varthabharthi

ಕರ್ನಾಟಕ

ಮುಖ್ಯಮಂತ್ರಿ ಕುಮಾರಸ್ವಾಮಿಯ ಸ್ವ ಕ್ಷೇತ್ರದಲ್ಲೇ ಜೀತ ಪದ್ಧತಿ ಜೀವಂತ

ವಾರ್ತಾ ಭಾರತಿ : 11 Jul, 2019

ಬೆಂಗಳೂರು, ಜು.11: ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆ ಪುಸ್ತಕದಲ್ಲಿ ಮಾತ್ರವೆಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯ ಸ್ವ ಕ್ಷೇತ್ರವಾದ ರಾಮನಗರದಲ್ಲೇ ಜೀತ ಪದ್ಧತಿ ಇನ್ನೂ ತಾಂಡವವಾಡುತ್ತಿದೆ.

ಸರಕಾರ ದೀನ ದಲಿತ, ಕೂಲಿ ಕಾರ್ಮಿಕರ ಪರವಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಉಳ್ಳವರು ಅದರ ಮೇಲೆ ನಡೆಯುತ್ತಾರೆ ಎಂಬುದಕ್ಕೆ ಜುಲೈ 8ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುತಿಂಗೆರೆ ಗ್ರಾಮದಲ್ಲಿರುವ ಇಟ್ಟಿಗೆ ಗೂಡೊಂದರಿಂದ ಕೆಲಸ ಮಾಡದ ಒಂದು ಚಿಕ್ಕ ಮಗು ಒಳಗೊಂಡಂತೆ 8 ಜೀತ ಕಾರ್ಮಿಕರನ್ನು ಜಿಲ್ಲಾಡಳಿತ ಗುರುತಿಸಿರುವುದೇ ಸಾಕ್ಷಿಯಾಗಿದೆ.

ಜೀತ ಕಾರ್ಮಿಕರೆಲ್ಲ ಇರುಳರ್ ಬುಡಕಟ್ಟಿಗೆ ಸೇರಿದವರಾಗಿದ್ದು, ಆರು ತಿಂಗಳಿಂದ ಜೀತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಜೀತ ಮಾಡುತ್ತಿದ್ದ 7 ಕಾರ್ಮಿಕರಲ್ಲಿ, 10ವರ್ಷ, 15ವರ್ಷ ಹಾಗೂ 16ವರ್ಷ ವಯಸ್ಸಿನ ಬಾಲಕರು ಒಳಗೊಂಡಿದ್ದರು. ಕಾರ್ಮಿಕರನ್ನು ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿಯಲ್ಲಿರುವ ತಮ್ಮ ಮನೆಗಳಿಂದ ಮೇಸ್ತ್ರಿ ಹಾಗೂ ಇಟ್ಟಿಗೆ ಗೂಡಿನ ಮಾಲಕನು ಕಳ್ಳಸಾಗಣೆಯ ಮೂಲಕ ಕರೆ ತಂದಿದ್ದರು ಎನ್ನಲಾಗಿದೆ.

ಅವರನ್ನು ಕಾರ್ಖಾನೆಗೆ ಕರೆತರುವ ಮೊದಲು ಕಾರ್ಮಿಕರಿಗೆ ಪ್ರತಿ ಇಟ್ಟಿಗೆಗೆ ಒಂದು ರೂಪಾಯಿ ಕೂಲಿ, ಅಷ್ಟೇ ಅಲ್ಲದೆ ಅವರುಗಳು ತಯಾರಿಸುವ ಪ್ರತಿ ಒಂದು ಲಕ್ಷ ಇಟ್ಟಿಗೆಗೆ ಉಚಿತ 5,000 ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕಾರ್ಮಿಕರು ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಅವರಿಗೆ ನೀಡಿದ ಭರವಸೆಗಳೆಲ್ಲ ಸುಳ್ಳೆಂದು ಅರಿವಾಗಿದೆ.

ಇನ್ನು, ಎಪ್ರಿಲ್ 1, 2018 ರ ಕನಿಷ್ಠ ವೇತನ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಇಟ್ಟಿಗೆ ಗೂಡು ಕೆಲಸಗಾರನಿಗೆ ಕನಿಷ್ಠ ವೇತನ ದಿನಕ್ಕೆ 460.76 ರೂ. ನೀಡಬೇಕು. ಈ ಕುಟುಂಬವು ವಾಸಿಸುತ್ತಿದ್ದ ಸ್ಥಳವು ಶೋಚನೀಯ ಸ್ಥಿತಿಯಲ್ಲಿತ್ತು. ಅವರಿಗೆ ಸರಿಯಾದ ಆರೋಗ್ಯ ಸೇವೆ ಲಭ್ಯವಿರಲಿಲ್ಲ ಮತ್ತು ಅವರು ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ಕರೆದೊಯ್ಯುತ್ತಿರಲಿಲ್ಲ. ಮೇಸ್ತ್ರಿ ಹಾಗೂ ಮಾಲಕನು ಕಾರ್ಮಿಕರನ್ನು ಮೌಖಿಕವಾಗಿ ಹಾಗೂ ದೈಹಿಕವಾಗಿ ನಿಂದಿಸುತ್ತಿದ್ದರು. ನಾವು ಮನೆಗೆ ವಾಪಸ್ ತೆರಳಲು ಅನುಮತಿ ಕೇಳಿದಾಗಲೆಲ್ಲ ಹೆದರಿಸುತ್ತಿದ್ದರು ಎಂದು ಕಾರ್ಮಿಕನೊಬ್ಬ ತನ್ನ ಅಳಲನ್ನು ತೊಡಿಕೊಂಡಿದ್ದಾನೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮನಗರ ಕಾರ್ಮಿಕ ಇಲಾಖೆಯು ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಕಲಂ 14 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಜಿಲ್ಲಾಧಿಕಾರಿಯು ತಹಸೀಲ್ದಾರ್‌ರವರಿಂದ ರಕ್ಷಣಾ ಕಾರ್ಯಾಚರಣೆಯ ಕುರಿತು ವರದಿಯನ್ನು ಒಪ್ಪಿಸಲು ಕೇಳಿಕೊಂಡಿದ್ದಾರೆ.

ಕಾರ್ಮಿಕರು ದಿನಕ್ಕೆ 3,500 ಇಟ್ಟಿಗೆಗಳನ್ನು ತಯಾರಿಸಿದರೂ ಮಾಲಕನು ವಾರಕ್ಕೆ ವ್ಯಕ್ತಿಗೆ ಕೇವಲ 1,000 ರೂ. ನೀಡುತ್ತಿದ್ದನು ಎಂದು ಕಾರ್ಮಿಕನೊಬ್ಬನು ತಮ್ಮ ಅಳಲನ್ನು ತೋಡಿಕೊಂಡಿದ್ದಾನೆ.

-ರೆಹಮಾನ್, ರಾಮನಗರ ಕಂದಾಯ ನಿರೀಕ್ಷಕರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)