varthabharthi

ಸಂಪಾದಕೀಯ

ಸ್ಪೀಕರ್ ‘ವಿದುರ ನ್ಯಾಯ’ ಪಾಲಿಸಲಿ

ವಾರ್ತಾ ಭಾರತಿ : 12 Jul, 2019

ಮಹಾಭಾರತದಲ್ಲಿ ವಿದುರನ ಪಾತ್ರ ಮಹತ್ವವನ್ನು ಪಡೆಯುವುದು, ಆತನ ನ್ಯಾಯ ನಿಷ್ಠುರತೆಗಾಗಿ. ಕೌರವನ ಆಸ್ಥಾನದಲ್ಲಿದ್ದು, ನ್ಯಾಯದ ಪ್ರಶ್ನೆ ಬಂದಾಗ ಕೌರವನ ವಿರುದ್ಧ ಮಾತನಾಡಲು ವಿದುರ ಅಂಜುವುದಿಲ್ಲ. ಕೃಷ್ಣನು ‘ಸಂಧಾನ’ಕ್ಕೆಂದು ಸುಯೋಧನನ ಆಸ್ಥಾನಕ್ಕೆ ತೆರಳಿದಾಗ, ಸುದ್ದಿ ಕೇಳಿದ ಸುಯೋಧನ ಆತನಿಗಾಗಿ ಭೂರಿ ಭೋಜನಗಳನ್ನು ಏರ್ಪಡಿಸಿ ಸ್ವಾಗತಕ್ಕೆ ಅಣಿಯಾಗಿ ನಿಂತನಂತೆ. ಆದರೆ ಕೃಷ್ಣ, ನೇರವಾಗಿ ವಿದುರನ ಮನೆಯನ್ನೇ ಮಧ್ಯಾಹ್ನದ ಊಟಕ್ಕೆ ಆರಿಸಿಕೊಂಡನಂತೆ. ಕೃಷ್ಣನ ಒಳಉದ್ದೇಶ, ಆ ಮೂಲಕ ಸುಯೋಧನನನ್ನು ಕೆರಳಿಸಿ ಸಂಧಾನವನ್ನು ವಿಫಲಗೊಳಿಸುವುದಾಗಿತ್ತು. ಆ ನಿಟ್ಟಿನಲ್ಲಿ ಆತ ಯಶಸ್ವಿಯಾಗುತ್ತಾನೆ. ಆದರೆ ಮಧ್ಯಾಹ್ನದ ಊಟಕ್ಕೆ ಆತ ವಿಧುರನ ಮನೆಯನ್ನೇ ಆರಿಸುವುದರ ಹಿಂದೆ, ಎರಡು ಸಂದೇಶವನ್ನು ಸುಯೋಧನನಿಗೆ ತಲುಪಿಸುವ ಉದ್ದೇಶವಿತ್ತು. ನಿನ್ನ ಔತಣಕ್ಕೆ ಬೆರಗಾಗಿ ನಾನು ನ್ಯಾಯದ ನಿರ್ಧಾರದಿಂದ ಹಿಂದೆಗೆಯಲಾರೆ ಎನ್ನುವುದು ಒಂದು ಸಂದೇಶವಾದರೆ, ನಿನ್ನ ಅಧಿಕಾರಕ್ಕಿಂತ ವಿದುರನ ನ್ಯಾಯ ನಿಷ್ಠುರತೆ ಶ್ರೇಷ್ಠವಾದುದು ಎನ್ನುವುದು ಇನ್ನೊಂದು ಸಂದೇಶ. ವಿದುರನ ಮುಂದೆ ಸುಯೋಧನನ್ನು ಕೀಳುಮಾಡುವುದು ಆತನ ಮುಖ್ಯ ಗುರಿಯಾಗಿತ್ತು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ಸಮನ್ವಯಕಾರನಾಗಿ ಒಬ್ಬ ವಿದುರನಿರುತ್ತಾನೆ. ಆತನಿಗೆ ‘ಸ್ಪೀಕರ್’ ಎಂದು ಹೆಸರು. ಈ ಸ್ಥಾನ ಉಳಿದ ಸಂಪುಟ ಸ್ಥಾನಗಳಿಗೆ ಹೋಲಿಸಿದಾಗ ಲಘುವಾದುದು ಎನ್ನುವಂತಹ ಕಲ್ಪನೆಗಳಿವೆ. ಆದರೆ ನಿರ್ಣಾಯಕ ಸಂದರ್ಭದಲ್ಲಿ ಆ ಸ್ಥಾನ ಮುಖ್ಯಮಂತ್ರಿ, ಪ್ರಧಾನಮಂತ್ರಿ ಸ್ಥಾನಕ್ಕಿಂತಲೂ ಹಿರಿದಾಗಿ ಬಿಡುತ್ತದೆ. ಕರ್ನಾಟಕದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಇದೀಗ ಆ ಎತ್ತರದಲ್ಲಿ ಕುಳಿತು ಸದ್ಯದ ರಾಜಕೀಯ ಬೆಳವಣಿಗೆಗಳನ್ನು ನಿಭಾಯಿಸುವಂತಹ ಸನ್ನಿವೇಶದಲ್ಲಿದ್ದಾರೆ. ಸ್ಪೀಕರ್ ಸ್ಥಾನ ಏರಿದವನ ಬಹುದೊಡ್ಡ ಹಿರಿಮೆ ಏನು ಎಂದರೆ, ಆತ ಒಂದು ನಿರ್ದಿಷ್ಟ ಪಕ್ಷದಿಂದ ಆರಿಸಿ ಬಂದವನಾದರೂ ಸಂವಿಧಾನಕ್ಕೆ ಬದ್ಧನಾಗಿ ಆಡಳಿತ ಮತ್ತು ವಿರೋಧ ಪಕ್ಷದ ಜೊತೆಗೆ ನ್ಯಾಯವನ್ನು ಪಾಲಿಸುವುದು. ಎಂತಹ ಪರಿಸ್ಥಿತಿಯಲ್ಲೂ ತನ್ನ ಪಕ್ಷಕ್ಕೆ ನಿಷ್ಠನಾಗದೇ, ಸ್ಪೀಕರ್ ಘನತೆಯನ್ನು ಉಳಿಸುವುದು ಆತನ ಹೊಣೆಗಾರಿಕೆಯಾಗಿದೆ. ಸ್ಪೀಕರ್ ಘನತೆಗೆ ಧಕ್ಕೆ ತರುವುದೆಂದರೆ ಸಂವಿಧಾನಕ್ಕೆ ಧಕ್ಕೆ ತಂದಂತೆ. ಆ ನಿರ್ಲಿಪ್ತತೆಯನ್ನು ಆತ ಪಾಲಿಸಬೇಕಾದರೆ ರಾಜಕೀಯವಾಗಿ ಅಪಾರ ಅನುಭವಿಯೂ, ಮುತ್ಸದ್ದಿಯೂ ಆಗಿರಬೇಕು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಆರಿಸುವಾಗ ಸಾಧ್ಯವಾದಷ್ಟು ಹಿರಿಯರನ್ನು, ರಾಜಕೀಯವಾಗಿ ಅನುಭವವಿರುವವರನ್ನು ಆರಿಸಲಾಗುತ್ತದೆ. ಈ ಆಯ್ಕೆಯಲ್ಲಿ ತಪ್ಪು ನಡೆದರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಕೆ. ಜಿ. ಬೋಪಯ್ಯ ನಮ್ಮ ಮುಂದಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮೊತ್ತ ಮೊದಲಿಗೆ ಸ್ಪೀಕರ್ ಸ್ಥಾನವನ್ನು ತನ್ನ ನಾಯಕರಿಗೆ ಬಲಿಕೊಟ್ಟು, ನ್ಯಾಯಾಲಯದಿಂದ ಛೀಮಾರಿ ಹಾಕಿಕೊಂಡ ಹೆಗ್ಗಳಿಕೆ ಅವರದು. ಆದರೆ ಸದ್ಯದ ರಾಜ್ಯ ಬೆಳವಣಿಗೆಯನ್ನು ಸ್ಪೀಕರ್ ರಮೇಶ್ ಕುಮಾರ್ ನಿರ್ವಹಿಸುತ್ತಿರುವ ರೀತಿ, ಆ ಸ್ಥಾನದ ಘನತೆಗೆ ಪೂರಕವಾಗಿದೆ. ಸದ್ಯ ರಾಜ್ಯದಲ್ಲಿ ಶಾಸಕರ ಸರಣಿ ರಾಜೀನಾಮೆಯಿಂದ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಮೈತ್ರಿ ಸರಕಾರದ ಬಲ 100ಕ್ಕೆ ಇಳಿದಿದೆ. ಇದರಿಂದಾಗಿ ಸರಕಾರ ಬಹುಮತವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಆದರೆ ಈ ರಾಜೀನಾಮೆಗಳನ್ನು ಸ್ಪೀಕರ್ ಸ್ವೀಕರಿಸದಿರುವುದರಿಂದ ಕಾನೂನಾತ್ಮಕವಾಗಿ ರಾಜ್ಯ ಸರಕಾರವು ಬಹುಮತವನ್ನು ಕಳೆದುಕೊಂಡಿಲ್ಲ. ಬಹುಮತ ಕಳೆದುಕೊಂಡಿರುವ ಸರಕಾರವು ಉಸಿರಾಡುವಂತೆ ಮಾಡುವುದಕ್ಕಾಗಿ ಸ್ಪೀಕರ್ ವಿಳಂಬ ತಂತ್ರವನ್ನು ಅನುಸರಿಸುತ್ತಿದ್ದಾರೆಂದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಚಾತಕಪಕ್ಷಿಯಂತೆ ಕಾದುಕುಳಿತಿರುವ ಬಿಜೆಪಿ ಆಪಾದಿಸಿದೆ. ಆದರೆ ರಮೇಶ್ ಕುಮಾರ್ ಕನಿಷ್ಠ ಪಕ್ಷ ಈವರೆಗಾದರೂ ವಿಧಾನಸಭೆಯ ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದಾರೆಂಬುದು ವಾಸ್ತವ. ಒಂದು ಸರಕಾರದ ಏಳುಬೀಳುವಿಗೆ ಸಂಬಂಧಿಸಿದ ವಿಷಯವನ್ನು ಕಣ್ಣು ಮುಚ್ಚಿ ತೆರೆಯುವುದರೊಳಗೆ ಇತ್ಯರ್ಥಗೊಳಿಸಬೇಕು ಎನ್ನುವ ಬೇಡಿಕೆಯೇ ಅಸಂಬದ್ಧವಾದುದು. ಅತೃಪ್ತ ಶಾಸಕರ ಮೊದಲ ತಂಡವು ಜುಲೈ 6ರಂದು ರಾಜೀನಾಮೆ ಸಲ್ಲಿಸಲು ಆಗಮಿಸಿದಾಗ ಸ್ಪೀಕರ್ ತನ್ನ ಕಚೇರಿಯಲ್ಲಿ ಇದ್ದಿರಲಿಲ್ಲ. ತಮ್ಮ ಆಗಮನದ ಕುರಿತಂತೆ ಅವರು ಯಾವುದೇ ಮಾಹಿತಿಯನ್ನು ತನಗೆ ನೀಡಿರಲಿಲ್ಲ ಎಂದು ಸ್ಪೀಕರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಜುಲೈ 9ರಂದು ಕಚೇರಿಗೆ ಪುನರಾಗಮಿಸಿದ ಕೂಡಲೇ ಅವರು ಶಾಸಕರ ರಾಜೀನಾಮೆ ವಿಷಯವನ್ನು ಪರಿಶೀಲನೆಗೆ ಕೈಗೆತ್ತಿಕೊಂಡರು.ಶಾಸಕರ ರಾಜೀನಾಮೆ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕೆಂಬ ಬಗ್ಗೆ ಕರ್ನಾಟಕ ವಿಧಾನಸಭಾ ಕಲಾಪ ಪ್ರಕ್ರಿಯೆ ಹಾಗೂ ನಡಾವಳಿ ಕುರಿತಾದ ನಿಯಮಾವಳಿಗಳ ಪುಸ್ತಕದ 22ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ರಾಜೀನಾಮೆ ನೀಡಲು ಇಚ್ಛಿಸುವ ಸದಸ್ಯನು ಖುದ್ದಾಗಿ ಸ್ಪೀಕರ್ ಅವರಿಗೆ ಆ ಬಗ್ಗೆ ವಿವರಣೆ ನೀಡಬೇಕಾಗುತ್ತದೆ ಎಂಬುದಾಗಿ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ರಾಜೀನಾಮೆ ಪತ್ರದಲ್ಲಿ ಸ್ಥಳ ಹಾಗೂ ದಿನಾಂಕ ಉಲ್ಲೇಖಿಸುವ ಜೊತೆಗೆ ‘‘ ..... ತಾರೀಕಿನಿಂದ ಅನ್ವಯವಾಗುವಂತೆ ನಾನು ನನ್ನ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ’’ ಎಂಬ ಏಕೈಕ ವಾಕ್ಯವನ್ನು ಮಾತ್ರ ಬರೆದಿರಬೇಕಾಗುತ್ತದೆ.ಶಾಸಕರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದ ಸ್ಪೀಕರ್ ರಮೇಶ್ ಕುಮಾರ್, ಅವುಗಳಲ್ಲಿ ಎಂಟು ಪತ್ರಗಳು ಸಮರ್ಪಕವಾದ ಮಾದರಿಯಲ್ಲಿಲ್ಲವೆಂಬುದನ್ನು ಮನಗಂಡರು. ಹೀಗಾಗಿ ರಾಜೀನಾಮೆ ಪತ್ರಗಳನ್ನು ಮರುಸಲ್ಲಿಸುವಂತೆ ಶಾಸಕರಿಗೆ ಸೂಚಿಸುವುದು ಅವರಿಗೆ ಅನಿವಾರ್ಯವಾಗಿದೆ.

