varthabharthi

ಕರಾವಳಿ

ಹಜ್ ಯಾತ್ರಿಕರಿಗೆ ಹಜ್ ಸಮಿತಿಯಿಂದ ಅಗತ್ಯ ಸೂಚನೆಗಳು

ವಾರ್ತಾ ಭಾರತಿ : 11 Jul, 2019

ಮಂಗಳೂರು: ಸರಕಾರದ ಹಜ್ ಸಮಿತಿ ವತಿಯಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಗೆ ತೆರಳುವ ಹಜ್ಜಾಜ್ ಗಳಿಗೆ ಕೆಲವೊಂದು ಉಪಯುಕ್ತ ಮಾಹಿತಿಯನ್ನು ಹಜ್ ಸಮಿತಿ ನೀಡಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಜ್ಜಾಜ್ ಗಳಿಗೆ ತಿಳಿಸಲಾಗಿದೆ. 

ಈ ಬಾರಿ ಮಂಗಳೂರು ಹಜ್ ಕ್ಯಾಂಪ್ ಮೂಲಕ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ 750 ಯಾತ್ರಾರ್ಥಿಗಳು 5 ವಿಮಾನಗಳಲ್ಲಿ ಯಾತ್ರೆ ಹೊರಡಲಿದ್ದಾರೆ. ಜು.17ರಂದು ಒಂದು ವಿಮಾನ ಮತ್ತು ಜು. 18 ಮತ್ತು 19 ತಲಾ ಎರಡು ವಿಮಾನಗಳು ಮದೀನಾ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ.

ಹಜ್ ಗೆ ತೆರಳುವ ಹಜ್ಜಾಜ್ ಗಳಲ್ಲಿ ಕವರ್ ನಂಬ್ರದ ಮುಖ್ಯಸ್ಥರು ಪ್ರಯಾಣದ ನಿಗದಿತ ದಿನದ ಎರಡು ದಿನ ಮುಂಚಿತವಾಗಿ ಮಂಗಳೂರು ಹಜ್ ಕ್ಯಾಂಪ್ ಸ್ಥಳವಾದ ಬಜ್ಪೆ ಜುಮಾ ಮಸೀದಿ ಮುಂಭಾಗದಲ್ಲಿರುವ ಅನ್ಸಾರ್ ಸ್ಕೂಲ್ ನಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರೊಳಗಾಗಿ ವರದಿ ಮಾಡಬೇಕು.

ಉದಾಹರಣೆ: ಜು.17 ರಂದು ಪ್ರಯಾಣ ಬೆಳೆಸುವ ಸದಸ್ಯರು ಜುಲೈ 15 ರಂದು ತಮಗೆ ಹಜ್ ಸಮಿತಿ ಕಳುಹಿಸಿರುವ ರಶೀದಿ ಕಾರ್ಡ್, ಬ್ಯಾಂಕ್ ನಲ್ಲಿ ಹಣ ಪಾವತಿಸಿದ ಎಲ್ಲಾ ಚಲನ್ ರಶೀದಿಗಳ ಜೊತೆ ಕವರ್ ನಲ್ಲಿ ಇರುವ ಎಲ್ಲ ಯಾತ್ರಾರ್ಥಿಗಳ ಲಗ್ಗೇಜ್ ನೊಂದಿಗೆ ಆಗಮಿಸಬೇಕು.

ವರದಿ ಮಾಡುವಂದು ಒಬ್ಬರಿಗೆ ಗರಿಷ್ಟ 44 ಕೆಜಿ ಒಳಗಿನ 2 ಚೆಕ್ ಇನ್ ಬ್ಯಾಗ್ (ತಲಾ 22 ಕೆಜಿ ಒಳಗೆ) ಹಾಗೂ ಪ್ರಯಾಣದಂದು 10 ಕೆಜಿಯ ಒಳಗಿನ ಹ್ಯಾಂಡ್ ಬ್ಯಾಗ್ ಕೊಂಡು ಹೋಗಲು ಅನುಮತಿ ಇದೆ. ಲಗೇಜ್ ಬ್ಯಾಗ್ 75 ಸೆ.ಮೀ. ಲಂಬ, 55 ಸೆ.ಮೀ. ಅಗಲ, 28 ಸೆ.ಮೀ. ಉದ್ದ ಹಾಗೂ ಒಟ್ಟು ವಿಸ್ತೀರ್ಣ 158 ಸೆ.ಮೀ. ಅಳತೆಯೊಳಗಿರಬೇಕು.

ಕಾರ್ಟೂನ್ ಬಾಕ್ಸ್ ನ್ನು ಅನುಮತಿಸುವುದಿಲ್ಲ. ಕೇವಲ ಸ್ಟಾಂಡರ್ಡ್ ಬ್ಯಾಗನ್ನು ಉಪಯೋಗಿಸಬೇಕು. ಹ್ಯಾಂಡ್ ಬ್ಯಾಗ್ 55 ಸೆ.ಮೀ. ಲಂಬ, 40 ಸೆ.ಮೀ. ಅಗಲ ಹಾಗೂ 23 ಸೆ.ಮೀ. ಉದ್ದಳತೆಯ ಒಳಗಿರಬೇಕು.

ಹಜ್ಜಾಜ್ ಗಳು ತಮ್ಮ ತಮ್ಮ ಲಗೇಜ್ ಹಾಗೂ ಬ್ಯಾಗ್ ಗಳಲ್ಲಿ ಕವರ್ ನಂಬ್ರ, ಹೆಸರು, ವಿಳಾಸ, ವಿಮಾನ ನಂಬ್ರ ಹಾಗೂ ಮಂಗಳೂರು ಎಂಬರ್ಕೇಶನ್ ಪಾಯಿಂಟನ್ನು ನಮೂದಿಸಬೇಕು.

