varthabharthi

ಕರ್ನಾಟಕ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಮಂಡ್ಯದಲ್ಲಿ ಅಂಗನವಾಡಿ ನೌಕರರ ಧರಣಿ

ವಾರ್ತಾ ಭಾರತಿ : 10 Jul, 2019

ಮಂಡ್ಯ, ಜು.10: ಅಂಗನವಾಡಿಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭ, ಬಾಕಿ ಗೌರವ ಧನ ಬಿಡುಗಡೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬೇಡಿಕೆಗಳ ಕುರಿತು ಹಲವು ಬಾರಿ ಮನವಿ ಪತ್ರ ಸಲ್ಲಿಕೆ, ಹೋರಾಟ ನಡೆಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.

ಬದಲಾದ ಕಾಲಘಟ್ಟದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಶೈಲಿಗಳು ಬದಲಾಗಬೇಕು. ದಿನದಿಂದ ದಿನಕ್ಕೆ ಹೊಸ ಹೊಸ ಕೆಲಸಗಳು ಸೇರ್ಪಡೆಯಾಗುತ್ತಿವೆ. ಅಪೌಷ್ಠಿಕತೆ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಆಯೋಗಗಳು ರಚನೆಯಾಗುತ್ತಿವೆ ಎಂದು ಅವರು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷೆ ಜಯಲಕ್ಷ್ಮಮ್ಮ, ಪ್ರಮೀಳಾ ಕುಮಾರಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಾವಿತ್ರಮ್ಮ, ಧನಲಕ್ಷ್ಮಿ, ಲತಾ, ರೋಹಿಣಿ, ಪುಷ್ಪಾವತಿ, ಮೀನಾಕ್ಷಿ, ಶಿಲ್ಪ, ಗಾಯಿತ್ರಿ, ಶಿವಮ್ಮ, ನಾಗಮ್ಮ ಇತರರು ನೇತೃತ್ವ ವಹಿಸಿದ್ದರು.

ಪ್ರಮುಖ ಬೇಡಿಕೆಗಳು:
ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್‍ಐಸಿ ಪೆನ್‍ಷನ್ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಿಗೆ ಕೊಡುವ ಎನ್‍ಪಿಎಸ್ ಮಾನದಂಡ ಅನುಸರಿಸಬೇಕು.

ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ, ಯುಕೆಜಿ ಶಿಕ್ಷಣ ಪ್ರಾರಂಭಿಸಬೇಕು. ಮಾತೃಪೂರ್ಣ ಯೋಜನೆ ಯಶಸ್ವಿಗೊಳಿಸಲು ಹೆಚ್ಚುವರಿ ಸಹಾಯಕಿಯರ ನೇಮಕ ಮಾಡಬೇಕು.

ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಭಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಖಾಲಿ ಹುದ್ದೆ ಭರ್ತಿ ಮಾಡಬೇಕು.

ಸೇವಾ ನಿಯಮಾವಳಿ ರಚಿಸಬೇಕು. ಕೇಂದ್ರ ಸರಕಾರ ಕಡಿತಗೊಳಿಸಿರುವ ಅನುದಾನ ವಾಪಸ್ ಆಗಬೇಕು. ಇಲಾಖಾ ಕೆಸಲಗಳಿಗೆ ಓಡಾಡುವಾಗ ಆಗುವ ಅಪಘಾತಗಳಿಗೆ ಪರಿಹಾರ ಕೊಡಬೇಕು.  

ತರಕಾರಿ, ಮೊಟ್ಟೆ, ಗ್ಯಾಸ್, ಬಾಡಿಕೆ ಬಾಕಿ ಹಣ ಬಿಡುಗಡೆ ಮಾಡಬೇಕು. ಹೆಚ್ಚುವರಿ ಗೌರವಧನ ಬಿಡುಗಡೆ ಮಾಡಬೇಕು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)