varthabharthi

ಸುಗ್ಗಿ

ಲಂಕೆ ಹಾರಿಸಿದ ರಾವಣ

ವಾರ್ತಾ ಭಾರತಿ : 13 Jul, 2019
ಶ್ರುತಿಸಾಗರ್ ಯಮುನನ್

ಅಕಾಡಮಿಕ್ ವಲಯಗಳು ಮತ್ತು ಇತಿಹಾಸಕಾರರಿಗಿಂತ ಹೆಚ್ಚಾಗಿ ಜನಪ್ರಿಯ ಸಿಂಹಳೀಯ ಸಂಸ್ಕೃತಿಯಲ್ಲಿ ರಾವಣನ ವ್ಯಕ್ತಿತ್ವ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಮಾಯಣದಲ್ಲಿ ವಾದಿಸಲಾಗಿರುವ ಹಲವಾರು ಸಂಗತಿ, ಘಟನೆಗಳಿಗೆ ಲೌಕಿಕ/ ಭೌತಿಕವಾದ ಯಾವುದೇ ಪುರಾವೆ ಇಲ್ಲದಿರುವುದೇ ಇದಕ್ಕೆ ಕಾರಣ.

ಕೆಲವು ಸಿಂಹಳ ಬೌದ್ಧರಿಗೆ ರಾವಣನು ಭಾರತೀಯ ಸಾಂಸ್ಕೃತಿಕ ಯಜಮಾನಿಕೆಗೆ ಎಸೆಯುವ ಸವಾಲಿನ ಒಂದು ಸಂಕೇತ.

ಜೂನ್19ರಂದು ಶ್ರೀಲಂಕಾ ತನ್ನ ಮೊದಲ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಶ್ರೀಲಂಕಾ ಸರಕಾರ ಮತ್ತು ಎಲ್‌ಟಿಟಿಈ (ಲಿಬರೇಶನ್ ಟೈಗರ್ಸ್‌ ಆಫ್ ತಮಿಳು ಈಳಂ) ನಡುವೆ ಸುಮಾರು ನಾಲ್ಕು ದಶಕಗಳ ಕಾಲ ನಡೆದ ಅಂತರ್ ಯುದ್ಧದ ಬಳಿಕ ಈ ಸಾಧನೆ ಶ್ರೀಲಂಕಾದ ಪಾಲಿಗೆ ಒಂದು ಮೈಲಿಗಲ್ಲು. ಆದರೆ ಆ ಉಪಗ್ರಹ ಕೇವಲ ತಾಂತ್ರಿಕ ಮಹತ್ವಾಕಾಂಕ್ಷೆಯ ಈಡೇರಿಕೆಯಷ್ಟೇ ಆಗಿರಲಿಲ್ಲ. ಅದು ಒಂದು ಸಾಂಸ್ಕೃತಿಕ ಆಕಾಂಕ್ಷೆಯ ಅಭಿವ್ಯಕ್ತಿಯೂ ಆಗಿತ್ತು.

