varthabharthi

ವೈವಿಧ್ಯ

ಅಹಿಂದ ಮರುಹುಟ್ಟು ಅಗತ್ಯ ಏಕೆ? ಹೇಗೆ?

ವಾರ್ತಾ ಭಾರತಿ : 13 Jul, 2019
ಕೆ.ಎನ್.ಲಿಂಗಪ್ಪ, ಸದಸ್ಯರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಬಲಿಷ್ಠ ಕೋಮುಗಳ ದೂಷಣೆಯಲ್ಲಿಯೇ ಕಾಲದೂಡುವುದನ್ನು ಬಿಟ್ಟು ಆಡಳಿತದಲ್ಲಿ ಸಮಪಾಲು ಪಡೆಯಲು ಈ ವರ್ಗಗಳು ದಲಿತ ಸಮುದಾಯದೊಡನೆ ಒಗ್ಗೂಡಿ ಹೋರಾಡುವುದು ಇಂದು ಹಿಂದೆಂದಿಗಿಂತ ಅಗತ್ಯ. ಎಲ್ಲಿಯವರೆಗೆ ತುಳಿತಕ್ಕೊಳಗಾದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ತಮ್ಮ ಮೂಲ ಒಂದೇ ಎಂಬುದನ್ನು ತಿಳಿದು ಒಗ್ಗೂಡುವುದಿಲ್ಲವೋ ಅಲ್ಲಿಯವರೆಗೆ ಶೋಷಕರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ.

 ‘ಅಹಿಂದ’, ಮೂರು ಅಕ್ಷರಗಳ ಚಂದದ ಜೋಡಣೆಯ ಒಂದು ಹೊಸ ಸುಂದರ ಪದವಿದು. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಎಂಬ ಜಾತಿ-ವರ್ಗ ಪದಗಳ ಮೊದಲ ಅಕ್ಷರಗಳ ಸಂಯುಕ್ತ ಪದವೇ ‘ಅಹಿಂದ’. ಈ ಪದಜನಕ ಯಾರೇ ಆಗಿರಲಿ ಅವರಿಗೊಂದು ಸಲಾಂ ಸಲ್ಲಲೇ ಬೇಕು. ದಶಕಗಳಿಂದೀಚೆಗೆ ಜನಸಾಮಾನ್ಯರಲ್ಲಿ ಅದು ಸಂಚಲನ ಉಂಟುಮಾಡಿರುವುದಂತೂ ಸತ್ಯ. ಜನಸಾಮಾನ್ಯರಲ್ಲಿ ಈ ಪದ ಬಳಕೆ ಜನಪ್ರಿಯಗೊಳ್ಳಲು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಕೊಡುಗೆಯೂ ಕೂಡ ಇದೆ.
ಸಾಮ್ರಾಜ್ಯಶಾಹಿ ಬ್ರಿಟಿಷರನ್ನು ಭಾರತ ದೇಶದಿಂದ ಹೊಡೆದೋಡಿಸಲು ಜಾತಿ-ಧರ್ಮಗಳ ಎಲ್ಲೆಗಳನ್ನು ಮೀರಿ ಭಾರತೀಯರು ಹೋರಾಟ ನಡೆಸಿದರು. ಹೋರಾಟದ ಪರಿಣಾಮ ಭಾರತ ರಾಜಕೀಯ ಸ್ವಾತಂತ್ರ್ಯಗಳಿಸಿತು; ಅಂತೆಯೇ ಪ್ರಜಾಪ್ರಭುತ್ವದ ಉದಯಕ್ಕೂ ನಾಂದಿಯಾಯಿತು. ಪ್ರಜಾಪ್ರಭುತ್ವದ ಮೂಲ ಆಶಯಗಳಿಗನುಗುಣವಾಗಿ ದೇಶದಲ್ಲಿ ಚುನಾವಣೆಗಳು ಕಾಲದಿಂದ ಕಾಲಕ್ಕೆ ನಡೆಯುತ್ತಿವೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಅಷ್ಟಾಗಿ ಜಾತಿ-ಧರ್ಮ ಮೇಲುಗೈ ಪಡೆದಿರಲಿಲ್ಲ ಎಂಬುದು ನಿಜ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವಾರು ಮಂದಿ ಮಹಾನುಭಾವರು ಲೋಕಸಭೆ-ವಿಧಾನಸಭೆಗೆ ಚುನಾಯಿತರಾಗಿದ್ದರು. ತದನಂತರದಲ್ಲಿ ರಾಜಕೀಯ ಪಕ್ಷಗಳು ಬಲಿಷ್ಠ ಕೋಮುಗಳ ಹಿಡಿತಕ್ಕೊಳಗಾದ ಪ್ರಯುಕ್ತ, ಶಾಸನ ಸಭೆಗಳಿಗೆ ಸಾರ್ವತ್ರಿಕ ಕ್ಷೇತ್ರಗಳಿಂದ ಅವರು ಪಡೆಯಬಹುದಾದ ಪ್ರಾತಿನಿಧ್ಯಕ್ಕಿಂತ ಹೆಚ್ಚು ಅವಕಾಶ ಗಳಿಸಿಕೊಂಡು ಚುನಾಯಿತರಾಗುತ್ತಿದ್ದಾರೆ. ಜನಸಂಖ್ಯೆ ಪ್ರಮಾಣಕ್ಕನುಗುಣವಾಗಿ ರಾಜಕೀಯ ಪಕ್ಷಗಳು ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ.
ಸಾಮಾಜಿಕ ಸಮಾನತೆಯ ಸಿದ್ಧಾಂತಕ್ಕೆ ಹಿನ್ನಡೆಯಾಗಿ ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆ ಮುನ್ನೆಲೆಗೆ ಬರುತ್ತದೆ. ಸ್ವತಂತ್ರ ಭಾರತದ ಸಾಮಾಜಿಕ ಮತ್ತು ಆರ್ಥಿಕ ನೆಲೆಗಳಲ್ಲಿ ಸಾಮಾಜಿಕ ನ್ಯಾಯ ಎಂಬ ಒಂದು ಹೊಸ ಪರಿಕಲ್ಪನೆ, ರಾಜಕೀಯ ಮತ್ತು ನ್ಯಾಯಾಂಗದ ನೆಲೆಯಲ್ಲಿಯೂ ಹೆಚ್ಚು ವ್ಯಾಪಕವಾದ ಅರ್ಥದಲ್ಲಿ ಬಳಸಲಾಗಿದೆ. ಸಾಮಾಜಿಕ ಅಸಮಾನತೆಯಲ್ಲಿ ಬಳಲುತ್ತಿರುವ ವರ್ಗಗಳ ಹಿತದೃಷ್ಟಿಯಿಂದ, ಪೆರಿಯಾರ್‌ರವರು ಒಬ್ಬನೇ ತಂದೆಗೆ ಜನಿಸಿದ ಮಕ್ಕಳಿಗೆ ಸಮಾನ ಹಕ್ಕನ್ನು ನೀಡುವಂತೆಯೇ, ಭಾರತದಲ್ಲಿ ಜನಿಸಿದ ಜನರೆಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಸಾಮಾಜಿಕ ನ್ಯಾಯ ತತ್ವವನ್ನು ಪ್ರತಿಪಾದಿಸಿದ್ದಾರೆ.
