varthabharthi

ಕರಾವಳಿ

ಮಂಗಳೂರು: ಶಾಲಾ ಮಕ್ಕಳ ವಾಹನ ಚಾಲಕರ ಅನಿರ್ಧಿಷ್ಠಾವಧಿ ಮುಷ್ಕರ ಹಿಂದೆಗೆತ

ವಾರ್ತಾ ಭಾರತಿ : 12 Jul, 2019

ಮಂಗಳೂರು, ಜು.12: ಶಾಲಾ ಮಕ್ಕಳ ವಾಹನ ಚಾಲಕರ ಮೇಲಿನ ದಾಳಿಯನ್ನು ವಿರೋಧಿಸಿ ಕಳೆದ 2 ದಿನಗಳಿಂದ ನಡೆಯುತ್ತಿದ್ದ ಸ್ವಯಂ ಪ್ರೇರಿತ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡ ವಾಹನ ಚಾಲಕರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸುವುದಾಗಿ ಮಂಗಳೂರು ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ರವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘವು ಕರೆ ನೀಡಿದ್ದ ಸ್ವಯಂಪ್ರೇರಿತ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.

ಶನಿವಾರದಂದು ಎಂದಿನಂತೆ ಶಾಲಾ ವಾಹನ ಸಂಚಾರ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಿಗೆ ರಾಜ್ಯದ ಉಚ್ಛ ನ್ಯಾಯಾಲಯವು ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸಬಾರದೆಂದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದು, ಅದರ ಜೊತೆಗೆ ಶಾಲಾ ಮಕ್ಕಳನ್ನು ಸಾಗಿಸುವಂತಹ ವಾಹನಗಳಲ್ಲಿ ಮಿತಿಗಿಂತ ಜಾಸ್ತಿ ಮಕ್ಕಳನ್ನು ಹಾಕದಂತೆ ನಿಗಾವಹಿಸಬೇಕೆಂದು ತಿಳಿಸಿದೆ.

ಅದರಂತೆ ಪೋಲಿಸ್ ಇಲಾಖೆಯು ಇದನ್ನು ಜಾರಿಗೊಳಿಸುವ ನೆಪದಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳನ್ನೇ ಕೇಂದ್ರೀಕರಿಸಿ ಕಳೆದ ಒಂದು ತಿಂಗಳಿನಿಂದ ನಿರಂತರ ಕೇಸ್ ಹಾಗೂ ವಿಪರೀತ ದಂಡ ವಸೂಲಿ ಮಾಡಲಾಗುತ್ತಿದೆ. ಮಾತ್ರವಲ್ಲದೆ ಶಾಲಾ ವಾಹನಗಳನ್ನು ತಡಗಟ್ಟಿ ವಾಹನ ಚಾಲಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಸ್ ಹಾಕುವ ಮೂಲಕ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗಳಿಗೆ ಹೋಗಲು ಅಗುತ್ತಿಲ್ಲ. ಮಿತಿಗಿಂತ ಕಡಿಮೆ ಮಕ್ಕಳಿದ್ದರೂ ಕೇಸ್ ದಾಖಲಿಸಿ ಲೈಸನ್ಸ್ ರದ್ದು ಸೇರಿದಂತೆ ನಿರಂತರವಾಗಿ ಶಾಲಾ ಮಕ್ಕಳ ವಾಹನ ಚಾಲಕರ ಮೇಲೆ ನಡೆಸಿರುವ ದೌರ್ಜನ್ಯ ತೀರಾ ಅಮಾನವೀಯವಾಗಿದೆ ಎಂದು ಹೇಳಿದರು.

ಕಳೆದ ಎರಡು ದಿನಗಳಿಂದ ವಾಹನ ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಇದರಿಂದಾಗಿ ಶಾಲಾ ಮಕ್ಕಳು ಹಾಗೂ ಪೋಷಕರು ತೀರಾ ಸಂಕಷ್ಟಕ್ಕೊಳಗಾಗಿದ್ದಾರೆ. ಶೈಕ್ಷಣಿಕ ಕೇಂದ್ರವಾದ ಮಂಗಳೂರು ನಗರದ ಪೋಷಕರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರಲ್ಲಿ ತೀವ್ರವಾದ ಒತ್ತಡವನ್ನು ಹಾಕಿದ್ದು ಬಡಪಾಯಿ ಶಾಲಾ ಮಕ್ಕಳ ವಾಹನ ಚಾಲಕರ ಸಂಕಷ್ಟಕ್ಕೆ ತಾವುಗಳು ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕರು ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿ,ಸಮಸ್ಯೆ ಪರಿಹಾರಕ್ಕೆ ಪೋಲೀಸ್ ಆಯುಕ್ತರೊಂದಿಗೆ ಚರ್ಚಿಸಿ ಕೂಡಲೇ ಸಭೆ ಕರೆಯುವುದಾಗಿಯೂ ಹಾಗೂ ಮುಷ್ಕರವನ್ನು ವಾಪಸ್ ಪಡೆಯಬೇಕೆಂಬ ಶಾಸಕರ ಮನವಿಯ ಮೇರೆಗೆ ವಾಹನ ಚಾಲಕರು ಮುಷ್ಕರವನ್ನು ವಾಪಸ್ ಪಡೆದಿದ್ದು ಶನಿವಾರ ಎಂದಿನಂತೆ ಶಾಲಾ ಮಕ್ಕಳ ವಾಹನ ಸಂಚಾರ ನಡೆಯಲಿದೆ ಎಂದು ಹೇಳಿದರು.

ಸಂಘದ ಗೌರವ ಸಲಹೆಗಾರರಾದ ಸತೀಶ್ ಅಡಪ, ಉಮೇಶ್ ಶೆಟ್ಟಿ ಯವರು ಮಾತನಾಡುತ್ತಾ ಚಾಲಕರ ಸಂಕಷ್ಟವನ್ನು  ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಮುಖಂಡರಾದ ಮೋಹನ್ ಕುಮಾರ್ ಅತ್ತಾವರ, ಕಿರಣ್ ಲೇಡಿಹಿಲ್, ಸತೀಶ್ ಪೂಜಾರಿ, ಶಂಕರ್ ಶೆಟ್ಟಿ, ಲೋಕೇಶ್ ಸುರತ್ಕಲ್, ರೆಹಮಾನ್ ಖಾನ್, ದೇವರಾಜ್, ಗಂಗಾಧರ ರೈ, ಬೆಂಜಮಿನ್, ಸುಕೇಶ್, ಚರಣ್, ಮುನ್ನಾ ಪದವಿನಂಗಡಿ, ಚಿತ್ತರಂಜನ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)