ರಾಜೀನಾಮೆ ಸ್ವೀಕಾರದಲ್ಲಿ ಉಂಟಾಗುವ ಒಂದೊಂದು ದಿನದ ವಿಳಂಬವೂ ಆಡಳಿತಾರೂಢ ಮೈತ್ರಿಕೂಟಕ್ಕೆ, ಅತೃಪ್ತಶಾಸಕರನ್ನು ಮರಳಿ ತಮ್ಮೆಡೆಗೆ ಸೆಳೆದುಕೊಳ್ಳಲು ದಾರಿ ಮಾಡಿಕೊಡುತ್ತದೆಯೆಂಬುದೇನೋ ನಿಜ. ಆದರೆ ಹಾಗೆಂದು ಸ್ಪೀಕರ್ ಅವರು ಶಾಸಕಾಂಗದ ನಿಯಮಗಳನ್ನು ಗಾಳಿಗೆ ತೂರುವ ಹಾಗಿಲ್ಲ. ರಮೇಶ್ ಕುಮಾರ್ ವಿಧಾನಸಭಾ ನಿಯಮಾವಳಿಗಳ ಪುಸ್ತಕದ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಶಾಸಕರ ರಾಜೀನಾಮೆಯು ಸ್ವಯಂಪ್ರೇರಿತ ಹಾಗೂ ಸಮರ್ಪಕವಾದುದೆಂದು ಸ್ಪೀಕರ್‌ಗೆ ಮನವರಿಕೆಯಾಗದೆ ಅವರು ರಾಜೀನಾಮೆ ಪತ್ರವನ್ನು ಮಾಮೂಲು ರೀತಿಯಲ್ಲಿ ಸ್ವೀಕರಿಸುವ ಹಾಗಿಲ್ಲ. ರಾಜೀನಾಮೆಯನ್ನು ಅಂಚೆ ಅಥವಾ ಬೇರೊಬ್ಬರ ಮೂಲಕ ಸಲ್ಲಿಸಿದ್ದಲ್ಲಿ ಅದು ಸ್ವಯಂಪ್ರೇರಿತ ಹಾಗೂ ನೈಜವಾಗಿರದೆ ಇದ್ದಲ್ಲಿ ಅದನ್ನು ಸ್ವೀಕರಿಸದೇ ಇರುವ ಅಧಿಕಾರ ಸ್ಪೀಕರ್ ಅವರಿಗಿದೆ.

ಬೆದರಿಕೆ ಹಾಗೂ ಭಾರೀ ದೊಡ್ಡ ಮಟ್ಟದ ಆಮಿಷಗಳಿಗೆ ಒಳಗಾಗಿ ಈ ಶಾಸಕರು ವಿಧಾನಸಭಾ ಸದಸ್ಯತ್ವಕ್ಕ ರಾಜೀನಾಮೆ ನೀಡಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಸ್ಪೀಕರ್ ಪ್ರತಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಶಾಸಕರು ಪ್ರಚೋದನೆಗೊಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 2010ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ವಿವಾದದ ಹಿನ್ನೆಲೆಯಲ್ಲಿ 129 ಶಾಸಕರು ಸಲ್ಲಿಸಿದ ರಾಜೀನಾಮೆಗಳನ್ನು ಆಂಧ್ರಪ್ರದೇಶದ ವಿಧಾನಸಭಾ ಸ್ಪೀಕರ್ ತಿರಸ್ಕರಿಸಿದ್ದುದು ಇದೇ ಕಾರಣಕ್ಕಾಗಿ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.