ಭಾರತದ ಸಂವಿಧಾನ ಜಾತಿ ಮೂಲವಾದ ಅನನುಕೂಲಗಳನ್ನು ಇಲ್ಲದಂತೆ ಮಾಡಿ, ಎಲ್ಲ ಜಾತಿಯವರನ್ನು ಸಮಾನವಾಗಿ ಕಾಣಲು ನಿರ್ದೇಶಿಸುತ್ತದೆ. ಸಂವಿಧಾನ ಜಾತಿ ಆಧಾರಿತ ತಾರತಮ್ಯವನ್ನು ನಿರ್ಮೂಲ ಮಾಡಲು ಯತ್ನಿಸಿದ್ದರೂ, ಬಲಿಷ್ಠ ಕೋಮಿನವರು ಅಧಿಕ ರಾಜಕೀಯ ಪ್ರಾತಿನಿಧ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಅಸಮಾನ ರಾಜಕೀಯ-ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿಯೇ ದಲಿತರಿಗೆ ನಮ್ಮ ಸಂವಿಧಾನ ರಾಜಕೀಯ ಮೀಸಲಾತಿಯನ್ನು ಒದಗಿಸಿದೆ. ಅಂತೆಯೇ, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಲೋಕಸಭೆ-ವಿಧಾನಸಭೆಗಳಿಗೆ ಸಮಾನವಾಗಿ ಆಯ್ಕೆಯಾಗಲು ರಾಜಕೀಯ ಮೀಸಲಾತಿಯ ಅಗತ್ಯ ಇದೆ. ಚುನಾವಣೆಗಳಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಆಗಿರುವ ರಾಜಕೀಯ ಅನ್ಯಾಯವನ್ನು ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ. ಆ ವರ್ಗಗಳು ರಾಜಕೀಯ ಅನ್ಯಾಯವನ್ನು ಹೇಳಿಕೊಳ್ಳಲರಿಯದೆ ಮೂಕರಾಗಿದ್ದಾರೆ.
2011ರ ರಾಷ್ಟ್ರೀಯ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆ 6 ಕೋಟಿ 11 ಲಕ್ಷ. ಅದರಲ್ಲಿ ಪರಿಶಿಷ್ಟ ಜಾತಿ 1 ಕೋಟಿ 5 ಲಕ್ಷವಿದ್ದರೆ, ಪರಿಶಿಷ್ಟ ಪಂಗಡ 43 ಲಕ್ಷ ಇದೆ. ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯ 79 ಲಕ್ಷ ಮತ್ತು ಕ್ರೈಸ್ತ 11.50 ಲಕ್ಷವಿದೆ. ಹಾಗೆಯೇ ಹಿಂದುಳಿದವರೆಂದು ಪರಿಗಣಿಸಿರುವ ಜಾತಿಗಳ ಒಟ್ಟಾರೆ ಜನಸಂಖ್ಯೆ ಅಂದಾಜು 1 ಕೋಟಿ 90 ಲಕ್ಷ. (ಹಿಂದುಳಿದವರ ಜನಸಂಖ್ಯೆಯ ಅಂದಾಜಿಗೆ 1931ರ ಜನಗಣತಿ ಆಧಾರ). ಹೀಗಾಗಿ ಅಹಿಂದ ವರ್ಗಗಳ ಒಟ್ಟು ಜನಸಂಖ್ಯೆ ಸರಿಸುಮಾರು 4 ಕೋಟಿ 30 ಲಕ್ಷ ಇದೆ.
ಕರ್ನಾಟಕದ ವಿಧಾನಸಭೆಗೆ 15 ಸಾರ್ವತ್ರಿಕ ಚುನಾವಣೆಗಳು ಈ ತನಕ ನಡೆದಿವೆ. ಕರ್ನಾಟಕ ಏಕೀಕರಣದ ನಂತರ ಮೊದಲನೇ ಚುನಾವಣೆ 1957ರಲ್ಲಿ ನಡೆದಿದೆ. 1957ರಿಂದ 2018ರವರೆಗೆ ನಡೆದ ಹದಿನಾಲ್ಕು ಚುನಾವಣೆಗಳಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದವರು ವಿಧಾನಸಭೆಗೆ ಆರಿಸಿ ಬಂದ ವಿವರವನ್ನು ಒಮ್ಮೆ ಅವಲೋಕಿಸಿದಾಗ ಆ ವರ್ಗಗಳಿಗೆ ನಿರಾಶೆ ಕಾಡದಿರದು.