ಶ್ರೀಲಂಕಾ ತಾನು ಬಾಹ್ಯಾಕಾಶಕ್ಕೆ ಕಳುಹಿಸಿದ ಉಪಗ್ರಹವನ್ನು ‘ರಾವಣ 1’ ಎಂದು ಹೆಸರಿಸಿತು. ವಾಲ್ಮೀಕಿ ರಾಮಾಯಣ ಮುಖ್ಯಧಾರೆಯ ಓದಿದಷ್ಟೆ ಸೀಮಿತರಾದ ಬಹುಪಾಲು ಭಾರತೀಯರ ಪಾಲಿಗೆ ರಾವಣನೆಂದರೆ ಶ್ರೀ ರಾಮ ನಿಂದ ಹತನಾದ ಓರ್ವ ಕೆಟ್ಟ, ದುರುಳ ರಾಜ ಆದರೆ ಎ.ಕೆ ರಾಮಾನುಜನ್‌ರಂತಹ ವಿದ್ವಾಂಸರು ಗುರುತಿಸಿರುವ ಹಾಗೆ ಭಾರತದ ಒಳಗಡೆಯೇ ರಾಮಾಯಣದ ನೂರಾರು ಆವೃತ್ತಿ (ವರ್ಶನ್)ಗಳಿವೆ; ಇವುಗಳಲ್ಲಿ ಕೆಲವು ರಾಮಾಯಣಗಳು ವಾಲ್ಮೀಕಿ ಬರೆದದ್ದು ಎನ್ನಲಾದ ರಾಮಾಯಣಕ್ಕಿಂತ ಭಾರೀ ಭಿನ್ನವಾಗಿವೆ. ಕಳೆದ 2500 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ದಕ್ಷಿಣ ಮತ್ತು ದಕ್ಷಿಣಪೂರ್ವ ಏಶ್ಯಾದಲ್ಲಿ ರಾಮಾಯಣಗಳ ಸಂಖ್ಯೆ ಮತ್ತು ಅವುಗಳ ಪ್ರಭಾವದ ವಿಸ್ತಾರ ಆಶ್ಚರ್ಯ ಹುಟ್ಟಿಸುತ್ತದೆ’’ ಎನ್ನುವ ರಾಮಾನುಜನ್, ಸಿಂಹಳೀಯ ಭಾಷೆಯೂ ಸೇರಿದಂತೆ ಕನಿಷ್ಠ 22 ಭಾಷೆಗಳಲ್ಲಿ ರಾಮಾಯಣ ಲಭ್ಯವಿರುವುದನ್ನು ಉದಾಹರಿಸುತ್ತಾರೆ. ಸಿಂಹಳೀಯ ಭಾಷೆಯಲ್ಲಿ ರಾಮಾಯಣ ಕಥೆಯನ್ನು ಮತ್ತೊಮ್ಮೆ ಹೇಳಲಾಗಿದೆ. ಆದರೂ ಕೂಡ, ಶ್ರೀಲಂಕಾದಲ್ಲಿ ಬಹುಸಂಖ್ಯಾತರಾಗಿರುವ ಸಾಂಪ್ರದಾಯಿಕ ಸಿಂಹಳ-ಬೌದ್ಧರಿಗೆ ರಾಮಾಯಣದಲ್ಲಿ ರಾವಣ ಚಿತ್ರಿತನಾಗಿರುವ ರೀತಿ ಬಗ್ಗೆ ಸಮಾಧಾನವಿಲ್ಲ. ರಾಮಾಯಣದಲ್ಲಿ ಚಿತ್ರಿತವಾಗಿರುವ ಯುದ್ಧರಂಗಭೂಮಿ ಮತ್ತು ಆಧುನಿಕ ಶ್ರೀಲಂಕಾದ ಪರಿಸ್ಥಿತಿಯ ಹೊಂದಾಣಿಕೆ ಹಿನ್ನೆಲೆಯಲ್ಲಿ, ತನಗೆ ಗತ ಶ್ರೀಲಂಕಾದ ಪರಾಕ್ರಮದ ವೈಭವವನ್ನು ಆರೋಪಿಸ ಬಯಸುವ ಜನ ಸಮುದಾಯ ಒಂದು ವರ್ಗವು ರಾವಣನನ್ನು ಶ್ರೇಷ್ಠ ಆದರ್ಶಗಳ ಹಾಗೂ ವೌಲ್ಯಗಳ ಒಬ್ಬ ದೊರೆಯಾಗಿ ಪುನರ್ ಚಿತ್ರಿಸ ಬಯಸುತ್ತದೆ. ಈ ಚಿತ್ರಣದ, ಮರು ಎರಕದ ಕಥಾನಕದ ಪ್ರಕಾರ ರಾವಣ ಯುದ್ಧದಲ್ಲಿ ಸೋಲುವುದಕ್ಕೆ ಅವನ ಸಂಚುಕೋರ ಸಹೋದರ ವಿಭೀಷಣ ರಾಮನಿಗೆ ನೆರವು ನೀಡಿದ್ದು, ಕಾರಣವೇ ಹೊರತು ಬೇರೇನೂ ಅಲ್ಲ.

