varthabharthi


ಸಿನಿಮಾ

ಬಾಲಿವುಡ್ ನಟಿಯಿಂದ ಮತ್ತೊಂದು ವಿವಾದ

ಮಾಧ್ಯಮಗಳನ್ನು ‘ದೇಶದ್ರೋಹಿ’ ಎಂದ ಕಂಗನಾ

ವಾರ್ತಾ ಭಾರತಿ : 11 Jul, 2019

ಹೊಸದಿಲ್ಲಿ, ಜು.11: ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆಂದು ಪತ್ರಕರ್ತ ಜಸ್ಟಿನ್ ರಾವ್ ವಿರುದ್ಧ ಹರಿಹಾಯ್ದು ಆರೋಪಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್, ಎಂಟರ್‍ಟೈನ್ಮೆಂಟ್ ಜರ್ನಲಿಸ್ಟ್ಸ್ ಗಿಲ್ಡ್ ಆಗ್ರಹದಂತೆ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಮಾಧ್ಯಮಗಳನ್ನು ‘ದೇಶದ್ರೋಹಿ’, ‘ಬಿಕಾವ್’, ‘ಸಸ್ತಿ’, ‘10ನೇ ತರಗತಿ ಫೇಲ್ ಕೂಡ ಅಲ್ಲ' ಎಂದು ವರ್ಣಿಸಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ತಮ್ಮ ಸೋದರಿ ರಂಗೋಲಿ ಚಂಡೇಲ್ ಅವರ ಟ್ವಿಟರ್ ಖಾತೆಯ ಮೂಲಕ  ಕಂಗನಾ ಎರಡು ಭಾಗಗಳ ವೀಡಿಯೋ ಸಂದೇಶ ಪೋಸ್ಟ್ ಮಾಡಿದ್ದಾರೆ. ಕಂಗನಾ ಹಾಗೂ ಆಕೆ ಅಭಿನಯಿಸುತ್ತಿರುವ ಹೊಸ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಕ್ಷಮೆ ಕೋರಬೇಕೆಂದು ಪತ್ರಕರ್ತರ ಗಿಲ್ಡ್ ಆಗ್ರಹದಂತೆ ಏಕ್ತಾ ಕಪೂರ್ ಕ್ಷಮೆ ಕೋರಿದ್ದರೂ ಕಂಗನಾ ಮಾತ್ರ ತಮ್ಮ ನಿರ್ಧಾರದಲ್ಲಿ ಅಚಲವಿದ್ದಂತಿದೆ.

ಇದೀಗ ತಮ್ಮ ಸೋದರಿಯ ಟ್ವಿಟರ್ ಖಾತೆಯ ಮೂಲಕ ಮಾಡಲಾಗಿರುವ ವೀಡಿಯೋ ಪೋಸ್ಟ್ ನಲ್ಲಿ ಆಕೆ ತಮ್ಮ ವಿರುದ್ಧ ಗುಂಪು ಕಟ್ಟಿರುವ ಹಾಗೂ ‘60 ರೂ .ಗೆ' ಮಾರಾಟಕ್ಕಿರುವ ಪತ್ರಕರ್ತರಿಗೆ  ಕ್ಷಮೆ ಕೋರುವುದಿಲ್ಲ ಎಂದಿದ್ದಾರಲ್ಲದೆ, ಕೆಲ ಪತ್ರಕರ್ತರು ತಮ್ಮ ಬಾಲಿವುಡ್ ಪಯಣಕ್ಕೆ ಸಹಕರಿಸಿದ್ದಾರೆ. ಆದರೆ ಈ ಪತ್ರಕರ್ತರಲ್ಲ ಎಂದೂ ಹರಿಹಾಯ್ದಿದ್ದಾರೆ.

ಕಂಗನಾರ ನೂತನ ಚಿತ್ರ ``ಜಡ್ಜ್‍ ಮೆಂಟಲ್ ಹೇ ಕ್ಯಾ' ಹಾಡು ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಬ್ಬರೊಡನೆ ನಡೆದ ಚಕಮಕಿಯ ನಂತರ ಕಂಗನಾ ಮ್ಯಾನೇಜರ್ ಆಗಿಯೂ ಕೆಲಸ ಮಾಡುವ ಆಕೆಯ ಸೋದರಿ ರಂಗೋಲಿ “ಕಂಗನಾ ಕ್ಷಮೆ ಕೋರುವುದಿಲ್ಲ, ಬದಲಾಗಿ ಮಾಧ್ಯಮವನ್ನು ಸರಿ ಪಡಿಸುತ್ತಾರೆ. ಮಾಧ್ಯಮ ತಪ್ಪಾದ ವ್ಯಕ್ತಿಯಿಂದ ಕ್ಷಮೆ ಕೇಳಿದೆ” ಎಂದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)