(ಕೋಷ್ಠಕ ನೋಡಿ)


ಯಾವ ಜಾತಿ-ವರ್ಗಗಳಿಗೆ ರಾಜಕೀಯ ಪಕ್ಷಗಳು ಜನಸಂಖ್ಯೆಗನುಸಾರ ಎಷ್ಟು ಸ್ಥಾನಗಳನ್ನು ಸ್ಪರ್ಧಿಸಲು ನೀಡಬೇಕು ಎಂಬುದರ ಬಗ್ಗೆ ಒಂದು ಸರಳ ಗಣಿತದ ಲೆಕ್ಕಾಚಾರ ಹೀಗಿದೆ. 2008ರಲ್ಲಿ ನ್ಯಾ. ಕುಲ್‌ದೀಪ್ ಸಿಂಗ್ ಆಯೋಗದ ವರದಿ ಆಧರಿಸಿ, ಕರ್ನಾಟಕದ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಪುನರ್‌ವಿಂಗಡನೆ ಜಾರಿಗೆ ಬಂದಿದೆ. ಪ್ರತಿ 2.50 ಲಕ್ಷ ಜನಸಂಖ್ಯೆಗೆ ಒಂದು ವಿಧಾನಸಭಾ ಕ್ಷೇತ್ರ ಮತ್ತು 8 ವಿಧಾನ ಸಭಾ ಕ್ಷೇತ್ರಗಳಿಗೆ ಒಂದು ಲೋಕಸಭಾ ಕ್ಷೇತ್ರ ಎಂಬ ಮಾನದಂಡವನ್ನು ಅನುಸರಿಸಿ 224 ವಿಧಾನಸಭಾ ಕ್ಷೇತ್ರ ಮತ್ತು 28 ಲೋಕಸಭಾ ಕ್ಷೇತ್ರಗಳನ್ನು ಆಯೋಗ ಗುರುತಿಸಿದೆ. ಇದೇ ಮಾನದಂಡವನ್ನು ಆಯಾಯ ಜಾತಿಗಳ ಜನಸಂಖ್ಯೆಗೆ ತುಲನೆ ಮಾಡಿ ನಿಖರವಾಗಿ ಯಾವ ಜಾತಿಗೆ ಎಷ್ಟು ವಿಧಾನಸಭಾ ಕ್ಷೇತ್ರಗಳಿಗೆ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದನ್ನು ಹೇಳಲು ಸಾಧ್ಯವಿದೆ. ಉದಾಹರಣೆಗೆ ಬೆಸ್ತ ಸಮುದಾಯದ ಜನಸಂಖ್ಯೆ 15 ಲಕ್ಷವೆಂದು ಅಂದಾಜಿಸಿದರೆ, ಆ ಸಮುದಾಯಕ್ಕೆ ರಾಜಕೀಯ ಪಕ್ಷಗಳು ನ್ಯಾಯೋಚಿತವಾಗಿ ಕನಿಷ್ಠ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಇದೇ ಮಾನದಂಡ ಎಲ್ಲ ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಅನ್ವಯಿಸಬೇಕು. ಅಂತೆಯೇ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಕನಿಷ್ಠ 105 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ಕಲ್ಪಿಸಬೇಕಾಗಿದೆ.
ಹಿಂದುಳಿದ ವರ್ಗಗಳಲ್ಲಿ 197 ಮುಖ್ಯ ಜಾತಿಗಳು ಮತ್ತು 550 ಉಪಜಾತಿಗಳಿವೆ. ಇವುಗಳಲ್ಲಿ ಕುರುಬ, ದೇವಾಡಿಗ, ಬಲಿಜ, ಈಡಿಗ, ರಜಪೂತ್, ಹಿಂದೂಸಾದರು, ಗಾಣಿಗ, ಕ್ಷತ್ರಿಯ, ಅರಸು, ತಿಗಳ, ರಾಮಕ್ಷತ್ರಿಯ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ, ಪದ್ಮಸಾಲಿ, ಗೊಲ್ಲ, ಮೊಗವೀರ, ಮರಾಠಾ, ಉಪ್ಪಾರ, ಕುರುಹಿನಶೆಟ್ಟಿ, ಭಾವಸಾರಕ್ಷತ್ರಿಯ, ಹಾಲಕ್ಕಿಒಕ್ಕಲ್, ವಿಶ್ವಕರ್ಮ, ಕುಂಬಾರ, ಮಡಿವಾಳ, ಸವಿತಾ ಮತ್ತು ದೇವಾಂಗ ಸಮುದಾಯಗಳಿಗಷ್ಟೇ ಶಾಸನ ಸಭೆಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ಹಿಂದುಳಿದ ವರ್ಗಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿರುವ ಸತಾನಿ, ತಮ್ಮಡಿ, ಹೆಳವ, ದೊಂಬಿದಾಸ, ಗೋಣಿಗಮನೆ, ಗೋಂಧಳಿ, ಖಾಟಿಕ್, ಕಣಿಯಾ, ರಾಜಪುರಿ ಮುಂತಾದ ಇನ್ನೂ ನೂರಾರು ಜಾತಿಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ.
