varthabharthi

ಕರಾವಳಿ

ಮಾಣಿ ಮಠದಲ್ಲಿ ಸಭೆ

ಧರ್ಮನಿಷ್ಠ, ಸಂಸ್ಕೃತಿ ನಿಷ್ಠ ವ್ಯಕ್ತಿತ್ವ ನಿರ್ಮಾಣದ ಗುರಿ: ರಾಘವೇಶ್ವರ ಶ್ರೀ

ವಾರ್ತಾ ಭಾರತಿ : 11 Jul, 2019

ಮಾಣಿ: ಶ್ರೀಶಂಕರರು ದೇಶ ಪರಿವರ್ತನೆ ಮಾಡಲು ಸಾಧ್ಯವಾದದ್ದು ಜ್ಞಾನದ ಬಲದಿಂದ. ಅತ್ಯುತ್ತಮ ಆರ್ಷ ವಿದ್ಯಾಕೇಂದ್ರದ ಮೂಲಕ ಹೊಸ ಪೀಳಿಗೆಗೆ ಇಂಥ ಜ್ಞಾನ ಬೋಧಿಸಿ ಧರ್ಮನಿಷ್ಠೆ, ದೇಶ ನಿಷ್ಠೆ, ಸಂಸ್ಕೃತಿ ನಿಷ್ಠೆಯನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ ನುಡಿದರು.

ಪೆರಾಜೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠ ಮಹಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾರ್ಗದರ್ಶನ ಸಭೆಯಲ್ಲಿ ಶ್ರೀ ಆಶೀರ್ವಚನ ನೀಡಿದರು. 2020ರ ಎ. 26ರಂದು ಅಕ್ಷಯ ತೃತೀಯ ದಿನದಂದು ಈ ವಿಶ್ವವಿದ್ಯಾಪೀಠ ಲೋಕಾರ್ಪಣೆಯಾಗಲಿದೆ ಎಂದು ಪ್ರಕಟಿಸಿದರು.

ಸೇವಾರ್ಥ ಯೋಜನೆಗಳು ಮತ್ತು ಜ್ಞಾನಾರ್ಥ ಯೋಜನೆಗಳು ಮಠದ ಕಾರ್ಯಗಳಲ್ಲಿ ಪ್ರಮುಖವಾದವು. ಶ್ರೀಶಂಕರ ಪರಂಪರೆಯ 36ನೇ ತಲೆಮಾರಿನ ಕೊಡುಗೆಯಾಗಿ ವಿಶ್ವವಿದ್ಯಾಪೀಠ ಸ್ಥಾಪನೆ ಮಾಡುವ ಘೋಷಣೆಯನ್ನು 1999ರ ಎ.28ರಂದು ಮಾಡಲಾಗಿತ್ತು. ಪೀಠಕ್ಕೆ ಬಂದ ದಿನ ಶಿಷ್ಯರ, ಸಮಾಜದ ಮುಂದೆ ಮಾಡಿದ ಘೋಷಣೆ ಇದೀಗ ಅನುಷ್ಠಾನರೂಪಕ್ಕೆ ಬರುತ್ತಿದೆ ಎಂದು ಹೇಳಿದರು.

ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ. ಅದನ್ನು ಮಾಡದಿದ್ದರೆ ಅದು ದೊಡ್ಡ ಲೋಪವಾಗುತ್ತದೆ. 20 ವರ್ಷದಲ್ಲಿ ತಲೆಮಾರು ಬದಲಾಗಿದೆ, ಇನ್ನು ವಿಳಂಬ ಮಾಡದೇ ಕಾಲಮಿತಿಯಲ್ಲಿ ವಿಶ್ವವಿದ್ಯಾಪೀಠ ಸ್ಥಾಪನೆ ಮಾಡುವ ಸಂಕಲ್ಪ ಇದೀಗ ಕೈಗೂಡುತ್ತಿದೆ ಎಂದರು.