ಅತೃಪ್ತಶಾಸಕರ ರಾಜೀನಾಮೆಯಿಂದಾಗಿ ಕರ್ನಾಟಕದಲ್ಲಿ ರಾಜಕೀಯ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪಕ್ಷಾಂತರ ವಿರೋಧಿ ಕಾನೂನಿನಡಿ ಶಾಸಕತ್ವದಿಂದ ಅನರ್ಹಗೊಳಿಸುವುದಾಗಿ ಕಾಂಗ್ರೆಸ್ ಪಕ್ಷವು ಬೆದರಿಕೆ ಹಾಕಿದೆ. ಆದರೆ ಅತೃಪ್ತ ಶಾಸಕರು ಈಗಾಗಲೇ ವಿಧಾನಸಭಾ ಸದಸ್ಯತ್ವವನ್ನು ತೊರೆಯಲು ನಿರ್ಧರಿಸಿರುವುದರಿಂದ ಈ ಬೆದರಿಕೆ ಪರಿಣಾಮ ಬೀರಲಾರದು.

ಒಂದು ವೇಳೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಲ್ಲಿ ಮುಂದಿನ ಆರು ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲಾಗದು ಎಂದು ಕಾಂಗ್ರೆಸ್ ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದೆ. ಆದರೆ ಸಂವಿಧಾನದ ಹತ್ತನೇ ಶೆಡ್ಯೂಲ್‌ನಲ್ಲಿ ಅಂತಹ ಯಾವುದೇ ನಿಯಮ ಇಲ್ಲದೆ ಇರುವುದರಿಂದ ಈ ಎಚ್ಚರಿಕೆಯೂ ಯಾವುದೇ ರೀತಿಯ ಫಲವನ್ನು ನೀಡಲಾರದು. ತಮಿಳುನಾಡು ಸ್ಪೀಕರ್ ಅವರಿಂದ 18 ಮಂದಿ ಶಾಸಕರು ಅನರ್ಹಗೊಂಡಾಗಲೂ ಇದೇ ರೀತಿಯ ಪ್ರಶ್ನೆ ಉದ್ಭವಿಸಿತ್ತು. ಅನರ್ಹಗೊಂಡ ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹಗೊಳಿಸುವಂತಹ ಯಾವುದೇ ನಿಯಮ, ಪಕ್ಷಾಂತರ ನಿಷೇಧ ಕಾನೂನಿನಲ್ಲಿ ಇಲ್ಲವೆಂಬುದನ್ನು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ. ನಿರ್ದಿಷ್ಟ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಅಥವಾ ಚುನಾವಣಾ ಆಕ್ರಮಗಳನ್ನು ಎಸಗಿದ್ದ ಜನಪ್ರತಿನಿಧಿಯನ್ನು ಮಾತ್ರವೇ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹಗೊಳಿಸಬಹುದಾಗಿದೆ. ಈ ಎಲ್ಲ ಕಾನೂನಿನ ತಂತಿಯ ನಡಿಗೆಯಲ್ಲಿ ಸ್ಪೀಕರ್ ಈವರೆಗೆ ಯಶಸ್ವಿಯಾಗಿದ್ದಾರೆ. ಎಲ್ಲೂ ಆಡಳಿತ ಪಕ್ಷದ ವಕ್ತಾರನೋ, ಸಂಧಾನಕಾರನೋ ಆಗದೆ, ಸ್ಪೀಕರ್‌ನ ಘನತೆಯನ್ನು ಉಳಿಸಿದ್ದಾರೆ. ಸರಕಾರ ಉಳಿಯಲಿ, ಅಳಿಯಲಿ, ಸ್ಪೀಕರ್‌ನ ಘನತೆಗೆ ಯಾವ ಧಕ್ಕೆಯೂ ಆಗದಿರಲಿ ಎನ್ನುವುದೇ ಪ್ರಜಾಸತ್ತೆಯ ಮೇಲೆ ಇನ್ನೂ ನಂಬಿಕೆಯಿಟ್ಟಿರುವ ಮತದಾರರ ಬೇಡಿಕೆ. ಸರಕಾರವನ್ನು ಉಳಿಸಲು ಸಂವಿಧಾನವನ್ನು ಬಲಿಕೊಟ್ಟರೆ, ಅಂತಹ ಸರಕಾರ ಈ ನಾಡಿಗೆ ಯಾವ ಫಲವನ್ನೂ ನೀಡಲಾರದು. ರಮೇಶ್‌ಕುಮಾರ್ ಈ ನಿಟ್ಟಿನಲ್ಲಿ ಮಹಾಭಾರತದ ವಿದುರನನ್ನು ಮಾದರಿಯಾಗಿಟ್ಟುಕೊಂಡು ಸದನವನ್ನು ಮುನ್ನಡೆಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)