varthabharthi

ಸಂಪಾದಕೀಯ

ವಿದ್ಯುತ್ ಚಾಲಿತ ವಾಹನಗಳು: ಪರಿಸರ ಮಾಲಿನ್ಯಗಳಿಗೆ ಹೊಸ ರೂಪ

ವಾರ್ತಾ ಭಾರತಿ : 13 Jul, 2019

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿದ ಅವರ ಚೊಚ್ಚಲ ಮುಂಗಡ ಪತ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯ ಗಾಯಕ್ಕೆ ಮುಲಾಮು ಹಚ್ಚಿದಂತಿತ್ತು, ವಿದ್ಯುತ್ ಚಾಲಿತ ವಾಹನಗಳ ಖರೀದಿದಾರರಿಗೆ ನೀಡಿದ ಕೊಡುಗೆ. ವಿದ್ಯುತ್ ಚಾಲಿತ ವಾಹನಗಳ ಖರೀದಿದಾರರಿಗೆ ಆದಾಯ ತೆರಿಗೆ ವಿನಾಯಿತಿ ಮತ್ತು ವಾಹನದ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೂ ಇದರಲ್ಲೇ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ. ಈ ಕಾರಣದಿಂದಾಗಿ ವಿವಿಧ ವಲಯಗಳಿಂದ ಬಜೆಟ್ ಕೊಡುಗೆಗೆ ವ್ಯಾಪಕ ಪ್ರಶಂಸೆ ಕೇಳಿ ಬಂದಿತ್ತು. ಪರಿಸರ ಮಾಲಿನ್ಯದ ವ್ಯಾಖ್ಯೆಗಳನ್ನು ತೆಳುವಾಗಿ ಗ್ರಹಿಸಿದ ಪರಿಣಾದಿಂದಿರಬೇಕು, ವಿದ್ಯುತ್ ಚಾಲಿತ ವಾಹನಗಳು ಭವಿಷಯದಲ್ಲಿ ಸೃಷ್ಟಿಸಲಿರುವ ಮಾಲಿನ್ಯವನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

 ಈ ದೇಶದಲ್ಲಿ ವಿದ್ಯುತ್ ತಲುಪದ ಕುಗ್ರಾಮಗಳು ಅನಧಿಕೃತವಾಗಿ ಇನ್ನೂ ಅಸ್ತಿತ್ವದಲ್ಲಿವೆ. ಸಹಸ್ರಾರು ಮನೆಗಳು ಇನ್ನೂ ವಿದ್ಯುತ್ ಬೆಳಕನ್ನು ಕಂಡಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ನಡೆಯುತ್ತಲೇ ಇವೆ. ಇವೆಲ್ಲದರ ನಡುವೆ, ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ದೇಶ ಆಸಕ್ತಿ ತೋರಿಸುತ್ತಿದೆ. ಮತ್ತು ಈ ದೇಶದ ಪರಿಸರ ಮಾಲಿನ್ಯ, ತೈಲ ಬೆಲೆಯೇರಿಕೆ ಇತ್ಯಾದಿಗಳಿಗೆಲ್ಲ ಈ ವಾಹನಗಳ ಮೂಲಕ ಪರಿಹಾರ ಕಂಡುಕೊಳ್ಳಲು ಹೊರಟಿದೆ. ಆದರೆ ಇವುಗಳಿಗೆ ಪೂರೈಸುವ ವಿದ್ಯುತ್‌ನ್ನು ದೇಶ ಹೇಗೆ ಉತ್ಪಾದಿಸಲಿದೆ? ಎನ್ನುವ ಪ್ರಶ್ನೆ ಮತ್ತೆ ದೇಶದ ಪರಿಸರ ಮಾಲಿನ್ಯ ಚರ್ಚೆಯನ್ನು ಮುನ್ನೆಲೆಗೆ ತರುತ್ತದೆ. ಸ್ವತಃ ನೀತಿ ಆಯೋಗದ ವಿಶ್ಲೇಷಣೆಯಂತೆ, ದೇಶದಲ್ಲಿ ಕಲ್ಲಿದ್ದಲು ಆಧಾರಿತ ಇಂಧನದ ಪಾಲು 2010ರಲ್ಲಿ ಸದ್ಯದ ಶೇ. 47ರಿಂದ ಶೇ. 50ಕ್ಕೆ ಏರಿಕೆಯಾಗಲಿದೆ. ಉಷ್ಣ ವಿದ್ಯುತ್ ಸ್ಥಾವರಗಳು 2047ರ ವೇಳೆಗೆ ತಮ್ಮ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸಲಿದೆ. ಅಂದರೆ, ದೇಶದ ಇಂಧನದಲ್ಲಿ ಕಲ್ಲಿದ್ದಲಿನ ಪಾಲು ಗಣನೀಯವಾಗಿಯೇ ಇರಲಿದೆ ಮತ್ತು ಕಲ್ಲಿದ್ದಲು ಕೈಗಾರಿಕೆಗಳ ಪ್ರಥಮ ಆಯ್ಕೆಯ ಇಂಧನವಾಗಿಯೇ ಉಳಿಯಲಿದೆ. ಹಾಗಾಗಿ, ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡಲು ಅಗತ್ಯವಿರುವ ಚಾರ್ಜಿಂಗ್ ಸೌಲಭ್ಯವು ಅಂತಿಮವಾಗಿ ಅತ್ಯಂತ ಹೆಚ್ಚು ಮಾಲಿನ್ಯ ಹರಡುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳನ್ನೇ ಹೆಚ್ಚು ಅವಲಂಬಿಸಲಿದೆ.