ಮಠಕ್ಕೆ ಬಂದ ಕೆಡುಕುಗಳನ್ನು ಮುಚ್ಚಿಹಾಕಲು ಸಾವಿರ ಸಾವಿರ ಒಳ್ಳೆಯ ಕಾರ್ಯಗಳು ಆಗಬೇಕು ಎನ್ನುವುದು ನಮ್ಮ ಧ್ಯೇಯ. ಸರ್ಕಾರ, ಸಮಾಜ, ಇತರ ಎಲ್ಲ ಮಠಗಳು ಈ ಕಾರ್ಯವನ್ನು ಎಂದೋ ಮಾಡಬೇಕಿತ್ತು. ಪರಿಪೂರ್ಣವಾದ ಭಾರತೀಯ ವಿದ್ಯೆಗಳ ಕಲಿಕಾ ಕೇಂದ್ರ ಇಲ್ಲ. ಅಂಥ ವಿಶಿಷ್ಟ ಕಾರ್ಯಕ್ಕೆ ಶ್ರೀಮಠ ಮುಂದಾಗಿದೆ. ಶಂಕರರು ಹಿಂದೆ ಅವತಾರವೆತ್ತಿದ್ದ ಕಾರಣ ಇಂದು ಸಮಾಜ ಉಳಿದುಕೊಂಡಿದೆ. ಅವರ ಅವಿಚ್ಛಿನ್ನ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಶ್ರೀರಾಮಚಂದ್ರಾಪುರ ಮಠ ಇಂಥ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ದೇಶದ, ಧರ್ಮದ, ಸಮಾಜದ ಒಳಿತಿಗೆ ಅಗತ್ಯವಾದ್ದನ್ನು ಮಾಡಲೇಬೇಕಾಗಿದೆ. ಕಲ್ಪಿಸಿದ ಸಂಕಲ್ಪಗಳು ಕಾರ್ಯ ಸಾಧ್ಯವಾಗುತ್ತವೆ ಎನ್ನುವುದು ನಮ್ಮ ಮಠದ ಪರಂಪರೆಯಿಂದ ತಿಳಿದುಬಂದಿದೆ. ವಿಶ್ವ ಗೋ ಸಮ್ಮೇಳನ, ರಾಮಾಯಣ ಮಹಾಸತ್ರ, ಗೋ ಸ್ವರ್ಗದಂಥ ಅಪೂರ್ವ ಕಾರ್ಯಗಳು ನಮ್ಮ ಮಹಾ ಸಂಕಲ್ಪಗಳು ಸಿದ್ಧಿಯಾಗುತ್ತವೆ ಎನ್ನುವುದಕ್ಕೆ ನಿದರ್ಶನಗಳು ಎಂದು ವಿವರಿಸಿದರು.

ನಾಲ್ಕೂ ವೇದಗಳ, ಶಾಸ್ತ್ರಗಳ ಕಲಿಕೆಗೆ ಅವಕಾಶ ನೀಡುವ ಒಂದು ಕಾರ್ಯ ಆಗಬೇಕು. ಉಪವೇದಗಳು, ವೇದಾಂಗಗಳು, ಅರುವತ್ತನಾಲ್ಕು ಕಲೆಗಳು, ಅನೇಕ ಭಾರತೀಯ ಮೂಲದ ವಿದ್ಯೆಗಳು, ಆಧುನಿಕ ಭಾಷೆ, ತಂತ್ರಜ್ಞಾನ, ಆತ್ಮ ರಕ್ಷಣೆಗೆ ಸಮರವಿದ್ಯೆಗಳನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ಈ ವಿದ್ಯಾಪೀಠದ ಉದ್ದೇಶ. ಎಲ್ಲ ಭಾರತೀಯ ವಿದ್ಯೆಗಳ ಪರಿಚಯದ ಜತೆಗೆ ಒಂದು ವಿಷಯದಲ್ಲಿ ಆಳವಾದ ಜ್ಞಾನವನ್ನು ಒದಗಿಸುವುದು ಇಲ್ಲಿನ ವಿಶೇಷ ಎಂದರು.

ಈ ಮಹತ್ಕಾರ್ಯಕ್ಕೆ ಶ್ರೀಮಠದ ಶಿಷ್ಯಭಕ್ತರು ಮೂರು ವರ್ಷ ಕಾಲ ತಮ್ಮ ವಾರ್ಷಿಕ ಆದಾಯದ ಶೇಕಡ 5ರಷ್ಟು ಮೊತ್ತವನ್ನು ಕೊಡುಗೆಯಾಗಿ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಇದರ ಜತೆಗೆ ಹಲವಾರು ಬಗೆಯ ಸಮರ್ಪಣೆಗಳಿಗೆ ಅವಕಾಶವಿದೆ. ಶ್ರೀಮಠ ಇದಕ್ಕಾಗಿ ಸುಮಾರು 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾಚೀನ ಶೈಲಿಯ "ಕುಲಗುರು" ಭವ್ಯ ಗುರುನಿವಾಸವನ್ನು ವಿಶ್ವವಿದ್ಯಾಪೀಠಕ್ಕೆ ಸಮರ್ಪಣೆ ಮಾಡಿದೆ ಎಂದು ಹೇಳಿದರು.

ಡಾ. ಗಜಾನನ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ನಿಯೋಜಿತ ಕಾರ್ಯದರ್ಶಿ ಪಿ.ನಾಗರಾಜ ಭಟ್, ಮುಖಂಡರಾದ ಹಾರಕೆರೆ ನಾರಾಯಣ ಭಟ್ ಮತ್ತಿತತರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)