 1980ರ ದಶಕದಲ್ಲಿ ಭಾರತೀಯ ಶಾಂತಿ ಪಾಲಾನಾ ಪಡೆ ಶ್ರೀಲಂಕಾಕ್ಕೆ ಬಂದು ಇಳಿಯುವುದರೊಂದಿಗೆ ರಾವಣನನ್ನು ಒಬ್ಬ ರಾಷ್ಟ್ರೀಯ ಹೀರೊ ಆಗಿ ಪುನರ್ ರೂಪಿಸುವ ಪ್ರಯತ್ನಗಳು ಚುರುಕುಗೊಂಡವು. ದೇಶದ ಆಂತರಿಕ ಸಂಘರ್ಷದಲ್ಲಿ ಭಾರತ ಮಧ್ಯ ಪ್ರವೇಶಿಸಿತೆಂದು ಹಲವರು ಆಗ ಪರಿಗಣಿಸಿದರು. ಈಗ ಶ್ರೀಲಂಕಾ ತನ್ನ ಮೊದಲ ಉಪಗ್ರಹಕ್ಕೆ ರಾವಣ ಎಂಬ ಹೆಸರಿಡುವುದರೊಂದಿಗೆ ಪೌರಾಣಿಕ ದೊರೆಯೊಬ್ಬನನ್ನು ಒಂದು ರಾಜಕೀಯ ಸಂಕೇತವಾಗಿಸುವ ರೂಪಾಂತರ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ.

ಸಿಂಹಳ-ಬೌದ್ಧರು ಮತ್ತು ರಾವಣ

5ನೇ ಶತಮಾನದಲ್ಲಿ ಬೌದ್ಧ ಭಿಕ್ಷುಗಳು ಅನುರಾಧಾಪುರದಲ್ಲಿ ಪಾಲಿ ಭಾಷೆಯಲ್ಲಿ ಬರೆದ ಮಹಾಕಾವ್ಯ ‘ಮಹಾವಂಸ ಶತಮಾನಗಳ ಕಾಲ ಶ್ರೀಲಂಕಾದ ವಿವಾದಾತೀತ ಸಾಂಸ್ಕೃತಿಕ ಬುನಾದಿಯಾಗಿ ಉಳಿದಿತ್ತು. ಆ ಐತಿಹಾಸಿಕ ಮಹಾಕಾವ್ಯವು ಭಾರತದ ಕಳಿಂಗದಿಂದ ರಾಜಕುಮಾರ ವಿಜಯ ಶ್ರೀಲಂಕಾಕ್ಕೆ ಬಂದು ಅಲ್ಲಿ ತನ್ನ ಆಳ್ವಿಕೆಯನ್ನು ಸ್ಥಾಪಿಸಿದ, ಮತ್ತು ಆ ಬಳಿಕ ರಾಜರ ಹಲವಾರು ತಲೆಮಾರುಗಳು ಆ ದ್ವೀಪವನ್ನು ಆಳಿದ ಕತೆಯನ್ನು ಹೇಳುತ್ತದೆ.

ಮಹಾವಂಸ ಮಹಾಕಾವ್ಯವು 20ನೇ ಶತಮಾನದಲ್ಲಿ ಸಿಂಹಳೀಯರ ನಡುವೆ ಒಂದು ಒಡಕು ಮೂಡುವವರೆಗೆ ಅಲ್ಲಿಯ ಜನತೆಯ ಸಾಂಸ್ಕೃತಿಕ ಕಥಾನಕದಲ್ಲಿ ಪ್ರಾಬಲ್ಯ ಪಡೆದಿತ್ತು. ಸಿಂಹಳೀಯರು ಭಾರತೀಯ ಮೂಲದವರು ಎಂಬ ಕತೆಯನ್ನು ವಿರೋಧಿಸಿದ ಒಂದು ವರ್ಗವು ಶ್ರೀಲಂಕಾದ ಒಳಗಡೆಯೇ ತಮ್ಮ ಮೂಲ ಇದೆಯೆಂದು ವಾದಿಸಿದರು. 1940ರ ದಶಕದಲ್ಲಿ ಸಿಂಹಳೀಯರ ಹಾಗೂ ತಮಿಳರ ನಡುವಿನ ಜನಾಂಗೀಯ ತಿಕ್ಕಾಟ ತೀವ್ರಗೊಂಡ ಬಳಿಕ ಅಂಥ ಒಂದು ಕಲ್ಪನೆ ಮತ್ತಷ್ಟು ಗಂಭೀರವಾಯಿತು. ಸಿಂಹಳೀಯರು ತಾವು ದ್ವೀಪದ ಮೂಲ ನಿವಾಸಿಗಳೆಂದು ಸಾಬೀತುಪಡಿಸ ಬಯಸಿದರು. ಇತಿಹಾಸಕಾರರ ಪ್ರಕಾರ ಎಂತಹ ಮೂಲನಿವಾಸಿ ಕಥಾನಕಗಳ ಆರಂಭದೊಂದಿಗೆ ರಾವಣ ಸಿಂಹಳದ ಜನಪ್ರಿಯ ಸಂವಾದಗಳ ಕೇಂದ್ರ ಬಿಂದುವಿಗೆ ಬಂದ.