2018ರಲ್ಲಿ ಜಗತ್ತಿನ 10 ಅತ್ಯಂತ ಮಲಿನ ನಗರಗಳ ಪೈಕಿ 7 ಭಾರತದಲ್ಲಿದ್ದವು. ಈ ಮಾಲಿನ್ಯಗಳಿಗೆ ಕಲ್ಲಿದ್ದಲು ಉರಿಸುವಿಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತವಿರುವ 7,861 ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಇಟಿಎಚ್ ಝುರಿಚ್‌ನ ಸಂಶೋಧಕರು ಇತ್ತೀಚೆಗೆ ಲೆಕ್ಕ ಹಾಕಿದ್ದು, ಆರೋಗ್ಯದ ವಿಷಯಕ್ಕೆ ಬಂದಾಗ ಭಾರತದ ಸ್ಥಾವರಗಳು ಜಗತ್ತಿನಲ್ಲೇ ಅತೀಹೆಚ್ಚು ವ್ಯತಿರಿಕ್ತಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಒಂದೆಡೆ ಕಲ್ಲಿದ್ದಲು ನಮ್ಮ ಇಂಧನ ನೀತಿಯ ಭಾಗವಾಗಿ ಮುಂದುವರಿಯುತ್ತಿರುವಾಗ ಕೇವಲ ಬ್ಯಾಟರಿ ಚಾಲಿತ ವಾಹನಗಳಿಂದ ನಮ್ಮ ವಾಯು ಮಾಲಿನ್ಯ ಸಮಸ್ಯೆಗಳನ್ನು ನಿಬಾಯಿಸಲು ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಗಮನಿಸಬೇಕಾಗಿದೆ. ವಾಯು ಮಾಲಿನ್ಯದ ಹೊರತಾಗಿ, ಇವಿ ವಲಯದಿಂದ, ಇಲೆಕ್ಟ್ರೋನಿಕ್ ತ್ಯಾಜ್ಯ ಅಥವಾ ಇ-ತ್ಯಾಜ್ಯದ ಸಮಸ್ಯೆಯೂ ಉಂಟಾಗುತ್ತದೆ. 2019ರ ವಿತ್ತೀಯ ವರ್ಷದಲ್ಲಿ 7,59,600 ಇವಿ ವಾಹನಗಳನ್ನು ಮಾರಾಟ ಮಾಡಲಾಗಿದೆ. 2017 ಮತ್ತು 2025ರ ಅವಧಿಯಲ್ಲಿ ಭಾರತದ ವಿದ್ಯುತ್ ಕಾರು ಮಾರುಕಟ್ಟೆ 10 ಪಟ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಣೆ ತಿಳಿಸುತ್ತದೆ. ಇದರಿಂದ ಇವಿ ಕ್ಷೇತ್ರವು 486.2 ಕೋ.ರೂ.ನಿಂದ 4,838.3ಕೋ.ರೂ.ಗೆ ಹಿಗ್ಗಲಿದೆ. ಈ ಬೆಳವಣಿಗೆಯ ಫಲವಾಗಿ ಮುಂದಿನ ದಶಕದಲ್ಲಿ ದೇಶದಲ್ಲಿ ಬಳಸಲ್ಪಟ್ಟ ಬ್ಯಾಟರಿಗಳ ಸಂಗ್ರಹವೂ ಹತ್ತು ಪಟ್ಟು ಹೆಚ್ಚಾಗಲಿದೆ.

