varthabharthi

ಕರ್ನಾಟಕ

ಜನಾದೇಶವನ್ನು ಕಡೆಗಣಿಸುತ್ತಿರುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು: ಎಸ್‌ಡಿಪಿಐ

ವಾರ್ತಾ ಭಾರತಿ : 11 Jul, 2019

ಬೆಂಗಳೂರು, ಜು.11: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ತನ್ನ ಅಧಿಕಾರವನ್ನು ಉಳಿಸಲು ಹೆಣಗಾಡುತ್ತಿದ್ದು, ರಾಜ್ಯದ ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಈ ಎರಡೂ ಪಕ್ಷಗಳ ಶಾಸಕರು ಅಧಿಕಾರಕ್ಕಾಗಿ ಹಾಗೂ ಸ್ವಾರ್ಥಕ್ಕಾಗಿ ಸರಕಾರವನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆರೋಪಿಸಿದ್ದಾರೆ.

ಸರಕಾರವಂತೂ ಹಗಲು ರಾತ್ರಿ ಶಾಸಕರನ್ನು ತನ್ನ ತಹಬದಿಯಲ್ಲಿಟ್ಟುಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತಿದೆ. ಜನತೆಯ ಮತಗಳನ್ನು ಪಡೆದು ಗೆದ್ದುಕೊಂಡ ಶಾಸಕರು ಜನರ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸಿ ಬಿಜೆಪಿಯ ಆಮಿಷಗಳಿಗೆ ಬಲಿಯಾಗಿ ರೆಸಾರ್ಟಿನಲ್ಲಿ ಅಡಗಿಕೊಂಡಿರುವುದು ಮತದಾರರಿಗೆ ಬಗೆದ ದ್ರೋಹ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರೈತರ ಪರಿಸ್ಥಿತಿಯ ಬಗ್ಗೆ ಯೋಜಿಸಲು ಸರಕಾರಕ್ಕೆ ಸಮಯವಿಲ್ಲದಾಗಿದೆ. ಜಾತ್ಯತೀತ ಪಕ್ಷವೆಂದು ಜನತೆ ಮತ ಹಾಕಿದ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಯಾವ ಗಳಿಗೆಯಲ್ಲಿ ಬಲಪಂಥೀಯ ಬಿಜೆಪಿಗೆ ಹಾರಲಿದ್ದಾರೆ ಎಂಬ ಬಗ್ಗೆ ಸ್ವಲ್ಪವೂ ಖಾತರಿಯಿಲ್ಲದಂತಾಗಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ತಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಜನತೆಯನ್ನು ಕಡೆಗಣಿಸುತ್ತಿರುವ ಇಂತಹ ರಾಜಕಾರಣಿಗಳಿಗೆ ಮತದಾರರು ಸೂಕ್ತ ಪಾಠ ಕಲಿಸಬೇಕಾಗಿದೆ. ಬಿಜೆಪಿ ಪ್ರಜಾಪ್ರಭುತ್ವವನ್ನೆ ಬುಡಮೇಲು ಮಾಡುತ್ತಿದ್ದು, ಶಾಸಕರ ಖರೀದಿ, ಆಮಿಷ, ರೆಸಾರ್ಟ್ ಬಂಧನ ಇತ್ಯಾದಿಗಳಿಂದ ಸರಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಅವರು ಹೇಳಿದ್ದಾರೆ. ಅಧಿಕಾರಕ್ಕಾಗಿ ಎಷ್ಟು ಕೆಳಮಟ್ಟಕ್ಕೂ ಇಳಿಯಲು ಹೇಸದ ಬಿಜೆಪಿ ರಾಜ್ಯದ ಜನತೆಗೆ ಸದಾ ಮೋಸ ಮಾಡುತ್ತಲೇ ಇರಲು ಸಾಧ್ಯವಿಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಖಂಡ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಲೈಂಗಿಕ ಹಗರಣಗಳಿಂದ ಸದ್ದು ಮಾಡುತ್ತಾ ಕಾಲ ಕಳೆದಿದ್ದು, ಇದೀಗ ಯಾವುದೇ ಅನೀತಿಯುತ ಮಾರ್ಗದಲ್ಲಾದರೂ ಅಧಿಕಾರ ಪಡೆಯಲು ಹರಸಾಹಸ ಪಡುತ್ತಿರುವುದು ಅಕ್ಷಮ್ಯ ಎಂದು ಇಲ್ಯಾಸ್ ತುಂಬೆ ತಿಳಿಸಿದ್ದಾರೆ.

ರಾಜ್ಯವನ್ನು ಕಡೆಗಣಿಸಿದ ಈ ಮೂರು ಪಕ್ಷಗಳಿಗೆ ಮತದಾರರು ಚುನಾವಣೆಯ ಸಂದರ್ಭದಲ್ಲಿ ಸರಿಯಾದ ಪಾಠ ಕಲಿಸಿ ಪ್ರಜಾಪ್ರಭುತ್ವವನ್ನು ಉಳಿಸುವ ಹಾಗೂ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವತ್ತ ಕೈ ಜೋಡಿಸಬೇಕಾಗಿದೆ ಎಂದು ಇಲ್ಯಾಸ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)