varthabharthi

ಕರ್ನಾಟಕ

ಕೊಡವ ಬುಡಕಟ್ಟು ಜನಾಂಗದ ಹಕ್ಕೋತ್ತಾಯ: ಸಿಎನ್‍ಸಿಯಿಂದ ಧರಣಿ ಸತ್ಯಾಗ್ರಹ

ವಾರ್ತಾ ಭಾರತಿ : 13 Jul, 2019

ಮಡಿಕೇರಿ,ಜು.12: ಕೊಡವ ಬುಡಕಟ್ಟು ಜನಾಂಗದ ಪ್ರಧಾನ ಮೂರು ಹಕ್ಕೊತ್ತಾಯಗಳನ್ನು ಪರಿಗಣಿಸಲು ಪ್ರಸಕ್ತ ಪಾರ್ಲಿಮೆಂಟ್ ಅಧಿವೇಶನದಲ್ಲೇ ಸಂವಿಧಾನದ ತಿದ್ದುಪಡಿಗೆ ಮುಂದಾಗಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಕೊಡವರಿಗೆ ಬುಡಕಟ್ಟು ಕುಲದ ಸ್ಥಾನಮಾನ ಮತ್ತು ಕೊಡವ ಭಾಷೆಯನ್ನು ರಾಜ್ಯಾಂಗದ 8ನೇ ಪರಿಚ್ಛೇದಕ್ಕೆ ಸೇರಿಸಲು ಸಂವಿಧಾನ ತಿದ್ದುಪಡಿಗೆ ಮುಂದಾಗುವ ಮೂಲಕ ಕೊಡವ ಬುಡಕಟ್ಟು ಸೇರಿದಂತೆ ಭಾರತದ ವೈವಿಧ್ಯಮಯ ಜನಾಂಗೀಯ ಹೆಗ್ಗುರುತು ಮತ್ತು ಸಾಂಸ್ಕೃತಿಕ ಅನನ್ಯತೆಗಳನ್ನು ಕಾಪಾಡಿ ಪೋಷಿಸಿ ಸಂರಕ್ಷಿಸುವ ಸಲುವಾಗಿ ಸಂವಿಧಾನದ ಎಲ್ಲಾ ಆಶಯಗಳನ್ನು ಮತ್ತು ವಿಧಿಗಳನ್ನು ಸಾಕ್ಷಾತ್ಕರಿಸುವ ಹೊಸ ಹೆಜ್ಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಡಲಿದ್ದಾರೆ ಎಂದು ಪ್ರತಿಭಟನಾಕಾರರು ವಿಶ್ವಾಸ  ವ್ಯಕ್ತಪಡಿಸಿದರು.

ಮೋದಿಯವರು 2ನೇ ಬಾರಿ ಅಧಿಕಾರಕ್ಕೇರಿದ್ದು, ಸಂಸ್ಕೃತಿಯ ರಕ್ಷಣೆಗೆ ಪೂರಕವಾಗಿ ರಚಿಸಲ್ಪಟ್ಟಿರುವ ಶ್ರೇಷ್ಠ ಸಂವಿಧಾನದ ಎಲ್ಲಾ ಆಶಯಗಳನ್ನು ಕೊಡವರ ವಿಚಾರದಲ್ಲಿ ಚಾಚುತಪ್ಪದೆ ಪರಿಪಾಲಿಸುವರು ಎಂಬ ಅಚಲವಾದ ನಂಬಿಕೆ ಮತ್ತು ವಿಶ್ವಾಸ ನಮಗಿದೆ ಎಂದು ನಾಚಪ್ಪ ತಿಳಿಸಿದರು.

1956ರವರೆಗೆ  ಸರ್ವತಂತ್ರ ಸ್ವತಂತ್ರವಾಗಿ ಬಾಳಿದ ಕೊಡವ ಬುಡಕಟ್ಟು ಕುಲ ಮತ್ತವರ ತಾಯಿ ನೆಲ ಕೊಡಗು 1956ರ ರಾಜ್ಯ ಪುನರ್ಘಟನಾ ಕಾಯ್ದೆಯನ್ವಯ ವಿಶಾಲ ಮೈಸೂರು  (ಇಂದಿನ ಕರ್ನಾಟಕ) ರಾಜ್ಯಕ್ಕೆ ಸೇರ್ಪಡೆಗೊಂಡಿದ್ದು   ಈ ಘಟನೆ ಕೊಡವರ ಪಾಲಿಗೆ 20ನೇ ಶತಮಾನದ ಬಹುದೊಡ್ಡ ಭೂ-ರಾಜಕೀಯ ಉತ್ಪಾತವಾಗಿದೆ ಎಂದು ಅವರು ಟೀಕಿಸಿದರು.  

ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಜನರಾದ ಕೊಡಗಿನ ಆದಿಮ ಸಂಜಾತ ಕೊಡವ ಕುಲವನ್ನು ಪ್ರಜಾ ರಾಜ್ಯದಲ್ಲಿ ಸಮಾನ ಪಾಲುದಾರನಾಗಿ ಸ್ವೀಕರಿಸದೆ ಅವರನ್ನು ಕರ್ನಾಟಕದ ಅಧೀನ ಪ್ರಜೆಗಳನ್ನಾಗಿಯೂ, ಎರಡನೇ ದರ್ಜೆಯ ನಾಗರಿಕರನ್ನಾಗಿಯೂ ತಾರತಮ್ಯದಿಂದ ನಡೆಸಿಕೊಂಡು ಅವರ ತಾಯಿ ನೆಲ, ಜನ್ಮ ಭೂಮಿ ಕೊಡಗನ್ನು ಕರ್ನಾಟಕಕ್ಕೆ ಕಪ್ಪ ಒಪ್ಪಿಸುವ ಸಾಮಂತ ಪ್ರದೇಶ  ಪರಿಗಣಿಸಿ ಶೋಷಿಸುತ್ತಾ ಬರಲಾಗುತ್ತಿದೆ ಎಂದು ಅವರು ನಾಚಪ್ಪ ದೂರಿದರು.

ಕೊಡವ ಬುಡಕಟ್ಟು ಕುಲದ   ಅತಿ ಪ್ರಧಾನ ಹಕ್ಕೊತ್ತಾಯಗಳ ತುರ್ತು ಪರಿಗಣನೆಗೆ ಸಂವಿಧಾನ ತಿದ್ದುಪಡಿ ಕಸರತ್ತಿಗೆ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ನೂತನ ಎನ್.ಡಿ.ಎ ಸರ್ಕಾರ ಮುಂದಾಗಬೇಕೆಂದು ಅಗ್ರಹಿಸಿ ಕೊಡವರ ಧೀಶಕ್ತಿಯನ್ನು ಪುನರ್ ದಾಖಲಿಸಲು ಸಿ.ಎನ್.ಸಿ. ವತಿಯಿಂದ  2019 ರ ನವಂಬರ್ 1 ರಂದು ನವದೆಹಲಿ ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂಬಂಧ   ಪ್ರಧಾನಿ   ನರೇಂದ್ರಮೋದಿ,   ಕೇಂದ್ರ ಗೃಹ ಮಂತ್ರಿ   ಅಮಿತ್‍ಶಾ ರಾಷ್ಟ್ರಪತಿ   ರಮಾನಾಥ್ ಕೋವಿಂದ್, ಉಪರಾಷ್ಟ್ರಪತಿ  ಶ್ರೀ ವೆಂಕಯ್ಯನಾಯ್ಡು ಸೇರಿದಂತೆ ಹಲವು ಗಣ್ಯರಿಗೆ ಜಿಲ್ಲಾಡಳಿತದ ಮೂಲಕ ಜ್ಞಾಪನಾ ಪತ್ರವನ್ನು ಸಲ್ಲಿಸಲಾಯಿತು.

ಧರಣಿ ಸತ್ಯಾಗ್ರಹದಲ್ಲಿ   ಕಲಿಯಂಡ ಪ್ರಕಾಶ್, ಪುಳ್ಳಂಗಡ ನಟೇಶ್, ಜಮ್ಮಡ ಮೋಹನ್, ಅಜ್ಜಿಕುಟ್ಟಿರ ಲೋಕೇಶ್, ಕೊಂಗೇಟಿರ ಲೋಕೇಶ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಕಾಟುಮಣಿಯಂಡ ಉಮೇಶ್, ನಂದಿನೆರವಂಡ ವಿಜು, ಅಪ್ಪಾರಂಡ ಪ್ರಸಾದ್, ಕಿರಿಯಮಾಡ ಶರಿನ್, ಪುದಿಯೊಕ್ಕಡ ಕಾಶಿ, ಬೊಳಜಿರ ಅಯ್ಯಪ್ಪ, ಚಂಡಿರ ರಾಜ, ಕೂಪದಿರ ಸಾಬು, ಪುಲ್ಲೆರ ಕಾಳಪ್ಪ, ಚೇರಂಡ ಸುಭಾಷ್ ಮತ್ತು ಕಲಿಯಂಡ ರವಿ ಪಾಲ್ಗೊಂಡಿದ್ದರು.

ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಸಿ.ವಿ ಪ್ರತಿಭಟನಾಕಾರರಿಂದ  ಮನವಿ ಪತ್ರ ಸ್ವೀಕರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)