varthabharthi

ಕರ್ನಾಟಕ

ಪರಿಸರ ಅಸಮತೋಲನದಿಂದ ಮನುಕುಲಕ್ಕೆ ಗಂಡಾಂತರ: ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ಕುಮಾರ್

ವಾರ್ತಾ ಭಾರತಿ : 12 Jul, 2019

ಚಿಕ್ಕಮಗಳೂರು, ಜು.12: ಆಧುನಿಕತೆಯ ಭರಾಟೆಯಲ್ಲಿ ಪರಿಸರ ರಕ್ಷಣೆ ಕಾಪಾಡುವಲ್ಲಿ ಇಂದಿನ ಜನತೆ ನಿರ್ಲಕ್ಷ್ಯಧೋರಣೆ ತಳೆದಿದೆ. ಪರಿಸರ ಸಂರಕ್ಷಣೆಯೊಂದೇ ಮನುಕುಲದ ಉಳಿವಿಗಿರುವ ಏಕೈಕ ದಾರಿ. ಯುವಪೀಳಿಗೆಯ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಪರಿಸರ ಕಾಳಜಿ ವಹಿಸಬೇಕಾಗಿರುವುದು ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಅಭಿಪ್ರಾಯಿಸಿದರು.

ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸ್ವಚ್ಛ ಭೂಮಿ ಟ್ರಸ್ಟ್, ಅರಣ್ಯ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಹಸಿರು ಬೆಳೆಸಿ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳು ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಬೀಜದುಂಡೆ ತಯಾರು ಮಾಡುವ ಕಾರ್ಯಕ್ರಮ ರೂಪಿಸಿರುವುದರಿಂದ ಶಾಲಾ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡುತ್ತದೆ. ಇಂತಹ ಪ್ರಯತ್ನಗಳು ನಿರಂತರವಾಗಿ ನಡೆದಲ್ಲಿ ಪರಿಸರ ಸಂರಕ್ಷಣೆ ಸಾಧ್ಯ ಎಂದರು.

ಸ್ವಚ್ಛ ಮನಸ್ಸು ಕಟ್ಟದೇ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯವಿಲ್ಲ. ಯುವಜನತೆಯಲ್ಲಿ ಮೊದಲು ಸ್ವಚ್ಛ ಮನಸ್ಸು ಮೂಡಬೇಕು. ಆಗ ಮಾತ್ರ ಸ್ವಚ್ಛ ವ್ಯವಸ್ಥೆಯನ್ನು ಕಟ್ಟಲು ಸಾಧ್ಯವಿದೆ.ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮರಗಿಡಗಳನ್ನು ಬೆಳೆಸಲು ಪ್ರೇರೇಪಣೆ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಸಮಾಜದ ಸರ್ವತೋಮುಖ ಏಳಿಗೆ ಕೇವಲ ಸರಕಾರಗಳ ಯೋಜನೆಗಳಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕಾಗಿ ಸಮಾಜದಲ್ಲಿ ಉತ್ತಮ ಕಲ್ಚರ್ ಮತ್ತು ನೇಚರ್ ಕೂಡ ಅತ್ಯಗತ್ಯ ಎಂದರು.

ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಮಾತನಾಡಿ, ಮಿತಿಮೀರಿದ ಕೈಗಾರಿಕೀಕರಣ, ವಾಹನ ದಟ್ಟಣೆಯಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಜನ ಜಾನುವಾರುಗಳಿಗೆ ಕುಡಿಯಲು ಶುದ್ಧ ನೀರು ದೊರೆಯದಂತಾಗಿದೆ. ಈ ಪರಿಸ್ಥಿತಿ ಮುಂದುವರಿದಲ್ಲಿ ಮುಂದೊಂದು ದಿನ ಜೀವಿಸಂಕುಲವೇ ಅಳಿವಿನಂಚಿಗೆ ತಲುಪಬೇಕಾದ ಆತಂಕ ಪ್ರಸಕ್ತ ಮನಕುಲಕ್ಕೆ ಎದುರಾಗಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಹಸಿರು ಬೆಳೆಸುವ ಮೂಲಕ ಜನ ಸಂರಕ್ಷಣೆ ಬಗ್ಗೆಯೂ ಕಾಳಜಿ ವಹಿಸಬೇಕಿದೆ ಎಂದ ಅವರು, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ಸಹ ಅಗತ್ಯ ಎಂದರು.

ಸ್ವಚ್ಛ ಭೂಮಿ ಟ್ರಸ್ಟ್ ಉಪಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮನೆಯಲ್ಲಿ ತಾವು ತಿನ್ನುವ ಹಣ್ಣಿನ ಬೀಜಗಳನ್ನು ಡಬ್ಬದಲ್ಲಿ ಸಂಗ್ರಹಿಸಿ ತಮ್ಮದೇ ಆದ ಬೀಜದ ಬ್ಯಾಂಕ್ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಬೀಜದುಂಡೆ ಮಾಡಿ ಸೂಕ್ತ ಸ್ಥಳದಲ್ಲಿ ಬೆಳೆಸಬೇಕೆಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ನಗರದ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್, ಸರಕಾರಿ ಪದವಿ ಪೂರ್ವ ಕಾಲೇಜು, ಜ್ಞಾನರಶ್ಮಿ ಶಾಲೆ ವಿದ್ಯಾರ್ಥಿಗಳು ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಮಣ್ಣಿನುಂಡೆಗಳನ್ನು ಮಾಡಿ ಹಲಸು, ನೇರಳೆ, ಬಂಬೂ, ಮಾವು, ತಾರೆ, ಹಲಸು ಹಾಗೂ ತೇಗ, ಬಿದಿರು ಮತ್ತಿತರ ಗಿಡಗಳ ಬೀಜಗಳನ್ನು  ಅದರೊಳಗಿಟ್ಟು ಉಂಡೆಗಳಾಗಿ ಕಟ್ಟಿದರು. ಸ್ವಚ್ಛ ಭೂಮಿ ಟ್ರಸ್ಟ್‍ನ ಶುಭಾವಿಜಯ್, ಎಂ.ಎಲ್ ಮೂರ್ತಿ, ಮಂಜುನಾಥ್‍ಜೋಷಿ,  ಯೋಜನಾಧಿಕಾರಿ ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಎ.ಎನ್.ಮಹೇಶ್, ವಲಯ ಅರಣ್ಯಾಧಿಕಾರಿ ಶಿಲ್ಪಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)