ್.ರಾಧಾಸುಂದರೇಶ್, ಜಿಲ್ಲಾ ಸಹಕಾರ್ಯದರ್ಶಿ ಕೆ.ಗುಣಶೇಖರ್, ಜಿ.ರಘು, ಜಾರ್ಜ್‍ಅಸ್ಟಿನ್, ಎಚ್.ಟಿ.ರವಿ, ಗೋಪಾಲಶೆಟ್ಟಿ, ಕೆಲವಳ್ಳಿ ಕಳಸಪ್ಪ ಇತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)