ಈ ತಥಾಕಥಿತ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಯ ನಾಯಕರಲ್ಲಿರೊಬ್ಬರು. ಕುಮಾರ ತುಂಗ ಮುನಿದಾಸ. ಇವರು 1941ರಲ್ಲಿ ‘ಹೆಲಾ ಹಲುವಾ’ ಎಂಬ ಸಾಹಿತ್ಯ ಸಂಘಟನೆಯನ್ನು ಸ್ಥಾಪಿಸಿದರು. ಸಿಂಹಳ ಭಾಷೆಯನ್ನು ಬಾಹ್ಯ ಪ್ರಭಾವಗಳಿಂದ ಮುಕ್ತ ಗೊಳಿಸುವುದು ಸಂಘಟನೆ ಗುರಿಯಾಗಿತ್ತು. ರಾವಣ ಮಿಥ್ಯೆಯ ಪುನರ್ ಕಲ್ಪನೆಯಲ್ಲಿ ಇದು ಮುಖ್ಯ ಪಾತ್ರ ವಹಿಸಿತ್ತು. ಅರಿಸನ್ ಅಂತು ಬಂದು ರಂತಹ ಸಂಘಟನೆಯ ಸದಸ್ಯರು 1980ರ ದಶಕದಲ್ಲಿ ರಾವಣನನೋರ್ವ ಸಿಂಹಳ ಹೀರೋ ಆಗಿ ಮಾಡಲೂ ‘ರಾವಣ ವಲಿಯ’ದಂತಹ ಕೃತಿಗಳನ್ನು ರಚಿಸಿದರು.

ಕೊಲಂಬೊ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಉಪನ್ಯಾಸಕರಾಗಿರುವ ನಿರ್ಮಲ್ ರಂಜಿತ್ ದೇವಸಿರಿಯವರ ಪ್ರಕಾರ ಸಿಂಹಳ ಬೌದ್ಧರ ಒಂದು ವರ್ಗದ ಒಳಗಡೆಯೇ ಭಾರತ ವಿರೋಧಿಯಾದ ಒಂದು ಭಾವನೆ ಯಾವಾಗಲೂ ಇತ್ತು. ರಾವಣ ಮಿತ್‌ನ ಪುನರ್‌ರಚನೆಯು ಭಾರತ ವಿರೋಧಿಯಾದ ಭಾವನೆಯ ಮತ್ತು ಭಾರತದ ಸಾಂಸ್ಕೃತಿಕ ಯಜಮಾನಿಕೆಯ ಚೌಕಟ್ಟಿಗೆ ಹೊಂದಿಕೊಳ್ಳುತ್ತದೆ.

ಶ್ರೀಲಂಕಾದ ತಮಿಳರ ಸಮಸ್ಯೆಯಲ್ಲಿ ಭಾರತ ಮಧ್ಯಪ್ರದೇಶಿಸಿದಾಗ ಈ ಭಾರತ ವಿರೋಧಿ ಭಾವನೆ ಬಲಗೊಂಡಿತ್ತು. 1987ರಲ್ಲಿ ಭಾರತೀಯ ಶಾಂತಿ ಪಾಲನಾ ಪಡೆ (ಐಪಿಕೆಎಫ್) ಶ್ರೀಲಂಕಾದಲ್ಲಿ ಬಂದಿಳಿದಾಗ ಈ ಭಾವನೆ ಪರಾಕಾಷ್ಠೆ ತಲುಪಿತು. ಇದನ್ನು ಕೆಲವು ಬೌದ್ಧರು ಸಿಂಹಳ ಭೂ ಪ್ರದೇಶವನ್ನು ಉಲ್ಲಂಘಿಸುವ ಭಾರತದ ಪ್ರಾಚೀನ ಬಯಕೆಯ ಮುಂದುವರಿಕೆ ಎಂದು ಭಾವಿಸಿದರು. ಮಹಾವಂಸದ ಪ್ರಸಿದ್ಧ ಕತೆಗಳಲ್ಲಿ ವಿಜೇತ ಪುತ್ರನ ಕದನವೂ ಒಂದು. ಈ ಕತೆಯಲ್ಲಿ ಶ್ರೀಲಂಕಾದ ರಾಜ ದತ್ತಗಮನಿ ದಕ್ಷಿಣ ಭಾರತದ ರಾಜನಾದ ಇಲ್ಲಾಲನ್‌ನನ್ನು ಸೋಲಿಸುತ್ತಾನೆ.

