varthabharthi


ವಿಶೇಷ-ವರದಿಗಳು

ಇಲೆಕ್ಟ್ರಿಕ್ ಕಾರುಗಳ ಕುರಿತು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ

ವಾರ್ತಾ ಭಾರತಿ : 13 Jul, 2019

  ವಿದ್ಯುತ್ ಚಲನಶೀಲತೆ ಅನಿವಾರ್ಯ. ತಾಪಮಾನ ಹೆಚ್ಚಳ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಇಡೀ ವಿಶ್ವವೇ ಒಂದಾಗಿ ಹೋರಾಡುತ್ತಿರುವಾಗ ಜನರು ಮತ್ತು ಚಲನಶೀಲ ವಸ್ತುಗಳ ಭವಿಷ್ಯವು ವಿದ್ಯುತ್ತನ್ನೇ ಆಧರಿಸಲಿದೆ. ಭವಿಷ್ಯವು ವಿದ್ಯುತ್ ಚಾಲಿತ ಅಥವಾ ಇಲೆಕ್ಟ್ರಿಕ್ ವಾಹನಗಳದ್ದಾಗಲಿದೆ. ಹುಂಡೈ ಕೋನಾ ಇವಿ ಎಸ್‌ಯುವಿ ಇತ್ತೀಚಿಗೆ ಭಾರತದಲ್ಲಿ ಬಿಡುಗಡೆಗೊಂಡಿದೆ,ತನ್ಮೂಲಕ ದೇಶದ ಮೊದಲ ಸರ್ವವಿದ್ಯುತ್ ವಾಹನ ಅಸ್ತಿತ್ವಕ್ಕೆ ಬಂದಿದೆ. ಇದು ಹೊಸಯುಗದ ಆರಂಭವನ್ನು ಸೂಚಿಸುತ್ತಿದೆ. ಅದರೆ ಇಂಜಿನ್‌ನಿಂದ ಮೋಟರ್‌ಗೆ ಬದಲಾಗುವ ಹೊಸ ರೂಪದ ಚಲನಶೀಲತೆಯನ್ನು ಭಾರತೀಯರು ಒಪ್ಪಿಕೊಳ್ಳಲು ಕಾಲಾವಕಾಶ ಬೇಕಾಗಬಹುದು. ಇಲೆಕ್ಟ್ರಿಕ್ ವಾಹನಗಳು ಅಥವಾ ಇ-ವೆಹಿಕಲ್‌ಗಳ ಕುರಿತು ಬೇರೂರಿರುವ ಕೆಲವು ಮಿಥ್ಯೆಗಳು ಜನರು ಅವುಗಳನ್ನು ಖರೀದಿಸಲು ಹಿಂದೇಟು ಹಾಕುವಂತೆ ಮಾಡಲಿವೆ. ಅಂತಹ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ,ಓದಿಕೊಳ್ಳಿ.....

► ಸ್ಮಾರ್ಟ್‌ಫೋನ್‌ಗಳಂತೆ ಇ-ಕಾರುಗಳ ಬ್ಯಾಟರಿಯ ಜೀವಿತಾವಧಿ ಕ್ರಮೇಣ ಕ್ಷೀಣಿಸುತ್ತದೆ

ಕಾಲಕ್ರಮೇಣ ಸ್ಮಾರ್ಟ್‌ಪೋನ್‌ನ ಬ್ಯಾಟರಿಯ ಕ್ಷಮತೆ ಕುಂಠಿತಗೊಳ್ಳುತ್ತದೆ ಮತ್ತು ಇ-ವಾಹನಗಳು ಹಾಗೂ ಸ್ಮಾರ್ಟ್ ಫೋನ್‌ಗಳಲ್ಲಿ ಒಂದೇ ಬಗೆಯ ಲಿಥಿಯಂ-ಅಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ ಎನ್ನುವುದು ನಿಜ. ಆದರೆ ಬ್ಯಾಟರಿ ತಂತ್ರಜ್ಞಾನವು ಈಗ ಹೆಚ್ಚು ಮುಂದುವರಿದಿದೆ ಮತ್ತು ಪ್ರತಿ ವರ್ಷವೂ ಹೆಚ್ಚಿನ ಸುಧಾರಣೆಗಳಾಗುತ್ತಿವೆ. ಇ-ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್ ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯಾಟರಿಗೆ ಹೋಲಿಸಿದರೆ ತುಂಬ ದೊಡ್ಡದಾಗಿರುತ್ತದೆ ಮತ್ತು ಅದರ ಮೇಲೆ ಕಾಲದ ಪರಿಣಾಮವು ಅತ್ಯಂತ ಕನಿಷ್ಠವಾಗಿರುತ್ತದೆ. ಹುಂಡೈ ತನ್ನ ಕೋನಾ ಇವಿಯ ಬ್ಯಾಟರಿ ಪ್ಯಾಕ್‌ನ ಮೇಲೆ ಎಂಟು ವರ್ಷಗಳ ವಾರಂಟಿಯನ್ನು ನೀಡುತ್ತಿದೆ ಎನ್ನ್ನುವುದು ಈ ಬ್ಯಾಟರಿಗಳ ಕ್ಷಮತೆಯನ್ನು ಸೂಚಿಸುತ್ತದೆ.

