varthabharthi

ಕರಾವಳಿ

‘ಜನನ ಅಂತರ ಕಡಿಮೆಯಾದರೆ ಲಿಂಗಾನುಪಾತದ ಮೇಲೆ ಪರಿಣಾಮ’

ವಾರ್ತಾ ಭಾರತಿ : 11 Jul, 2019

ಉಡುಪಿ, ಜು.11:ಒಂದು ಮಗುವಿನಿಂದ ಇನ್ನೊಂದು ಮಗುವಿನ ನಡುವಿನ ಅಂತರ ಕಡಿಮೆಯಾದಂತೆ ಲಿಂಗಾನುಪಾತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಾರಿ ಡಾ. ರಾಮರಾವ್ ಕೆ. ಹೇಳಿದ್ದಾರೆ.

ಗುರುವಾರ ಡಾ. ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಯುವ ರೆಡ್‌ಕ್ರಾಸ್ ಘಟಕದ ಸಹಯೋಗ ದೊಂದಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ವತಿಯಿಂದ ಉಡುಪಿ ರೆಡ್‌ಕ್ರಾಸ್ ಭವನದ ಜೀನ್ ಹೆನ್ರಿ ಡ್ಯುನಂಟ್ ಹಾಲ್‌ನಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಜನನ ಪ್ರಮಾಣ ಕಡಿಮೆ ಇದೆ. ಆದರೂ ಜನಸಂಖ್ಯಾ ಸ್ಪೋಟದಿಂದ ಜಗತ್ತು ನಾಶವಾಗುವುದನ್ನು ತಪ್ಪಿಸಲು ವಿಶ್ವಜನಸಂಖ್ಯಾ ದಿನಾಚರಣೆ ಮತ್ತು ಅದರ ಕುರಿತು ಜಾಗೃತಿ ಮುಖ್ಯ. ಜನಸಾಂದ್ರತೆ ಹೆಚ್ಚಾ ದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬರುತ್ತದೆ ಎಂದವರು ನುಡಿದರು.

ಒಂದು ಮಗುವಿನಿಂದ ಇನ್ನೊಂದು ಮಗು ಜನನದ ನಡುವಿನ ಅಂತರ ಕಡಿಮೆ ಇದ್ದು, ಅಂತರ ಕಡಿಮೆ ಇದ್ದ ಕಾರಣದಿಂದಾಗಿ ಗರ್ಭಿಣಿಯರಲ್ಲಿ ರಕ್ತ ಹೀನತೆ ಕಂಡುಬರುತ್ತದೆ. ಅಲ್ಲದೆ ಶಿಶು ಮರಣ, ತೂಕ ಕಡಿಮೆ, ಬುದ್ಧಿ ಮತ್ತೆ ಕೊರತೆ, ಕಡಿಮೆ ಜನನ ಪ್ರಮಾಣ, ಇನ್ನೂ ಜನನವಾಗದ ಭ್ರೂಣ ಮರಣ ಸಮಸ್ಯೆಗಳು ಕಂಡು ಬರುತ್ತವೆ. ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಜನಸಂಖ್ಯಾ ನಿಯಂತ್ರಣ ಮಾಡುವುದರೊಂದಿಗೆ ಈ ಎಲ್ಲ ಸಮಸ್ಯೆಗಳ ಕುರಿತು ಗಂಭೀರವಾಗಿ ಚಿಂತಿಸಬೇಕು ಎಂದರು.

ಜನಸಂಖ್ಯೆ ಹೆಚ್ಚಾದಂತೆ ಮಾನವ ಸಂಪನ್ಮೂಲ ಹೆಚ್ಚಾಯಿತೆಂದು ಸಂತೋಷ ಪಡುವುದಕ್ಕಿಂತ ಈ ಸಂಪನ್ಮೂಲವನ್ನು ಸೂಕ್ತ ರೀತಿಯಲ್ಲಿ ಹೇಗೆ ಬಳಸಿಕೊಳ್ಳ ಬೇಕು ಎಂದು ಯೋಚಿಸಬೇಕು. ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ. ಭ್ರೂಣ ಲಿಂಗ ಪತ್ತೆ ಮಾಡುವುದು ತಿಳಿದು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ತಿಳಿಸಿ. ಭ್ರೂಣಲಿಂಗ ಪತ್ತೆಯನ್ನು ತಡೆಯುವುದರಿಂದಲೇ ಲಿಂಗಾನು ಪಾತ ಕಡಿಮೆ ಆಗುವುದನ್ನು ತಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಡಾ.ಉಮೇಶ್ ಪ್ರಭು ಮಾತನಾಡಿ, ಜನನ ಪ್ರಮಾಣ ಹೆಚ್ಚಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಜನರು ಹೊಂದುತ್ತಿರುವುದರಿಂದ ಜೀವಿತಾವಧಿ ಹೆಚ್ಚಾಗಿ ಮರಣ ಪ್ರಮಾಣವು ಇಳಿಕೆಯಾಗುತ್ತಿದೆ. ಇದರಿಂದ 2030ರ ಹೊತ್ತಿಗೆ ಮೂಲೂತ ಸೌಕರ್ಯಗಳ ಕೊರತೆ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಉಪಸಬಾಪತಿ ಡಾ. ಅಶೋಕ್‌ಕುಮಾರ್ ವೈ.ಜಿ ಸ್ವಾಗತಿಸಿದರು.ಆಡಳಿತ ಸಮಿತಿ ಸದಸ್ಯೆ ಇಂದಿರಾ ಎಸ್.ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ಗೌರವ ಖಜಾಂಚಿ ಟಿ. ಚಂದ್ರಶೇಖರ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)