varthabharthi

ಬೆಂಗಳೂರು

ವೈಟ್ ಫೀಲ್ಡ್ ನಲ್ಲಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರು, ಪ್ರತಿಮೆ ನಿರ್ಮಾಣ

ವಾರ್ತಾ ಭಾರತಿ : 11 Jul, 2019

ಬೆಂಗಳೂರು, ಜು. 11 : ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ವರ್ತೂರು ಕೋಡಿ ವೃತ್ತಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರಿಟ್ಟು ಅಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ. 

ವೈಟ್ ಫೀಲ್ಡ್ ಮಾಜಿ ಡಿಸಿಪಿ ಅಬ್ದುಲ್ ಅಹದ್ ಹಾಗು ಮಧುಕರ್ ಶೆಟ್ಟಿ ಅವರ ಇತರ ಮಿತ್ರರು ಈ ಪ್ರದೇಶದಲ್ಲಿ ಮಧುಕರ್ ಶೆಟ್ಟಿ ಅವರ ಹೆಸರನ್ನು ಯಾವುದಾದರೂ ವೃತ್ತಕ್ಕೆ ಇಡಬೇಕು ಎಂದು ಆಗ್ರಹಿಸಿದ್ದರು. ಹಗದೂರು ಕಾರ್ಪೊರೇಟರ್ ಎಸ್ ಉದಯ್ ಕುಮಾರ್ ಅವರು ಈ ಬಗ್ಗೆ ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿಗೆ ಪ್ರಸ್ತಾವ ಸಲ್ಲಿಸಿದ್ದರು. ಸ್ಥಾಯಿ ಸಮಿತಿಯ ಒಪ್ಪಿಗೆಯ ಬಳಿಕ ಬಿಬಿಎಂಪಿ ಸಾಮಾನ್ಯ ಸಭೆ ಇದನ್ನು ಅಂಗೀಕರಿಸಿದೆ. ವಾರ್ಡ್ ಅಭಿವೃದ್ಧಿಗೆ ಮೀಸಲಾದ ಹಣದಲ್ಲಿ ಈ ಪ್ರತಿಮೆ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉದಯ್ ಕುಮಾರ್ ಹೇಳಿದ್ದಾರೆ.

ಇದೇ ರೀತಿ ನಗರದ ವಿವಿಧೆಡೆ ಬಸವಣ್ಣ ಹಾಗು ಶ್ರೀ ಶಿವಕುಮಾರ್ ಸ್ವಾಮೀಜಿಗಳ ಪ್ರತಿಮೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿದು ಬಂದಿದೆ.

ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ದಕ್ಷ ಹಾಗು ಪ್ರಾಮಾಣಿಕ ಜನಪರ ಕಾಳಜಿಯ ಅಧಿಕಾರಿ ಎಂದೇ ಖ್ಯಾತರಾಗಿದ್ದ ಮಧುಕರ್ ಶೆಟ್ಟಿ ಹೈದರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಹಠಾತ್ತನೆ ಅನಾರೋಗ್ಯಕ್ಕೀಡಾಗಿ ನಿಧನರಾದರು.

ಇವರು ಖ್ಯಾತ  ಪತ್ರಕರ್ತ  ದಿವಂಗತ  ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)