► ಇಲೆಕ್ಟ್ರಿಕ್ ವಾಹನಗಳು ಸುರಕ್ಷಿತವಲ್ಲ,ಬ್ಯಾಟರಿ ಪ್ಯಾಕ್‌ಗೆ ಬೆಂಕಿ ಹತ್ತಿಕೊಳ್ಳಬಹುದು

ಈಗ ಚಾಲ್ತಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಲ್ಲಿಯ ಇಂಜಿನ್‌ಗಳಲ್ಲಿ ಅತ್ಯಂತ ದಹನಶೀಲ ಇಂಧನಗಳು ಹರಿಯುತ್ತಿರುತ್ತವೆ,ಆದರೆ ಅವುಗಳಿಗೆ ಬೆಂಕಿ ಹತ್ತುತ್ತದೆ ಎನ್ನುವುದನ್ನು ನಾವು ಸುಲಭದಲ್ಲಿ ನಂಬುವುದಿಲ್ಲ. ಚೀನಾದಲ್ಲಿ ರೀಚಾರ್ಜ್‌ಗಿಟ್ಟಾಗ ಕೆಲವು ಇಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹತ್ತಿಕೊಂಡ ಘಟನೆಗಳಿವೆಯಾದರೂ ಇಲೆಕ್ಟ್ರಿಕ್ ಕಾರುಗಳು ಬ್ಯಾಟರಿ ಪ್ಯಾಕ್ ಮತ್ತು ವಿದ್ಯುತ್ ಮೋಟರ್‌ಗಳು ಹೆಚ್ಚು ಬಿಸಿಯಾಗದೆ ಉತ್ತಮವಾಗಿ ಕಾರ್ಯ ನಿರ್ವಹಿಸುವಂತಾಗಲು ಅತ್ಯಾಧುನಿಕ ಶೀತಲೀಕರಣ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಇಲೆಕ್ಟ್ರಿಕ್ ಕಾರಿಗೆ ಬೆಂಕಿ ಹತ್ತಿಕೊಂಡರೆ ಅದು ನಂದಲು ದಿನಗಳನ್ನೇ ತೆಗೆದುಕೊಳ್ಳುತ್ತದೆ ಎನ್ನುವುದು ನಿಜ.

►ಇಲೆಕ್ಟ್ರಿಕ್ ಕಾರುಗಳು ಶಬ್ದರಹಿತವಾಗಿವೆ ಮತ್ತು ಪಾದಚಾರಿಗಳಿಗೆ ಅಪಾಯಕಾರಿಯಾಗಿವೆ

    ಇಲೆಕ್ಟ್ರಿಕ್ ಕಾರುಗಳಲ್ಲಿ ಇಂಜಿನ್ ಇರುವುದಿಲ್ಲ,ಹೀಗಾಗಿ ಅವು ಶಬ್ದರಹಿತವಾಗಿವೆ. ಆದರೆ ಅವುಗಳ ತಯಾರಕರು ಈ ಅಂಶವನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಈಗ ಈ ವಾಹನಗಳು ಕೃತಕವಾಗಿ ಸೃಷ್ಟಿಸಲಾದ ಶಬ್ದಗಳೊಂದಿಗೆ ಬರುತ್ತಿವೆ. ಹುಂಡೈ ಕೋನಾ ಇವಿಗೂ ಹೆಚ್ಚುವರಿ ಧ್ವನಿಯನ್ನು ನೀಡಲಾಗಿದ್ದು,ಅದು ಪಾದಚಾರಿಯ ಹಿಂದೆ ತಲುಪುವ ಮುನ್ನ ಅದರ ಆಗಮನವು ಪ್ರಕಟಿಸಲ್ಪಡುತ್ತದೆ.

  ಮೋಜಿನ ವಿಷಯವೆಂದರೆ ಈ ಶಬ್ದರಹಿತ ಸಮಸ್ಯೆಯನ್ನು ಬಗೆಹರಿಸಲು ಬಿಎಂಡಬ್ಲು ತಾನು ತಯಾರಿಸುವ ಇಲೆಕ್ಟ್ರಿಕ್ ಕಾರುಗಳಿಗೆ ಧ್ವನಿಯನ್ನು ಸಂಯೋಜಿಸಲು ಹ್ಯಾನ್ಸ್ ಝಿಮರ್ ಅವರನ್ನು ನೇಮಕಗೊಳಿಸಿದೆ. ಅಂದ ಹಾಗೆ ಝಿಮರ್ ಹಾಲಿವುಡ್‌ನ ಅಗ್ರ ಸಂಗೀತ ಸಂಯೋಜಕರಲ್ಲೊಬ್ಬರಾಗಿದ್ದು,ಲಯನ್ ಕಿಂಗ್ ಮತ್ತು ಇನ್‌ಸೆಪ್ಶನ್ ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಗೀತವನ್ನು ರಚಿಸಿದ್ದಾರೆ.