ಅನಾದಿಕಾಲದಿಂದ ಬೆಳೆದು ಉಳಿದಿರುವ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆ ಹಾಗೂ ತಾರತಮ್ಯವನ್ನು ಅಳಿಸಲು ಮೀಸಲಾತಿ ನೀತಿ ಅಗತ್ಯ ಎಂಬುದನ್ನು ಪ್ರತಿಪಾದಿಸಲಾಗಿದೆ. ಜಾತಿಗಳ ಪೂರ್ವಗ್ರಹ ಭಾವನೆಯಿಂದಾಗಿ ಕೆಲವು ಸಾಮಾಜಿಕ ಸಮೂಹಗಳು, ಆರ್ಥಿಕ ಅಸಮಾನತೆ, ರಾಜಕೀಯ ಹಿಂದುಳಿದಿರುವಿಕೆಯಿಂದಾಗಿ, ಮುಂದುವರಿದ ಜಾತಿಗಳಿಗೆ ಹೋಲಿಕೆ ಮಾಡಿದಾಗ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಶತಮಾನಗಳ ಕಾಲದಿಂದ ಬಳಲಿ ಬೆಂಡಾಗಿವೆ. ವ್ಯಕ್ತಿ ಅಥವಾ ಸಮುದಾಯವು, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಕಾನೂನು ಸಮ್ಮತವಾದ ಹಕ್ಕುಗಳನ್ನು ಹೊಂದಲು, ಶಾಸನಸಭೆಗಳಲ್ಲಿ ಪ್ರಾತಿನಿಧ್ಯಗಳಿಸಲು ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಲು ಆಕಾಂಕ್ಷಿತರಾಗುವುದು ಸಹಜ.
ಸಾಮಾಜಿಕ ನ್ಯಾಯದ ಪರವಾಗಿ ವ್ಯಕ್ತವಾಗುವ ಅಂಶಗಳು ಮತ್ತು ಸಾಮಾಜಿಕ ಪರಿಕಲ್ಪನೆಯ ಹಿನ್ನೆಲೆಯನ್ನು ಅವಲೋಕಿಸಿದಾಗ ನಮ್ಮೆದುರಿಗೆ ಪ್ರತ್ಯಕ್ಷವಾಗುವುದು ಹಿಂದುಳಿದ ವರ್ಗಗಳ ಆರ್ಥಿಕ ಅಭ್ಯುದಯ ಮತ್ತು ಆ ದಿಸೆಯಲ್ಲಿ ಹಮ್ಮಿಕೊಳ್ಳುವ ಕಲ್ಯಾಣ ಕಾರ್ಯಕ್ರಮಗಳು. ಇಂತಹ ಕಾರ್ಯಕ್ರಮಗಳನ್ನು ಆ ವರ್ಗಗಳಿಗೆ ಪ್ರತ್ಯೇಕವಾಗಿ ಕಲ್ಪಿಸಬೇಕಾದರೆ, ಮೀಸಲಾತಿ ಒಂದು ಮಂತ್ರದಂಡ. ಹೀಗಾಗಿ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವುದು ಸಮರ್ಥನೀಯ ಎಂದು ಬಾಬಾಸಾಹೇಬ್ ಹೇಳಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದವರಿಗೂ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಪಡೆಯಲು ರಾಜಕೀಯ ಮೀಸಲಾತಿ ನೀಡುವುದೊಂದೇ ಪರಿಹಾರ. ಇದನ್ನು ಪಡೆಯಲು ರಾಷ್ಟ್ರೀಯ ಮಟ್ಟದ ಆಂದೋಲನವಾಗಲೇ ಬೇಕು. ರಾಜಕೀಯ ಪಕ್ಷಗಳಲ್ಲಿರುವ ಈ ವರ್ಗಗಳ ನೇತಾರರಿಂದ ಇದು ಸಾಧ್ಯವಾಗುವುದಿಲ್ಲ. ಪಕ್ಷಗಳ ಕಟ್ಟುಪಾಡಿಗೆ ಅವರು ಒಳಗಾಗಿರುತ್ತಾರೆ. ಹೀಗಾಗಿ ಪ್ರತ್ಯೇಕವಾದ ಪ್ರಬಲ ಸಂಘಟನೆಯ ಅಸ್ತಿತ್ವ ಅನಿವಾರ್ಯ ಹಾಗೂ ಪ್ರಸ್ತುತ.
