varthabharthiವಿಶೇಷ-ವರದಿಗಳು

“'ಗುಜರಾತ್ ಫೈಲ್ಸ್' ಟೇಪ್ ಗಳನ್ನು ಸಾಕ್ಷಿಯಾಗಿ ಪರಿಶೀಲಿಸಿ”

“ಹರೇನ್ ಪಾಂಡ್ಯ ಹತ್ಯೆ ಪ್ರಕರಣದ ತೀರ್ಪಿನ ಬಳಿಕ ಸುಪ್ರೀಂಗೊಂದು ಮನವಿ”

ವಾರ್ತಾ ಭಾರತಿ : 11 Jul, 2019
ರಾಣಾ ಅಯ್ಯೂಬ್

2003ರಲ್ಲಿ ನಡೆದಿದ್ದ ಗುಜರಾತಿನ ಮಾಜಿ ಗೃಹಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ 12 ಆರೋಪಿಗಳನ್ನು ಖುಲಾಸೆಗೊಳಿಸಿ ಗುಜರಾತ್ ಉಚ್ಚ ನ್ಯಾಯಾಲಯವು 2011ರಲ್ಲಿ ನೀಡಿದ್ದ ತೀರ್ಪನ್ನು ನ್ಯಾ.ಅರುಣ್ ಮಿಶ್ರಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಜು.5ರಂದು ತಳ್ಳಿಹಾಕಿದೆ. ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಪ್ರಕರಣದಲ್ಲಿಯ ಸಿಬಿಐ ತನಿಖೆಯನ್ನು ತೀವ್ರವಾಗಿ ಖಂಡಿಸಿತ್ತು. ಪಾಂಡ್ಯ ಕೊಲೆಯನ್ನು ಗುಜರಾತಿನ ವಿಹಿಂಪ ನಾಯಕರೋರ್ವರ ಹತ್ಯೆಯೊಂದಿಗೆ ತಳುಕು ಹಾಕಿದ್ದ ಸಿಬಿಐ,ಈ ಹತ್ಯೆಗಳನ್ನು ಹಿಂದೂಗಳಲ್ಲಿ ಭೀತಿಯನ್ನು ಹರಡಲು ಮುಸ್ಲಿಂ ಧರ್ಮಗುರುವೋರ್ವರ ನೇತೃತ್ವದಲ್ಲಿಯ ಅಂತರರಾಷ್ಟ್ರೀಯ ಒಳಸಂಚು ಎಂದು ಬಣ್ಣಿಸಿತ್ತು.

ತನಿಖಾಧಿಕಾರಿಗಳ ಅಸಮರ್ಥತೆಯು ಅನ್ಯಾಯ,ಸಂಬಂಧಿತ ಹಲವಾರು ಜನರಿಗೆ ಭಾರೀ ಕಿರುಕುಳ,ಸಾರ್ವಜನಿಕ ಸಂಪನ್ಮೂಲಗಳ ಬೃಹತ್ ವೆಚ್ಚ ಮತ್ತು ನ್ಯಾಯಾಲಯಗಳ ಸಮಯ ವ್ಯರ್ಥಕ್ಕೆ ಕಾರಣವಾಗಿದ್ದು,ಇದಕ್ಕಾಗಿ ಅವರನ್ನು ಉತ್ತರದಾಯಿಗಳಾಗಿಸಬೇಕು ಎಂದು ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು. ಆದರೆ ಈ ಅಭಿಪ್ರಾಯಗಳನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು 12 ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುವ ಮೂಲಕ ಸಿಬಿಐ ಪ್ರತಿಪಾದನೆಗಳಿಗೆ ಮಣೆ ಹಾಕಿದೆ.

ನೂತನ ಮಾಹಿತಿಯೊಂದರ ಆಧಾರದಲ್ಲಿ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಮರುತನಿಖೆಯನ್ನು ಕೋರಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್(ಸಿಪಿಐಎಲ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನೂ ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಪಾಂಡ್ಯ ಹತ್ಯೆಗೂ ಗ್ಯಾಂಗ್‌ಸ್ಟರ್ ಸೊಹ್ರಾಬುದ್ದೀನ್ ಶೇಖ್‌ಗೂ ನಂಟು ಕಲ್ಪಿಸಿರುವ ಇತ್ತೀಚಿನ ರುಜುವಾತು ಈ ಹೊಸ ಮಾಹಿತಿಯಾಗಿದೆ. ಸೊಹ್ರಾಬುದ್ದೀನ್ ಬಳಿಕ ಗುಜರಾತ್ ಪೊಲೀಸರು ನಡೆಸಿದ್ದರೆನ್ನಲಾದ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದ. ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಆತನ ಸಹಚರ ಅಝಂ ಖಾನ್ 2018ರಲ್ಲಿ ಮುಂಬೈ ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆಯಲ್ಲಿ ‘ತನಗೆ ಪಾಂಡ್ಯ ಅವರನ್ನು ಕೊಲ್ಲುವಂತೆ ಸುಪಾರಿ ಸಿಕ್ಕಿದೆ ಎಂದು ಸೊಹ್ರಾಬುದ್ದೀನ್ ನನಗೆ ತಿಳಿಸಿದ್ದ. ವಂಝಾರಾ ತನಗೆ ಈ ಸುಪಾರಿ ನೀಡಿದ್ದಾರೆ ಎಂದೂ ಆತ ಹೇಳಿದ್ದ ’ ಎಂದು ತಿಳಿಸಿದ್ದ.

ಆತ ಪ್ರಸ್ತಾಪಿಸಿದ್ದು ಗುಜರಾತ್ ಪೊಲೀಸ್‌ನ ಮಾಜಿ ಡಿಐಜಿ ಡಿ.ಜಿ.ವಂಝಾರಾರನ್ನು. ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಯಾಗಿದ್ದಾಗ ವಂಝಾರಾ ಇನ್ನೂ ಸೇವೆಯಲ್ಲಿದ್ದರು. ಈಗ ಕೇಂದ್ರ ಗೃಹಸಚಿವರಾಗಿರುವ ಗುಜರಾತಿನ ಮಾಜಿ ಗೃಹಸಚಿವ ಅಮಿತ್ ಶಾ ಅವರು ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲೊಬ್ಬರಾಗಿದ್ದರು.

 “ಸಿಪಿಐಎಲ್ ತನ್ನ ಅರ್ಜಿಯಲ್ಲಿ ಪಟ್ಟಿ ಮಾಡಿದ್ದ ಔಟ್‌ಲುಕ್ ಮ್ಯಾಗಝಿನ್‌ನಂತಹ ಮಾಧ್ಯಮಗಳ ತನಿಖಾ ವರದಿಗಳು ಮತ್ತು 2016ರಲ್ಲಿ ಬಿಡುಗಡೆಗೊಂಡಿದ್ದ ನನ್ನ ಕೃತಿ ‘ಗುಜರಾತ್ ಫೈಲ್ಸ್:ಅನಾಟಮಿ ಆಫ್ ಎ ಕವರ್ ಅಪ್ ’ನಂತಹ ಸಾಕ್ಷಾಧಾರಗಳನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ನನ್ನ ಕೃತಿಯು ಪಾಂಡ್ಯ ಹತ್ಯೆ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳುವ ಮುನ್ನ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ ವೈ.ಎ.ಶೇಖ್ ಮತ್ತು ನನ್ನ ನಡುವಿನ ಸಂಭಾಷಣೆಯ ಲಿಪ್ಯಂತರವನ್ನು ಒಳಗೊಂಡಿದೆ. ಈ ಸಂಭಾಷಣೆಯನ್ನು ನಾನು ರಹಸ್ಯವಾಗಿ ಧ್ವನಿ ಮುದ್ರಿಸಿಕೊಂಡಿದ್ದೆ. ‘ಒಮ್ಮೆ ಸತ್ಯವು ಹೊರಬಂದಿತೆಂದರೆ ಮೋದಿ ಮನೆಗೆ ಹೋಗುತ್ತಾರೆ. ಅವರಿಗೆ ಜೈಲಾಗುತ್ತದೆ ’ ಎಂದು ಶೇಖ್ ಹೇಳಿದ್ದರು. ‘ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಅಸ್ಗರ್ ಅಲಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಮತ್ತು ಸುಳ್ಳು ತಪ್ಪೊಪ್ಪಿಗೆ ನೀಡಲು ಬಲವಂತಗೊಳಿಸಲಾಗಿತ್ತು. ಅವರಿಗೆ ಯಾವುದಾದರೂ ಮುಸ್ಲಿಂ ವ್ಯಕ್ತಿಯ ಮೇಲೆ ಆರೋಪ ಹೊರಿಸಬೇಕಿತ್ತು. ಹೀಗಾಗಿ ಅವರು ಅಲಿಯನ್ನು ಪ್ರಕರಣದಲ್ಲಿ ಫಿಟ್ ಮಾಡಿದ್ದಾರೆ ’ ಎಂದೂ ಶೇಖ್ ನನಗೆ ತಿಳಿಸಿದ್ದರು.”

