varthabharthi

ಕರ್ನಾಟಕ

ಅಂಬೇಡ್ಕರ್ ಜಯಂತಿ ಉಪಚಾರದ ಜಯಂತಿ ಆಗಬಾರದು: ಜ್ಞಾನಪ್ರಕಾಶ್ ಸ್ವಾಮೀಜಿ

ವಾರ್ತಾ ಭಾರತಿ : 11 Jul, 2019

ಮಂಡ್ಯ, ಜು.10: ಅಂಬೇಡ್ಕರ್ ಜಯಂತಿ ಎಂದರೆ ಉಪಚಾರದ, ಪುಷ್ಪಗುಚ್ಚದ ಜಯಂತಿ ಅಲ್ಲ, ಸಾಮಾಜಿಕ ನ್ಯಾಯದ ಜಯಂತಿ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುಧವಾರ ಆಯೋಜಿಸಿದ್ದ ಬುದ್ಧ-ಬಸವಣ್ಣ-ಡಾ.ಬಿ.ಆರ್.ಅಂಬೇಡ್ಕರ್-ಪ್ರೋ.ಬಿ,ಕೃಷ್ಣಪ್ಪ ಅವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್, ಬುದ್ಧ, ಬಸವ ಸೇರಿದಂತೆ ಹಲವು ಸಾಧಕರ ಜಯಂತಿಗಳು ಉಪಚಾರದ ಜಯಂತಿಗಳಾಗಬಾರದು. ಬದಲಾಗಿ ವಿಚಾರದ, ಸಾಮಾಜಿಕ ಕ್ರಾಂತಿ ಹಾಗೂ ಜ್ಞಾನದ ಜಯಂತಿಗಳಾಬೇಕು ಎಂದು ಅವರು ಹೇಳಿದರು.

ದೇಶದ ದಮನಿತ, ಶೋಷಿತ ಜನರು ಅಂಬೇಡ್ಕರ್ ಆಶಯದಂತೆ ದೇಶವನ್ನು ಆಳುವವರಾಗದೆ ಸಮಯ ಸಾಧಕರಾಗಿ ನಮ್ಮ ಹೋರಾಟವನ್ನು ಮಾರಾಟ ಮಾಡುತ್ತಿದ್ದೇವೆ. ಇದರಿಂದ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅವರು ವಿಷಾದಿಸಿದರು.

ಹೋರಾಟಗಾರರು ಅಂಬೇಡ್ಕರ್ ವಾದಿಗಳಾಗಿ ಎಂದರೆ ಅವಕಾಶವಾದಿಗಳಾಗುತ್ತಿದ್ದಾರೆ. ಬುದ್ಧ, ಬಸವರಂತೆ ಸಾಧಕರಾಗಿ ಎಂದರೆ ಸಮಯ ಸಾಧಕರಾಗುತ್ತಿದ್ದಾರೆ. ಕೈಯ್ಯಾರೇ ತಮ್ಮ ಸಮಾಜವನ್ನು ನಾಶ ಮಾಡಲು ನಿಂತಿದ್ದಾರೆ. ಇದು ನಮ್ಮ ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬದುಕುವ ಹಕ್ಕು, ಆಸ್ತಿಯ ಹಕ್ಕು, ಮತದಾನದ ಹಕ್ಕು, ಶಿಕ್ಷಣ ಕೊಟ್ಟಂತಹ ಅಂಬೇಡ್ಕರ್ ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ. ಅವರ ವಂಶಸ್ಥರ ಬಟ್ಟೆ ಬಿಚ್ಚುತ್ತಿದ್ದಾರೆ. ಬೀದಿಯಲ್ಲಿ ಮಾನ ಕಳೆಯುತ್ತಿದ್ದಾರೆ. ನಾವು ಮಾತ್ರ ಜೈ ಭೀಮ್ ಜೈ ಭೀಮ್ ಎನ್ನುತ್ತಾ ಕುಳಿತಿದ್ದೀವಿ ಎಂದರು.

ಯಾರ ಋಣದಿಂದ ದೇಶದ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಅಂಬೇಡ್ಕರ್ ಅವರು ನೀಡಿದ ಭಿಕ್ಷೆಯಿಂದ ಬದುಕುತ್ತಿದ್ದಾರೆ. ಇಂತಹ ದೇಶದಲ್ಲಿ ಅಂಬೇಡ್ಕರ್ ವಂಶಸ್ಥರ ಬಟ್ಟೆ ಬಿಚ್ಚಿ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ಇದಕ್ಕೆ ಯಾರು ಕಾರಣ? ಯಾರು ಜವಾಬ್ಧಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಶೋಷಿತ ಜನ ಅಂಬೇಡ್ಕರ್ ಹೇಳಿದಂತೆ ಮಣ್ಣಿನ ಒಳಗೆ ಕೊಳೆತು ಹೋಗುವ ಬೀಜವಾಗಬಾರದು, ಮೊಳಕೆ ಒಡೆದು ಹೆಮ್ಮರವಾಗಬೇಕು. ಯಾರ ಗುಲಾಮಗಿರಿಯಲ್ಲೂ ಬದುಕು ಬಾರದು. ಸ್ವಾಭಿಮಾನಿಗಳಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ದಲಿತ ಸಂಘಟನೆಯಿಂದಲೇ ದಲಿತರು ಇಂದು ಉಸಿರಾಡುತ್ತಿದ್ದಾರೆ. ಸರಕಾರ ಬೆಚ್ಚಿ ಬೀಳುತ್ತದೆ. ಸಂಘಟನೆಯೆಂದರೆ ಸಿಂಹ ಘರ್ಜನೆ. ನೀವು ಒಗ್ಗಟ್ಟಾದರೆ ತಲೆ ಎತ್ತಿ ನಿಲ್ಲುತ್ತೀರಿ, ಒಡೆದು ಹೋದರೆ ನೆಲ ಕಚ್ಚುತ್ತೀರಿ. ಮನುವಾದಿಗಳು ನಿಮ್ಮ ಮೇಲೆ ಬೀಳುತ್ತಾರೆ ಎಂದು ಅವರು ಎಚ್ಚರಿಸಿದರು.

ಪ್ರಗತಿಪರ ಚಿಂತಕ ಡಾ.ಮಹೇಶ್‍ ಚಂದ್ರಗುರು ಮಾತನಾಡಿ, ಅಂಬೇಡ್ಕರ್ ಬಯಸಿದ್ದರೆ ದೇಶದ ರಾಷ್ಟ್ರಪತಿ, ಪ್ರಧಾನಿಯಾಗಬಹುದಿತ್ತು. ಆದರೆ, ನಾಯಿ, ನರಿ, ಕತ್ತೆಗಳಿಗಿಂತ ಕೀಳಾಗಿ ಬದುಕುತ್ತಿರುವ ತನ್ನ ದಮನಿತ ಜನರ ವಿಮೋಚನೆಗಾಗಿ ಅದೆಲ್ಲವನ್ನೂ ನಿರಾಕರಿಸಿ ಹೋರಾಡಿದರು ಎಂದರು.

ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಅಂದಾನಿ ಸೋಮನಹಳ್ಳಿ, ಸುಂಡಹಳ್ಳಿ ನಾಗರಾಜು, ಸೌಭಾಗ್ಯ, ಅಣ್ಣೂರು ರಾಜಣ್ಣ, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಇತರ ಮುಖಂಡರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)