ವಾನರ ಸೇನೆ

ಭಾರತೀಯ ಶಾಂತಿ ಪಾಲನಾ ಪಡೆ ಶ್ರೀಲಂಕಾದಲ್ಲಿ ಕಾರ್ಯಾ ಚರಿಸಿದಾಗ ಭಾರತೀಯ ಸೈನಿಕರನ್ನು ವಾನರ ಸೇನೆ ಎಂದು ಕರೆದು ಜನತಾ ವಿಮುಕ್ತಿ ಪೆರುಮನ ಭಿತ್ತಿಪತ್ರಗಳನ್ನು ಅಂಟಿಸಿತು. ಇದು 1987ರಲ್ಲಿ ಐಪಿಕೆಎಫ್ ವಿರುದ್ಧ ಇದ್ದ ಸಿಂಹಳೀಯರ ಭಾವನೆ ಗಳನ್ನು ಬಳಸಿಕೊಂಡು ಸರಕಾರದ ವಿರುದ್ಧ ದಂಗೆ ಹೂಡಿತ್ತು. ಆದರೆ ಪೆರದೆನಿಯಾ ವಿಶ್ವವಿದ್ಯಾನಿಲಯದಲ್ಲಿ ಓರ್ವ ಉಪನ್ಯಾಸಕರಾಗಿರುವ ನಂದಕ ಮದುರಂಗ ಕಲುಗಂಪಿಯಾ 2015ರಲ್ಲಿ ಬರೆದ ಒಂದು ಪ್ರಬಂಧದಲ್ಲಿ ರಾವಣನನ್ನು ಸಿಂಹಳೀಯರ ಒಂದು ಐಕಾನ್(ಹೀರೊ)ಆಗಿ ವೈಭವೀಕರಿಸುವುದನ್ನು ಪ್ರಶ್ನಿಸಿದ್ದರು. ‘‘ಬೌದ್ಧ ಧರ್ಮ ಮತ್ತು ಸಿಂಹಳೀಯರ ಜನಾಂಗೀಯತೆಗೆ ಮೊದಲೇ ರಾವಣನ ಕತೆ ಬರುವುದರಿಂದ ಸಿಂಹಗಳ ಬುದ್ಧ ಧರ್ಮದೊಂದಿಗೆ ರಾವಣನನ್ನು ಜೋಡಿಸುವುದು ಸಮಸ್ಯಾತ್ಮಕವಾಗುತ್ತದೆ. ಕ್ರಿಸ್ತಪೂರ್ವ 6ನೇ ಶತನಮಾನದಲ್ಲಿ ಗೆಳೆಯರ ಒಂದು ತಂಡದೊಂದಿಗೆ ಇಂದು ಶ್ರೀಲಂಕಾ ಎಂದು ಕರೆಯಲ್ಪಡುತ್ತಿರುವ ಭೂಪ್ರದೇಶಕ್ಕೆ ಬಂದಿದ್ದ ರಾಜಕುಮಾರ ವಿಜಯನನ್ನು ಸಿಂಹಳ ಜನಾಂಗೀಯ ಅನನ್ಯತೆಯ ಸ್ಥಾಪಕನೆಂದು ಹೇಳಲಾಗುತ್ತದೆ’’. ಈ ಅನನ್ಯತೆಯ ಮೂಲವನ್ನು ಪ್ರಶ್ನಿಸಲಾಗಿದೆಯಾದರೂ ವಿಜಯ, ಸಿಂಹಳ ಅನನ್ಯತೆಯ ಮೂಲ ಪುರುಷ, ಸ್ಥಾಪಕ ಎಂಬ ವಾದ ಸಿಂಧುವಾಗಿಯೇ ಉಳಿದಿದೆ, ಎನ್ನುತ್ತಾರೆ ಕಲುಗಂಪಿತಿಯಾ.