ಬಾಟಲಿ, ಜಾರ್ ಗಳಲ್ಲಿ ತುಂಬಿಸಿದ ದ್ರವ ವಸ್ತುಗಳನ್ನು ಬಿಚ್ಚದಂತೆ ಭದ್ರಪಡಿಸಬೇಕು. ಉಪ್ಪಿನಕಾಯಿ, ಔಷಧಿ ಮೊದಲಾದ ದ್ರವ ವಸ್ತುಗಳು ಸೋರಿಕೆಯಾದರೆ ಅಂತಹ ಲಗ್ಗೇಜನ್ನು ರದ್ದು ಮಾಡಲಾಗುವುದು.

ಹ್ಯಾಂಡ್ ಬ್ಯಾಗಿನಲ್ಲಿ ಅಗತ್ಯದ ತುರ್ತು ವಸ್ತುಗಳಾದ ಒಂದು ಜೊತೆ ಬಟ್ಟೆ, ಬ್ರಶ್, 2 ದಿನಗಳಿಗಾಗುವ ಔಷಧಿ, ಕುರ್ಆನ್, ಹಜ್ ಪುಸ್ತಕ, ತಸ್ಬೀಹ್ ಮಾಲೆ ಹಾಗೂ ಇತರ ಅಗತ್ಯದ ವಸ್ತುಗಳು ಮಾತ್ರ ಇರಲಿ.

ಉಪಯೋಗಿಸುವ ಔಷಧಿಯ ವೈದ್ಯರ ಚೀಟಿ, ಹಜ್ ಸಮಿತಿ ನೀಡಿದ ಮೆಡಿಕಲ್ ಕಾರ್ಡ್, ಕ್ಯಾಂಪಿನಲ್ಲಿ ನೀಡಲಾಗುವ ವೀಸಾ ಸಹಿತ ಪಾಸ್ ಪೋರ್ಟ್, ಬ್ಯಾಗೇಜ್ ಟ್ಯಾಗ್, ಟಿಕೆಟ್, ಎಮಿಗ್ರೇಶನ್ ಕಾರ್ಡನ್ನು ಜೋಪಾನವಾಗಿಟ್ಟುಕೊಳ್ಳಬೇಕು.

ಕತ್ತಿ, ಕತ್ತರಿ, ಕೂದಲ ಕ್ಲಿಪ್, ನೈಲ್ ಕಟರ್, ಲೈಟರ್ ಮೊದಲಾದ ಮಾರಕ ವಸ್ತುಗಳನ್ನು ಹ್ಯಾಂಡ್ ಬ್ಯಾಗಿನಲ್ಲಿ ಇಡಬಾರದು. ಹಾಜಿಗಳ ವಿವರವಿರುವ ಕೈಬಳೆಯನ್ನು 38 ಅಥವಾ 40 ದಿನಗಳ ಪ್ರಯಾಣದುದ್ದಕ್ಕೂ ತೊಡಬೇಕು. ವಿಮಾನ ಮದೀನಾ ತೆರಳುವುದರಿಂದ ಇಹ್ರಾಮ್ ಬಟ್ಟೆ ಚೆಕ್ ಇನ್ ಲಗೇಜ್ ನಲ್ಲಿ ಹಾಕಿರಿ. ಲಗ್ಗೇಜ್ ಅಥವಾ ಹ್ಯಾಂಡ್ ಬ್ಯಾಗಿನಲ್ಲಿ ಕಸ್ ಕಸ್, ಮಾದಕ ದ್ರವ್ಯ ಮಾತ್ರೆ, ಔಷಧಿ ಮತ್ತು ವಸ್ತುಗಳು, ಗುಟ್ಕಾ, ಪಾನ್ ಪರಾಗ್ ಮೊದಲಾದವುಗಳಿಗೆ ನಿಷೇಧ ಹೇರಲಾಗಿದೆ.

ಎಂಬರ್ಕೇಶನ್ ಪಾಯಿಂಟಲ್ಲಿ ಪ್ರತಿಯೊಬ್ಬ ಯಾತ್ರಾರ್ಥಿಗೆ 2,100 ರಿಯಾಲ್ ವಿತರಿಸಲಾಗುತ್ತದೆ. ಅದನ್ನು ಜೋಪಾನವಾಗಿ ಇಡಬೇಕು. ಅದಕ್ಕಿಂತ ಹೆಚ್ಚಿನ ರಿಯಾಲ್, ಡಾಲರ್ ಅಥವಾ ವಿದೇಶಿ ಕರೆನ್ಸಿಯನ್ನು ಎಕ್ಸ್ಚೇಂಜ್ ಸೆಂಟರಿಂದ ಖರೀದಿ ಮಾಡುವುದಾದರೆ ಪಾನ್ ಕಾರ್ಡ್ ಜೊತೆಗಿಟ್ಟುಕೊಳ್ಳಬೇಕು. ಚಿನ್ನ, ವಜ್ರ ಮೊದಲಾದ ಆಭರಣಗಳನ್ನು ಹಾಗೂ ಮೌಲ್ಯಯುತ ವಸ್ತುಗಳನ್ನು ಧರಿಸಬಾರದು ಮತ್ತು ಕೊಂಡೊಯ್ಯಬಾರದು ಎಂದು ಹಜ್ ಸಮಿತಿಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ +91 9481236613, ಯೇನಪೋಯ ಮಹಮ್ಮದ್ ಕುಂಞಿ +91 9845084455, ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ +91 9845365555, ರಶೀದ್ ವಿಟ್ಲ +91 9741993313 ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)