varthabharthi

ಕರ್ನಾಟಕ

ಎಚ್.ಎಸ್.ದೊರೆಸ್ವಾಮಿಗೆ ಬಸವ ಪುರಸ್ಕಾರ: 2018ನೇ ಸಾಲಿನ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಘೋಷಣೆ

ವಾರ್ತಾ ಭಾರತಿ : 11 Jul, 2019

ಬೆಂಗಳೂರು, ಜು.11: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ 2018ನೆ ಸಾಲಿನ ಬಸವ ಪುರಸ್ಕಾರಕ್ಕೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಟಿ.ಎನ್.ಕೃಷ್ಣನ್ ಹಾಗೂ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಚನ್ನಮ್ಮ ಹಳ್ಳಿಕೇರಿ ಭಾಜನರಾಗಿದ್ದಾರೆ.

2018ನೆ ಸಾಲಿನ ರಾಜ್ಯ ಪ್ರಶಸ್ತಿ ವಿಭಾಗದಲ್ಲಿ ನೀಡಲಾಗುವ ಡಾ.ಗುಬ್ಬಿವೀರಣ್ಣ ಪ್ರಶಸ್ತಿಗೆ ಬಾಗಲಕೋಟೆಯ ಪ್ರಕಾಶ್ ಕಡಪಟ್ಟಿ(ವೃತ್ತಿ ರಂಗಭೂಮಿ), ಜಾನಪದಶ್ರೀ ಪ್ರಶಸ್ತಿಗೆ ಬೀದರ್‌ನ ಚಂದ್ರಶಾ ತಮ್ಮಣ್ಣಪ್ಪ ಮಾಳಗೆ(ಜನಪದ ಹಾಡು) ಹಾಗೂ ಮೈಸೂರಿನ ಹಿಣಕಲ್ ಮಹದೇವಯ್ಯ(ಮೌಖಿಕ ಕಾವ್ಯ), ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಬೆಂಗಳೂರಿನ ಸಿ.ಚಂದ್ರಶೇಖರ(ಚಿತ್ರಕಲೆ) ಹಾಗೂ ಜಕಣಾಚಾರಿ ಪ್ರಶಸ್ತಿಗೆ ಉಡುಪಿಯ ಲಕ್ಷ್ಮೀನಾರಾಯಣ ಆಚಾರ್ಯ(ಶಿಲ್ಪಕಲೆ) ಆಯ್ಕೆಯಾಗಿದ್ದಾರೆ.

2018ನೆ ಸಾಲಿನ ಸಾಹಿತ್ಯ ಸಂಸ್ಕೃತಿ ವಿಭಾಗದ ಪ್ರಶಸ್ತಿ ವಿಭಾಗದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಧಾರವಾಡದ ಎಚ್.ಎಂ.ಬೀಳಗಿ, ಪ್ರೊ.ಕೆ.ಜೆ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಚಿಕ್ಕಬಳ್ಳಾಪುರದ ಬಿ.ಗಂಗಾಧರಮೂರ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಬಿಜಾಪುರದ ಎಸ್.ಆರ್.ಹಿರೇಮಠ, ಅಕ್ಕಮಹಾದೇವಿ ಪ್ರಶಸ್ತಿಗೆ ಬೆಂಗಳೂರಿನ ದು.ಸರಸ್ವತಿ ಹಾಗೂ ಪಂಪ ಪ್ರಶಸ್ತಿಗೆ ಬೆಂಗಳೂರಿನ ಪ್ರೊ.ಷ.ಶೆಟ್ಟರ್ ಆಯ್ಕೆಯಾಗಿದ್ದಾರೆ.

2018ನೆ ಸಾಲಿನ ಸಂಗೀತ ಪ್ರಶಸ್ತಿ ವಿಭಾಗದಲ್ಲಿ ಕುಮಾರವ್ಯಾಸ ಪ್ರಶಸ್ತಿಗೆ ಸಿರಿಗೆರೆಯ ರೇವಣಸಿದ್ದಶಾಸ್ತ್ರಿ, ಸಂತ ಶಿಶುನಾಳ ಷರೀಫರ ಪ್ರಶಸ್ತಿಗೆ ಕನಕಗಿರಿಯ ಹುಸೇನ ಸಾಬ, ನಿಜಗುಣಪುರಂದರ ಪ್ರಶಸ್ತಿಗೆ ಧಾರವಾಡದ ಬಿ.ಎಸ್.ಮಠ ಹಾಗೂ ಶಾಂತಲಾ ನಾಟ್ಯ ಪ್ರಶಸ್ತಿಗೆ ಬೆಂಗಳೂರಿನ ಬಿ.ಭಾನುಮತಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯು 10ಲಕ್ಷ ರೂ., ರಾಜ್ಯ ಪ್ರಶಸ್ತಿ 5ಲಕ್ಷ ರೂ. ಹಾಗೂ ಫಲಕ ಇರಲಿದ್ದು, ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)