2009ರಲ್ಲಿ ಎಲ್‌ಟಿಟಿಇಯನ್ನು ಸೋಲಿಸಿದ ಬಳಿಕ, ಯುದ್ಧೋತ್ತರ ಶ್ರೀಲಂಕಾದಲ್ಲಿ, ಯುದ್ಧದ ಗೆಲುವು, ದಿಗ್ವಿಜಯದ ಭಾವನೆ ರಾವಣನ ಮಿತ್‌ಗೆ ಇನ್ನಷ್ಟು ಪುಷ್ಠಿ ನೀಡಿತು. ತಿರ್‌ಬುಗನ್ ವಿಶ್ವವಿದ್ಯಾನಿಲಯದ ಡೆಬೊರಾ ಡೆ ಕೊನಿಂಗ್ ಇದನ್ನು ‘‘ರಾವಣೀಕರಣ’’(ರಾವಣ್‌ಲೈಸೇಶನ್) ಎಂದು ಕರೆದಿದ್ದಾರೆ. ಇದು ರಾವಣನನ್ನು ಕೇವಲ ಶ್ರೀಲಂಕಾದ ಅತ್ಯಂತ ಪ್ರಸಿದ್ಧ ರಾಜನಷ್ಟೇ ಅಲ್ಲ. ಬದಲಾದ ಒಂದು ಪ್ರಾಚೀನ ಹಾಗೂ ದೇಶೀಯ ರಾಜನೆಂದು ಚಿತ್ರಿಸುವ ಒಂದು ರೀತಿಯ ಸಾಂಸ್ಕೃತಿಕ ಪುನರ್‌ನವೀಕರಣ, ಪುನರ್‌ಶಕ್ತೀಕರಣ. ಇದು ಸಿಂಹಳೀಯರ ಬೌದ್ಧರಲ್ಲಿ ಜನಪ್ರಿಯ ಪುಸ್ತಕಗಳ ಹಾಗೂ ಲೇಖನಗಳ ಪ್ರಕಟನೆ, ಟಿವಿ ಹಾಗೂ ರೇಡಿಯೋ ಕಾರ್ಯಕ್ರಮಗಳ ನಿರ್ಮಾಣ, ಹಾಡುಗಳು ಮತ್ತು ರಾವಣನ ಪ್ರತಿಮೆಗಳ ಸ್ಥಾಪನೆಯಂತಹ ಹಲವು ರೀತಿಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಶ್ರೀಲಂಕಾದ ಕರಾಟೆ ಕಲೆಯಾದ ಅಂಗಂಪೋರಾಕ್ಕೆ ಉತ್ತೇಜನ ನೀಡುವ ಮೂಲಕ ಕೂಡ ರಾವಣನ ಪುನರ್‌ಶಕ್ತೀಕರಣ ನಡೆಸಲಾಗುತ್ತಿದೆ, ಎಂದಿದ್ದಾರೆ ದೇವಸಿರಿ.

ಅಕಾಡಮಿಕ್ ವಲಯಗಳು ಮತ್ತು ಇತಿಹಾಸಕಾರರಿಗಿಂತ ಹೆಚ್ಚಾಗಿ ಜನಪ್ರಿಯ ಸಿಂಹಳೀಯ ಸಂಸ್ಕೃತಿಯಲ್ಲಿ ರಾವಣನ ವ್ಯಕ್ತಿತ್ವ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಮಾಯಣದಲ್ಲಿ ವಾದಿಸಲಾಗಿರುವ ಹಲವಾರು ಸಂಗತಿ, ಘಟನೆಗಳಿಗೆ ಲೌಕಿಕ/ ಭೌತಿಕವಾದ ಯಾವುದೇ ಪುರಾವೆ ಇಲ್ಲದಿರುವುದೇ ಇದಕ್ಕೆ ಕಾರಣವೆನ್ನುವ ದೇವಸಿರಿ, ‘‘ರಾಮಾಯಣದಲ್ಲಿ ಬರುವ ಲಂಕೆ ನಿಜವಾಗಿಯೂ ಇಂದಿನ ಶ್ರೀಲಂಕಾ ಹೌದೇ ಎನ್ನುವ ಬಗ್ಗೆ ಇತಿಹಾಸಕಾರರಲ್ಲಿ ಮೂಲಭೂತವಾದ ಒಂದು ಭಿನ್ನಾಭಿಪ್ರಾಯವಿದೆ. ಇಂತಹ ಅನುಮಾನಗಳ ಹೊರತಾಗಿಯೂ ಶ್ರೀಲಂಕಾ ದಲ್ಲಿರುವ ಹಲವು ಸ್ಥಳಗಳನ್ನು ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ಸ್ಥಳಗಳೆಂದು ಗುರುತಿಸಲಾಗಿದೆ’’ ಎನ್ನುತ್ತಾರೆ.