“ನನ್ನ ಕೃತಿಯಲ್ಲಿಯ ಸಾಕ್ಷಾಧಾರಗಳನ್ನು ತಳ್ಳಿಹಾಕುವಾಗ ಸರ್ವೋಚ್ಚ ನ್ಯಾಯಾಲಯವು ನನ್ನ ಬಗ್ಗೆಯೂ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಓರ್ವ ಪತ್ರಕರ್ತೆಯಾಗಿ ನನ್ನ ಪ್ರಾಮಾಣಿಕತೆಯನ್ನು ಅದು ಪ್ರಶ್ನಿಸಿದೆ. ನ್ಯಾ.ಮಿಶ್ರಾ ಅವರು ಬರೆದಿರುವ ತೀರ್ಪು ನನ್ನ ಕೃತಿಯಲ್ಲಿನ ಲಿಪ್ಯಂತರಗಳ ಪೈಕಿ ‘ಒಮ್ಮೆ ಸತ್ಯವು.......ಜೈಲಾಗುತ್ತದೆ ’ಎಂಬ ಮೇಲಿನ ಒಂದು ಸಾಲನ್ನು,ಕೇವಲ ಒಂದೇ ಸಾಲನ್ನು ಉಲ್ಲೇಖಿಸಿದೆ. ‘‘ಪಾಂಡ್ಯ ಪ್ರಕರಣವನ್ನು ಜ್ವಾಲಾಮುಖಿಗೆ ಹೋಲಿಸಿರುವ ರಾಣಾ ಅಯ್ಯೂಬ್ ಅವರ ಪುಸ್ತಕವನ್ನು ನೆಚ್ಚಿಕೊಳ್ಳಲಾಗಿದೆ. ವಕೀಲರು ಪಾಂಡ್ಯ ಅವರ ತಂದೆ ವಿಠಲ ಪಾಂಡ್ಯ ಅವರ ಹೇಳಿಕೆಯನ್ನು ಆಧರಿಸಿದ್ದ ಔಟ್‌ಲುಕ್ ಲೇಖನವೊಂದನ್ನೂ ನೆಚ್ಚಿಕೊಂಡಿದ್ದರು. ಅಸಲಿ ಹಂತಕನ ಬಗ್ಗೆ ವಿಠಲ ಪಾಂಡ್ಯ ಶಂಕೆ ವ್ಯಕ್ತಪಡಿಸಿರುವಂತಿದೆ,ಆದರೆ ಯಾರ ವಿರುದ್ಧವೂ ಅವರ ಬಳಿ ಸಾಕ್ಷಾಧಾರಗಳಿಲ್ಲ. ರಾಣಾರ ಪುಸ್ತಕವು ನಿರರ್ಥಕವಾಗಿದೆ. ಅದು ಕಪೋಲಕಲ್ಪಿತವಾಗಿದೆ,ಅದರಲ್ಲಿ ಯಾವುದೇ ಸಾಕ್ಷ್ಯಧಾರಗಳಿಲ್ಲ. ಓರ್ವ ವ್ಯಕ್ತಿಯ ಅಭಿಪ್ರಾಯವು ಸಾಕ್ಷ್ಯಧಾರವಾಗುವುದಿಲ್ಲ’’ ಎಂದೂ ತೀರ್ಪು ಹೇಳಿದೆ.

“ಸರ್ವೋಚ್ಚ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬೆನ್ನಿಗೇ ಆಡಳಿತ ಬಿಜೆಪಿಯ ಬೆಂಬಲಿಗರು ತಮ್ಮ ಟ್ವೀಟ್‌ಗಳಲ್ಲಿ ನನ್ನನ್ನು ಟ್ಯಾಗ್ ಮಾಡಲು ಆರಂಭಿಸಿದ್ದರು. ನನ್ನ ತನಿಖಾ ವರದಿಯನ್ನು ‘ಅಪಪ್ರಚಾರ’ಎಂದು ಬಣ್ಣಿಸಿದ್ದ ಅವರು ನನ್ನನ್ನು ‘ ಮಾನಸಿಕ ವಿಕೃತೆ ’ ಮತ್ತು ‘ರಾಜಕೀಯ ನಾಯಿ ’ಎಂದು ಹೆಸರಿಸಿದ್ದರು. ಈ ಪೈಕಿ ಹೆಚ್ಚಿನ ಅಕೌಂಟ್‌ಗಳು ಮೋದಿ ಮತ್ತು ಶಾ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿವೆ. ಬಲಪಂಥೀಯ ಪ್ರಕಟಣೆಯಾಗಿರುವ ಆಪ್ ಇಂಡಿಯಾವು ‘ರಾಣಾ ಅಯ್ಯೂಬ್‌ರ ಗುಜರಾತ್ ಪುಸ್ತಕವನ್ನು ಸರ್ವೋಚ್ಚ ನ್ಯಾಯಾಲಯವು ಕಸದ ಬುಟ್ಟಿಗೆಸೆದಿದೆ ’ ಎಂಬ ಶೀರ್ಷಿಕೆಯೊಡನೆ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಸುದ್ದಿಯನ್ನು ಪ್ರಕಟಿಸಿತ್ತು. ಹಲವಾರು ಅಕೌಂಟ್‌ಗಳು ಈ ಲಿಂಕ್‌ನ್ನು ಶೇರ್ ಮಾಡಿಕೊಳ್ಳತೊಡಗಿದ್ದವು. ನನ್ನ ಟೈಮ್‌ಲೈನ್ ನನ್ನ ಪತ್ರಿಕೋದ್ಯಮದ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ ಟ್ವೀಟ್‌ಗಳಿಂದ ತುಂಬಿಹೋಗಿತ್ತು.”