► ಇ-ಕಾರುಗಳು ಪೆಟ್ರೋಲ್ ಚಾಲಿತ ಕಾರುಗಳಷ್ಟು ವೇಗವಾಗಿ ಓಡುವುದಿಲ್ಲ

ವಾಸ್ತವದಲ್ಲಿ ಇ-ಕಾರುಗಳು ಪೆಟ್ರೋಲ್ ಚಾಲಿತ ಕಾರುಗಳಿಗಿಂತ ಹೆಚ್ಚು ವೇಗವಾಗಿ ಚಲಿಸಬಲ್ಲವು. ಅತ್ಯಂತ ಕಡಿಮೆ ಆರ್‌ಪಿಎಮ್‌ನಿಂದಲೇ ಟಾರ್ಕ್ ಸಿದ್ಧ ಸ್ಥಿತಿಯಲ್ಲಿ ಲಭ್ಯವಿರುವುದು ಇದನ್ನು ಸಾಧ್ಯವಾಗಿಸಿದೆ. ಇಲೆಕ್ಟ್ರಿಕ್ ಕಾರುಗಳು ಇಲೆಕ್ಟ್ರಿಕ್ ಮೋಟರ್‌ಗಳಿಂದ ಶಕ್ತಿಯನ್ನು ಪಡೆದುಕೊಳ್ಳುತ್ತವೆ ಮತ್ತು ಈಗಿನ ವಾಹನಗಳಂತೆ ಶಕ್ತಿಯನ್ನು ಮತ್ತು ಟಾರ್ಕ್ ಅನ್ನು ಉತ್ಪಾದಿಸಲು ಚಲಿಸುತ್ತಿರುವ ಭಾಗಗಳನ್ನು ಅವಲಂಬಿಸಿರುವುದಿಲ್ಲ. ಹೀಗಾಗಿ ಶಕ್ತಿಯನ್ನು ಉತ್ಪಾದಿಸಲು ಮತ್ತು ಅದನ್ನು ಚಕ್ರಗಳಿಗೆ ವರ್ಗಾಯಿಸಲು ಸಮಯವು ವ್ಯರ್ಥವಾಗುವುದಿಲ್ಲ.

ಇಲೆಕ್ಟ್ರಿಕ್ ಕಾರುಗಳ ನಿರ್ವಹಣೆ ತುಂಬ ದುಬಾರಿ ಇದು ಸಂಪೂರ್ಣವಾಗಿ ತಪ್ಪುಗ್ರಹಿಕೆಯಾಗಿದೆ.

ಇಲೆಕ್ಟ್ರಿಕ್ ಕಾರನ್ನು ನಿರ್ವಹಿಸುವುದು ಈಗಿನ ಸಾಂಪ್ರದಾಯಿಕ ವಾಹನಗಳ ನಿರ್ವಹಣೆಗಿಂತ ಹೆಚ್ಚು ಅಗ್ಗವಾಗುತ್ತದೆ. ಇಲೆಕ್ಟ್ರಿಕಲ್ ಕಾರುಗಳಲ್ಲಿ ಚಲಿಸುವ ಬಿಡಿಭಾಗಗಳಿರುವುದಿಲ್ಲ,ಹೀಗಾಗಿ ದೋಷಗಳು ಕಂಡುಬರುವ ಸಾಧ್ಯತೆಗಳು ಸಾಂಪ್ರದಾಯಿಕ ವಾಹನಗಳಿಗಿಂತ ತುಂಬ ಕಡಿಮೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ನಿಯಮಿತ ಸರ್ವಿಸಿಂಗ್ ಹಾಗೂ ಆಗಾಗ್ಗೆ ಇಂಜಿನ್ ಆಯಿಲ್,ಏರ್ ಫಿಲ್ಟರ್,ಆಯಿಲ್ ಫಿಲ್ಟರ್‌ಗಳ ಬದಲಾವಣೆಯ ಅಗತ್ಯವಿದ್ದರೆ ಇಲೆಕ್ಟ್ರಿಕ್ ಕಾರುಗಳಿಗೆ ಇವುಗಳ ಹಂಗಿಲ್ಲ. ಪೆಟ್ರೋಲ್ ಚಾಲಿತ ವಾಹನಗಳಿಗೆ ಹೋಲಿಸಿದರೆ ತನ್ನ ಕೋನಾ ಇವಿಯನ್ನು ಓಡಿಸುವ ವೆಚ್ಚ ಕೇವಲ ಶೇ.20ರಷ್ಟಾಗಿದೆ ಎಂದು ಹುಂಡೈ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)