ಸಿಂಹಳ, ರಾವಣ ಮತ್ತು ಭಾರತ. ಪರಸ್ಪರ ವಿರುದ್ಧವಾಗಿರುವ ಎರಡು ರಾಜಕೀಯ ಶಕ್ತಿಗಳಿಗೆ ರಾವಣ ಸಮಾನ ರೀತಿಯಲ್ಲಿ ಆಕರ್ಷಕನಾಗಿರುವುದು ಪ್ರಾಯಶಃ ಅತ್ಯಂತ ದೊಡ್ಡ ವ್ಯಂಗ್ಯ: ತಮಿಳುನಾಡಿನ ದ್ರಾವಿಡ ಚಳವಳಿ ಮತ್ತು ಶ್ರೀಲಂಕಾದ ಸಿಂಹಳ-ಬೌದ್ಧರು. ತಮಿಳುನಾಡಿನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್ ಅಣ್ಣಾ ದೊರೈಯಂತಹ ನಾಯಕರು ರಾವಣನನ್ನು ಒಬ್ಬ ಆರ್ಯನ್ ದೊರೆಯಿಂದ ಅನ್ಯಾಯಕ್ಕೊಳಗಾದ ಒಬ್ಬ ದ್ರಾವಿಡ ದೊರೆ ಎಂದು ಚಿತ್ರಿಸಿದರು. ಇದನ್ನು ತಮಿಳುನಾಡಿನಲ್ಲಿ ಆರ್ಯನ್ ದಾಳಿಯ ವಾದವನ್ನು ಬೆಳೆಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು.

ರಾಮಾಯಣಕ್ಕೆ ಐತಿಹಾಸಿಕ ಪುರಾವೆಗಳ ಕೊರತೆ ಇದೆ ಎಂದರೆ ವಿಭಿನ್ನ ಸಂದರ್ಭಗಳಲ್ಲಿ ಅದು ವಿವಿಧ ರೀತಿಯ ಅರ್ಥ ವಿವರಣೆಗಳಿಗೆ ಮುಕ್ತವಾಗಿದೆ ಎಂದೇ ಅರ್ಥ.

ಉಪಗ್ರಹವೊಂದಕ್ಕೆ ರಾವಣನ ಹೆಸರಿಡುವುದೆಂದರೆ ಅದನ್ನು ಭಾರತದ ವಿರೋಧ ಕಟ್ಟಿಕೊಳ್ಳುವ ಒಂದು ಪ್ರಯತ್ನವೆಂದು ಪರಿಗಣಿಸಬಹುದೇ?

ಹಲವು ಹಿಂದುಗಳಿಗೆ, ನಿರ್ದಿಷ್ಟವಾಗಿ ಬಿಜೆಪಿಗೆ, ರಾಮ ಭಕ್ತಿ ಹಾಗೂ ಗೌರವದ ಪ್ರತೀಕ, ಪ್ರತಿರೂಪ. ರಾಮ ಬಿಜೆಪಿ ಅಧಿಕಾರಕ್ಕೆ ಬರುವುದರ ಬುನಾದಿಯಾಗಿದ್ದಾನೆ. ಅದೇನಿದ್ದರೂ, ಭಾರತ ಮತ್ತು ಶ್ರೀಲಂಕಾ ನಡುವೆ ಆಳವಾದ ಸಾಂಸ್ಕೃತಿಕ, ಆರ್ಥಿಕ ಹಾಗೂ ಭೌಗೋಳಿಕ ಸಂಬಂಧವಿದೆ. ಎರಡೂ ದೇಶಗಳ ಸರಕಾರಗಳು ರಾಜತಾಂತ್ರಿಕ ಸಂಬಂಧಗಳ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ದೂರ ಇಡಲು ಪ್ರಯತ್ನಿಸಿವೆ. ಆದರೂ ಉಪಗ್ರಹವೊಂದಕ್ಕೆ ರಾವಣನ ಹೆಸರಿಡುವುದಕ್ಕೆ ಒಂದು ಸಾಂಕೇತಿಕ ವೌಲ್ಯವಿದೆ ಎನ್ನುತ್ತಾರೆ ದೇವಸಿರಿ.

                  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)