ಸರ್ವೋಚ್ಚ ನ್ಯಾಯಾಲಯದ ಟೀಕೆ ಮತ್ತು ಆನ್‌ಲೈನ್ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಸಾರ್ವಜನಿಕರೆದುರು ಕೆಲವು ಸತ್ಯಾಂಶಗಳನ್ನು ಮಂಡಿಸುವುದು ಅನಿವಾರ್ಯವೆಂದು ನಾನು ಭಾವಿಸಿದ್ದೇನೆ.

ಮೊದಲನೆಯದಾಗಿ ‘ಗುಜರಾತ್ ಫೈಲ್ಸ್’ ಒಂದು ಶುದ್ಧ ತನಿಖಾ ವರದಿಯಾಗಿದೆ. ಅದು 2010ರ ದಶಕದ ಆದಿಯಲ್ಲಿ ಎಂಟು ತಿಂಗಳ ಕಾಲ ನಾನು ನಡೆಸಿದ್ದ ಕುಟುಕು ಕಾರ್ಯಾಚರಣೆಗಳಲ್ಲಿಯ ಧ್ವನಿಮುದ್ರಿತ ವೀಡಿಯೊಗಳ ಲಿಪ್ಯಂತರಗಳನ್ನು ಒಳಗೊಂಡಿದೆ. ಆ ಸಂದರ್ಭದಲ್ಲಿ ನಾನು ಗುಜರಾತಿನ ಮಾಜಿ ಗೃಹ ಕಾರ್ಯದರ್ಶಿ ಅಶೋಕ ನಾರಾಯಣ,ಮಾಜಿ ಡಿಜಿಪಿ ಪಿ.ಸಿ.ಪಾಂಡೆ,ಭಯೋತ್ಪಾದನೆ ನಿಗ್ರಹ ದಳದ ಮಾಜಿ ಮುಖ್ಯಸ್ಥ ರಾಜನ್ ಪ್ರಿಯದರ್ಶಿ,ಅಹ್ಮದಾಬಾದ್ ಎಟಿಎಸ್ ನ ಮಾಜಿ ಮುಖ್ಯಸ್ಥ ಜಿ.ಎಲ್.ಸಿಂಘಾಲ್,ಮಾಜಿ ಐಜಿಪಿ ಗೀತಾ ಜೋಹ್ರಿ ಮತ್ತು ವೈ.ಎ.ಶೇಖ್ ಅವರೊಂದಿಗಿನ ನನ್ನ ಮಾತುಕತೆಗಳನ್ನು ಧ್ವನಿ ಮುದ್ರಿಸಿಕೊಂಡಿದ್ದೆ. ಈ ಅಧಿಕಾರಿಗಳೊಂದಿಗಿನ ನನ್ನ ಮಾತುಕತೆಗಳು 2002ರ ಗುಜರಾತಿನ ಮುಸ್ಲಿಂ ವಿರೋಧಿ ಸಂಘಟಿತ ದಂಗೆಗಳು, ಸೊಹ್ರಾಬುದ್ದೀನ್ ಮತ್ತು ಪಾಂಡ್ಯ ಹತ್ಯೆಗಳು,ನಕಲಿ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟ ಇಶ್ರತ್ ಜಹಾನ್ ಮತ್ತು ತುಳಸಿರಾಮ ಪ್ರಜಾಪತಿ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಬಹಿರಂಗಗೊಳಿಸಿವೆ. ಈ ಅಧಿಕಾರಿಗಳು ಹೇಳಿದ್ದನ್ನೇ ನನ್ನ ಪುಸ್ತಕದಲ್ಲಿ ಪುನರುಚ್ಚರಿಸಲಾಗಿದೆ. ಅವರನ್ನು ಮತ್ತು ಗುಜರಾತ್ ಆಡಳಿತ ಯಂತ್ರದಲ್ಲಿಯ ಕೆಲವು ಅತ್ಯಂತ ಪ್ರಭಾವಿಗಳನ್ನು ನಾನು ಬೆಟ್ಟು ಮಾಡಿದ್ದೆೇನೆ. ವಿಶೇಷ ತನಿಖಾ ತಂಡ(ಸಿಟ್)ವು ಪ್ರಶ್ನಿಸಿದಾಗ ಇದೇ ಅಧಿಕಾರಿಗಳು ತಮಗೆ ಇಂತಹ ಯಾವುದೇ ವಿವರಗಳು ನೆನಪಿಲ್ಲ ಎನ್ನುವ ಮೂಲಕ ನುಣುಚಿಕೊಂಡಿದ್ದರು.