2025ರ ವೇಳೆಗೆ ಜಾಗತಿಕವಾಗಿ ಇಂತಹ 34 ಲಕ್ಷ ಬ್ಯಾಟರಿಗಳು ಸಂಗ್ರಹವಾಗಲಿದೆ ಎಂದು ಉದ್ಯಮ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಇದರಲ್ಲಿ ಭಾರತದ ಕೊಡುಗೆಯೂ ಸೇರಲಿದೆ. ಹೀಗಿರುವಾಗ ಈ ನೂತನ ಲಿಥಿಯಮ್ ಇಯೊನ್ (ಲಿ-ಇಯೊನ್) ಬ್ಯಾಟರಿಗಳನ್ನು ನಿಭಾಯಿಸಲು ನಾವು ಸಿದ್ಧರಾಗಿದ್ದೇವೆಯೇ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಸಾಂಪ್ರದಾಯಿಕ ವಾಹನಗಳ ಆಯ್ಕೆಯ ತಂತ್ರಜ್ಞಾನವಾಗಿರುವ ಸೀಸ ಆಮ್ಲದಂತಹ ಹೆಚ್ಚು ಅಭಿವೃದ್ಧಿಗೊಳಿಸಲ್ಪಟ್ಟ ಬ್ಯಾಟರಿಗಳಲ್ಲೂ ಸುರಕ್ಷಿತ ಮರುಬಳಕೆ ಒಂದು ಸವಾಲಾಗಿಯೇ ಉಳಿದಿದೆ. 1996ರಲ್ಲಿ ದಿಲ್ಲಿಯಲ್ಲಿ ಕಾರ್ಯಾಚರಿಸುತ್ತಿದ್ದ 45 ಅಕ್ರಮ ಲೆಡ್ ಆ್ಯಸಿಡ್ ಬ್ಯಾಟರಿ ಕರಗಿಸುವ ಕಾರ್ಖಾನೆಗಳನ್ನು ದಿಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಮುಚ್ಚಿತ್ತು. ಈ ಕಾರ್ಖಾನೆಗಳು 8 ಲಕ್ಷ ಕಾರುಗಳು ಹೊರಸೂಸುವ ಸೀಸಯುಕ್ತ ಪೆಟ್ರೋಲ್‌ಗೆ ಸಮಾನವಾದ ಮಾಲಿನ್ಯವನ್ನು ಹೊರಸೂಸುತ್ತಿದ್ದವು. ಇಂತಹ ಸ್ಮೆಲ್ಟರ್‌ಗಳು ರಾಷ್ಟ್ರ ರಾಜಧಾನಿ ಹಾಗೂ ದೇಶದ ಇತರ ಭಾಗಗಳಲ್ಲಿ ಅವ್ಯಾಹತವಾಗಿ ಹರಡಿಕೊಂಡಿವೆ. ಅಭಿವೃದ್ಧಿ ಹೊಂದಿದ ದೇಶಗಳೂ ತಮ್ಮ ಲಿ-ಇಯೊನ್ ತ್ಯಾಜ್ಯದಿಂದ ಸಮಸ್ಯೆಗೊಳಗಾಗಿವೆ. ಯೂರೋಪ್ ಒಕ್ಕೂಟದಲ್ಲಿ ಲಿ-ಇಯೊನ್ ಬ್ಯಾಟರಿಗಳಿಂದ ಕೇವಲ ಶೇ.5 ಲಿಥಿಯಮ್ ಅನ್ನು ಮರುಪಡೆಯಲಾಗಿದೆ.

