varthabharthi

ಕರ್ನಾಟಕ

ಅರಣ್ಯಾಧಿಕಾರಿಗಳ ಕಾರ್ಯಾಚರಣೆ: ಅಂತರಾಜ್ಯ ಶ್ರೀಗಂಧ ಚೋರರ ಬಂಧನ

ವಾರ್ತಾ ಭಾರತಿ : 12 Jul, 2019

ಚಿಕ್ಕಮಗಳೂರು, ಜು.11: ತಾಲೂಕಿನ ಹಿರೇಗೌಜ ಗ್ರಾಮಕ್ಕೆ ಸಮೀಪದಲ್ಲಿರುವ ಕುರ್ಚೆಗುಡ್ಡ ಮೀಸಲು ಅರಣ್ಯ ವ್ಯಾಪ್ತಿಯ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡು ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಆರೋಪದ ಮೇರೆಗೆ ತಮಿಳುನಾಡು ಮೂಲ ಇಬ್ಬರು ಶ್ರೀಗಂಧ ಚೋರರನ್ನು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಗುರುತಾನಹಳ್ಳಿ ನಿವಾಸಿಗಳಾದ ನಾಗರಾಜು ಹಾಗೂ ಈತನ ಪತ್ನಿ ಮುನಿರತ್ನಾ ಬಂಧಿತ ಆರೋಪಿಗಳಾಗಿದ್ದು, ಇವರೊಂದಿಗಿದ್ದ ಓರ್ವ ಮಹಿಳೆ ಸೇರಿದಂತೆ ಮೂವರು ಪುರುಷರು ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಶ್ರೀಗಂಧಕ್ಕೆ ಹೆಸರಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶ್ರೀಗಂಧ ಚೋರರ ಹಾವಳಿಯಿಂದಾಗಿ ಶ್ರೀಗಂಧದ ಮರಗಳು ನಾಪತ್ತೆಯಾಗುತ್ತಿವೆ. ಚಿಕ್ಕಮಗಳೂರು ತಾಲೂಕಿನ ಕುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ನೈಸರ್ಗಿಕವಾಗಿ ಬೆಳೆದ ಶ್ರೀಗಂಧ ಮರಗಳು ಭಾರೀ ಪ್ರಮಾಣದಲ್ಲಿದ್ದು, ಈ ಕಾರಣಕ್ಕೆ ಇಲ್ಲಿ ಆಗಾಗ್ಗೆ ಶ್ರೀಗಂಧದ ಮರಗಳ ಕಳ್ಳತನ ನಡೆಯುತ್ತಿದೆ. ಈ ಹಿಂದೆಯೂ ಇಲ್ಲಿನ ಕಾಡಿನಲ್ಲಿ ಬೀಡುಬಿಟ್ಟು ಮರ ಕಡಿದು ಸಾಗಿಸುತ್ತಿದ್ದ ಅನೇಕ ಪ್ರಕರಣಗಳು ನಡೆದಿದ್ದು, ಈ ಸಂಬಂಧ ಅರಣ್ಯಾಧಿಕಾರಿಗಳು ನೂರಾರು ಮಂದಿ ಶ್ರೀಗಂಧಚೋರರನ್ನು ಬಂಧಿಸಿದ್ದಾರೆ. 

ಆದರೂ ಕುರ್ಚೆಗುಡ್ಡದಲ್ಲಿ ಶ್ರೀಗಂಧ ಕಳ್ಳತನ ನಡೆಯುತ್ತಿದ್ದು, ಈ ಬಾರಿ ರಾಜ್ಯದ ಶ್ರೀಗಂಧ ಚೋರರ ತಂಡವೇ ಇಲ್ಲಿನ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡು ಶ್ರೀಗಂಧದ ಮರಗಳನ್ನು ಕಡಿಯುತ್ತಿರುವು ಸ್ಥಳೀಯರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಸ್ಥಳೀಯ ವ್ಯಕ್ತಿಯೊಬ್ಬರು ತಮಿಳುನಾಡು ಮೂಲದ ಇಬ್ಬರು ಮಹಿಳೆಯರೂ ಸೇರಿದಂತೆ ಆರು ಮಂದಿಯ ಶ್ರೀಗಂಧಚೋರರ ತಂಡವನ್ನು ಚಿಕ್ಕಮಗಳೂರಿಗೆ ಕರೆತಂದಿದ್ದಾರೆ. ಈ ತಂಡಕ್ಕೆ ಕುರ್ಚೆಗುಡ್ಡದಲ್ಲಿ ಟೆಂಟ್ ನಿರ್ಮಿಸಿಕೊಟ್ಟು ವಾರಕ್ಕಾಗುವಷ್ಟು ಅಗತ್ಯ ದಿನಸಿ ಕೊಡಿಸಿ ಶ್ರೀಗಂಧದ ಮರಗಳನ್ನು ಕಡಿಯಲು ಬಿಟ್ಟಿದ್ದರೆಂದು ತಿಳಿದುಬಂದಿದೆ.

ಕುರ್ಚೆಗುಡ್ಡಲ್ಲಿ ಟೆಂಟ್‍ನಲ್ಲಿ ವಾಸಿಸುತ್ತಾ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ ಈ ಗುಂಪಿನ ಬಗ್ಗೆ ಸ್ಥಳೀಯ ಗ್ರಾಮಸ್ಥರಿಗೆ ಅನುಮಾನ ಬಂದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ರಾತ್ರಿ ಆರ್‍ಎಫ್‍ಒ ಶಿಲ್ಪಾ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಕಾಡಿನಲ್ಲಿ ಬೀಡುಬಿಟ್ಟಿದ್ದ ಶ್ರೀಗಂಧ ಚೋರರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದು, ನಾಲ್ವರು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ಬಂಧಿತರಿಂದ ಅರಣ್ಯಾಧಿಕಾರಿಗಳು 40 ಕಜಿ ಶ್ರೀಗಂಧದ ತುಂಡುಗಳು, ಟೆಂಟ್‍ಗೆ ಬಳಸಿದ್ದ ಸಾಮಗ್ರಿ, ಆಹಾರಧಾನ್ಯ, ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)