2016,ಮೇ ತಿಂಗಳಿನಲ್ಲಿ ನನ್ನ ಪುಸ್ತಕ ಬಿಡುಗಡೆಗೊಂಡಾಗಿನಿಂದಲೂ ಧ್ವನಿಮುದ್ರಿತ ಸಂಭಾಷಣೆಗಳನ್ನು ಪರಿಶೀಲಿಸುವಂತೆ ನಾನು ಸಿಟ್ ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಆಗ್ರಹಿಸಿದ್ದೆ. ಈ ಧ್ವನಿಮುದ್ರಿತ ಟೇಪ್‌ಗಳನ್ನು ನೀಡುವುದಾಗಿಯೂ ನಾನು ತಿಳಿಸಿದ್ದೆ.

ನನ್ನ ಪತ್ರಿಕೋದ್ಯಮದ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು ನನ್ನ ಪತ್ರಿಕೋದ್ಯಮವು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿರುವಂತಿದೆ. ಸಿಬಿಐ ಒಮ್ಮೆ ಸಂಬಂಧಿತ ಪ್ರಕರಣಗಳಲ್ಲಿ ನನ್ನ ಕೃತಿಯಲ್ಲಿಯ ಇದೇ ಸಾಕ್ಷ್ಯಾಧಾರಗಳನ್ನು ನೆಚ್ಚಿಕೊಂಡಿದ್ದನ್ನು ಗಮನಿಸಿದರೆ ನ್ಯಾಯಾಲಯದ ಈ ಅಭಿಪ್ರಾಯವು ಅಚ್ಚರಿ ಮೂಡಿಸಿದೆ.

  ನ್ಯಾಯಾಲಯವು ತನ್ನ ಆದೇಶದಲ್ಲಿ ನನ್ನ ತನಿಖಾ ಪತ್ರಿಕೋದ್ಯಮದ ಪುರಾವೆಗಳನ್ನು ಪರಿಶೀಲಿಸದೆ ಅದನ್ನು ಕಡೆಗಣಿಸಿರುವಂತಿದೆ. 2016ರಲ್ಲಿ ಈ ವಿಷಯಗಳನ್ನು ಪರಿಶೀಲಿಸುತ್ತಿದ್ದ ವಿಚಾರಣಾ ಆಯೋಗಗಳು ನ್ಯಾಯಯುತ ಮತ್ತು ಸ್ವತಂತ್ರ ತನಿಖೆಗಾಗಿ ನನ್ನಿಂದ ಟೇಪ್‌ಗಳನ್ನು ಮತ್ತು ಕುಟುಕು ಕಾರ್ಯಾಚರಣೆಯ ಹಾರ್ಡ್ ಡಿಸ್ಕ್‌ನ್ನು ಪಡೆದುಕೊಳ್ಳುವಂತೆ ನಾನು ಬಹಿರಂಗವಾಗಿ ಆಗ್ರಹಿಸಿದ್ದೆ. ಈಗ ನ್ಯಾಯಾಲಯಕ್ಕೂ ಈ ಆಗ್ರಹವನ್ನು ಪುನರಾವರ್ತಿಸಲು ನಾನು ಬಯಸಿದ್ದೇನೆ. ನನ್ನ ಕೃತಿಯ ಪ್ರತಿ ಮತ್ತು ಕುಟುಕು ಕಾರ್ಯಾಚರಣೆಯ ಟೇಪ್‌ಗಳನ್ನು ಸಲ್ಲಿಸಲು ನನಗೆ ಅವಕಾಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ನಾನು ಕೋರಿಕೊಳ್ಳುತ್ತಿದ್ದೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)