ಬಲಿಷ್ಠ ಕೋಮುಗಳ ದೂಷಣೆಯಲ್ಲಿಯೇ ಕಾಲದೂಡುವುದನ್ನು ಬಿಟ್ಟು ಆಡಳಿತದಲ್ಲಿ ಸಮಪಾಲು ಪಡೆಯಲು ಈ ವರ್ಗಗಳು ದಲಿತ ಸಮುದಾಯದೊಡನೆ ಒಗ್ಗೂಡಿ ಹೋರಾಡುವುದು ಇಂದು ಹಿಂದೆಂದಿಗಿಂತ ಅಗತ್ಯ. ಎಲ್ಲಿಯವರೆಗೆ ತುಳಿತಕ್ಕೊಳಗಾದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ತಮ್ಮ ಮೂಲ ಒಂದೇ ಎಂಬುದನ್ನು ತಿಳಿದು ಒಗ್ಗೂಡುವುದಿಲ್ಲವೋ ಅಲ್ಲಿಯವರೆಗೆ ಶೋಷಕರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ.
ಕಳೆದ ಕೆಲವಾರು ದಿನಗಳಿಂದ ಮಾಧ್ಯಮಗಳಲ್ಲಿ ಅಹಿಂದ ವರ್ಗಗಳ ಒಗ್ಗಟ್ಟಿನ ಬಗ್ಗೆ ಸುದ್ದಿಯಾಗುತ್ತಿದೆ. ಕಳೆದ ದಶಕದ ಮಧ್ಯದಲ್ಲಿ ಸಿದ್ದರಾಮಯ್ಯನವರ ಧುರೀಣತ್ವದಲ್ಲಿ ಚಾಲನೆಗೊಂಡು ನಂತರದ ದಿನಗಳಲ್ಲಿ ಸೊರಗಿತು. ಇಂದು ಅದರ ಮರುಹುಟ್ಟು ಅಗತ್ಯವಾಗಿದೆ. ಹೌದು! ಒಗ್ಗೂಡಿಸಲು ಟೊಂಕಕಟ್ಟಿ ನಿಲ್ಲುವ ನೇತಾರನಾರು? ಕರ್ನಾಟಕದಲ್ಲಿ ಅಹಿಂದ ವರ್ಗಗಳನ್ನು ಒಗ್ಗೂಡಿಸಿ, ಹೋರಾಟಕ್ಕೆ ಅಣಿಗೊಳಿಸಲು ಪ್ರಬಲವಾದ ಯಾವ ಒಕ್ಕೂಟ-ಸಂಘಟನೆಗಳಿಲ್ಲ! ಆಂದೋಲನ ಹಮ್ಮಿಕೊಳ್ಳಲಿಕ್ಕಾಗಿಯೇ ಅವಧೂತನೊಬ್ಬ ಅವತರಿಸಬೇಕಾಗಿದೆ. ಆ ಅವಧೂತನಿಗೆ ಅಹಿಂದ ವರ್ಗಗಳು ಎದುರು ನೋಡುತ್ತಿವೆ. ಆ ಕಾಲ ಬರುವುದೆಂದು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)