ಉಳಿದವುಗಳನ್ನು ಒಂದೋ ಹೂಳಲಾಗಿದೆ ಅಥವಾ ಬೆಂಕಿಗಾಹುತಿ ಮಾಡಲಾಗಿದೆ. ಬ್ಯಾಟರಿಗಳನ್ನು ಮರು ಸಂಸ್ಕರಣೆಗೊಳಿಸುವ ಬಗ್ಗೆ ಭಾರತೀಯ ನೀತಿ ನಿರೂಪಕರು ಇನ್ನಷ್ಟೇ ಪ್ರಾಮಾಣಿಕ ಚರ್ಚೆಯನ್ನು ಆರಂಭಿಸಬೇಕಿದೆ. ಇವೆಲ್ಲದರಿಂದ ಸ್ಪಷ್ಟವಾಗುವ ಅಂಶವೆಂದರೆ, ವಿದ್ಯುತ್ ಚಾಲಿತ ವಾಹನಗಳು ಪರಿಸರ ಮಾಲಿನ್ಯಕ್ಕೆ ಉತ್ತರದಂತೆ ಭಾಸವಾಗುತ್ತಲೇ, ಇನ್ನೊಂದು ಭಾರೀ ಸಮಸ್ಯೆಯನ್ನು ಸೃಷ್ಟಿಸಲಿದೆ. ಈಗಾಗಲೇ ದೇಶಾದ್ಯಂತ ಇರುವ ಅಣು ವಿದ್ಯುತ್ ಸ್ಥಾವರಗಳು ಬೇರೆ ಬೇರೆ ಕಾರಣಗಳಿಂದ ಜನರ ಪ್ರತಿಭಟನೆಗಳನ್ನು ಎದುರಿಸುತ್ತಿರುವಾಗ, ಸರಕಾರ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ಬೇರೆ ಬೇರೆ ಸಾಮಾಜಿಕ ಸಮಸ್ಯೆಗಳನ್ನೂ ಸೃಷ್ಟಿಸಲಿದೆ. ಆದುದರಿಂದ, ವಿದ್ಯುತ್ ಚಾಲಿತ ವಾಹನಗಳು ರಸ್ತೆಗಿಳಿದಾಕ್ಷಣ ಪರಿಸರ ಮಾಲಿನ್ಯದ ಸರ್ವ ಸಮಸ್ಯೆಗಳು ಇತ್ಯರ್ಥವಾಯಿತು ಎಂದು ಸಂಭ್ರಮಿಸುವುದು, ಹೊಸ ಸಮಸ್ಯೆಗಳನ್ನು ದುಪ್ಪಟ್ಟು ಪ್ರಮಾಣದಲ್ಲಿ ಮೈಮೇಲೆ ಎಳೆದುಕೊಂಡಂತೆ. ಆದುದರಿಂದ ವಿದ್ಯುತ್ ಚಾಲಿತ ವಾಹನಗಳಿಂದ ಎದುರಾಗುವ ಪರಿಸರ ಮಾಲಿನ್ಯಗಳ ಹೊಸ ಸ್ವರೂಪಗಳ ಬಗ್ಗೆಯೂ ತೀವ್ರ ಚರ್ಚೆ ನಡೆಯುವ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)